ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ಕೆ.ಸತ್ಯನಾರಾಯಣ ಅವರ ಹೊಸ ಕಥಾಸಂಕಲನ “ಹೆಗ್ಗುರುತು’ ಹತ್ತು ಕತೆಗಳನ್ನು ಒಳಗೊಂಡಿದೆ. ಈ ಸಂಕಲನದ ಮೂಲಕ ಕನ್ನಡ ಕಥನಕ್ರಿಯೆಯಲ್ಲಿ ಹೊಸ ಹೆಗ್ಗುರುತು ಮೂಡಿಸುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಈ ಸಂಕಲನಕ್ಕೆ ಮಲ್ಲಿಕಾರ್ಜುನ ಹಿರೇಮಠ ಅವರು ವಿಸ್ತಾರವಾದ, ಅಧ್ಯಯನಪೂರ್ಣ ವಿಮರ್ಶೆಯನ್ನು ಮುನ್ನುಡಿಯ ರೂಪದಲ್ಲಿ ಬರೆದಿರುವರು. ಹಿರೇಮಠ ಅವರು ಹೇಳದೆ ಬಿಟ್ಟ ಒಳನೋಟಗಳು ಏನಾದರೂ ಇವೆಯೇ ಎಂದು ನೋಡಿ ಹೇಳುವುದಕ್ಕೆ ಮಾಡಿರುವ ಪುಟ್ಟ ಪ್ರಯತ್ನ ಇದು.
 ಕೆ.ಸತ್ಯನಾರಾಯಣ ಅವರು ಕಥಾರಚನೆಯನ್ನು ಒಂದು ಸವಾಲಿನ, ಸೃಜನಶೀಲ ಮನಸ್ಸಿನ ಪ್ರತಿಷ್ಠೆಯ ಕ್ರಿಯೆ ಎಂದು ಭಾವಿಸಿದವರು. ತಾವು ಹೇಳುವ ರೀತಿ ಹೊಸದಾಗಿರಬೇಕು ಎಂಬ ಪ್ರಯತ್ನಶೀಲತೆಯಲ್ಲಿ ನಂಬಿಕೆಯನ್ನು ಇಟ್ಟವರು. ಈ ಕಾರಣಕ್ಕಾಗಿಯೇ ಕತೆಯ ಶಿಲ್ಪ ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ. ಎರಡೂವರೆ ದಶಕಗಳಿಂದ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಸತ್ಯನಾರಾಯಣರಿಗೆ ಕನ್ನಡದ ಆಸ್ತಿ ಮಾಸ್ತಿ ಎಂದರೆ ಅಚ್ಚುಮೆಚ್ಚು. ಕತೆ ಬರೆದರೆ ಮಾಸ್ತಿಯವರು ಬರೆದಂತೆ ಬರೆಯಬೇಕು ಎಂಬ ನಿಲವು ಅವರದು. ಈ ಸಂಕಲನದಲ್ಲಿ “ಮಾಸ್ತಿಗನ್ನಡಿ’ ಎಂಬ ಒಂದು ಕತೆ ಇದೆ. ಸತ್ತು ಸ್ವರ್ಗಕ್ಕೆ ಹೋದ ಮಾಸ್ತಿ ತಮ್ಮ ಪಾತ್ರಗಳ ನೆನಪಾಗಿ ಭೂಮಿಗೆ ಬರುತ್ತಾರೆ. ತಮ್ಮ ಪಾತ್ರಗಳನ್ನು ಅವರು ಭೇಟಿ ಮಾಡುತ್ತಾರೆ. ತಾವು ಬದುಕಿದ್ದಾಗಿನ ಕಾಲಕ್ಕೂ ಈಗಿನ ಕಾಲಕ್ಕೂ ಆಗಿರುವ ವ್ಯತ್ಯಾಸವನ್ನು ಅವರು ಗುರುತಿಸುತ್ತಾರೆ.
