ಶಾಂತಾದೇವಿ ಕಣವಿಯವರು ತಮ್ಮ ಮೊದಲ ಕತೆಯನ್ನು ಬರೆದದ್ದು 1958ರಲ್ಲಿ. ಅಲ್ಲಿಂದ ಇಲ್ಲಿಗೆ ಸರಿಸುಮಾರು ಐವತ್ತೈದು ವರ್ಷಗಳೇ ಕಳೆದುಹೋಗಿವೆ. ಈ ನಡುವೆ ಅವರು ಬರೆದು ಪ್ರಕಟಿಸಿದ ಕಥಾಸಂಕಲನಗಳು ಏಳು. ಕಥಾ ಸಂಕಲನದಲ್ಲಿ ಬಾರದೆ ಇರುವ ಕೆಲವು ಕತೆಗಳನ್ನು ಸೇರಿಸಿದರೆ ನೂರಹತ್ತರಷ್ಟು ಕತೆಗಳನ್ನು ಶಾಂತಾದೇವಿಯವರು ಬರೆದಿರುವರು. ಹೆಚ್ಚೂಕಡಿಮೆ ವರ್ಷಕ್ಕೆ ಎರಡು ಕತೆಗಳಂತೆ ಅನ್ನಿ.
ಶಾಂತಾದೇವಿ ಕಣವಿಯವರ ಈ ವರೆಗಿನ ಎಲ್ಲ ಕತೆಗಳನ್ನು ಸೇರಿಸಿ ಸಮಗ್ರ ಸಂಪುಟವನ್ನು ಬೆಂಗಳೂರಿನ ಸಪ್ನ ಬುಕ್ ಹೌಸ್ ಹೊರತಂದಿದೆ. ಅವರಿಗೆ ಸರಿಯಾದ ವಿಮರ್ಶನ ನ್ಯಾಯವನ್ನು ಒದಗಿಸುವ ರೀತಿಯಲ್ಲಿ ಗಿರಡ್ಡಿ ಗೋವಿಂದರಾಜ್ ಅವರು ಸವಿಸ್ತಾರವಾದ ಮುನ್ನುಡಿಯನ್ನು ಬರೆದಿರುವರು. ಕಣವಿ ಕತೆಗಳ ಅಧ್ಯಯನಕ್ಕೆ ಇದೊಂದು ಪ್ರವೇಶಿಕೆಯಾಗಿದೆ.
ಶಾಂತಾದೇವಿ ಕಣವಿಯವರ ಕತೆಗಳನ್ನು ಓದಿದಾಗ ಅದರಲ್ಲಿ ನಿಮಗೆ ಒಂದು ಕತೆಯನ್ನು ಓದಿದ ತೃಪ್ತಿ ಸಿಗುತ್ತದೆ. ಯಾವುದೇ ಕತೆಗೆ ಇರಬೇಕಾದ ಕನಿಷ್ಠ ಅರ್ಹತೆ ಅದು. ಅವರು ಕುಟುಂಬಗಳ ಬಗ್ಗೆ ಇರುವ ಸಾಂಪ್ರದಾಯಿಕ ಮೌಲ್ಯಗಳ ಪ್ರತಿಪಾದನೆ ಮಾಡುತ್ತಾರೆ. ಸಹನೆ, ಹೊಂದಾಣಿಕೆಯನ್ನು ಅವರು ಬೀಜಮಂತ್ರವಾಗಿ ಹೇಳುತ್ತಾರೆ. ಕತೆಯಲ್ಲಿ ಅವರು ಸೂಚಿಸುವ ಪರಿಹಾರ ಸರ್ವಸಮ್ಮತವಲ್ಲದೆ ಇರಬಹುದು. ಆದರೆ ಅದೂ ಒಂದು ಮಾರ್ಗ ಎಂಬುದನ್ನು ಒಪ್ಪಲೇಬೇಕಾಗುತ್ತದೆ. ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯ ದೊರೆತ ಸಂಭ್ರಮದ ಸಮಯದ ತಲೆಮಾರಿನಲ್ಲಿ ಜನಿಸಿ ಬಾಲ್ಯವನ್ನು ಕಳೆದ ಅವರಿಗೆ ಸಹಜವಾಗಿಯೇ ಸನಾತನ ಧರ್ಮದ ಮೌಲ್ಯಗಳು ಪ್ರತಿಪಾದನೆಗೆ ಯೋಗ್ಯವಾಗಿ ಕಂಡವು.