  ಮಾಸ್ತಿಯವರು “ಮಾಯಣಅಣನ ಕನ್ನಡಿ’ ಎಂಬ ತಮ್ಮ ನೂರನೆಯ ಕತೆಯನ್ನು ಬರೆದಿದ್ದರು. ಕನ್ನಡಿ ಎಂಬುದು ಒಂದು ಪ್ರತಿಮೆ. ಸಾಹಿತ್ಯವನ್ನು ಬದುಕಿನ ಪ್ರತಿಬಿಂಬ ಎಂದು ಹೇಳಿದವರಿದ್ದಾರೆ. ಪ್ರತಿಬಿಂಬ ಕಾಣಬೇಕಿದ್ದರೆ ಸಾಹಿತ್ಯವು  ಕನ್ನಡಿಯಾಗಿರಬೇಕು. ಇಂಥ ಕನ್ನಡಿಯ ತೊಳಲಾಟವನ್ನು ನೋಡಿ: “ಎಲ್ಲರ ಮನೆಯಲ್ಲೂ ನಾನಿದ್ದೇನೆ. ಕೈಗನ್ನಡಿಯಾಗಿ, ನಿಲುವುಗನ್ನಡಿಯಾಗಿ, ಬಚ್ಚಲುಮನೆಯ ಕನ್ನಡಿಯಾಗಿ. ಎಲ್ಲರ ಮನೆಯಲ್ಲೂ ಜನ ಕನ್ನಡಿ ಹತ್ತಿರ ಬಂದರೂ ಕನ್ನಡಿಯಲ್ಲಿ ತಮ್ಮನ್ನೇ ನೋಡಿಕೊಳ್ಳಲು ಇಷ್ಟಪಡುತ್ತಾರೆಯೇ ಹೊರತು ಕನ್ನಡಿ ಒಳಗಿರೋರನ್ನ ನೋಡೋಕೆ ಹೋಗೋಲ್ಲ. ಎದುರು ಕಾಣುವ ನೋಟ ಮುಖ್ಯವೇ ಹೊರತು ನೋಟದ ಹಿಂದಿರುವ ಭಾವವಲ್ಲ…’ ಇದು ಇಡೀ ಸಾಹಿತ್ಯದ ಬಗ್ಗೆ ಒಂದು ವ್ಯಾಖ್ಯೆಯನ್ನು ಸೂತ್ರರೂಪದಲ್ಲಿ ನೀಡಿದಂತೆ ತೋರುತ್ತದೆ. ಕತೆ ಹೊರಗಿನದನ್ನು ಮಾತ್ರವಲ್ಲ ಅಂತರ್ಯವನ್ನು ಹಿಡಿದಿಡಬೇಕು ಎಂಬುದು ಮಾಸ್ತಿ ಭಾವ.
 ಮಾಸ್ತಿಯವರು ಉತ್ತರರಾಮ ಚರಿತದ ಉಪನ್ಯಾಸದ ಪುಸ್ತಕದ ಪ್ರತಿಯನ್ನು ಕರಡು ತಿದ್ದುವುದಕ್ಕೆ ಶ್ಯಾಮಲೆಗೆ ಕೊಡಲಾರದೆ ಒದ್ದಾಡುತ್ತಿದ್ದಾರೆ. ಉತ್ತರರಾಮ ಚರಿತ್ರೆ ರಾಮನು ಸೀತೆಯನ್ನು ತ್ಯಜಿಸಿ ಕಾಡಿಗೆ ಕಳುಹಿಸಿದ ಕತೆ. ಶ್ಯಾಮಲೆಯು ಗಂಡನಿಂದ ಪರಿತ್ಯಕ್ತಳಾಗಿ ತಾನೇ ಸ್ಕೂಲ್ ಟೀಚರ್ ಆಗಿ ನೋವು ನುಂಗಿ ಸದಾ ನಗುತ್ತಿರುವಾಕೆ. ಅವಳಿಗೆ ಸೀತಾಪರಿತ್ಯಾಗದ ಕತೆಯ ಪ್ರೂಫ್ ತಿದ್ದುವುದಕ್ಕೆ ಕೊಟ್ಟರೆ ಅವಳಿಗೆ ತನ್ನ ದುಃಖ ನೆನಪಾಗುವುದಲ್ಲ ಎಂದು ಮಾಸ್ತಿ ಸಂಕಟವನ್ನು ಅನುಭವಿಸುತ್ತಾರೆ. ಒಬ್ಬ ಸಾಹಿತಿಗಿರಬೇಕಾದ ಸೂಕ್ಷ್ಮ ಮನಸ್ಸು ಮತ್ತು ವಿವೇಚನಾಶಕ್ತಿಯನ್ನು ಈ ಸನ್ನಿವೇಶದ ಮೂಲಕ ಸತ್ಯನಾರಾಯಣರು ನಮಗೆ ಕಟ್ಟಿಕೊಡುತ್ತಾರೆ. ಸೃಜನಕ್ರಿಯೆಯ ಸವಾಲುಗಳನ್ನು ಪ್ರತೀಮಾತ್ಮಕ ಹೇಳಲು ಅವರು ಇಲ್ಲಿ ಪ್ರಯತ್ನಿಸಿದ್ದಾರೆ.
 ಇದೇ ಕತೆಯಲ್ಲಿ ಮಾಸ್ತಿಯವರು ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಭಾಷಣ ಕಾರ್ಯಕ್ರಮದಲ್ಲಿ ಒಬ್ಬರು ಮಾಡಿದ ಭಾಷಣವನ್ನು ಕೇಳಿಸಿಕೊಳ್ಳುತ್ತಾರೆ. “ಈಗಿನ ಯಾವ ಕತೆಯೂ ನಿಜವಲ್ಲ. ಯಾವ ಕತೆಯೂ ಪೂರ್ಣವಲ್ಲ. ಕತೆ ಬರೆಯುವವನು ಕತೆಯ ಅಗತ್ಯಕ್ಕಾಗಿ ಬರೆಯುವುದಿಲ್ಲ. ತನ್ನ ಅಗತ್ಯಕ್ಕೆ ತನಗೆ ಬೇಕಾದಷ್ಟು ಮಾತ್ರ ಬರೆಯುತ್ತಾನೆ. ಕತೆ ನಿಜವಲ್ಲ. ನಿಜದ ಒಂದು ಭಾಗ. ಕತೆ ಬರೆಯುವಾಗಲೂ, ಕತೆ ಬರೆದ ನಂತರವೂ ನಿಜ ಹಾಗೇ ಉಳಿದಿರುತ್ತದೆ. ಸಾರಾಂಶವೆಂದರೆ ಕತೆಗೂ ವೃತ್ತಪತ್ರಿಕೆಗೂ, ಕತೆಗೂ ಹೋಟೆಲ್ ಮೆನುಕಾರ್ಡಿಗೂ ಅಂತಹ ವ್ಯತ್ಯಾಸವೇನಿಲ್ಲ…’ ಮಾಸ್ತಿಯವರಿಗೆ ಇದು ಇಷ್ಟವಾಗುವುದಿಲ್ಲ. ಭಾಷಣಕಾರ ಅವರ ದೃಷ್ಟಿಯಲ್ಲಿ ಮೂರ್ಖ. ತಮ್ಮ ಕತೆ ಒಂದೂ ಸುಳ್ಳಲ್ಲ. ಎಲ್ಲವೂ ಕಂಡದ್ದು, ಕಂಡವರಿಂದ ಕೇಳಿಸಿಕೊಂಡದ್ದು…. ಕತೆ ನಿಜವಲ್ಲ ಎಂದೇ ಹೇಳಿಬಿಟ್ಟ ಮೇಲೆ ಕತೆ ಇನ್ನು ಎಲ್ಲಿ ಉಳಿಯುತ್ತೆ ಬೆಳೆಯುತ್ತೆ ಎಂದು ಆಲೋಚಿಸುತ್ತಾರೆ.
 ಮಾಸ್ತಿಯವರ ಮೂಲಕ ಕತೆಯ ವ್ಯಾಖ್ಯೆಯನ್ನು, ಕತೆ ಹೇಗಿರಬೇಕೆಂಬ ತಮ್ಮ ಅನಿಸಿಕೆಯನ್ನು ಸತ್ಯನಾರಾಯಣ ಅವರು ಮಂಡಿಸುತ್ತಾರೆ. ಸ್ವತಃ ಅವರು ಬರೆದಿರುವ ಇಲ್ಲಿಯ ಕತೆಗಳು ಕೂಡ ಕಂಡದ್ದು, ಕೇಳಿದ್ದು, ಅನುಭವಿಸಿದ್ದೇ ಆಗಿದೆ. ಜೀವನ ಸತ್ಯದ ಅನ್ವೇಷಣೆಯಾಗಿದೆ.