ಉತ್ತರ ಕರ್ನಾಟಕದ ಧಾರವಾಡ ಸೀಮೆಯ ಗ್ರಾಮೀಣ ಭಾಷೆಯ ಸೊಗಡು ಅವರ ಕತೆಗಳಲ್ಲಿದೆ. ಯಾವುದೋ ಅಮೂರ್ತವಾದ ಸಿದ್ಧಾಂತವನ್ನು ಅವರು ತಮ್ಮ ಕತೆಗಳಲ್ಲಿ ಹೇಳಲು ತೊಡಗುವುದಿಲ್ಲ. ಕತೆಗೊಂದು ಆರಂಭ, ಮಧ್ಯ ಮತ್ತು ಅಂತ್ಯಗಳು ಎಂಬ ಸಾಂಪ್ರದಾಯಿಕ ರಚನೆ. ಪುರುಷಪ್ರಧಾನವಾದ ನಮ್ಮ ಕೌಟುಂಬಿಕ ವ್ಯವಸ್ಥೆಯಲ್ಲಿ ಹೆಣ್ಣಿನ ತೊಳಲಾಟ ಅವರ ಸಂವೇದನಶೀಲ ಮನಸ್ಸನ್ನು ತಾಕಿದೆ. ಇದನ್ನು ಅವರು ಉತ್ಕಟವೆನ್ನಿಸುವ ಹಾಗೆ ಚಿತ್ರಿಸುತ್ತಾರೆ. ಗ್ರಾಮೀಣ ಮಹಿಳೆಯ ಚಿತ್ರಣ ಇದ್ದಾಗ ಈ ಮಾತು ಹೆಚ್ಚು ಸತ್ಯವೆನಿಸುತ್ತದೆ.
ಶಾಂತಾದೇವಿ ಕಣವಿಯವರು ತೆರೆದಿಡುವ ಇನ್ನೊಂದು ಪ್ರಪಂಚ, ಸುಶಿಕ್ಷಿತ ಮಧ್ಯಮ ವರ್ಗದ ಮಹಿಳೆ. ಇಲ್ಲಿಯೂ ಕೂಡ ಕುಟುಂಬದ ಸೂತ್ರ ಹರಿಯದಿರಲು ಸಹನೆಯನ್ನೇ ಅವರು ಪ್ರತಿಪಾದಿಸುತ್ತಾರೆ. ಇಲ್ಲಿ ದೈಹಿಕ ಹಿಂಸೆಗಿಂತ ಮಹಿಳೆ ಮಾನಸಿಕ ಹಿಂಸೆಗೆ ಗುರಿಯಾಗುವುದನ್ನು ಅವರು ಚಿತ್ರಿಸುತ್ತಾರೆ. ತನ್ನ ಸ್ವಾತಂತ್ರ್ಯದ ಹೆಜ್ಜೆಯಿಂದ ಕುಟುಂಬ ವ್ಯವಸ್ಥೆ ಮುರಿದುಬಿದ್ದು ಅದರಿಂದ ತನ್ನ ಮಕ್ಕಳ ಸ್ಥಿತಿ ಹಾಳಾಗಬಾರದು ಎಂಬುದು ಸ್ತ್ರೀವಾದಿ ಚಿಂತನೆಯು ಪ್ರಖರವಾಗಿರುವ ಇಂದಿನ ಕಾಲದಲ್ಲಿಯೂ ಮಹಿಳೆಯ ಅಂತರ್ಯದಲ್ಲಿರುವ ಭಾವ. ಶಾಂತಾದೇವಿ ಕಣವಿಯವರೂ ಅದನ್ನೇ ಪ್ರತಿಪಾದಿಸಿದ್ದಾರೆ. ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಅವರಿಗೆ ಅಪಾರವಾದ ಶ್ರದ್ಧೆ ಇದೆ. ಇದನ್ನು ಅವರ ಎಲ್ಲ ಕತೆಗಳ ಅಂತಃಪ್ರವಾಹ ಎನ್ನಬಹುದು.