 ಈ ಸಂಕಲನದಲ್ಲಿ “ಪೂರ್ವನಾಮದ ವಲಸೆ’ ಮತ್ತು “ಕೋನ’ ಎಂಬ ಎರಡು ಕತೆಗಳಿವೆ. ದಲಿತ ಪಾತ್ರವೇ ನಾಯಕನಾಗಿರುವ ಕತೆಗಳು ಇವು. “ಪೂರ್ವನಾಮದ ವಲಸೆಯಲ್ಲಿ  ಕೊಪ್ಪ ಮರಿಸ್ವಾಮಿ ಅಲಿಯಾಸ್ ಕೆ.ಎಂ.ಸ್ವಾಮಿ ಎಂಬವ ಮಂಡ್ಯದ ಕೊಪ್ಪ ಗ್ರಾಮದ ದಲಿತ. ಓದಿ ನೌಕರಿ ಸಂಪಾದಿಸಿ ಮುಂಬಯಿ ಸೇರಿದ್ದಾನೆ. ಆತನ ಮಗ ವಿದೇಶದಲ್ಲಿ ನೌಕರಿ ಮಾಡುತ್ತಿದ್ದಾನೆ. ಮುಂಬಯಿಯಲ್ಲಿ ಫ್ಲ್ಯಾಟ್ ಖರೀದಿಸಿದ್ದಾನೆ. ತಾನು ದಲಿತನೆಂಬ ಕಾರಣಕ್ಕೆ ತನ್ನ ಮೂಲವನ್ನು ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಅದೇ ಕಾರಣಕ್ಕೆ ಯಾರೊಂದಿಗೂ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ತಮ್ಮ ಊರಿನ ವ್ಯಕ್ತಿಯನ್ನೂ ಆತ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಕತೆಯ ಕೊನೆಯಲ್ಲಿ ತನ್ನ ಹದಿನೇಳನೆ ಮಹಡಿಯ ಫ್ಲ್ಯಾಟಿನ ಬಾಲ್ಕನಿಯಲ್ಲಿ ನಿಂತು ಸ್ವಾಮಿ ಹೇಳುವ ಮಾತು ಕೇಳಿ- “ಬಾಲ್ಕನಿಯಲ್ಲಿ ನಿಂತರೆ ವಿಶಾಲವಾದ ಆಕಾಶ ಕೈಗೆ ಸಿಗುವ ಹಾಗಿರುತ್ತದಲ್ಲ, ಈ ರೀತಿ ನಮ್ಮ ಕೈಗೇ ಸಿಗುವ ಆಕಾಶವನ್ನು ಬೇಕೆಂದಾಗ ಬೇಕೆಂದಷ್ಟು ನೋಡಲು ಸಾಧ್ಯವಾಗುವುದು ಕೂಡ ಒಂದು ನಿರಂತರ ಬೋನಸ್…ಅಲ್ಲವೆ?’ ಇದು ಕೇವಲ ಸ್ವಾಮಿಯೊಬ್ಬನ ಮಾತಲ್ಲ ಇಡೀ ದಲಿತ ಸಮುದಾಯದ ಮಾತಾಗಿ ಭಾಸವಾಗುತ್ತದೆ.