ಕುಟುಂಬ ವ್ಯವಸ್ಥೆಯ ಎಲ್ಲ ಬಿರುಕುಗಳಿಗೂ ಗಂಡೇ ಕಾರಣವೆ? ಹೆಣ್ಣಿನ ತಪ್ಪಿನಿಂದ ಗಂಡೂ ಪೇಚಿಗಿಟ್ಟುಕೊಳ್ಳುವುದಿಲ್ಲವೆ? ಗಂಡಿನ ದೃಷ್ಟಿಯಿಂದ ಶಾಂತಾದೇವಿ ಕಣವಿಯವರ ಪಾತ್ರಗಳು ಪರಿಪೂರ್ಣವಲ್ಲವೇನೋ ಅನ್ನಿಸುವುದು. ಹೆಣ್ಣಿನ ಒಳತೋಟಿಯನ್ನು ತೀವ್ರವಾಗಿ ದಾಖಲಿಸುವ ಶಾಂತಾದೇವಿಯವರು ಕುಟುಂಬ ವ್ಯವಸ್ಥೆ ಉಳಿದು ಬರಲು ಹೆಣ್ಣಿಗೆ ತಾಳ್ಮೆ ಬೇಕು ಎಂಬುದನ್ನು ಪ್ರತಿಪಾದಿಸುತ್ತಾರೆ. ಅವರ ಒಟ್ಟೂ ಆಶಯ ಮಾತ್ರ ಗಂಡುಹೆಣ್ಣು ಕೂಡಿ ಬಾಳಿದರೆ ಸ್ವರ್ಗಸುಖ ಎನ್ನುವುದೇ ಆಗಿದೆ.
ಶಾಂತಾದೇವಿ ಕಣವಿಯವರು ತಮ್ಮ ಕತೆಗಳನ್ನು ಬರೆಯಲು ಆರಂಭಿಸಿದಾಗ ಪ್ರಗತಿಶೀಲರ ಅಬ್ಬರ ಮತ್ತು ನವ್ಯದವರ ಜೋರು ಅತಿಯಾಗಿತ್ತು. ನವೋದಯ ಕಾಲದ ಮಾಸ್ತಿಯವರ ಮೌಲ್ಯ ಪ್ರತಿಪಾದನೆಯ ಕತೆಗಳು ತಮ್ಮದೇ ಒಂದು ಮಾರ್ಗವನ್ನು ಸ್ಥಾಪಿಸಿದ್ದವು. ಶಾಂತಾದೇವಿ ಕಣವಿಯವರ ಸಮಕಾಲೀನರಾದ ಶಾಂತಾದೇವಿ ಮಾಳವಾಡ, ಗೀತಾ ನಾಗಭೂಷಣ, ಗೀತಾ ಕುಲಕರ್ಣಿ, ತ್ರಿವೇಣಿ ಮೊದಲಾದವರು ಸಶಕ್ತ ಕತೆಗಳನ್ನು ಬರೆದರು. ಇವರೆಲ್ಲ ಸೇರಿ ಮಹಿಳೆಯರ ಪ್ರಾತಿನಿಧ್ಯವನ್ನು ಸರಿಯಾಗಿಯೇ ಪ್ರತಿಪಾದಿಸಿದ್ದರು. ಶಾಂತಾದೇವಿ ಕಣವಿಯವರಿಗೆ ಮಾಸ್ತಿಯವರ ಮಾರ್ಗವೇ ಪ್ರಿಯವಾದಂತೆ ತೋರುತ್ತದೆ.
“ನಮ್ಮ ಸಮಾಜದಲ್ಲಿ ಹೆಣ್ಣು ಎದುರಿಸುತ್ತಿರುವ ಸಮಸ್ಯೆಗಳು ಅವರಿಗೆ ತೀವ್ರ ಆಸ್ಥೆಯ ವಿಷಯಗಳಾಗಿವೆ. ಇಂದಿನ ಸಾಮಾಜಿಕ ಸಂದರ್ಭದಲ್ಲಿ ಮಹಿಳೆಯರನ್ನು ಕುರಿತ ಎಲ್ಲ ಗಂಭೀರ ಬರಹಗಳಲ್ಲಿಯೂ ಪ್ರತಿಭಟನೆ ಅನಿವಾರ್ಯವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಇವರ ಕಥೆಗಳಲ್ಲಿ ಅದು ಘೋಷಣೆಯ ಸರಳ ರೂಪವನ್ನು ತಾಳುವುದಿಲ್ಲ… ಮಾಸ್ತಿ ಸಂಪ್ರದಾಯದ ಮುಖ್ಯ ಗುಣವಾದ ವಸ್ತುನಿಷ್ಠತೆ ಶಾಂತಾದೇವಿಯವರ ಕಥನದ ಗುಣವೂ ಆಗಿದೆ’ ಎಂಬ ಮಾತನ್ನು ಡಾ.ಜಿ.ಎಸ್. ಆಮೂರ ಹೇಳಿದ್ದಾರೆ.
“ಮಹಿಳೆಯಲ್ಲಾದ ವಿಚಾರಕ್ರಾಂತಿ, ದೃಷ್ಟಿ ವೈಶಾಲ್ಯ, ಹಿಮ್ಮೆಟ್ಟುತ್ತಿರುವ ಗೋಡೆ, ಅಂಗಳು, ದಿಗಂತಗಳು- ಇವುಗಳಿಗೆ ಈ ಕಥೆಗಳೇ ಸಾಕ್ಷಿ’ ಎಂಬ ಮಾತನ್ನು ಡಾ.ಶಂಕರ ಮೊಕಾಶಿ ಪುಣೇಕರ ಹೇಳಿದ್ದಾರೆ.
“ಯಾವ ತತ್ವವಾಗಲಿ, ಆದರ್ಶವಾಗಲಿ, ಅಮೂರ್ತವಾಗಿ ಎಷ್ಟೇ ಅಪೇಕ್ಷಣೀಯವಾಗಲಿ, ಬಾಳಿನ ಸಂದರ್ಭದಲ್ಲಿ ಅದಕ್ಕೆ ಮಾನವೀಯತೆಯ ಸ್ಪರ್ಶ ಆಗಲೇಬೇಕೆಂಬ ತಿಳಿವಳಿಕೆ ಎಲ್ಲ ಕಥೆಗಳನ್ನು ನಡೆಸುತ್ತವೆ’ ಎಂಬ ಮಾತನ್ನು ಪ್ರೊ. ಎಲ್.ಎಸ್.ಶೇಷಗಿರಿರಾವ್ ಹೇಳಿದ್ದಾರೆ.
ಇಂಥ ವಿಮರ್ಶೆಯ ಮಾತುಗಳಿದ್ದರೂ ಉಳಿದ ಲೇಖಕಿಯರ ಹಾಗೆಯೇ ಶಾಂತಾದೇವಿ ಕಣವಿಯವರೂ ವಿಮರ್ಶಕರ ಅವಗಣನೆಗೆ ತುತ್ತಾದವರೇ. ಅವರಿಗೆ ಸಲ್ಲಬೇಕಿದ್ದ ನ್ಯಾಯಯುತ ವಿಮರ್ಶೆ ನಡೆದಿಲ್ಲ. ಒಂದೋ ಎರಡೋ ಬಿಟ್ಟರೆ ಇವರ ಕತೆಗಳು ಯಾವುದೇ ಪ್ರಾತಿನಿಧಿಕ ಸಂಕಲನಗಳಲ್ಲಿ ಸೇರ್ಪಡೆಯಾಗಿಲ್ಲ. ಸೃಜನಶೀಲ ಲೇಖಕಿಯರ ಹಾಗೆ ವಿಮರ್ಶಕಿಯರ ಒಂದು ಬಲವಾದ ಪಡೆಯೇ ರೂಪುತಳೆಯಬೇಕಾದ ಅಗತ್ಯ ಕಂಡುಬರುತ್ತಿದೆ.
ಶಾಂತಾದೇವಿ ಕಣವಿಯವರು ಕನ್ನಡದ ಹಿರಿಯ ಕವಿ ಚೆನ್ನವೀರ ಕಣವಿಯವರ ಪತ್ನಿ. ಚೆನ್ನವೀರ ಕಣವಿಯವರು ಸಮನ್ವಯ ಕವಿಯೆಂದು ಪ್ರಸಿದ್ಧರಾದವರು. ಪತಿಯ ಕಾವ್ಯ ಧೋರಣೆ ಪತ್ನಿಯ ಕಥಾರಚನೆಯ ಮೇಲೆ ಪ್ರಭಾವ ಬೀರಿರಬಹುದು. ಇದು ಒಂದು ಆಸಕ್ತಿದಾಯಕ ಅಧ್ಯಯನದ ವಿಷಯವಾಗಿದೆ.
ಆಧುನಿಕ ಕನ್ನಡ ಸಾಹಿತ್ಯದಲ್ಲಿ ಶಾಂತಾದೇವಿ ಕಣವಿಯವರ ಸ್ಥಾನವೇನು? ಉಳಿದ ಲೇಖಕಿಯರಿಂದ ಅವರು ಎಲ್ಲಿ ಭಿನ್ನವಾಗಿ ನಿಲ್ಲುತ್ತಾರೆ? ಅವರ ಕತೆಗಳನ್ನು ಬೇರೆ ಯಾವ ಯಾವ ಮಾನದಂಡಗಳಿಂದ ಅಳೆಯಬಹುದು ಇತ್ಯಾದಿಗಳ ಕುರಿತು ನಾಡಿನ ವಿಮರ್ಶಕರು ಚರ್ಚಿಸಬೇಕು. ಅವರ ಗಮನ ಸೆಳೆಯಲಷ್ಟೆ ಈ ಬರೆಹ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.