 ಇದರ ಮುಂದುವರಿಕೆಯ ಭಾಗವೆಂಬಂತೆ “ಕೋನ’ ಕತೆ ಇದೆ. ಪೂರ್ವಗ್ರಹ ಪೀಡಿತರಾಗಿ ಒಬ್ಬ ವ್ಯಕ್ತಿಯ ಬಗ್ಗೆ ಆತನ ಜಾತಿಯ ಕಾರಣಕ್ಕಾಗಿಯೇ ಒಂದು ನಿಲವು ತಳೆಯುವುದು ತಪ್ಪು ಎಂಬುದನ್ನು ಹೇಳುತ್ತಾರೆ. ಎಲ್.ರವೀಂದ್ರಕುಮಾರ್ ಒಂದು ಊರಿನಲ್ಲಿ ಅತ್ಯುತ್ತಮ ಕೆಲಸಗಾರನೆಂಬ ಹೆಸರು ಪಡೆದಿದ್ದರೆ ಇನ್ನೊಂದು ಊರಿನಲ್ಲಿ ಕೆಲಸಗಳ್ಳ, ಕಿರುಕುಳ ನೀಡುವವನು ಎನ್ನಿಸಿಕೊಳ್ಳುತ್ತಾನೆ. ಈ ಎರಡೂ ಅಭಿಪ್ರಾಯಗಳ ಆಚೆ ಕಚೇರಿಯ ಹೊರಗೆ ಆತ ಒಬ್ಬ ಸಭ್ಯ ಗೃಹಸ್ಥ. ಖ್ಯಾತ ಸಂಗೀತ ವಿದ್ವಾಂಸರ ಶಿಷ್ಯ.  “ಒಬ್ಬ ಮನುಷ್ಯ ಒಂದು ವಿದ್ಯಮಾನದ ಬಗ್ಗೆ ಕೂಡ ಸ್ಪಷ್ಟವಾದ ತಿಳಿವಳಿಕೆ ಮೂಡಿಸುವುದಿಲ್ಲವಲ್ಲ ಇಡಿ ಬದುಕಿನಲ್ಲಿ…’ ಎಂಬ ವಿಷಾದವಿದೆ. ರವೀಂದ್ರ ಕುಮಾರ್ “ನಾವು ತಿಳಿದಿರುವ ಹಾಗಲ್ಲ, ತಿಳಿದಿರುವಷ್ಟೇ ಅಲ್ಲ’ ಎಂಬ ಸಾರ್ವತ್ರಿಕ ಸತ್ಯ ಈ ಕತೆಯಲ್ಲಿದೆ. 
 “ನಮ್ಮ ಖುಷಿಗಾಗಿ ಲಹರಿಗಾಗಿ ಇನ್ನೊಬ್ಬರನ್ನು ತೆರೆಯುವುದು ಕೂಡ ಭ್ರಷ್ಟಾಚಾರವಲ್ಲವೆ? ತಮ್ಮ ವ್ಯಕ್ತ್ತಿತ್ವದ ಕ್ಷುದ್ರ ಭಾಗವನ್ನು ತೆರೆಯುವುದರಿಂದ ನಮಗೆ ಸಂತೋಷವಾಗುತ್ತದೆ ಎಂದು ಎದುರಿಗಿರುವವರನ್ನು ಪ್ರೇರೇಪಿಸುವಂತಹ ನಮ್ಮ ವ್ಯಕ್ತಿತ್ವದ ಭ್ರಷ್ಟ ಮೊತ್ತ ಎಷ್ಟು ಜುಗುಪ್ಸೆ ಹುಟ್ಟಿಸುತ್ತದಲ್ಲವೆ?’’
 ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆಯವರ ಚಳವಳಿಯು ದೇಶದಲ್ಲಿ ಒಂದು ಸಲ ಬಿರುಗಾಳಿಯನ್ನು ಎಬ್ಬಿಸಿದ ಈ ಹೊತ್ತಿನಲ್ಲಿ ಭ್ರಷ್ಟಾಚಾರದ ವಿವಿಧ ಆಯಾಮಗಳ ಬಗ್ಗೆ ಚಿಂತಿಸಿ ಬರೆದ “ಭ್ರಷ್ಟಾಚಾರ -NON-FICTION’ ಎಂಬ ಕತೆಯಲ್ಲಿ ಬರುವ ಸಾಲುಗಳು ಇವು. ಈ ಕತೆಯನ್ನು ಹಜಾರೆಯವರೂ ಓದಿದರೆ ಒಳ್ಳೆಯದು. ಭ್ರಷ್ಟಾಚಾರದ ವ್ಯಾಪಕತೆ ಮತ್ತು ಅದು ಒಂದು ಅಧ್ಯಯನ ಶಿಸ್ತಾಗಿ ಬೆಳೆದ ರೀತಿ ಅನೂಹ್ಯವಾದದ್ದು. ಸತ್ಯನಾರಾಯಣ ಅವರು ಈ ವಿಷಯವನ್ನು ಕತೆಯಲ್ಲಿ ನಿರ್ವಹಿಸಿದ ರೀತಿ ಅವರ ಕಥನಗಾರಿಕೆ ಮಾಗಿದ ಪರಿಯನ್ನು ಸೂಚಿಸುತ್ತದೆ.
 ಕತೆಯೂ ಕೃತಿಯೊಂದಕ್ಕೆ ವಿಮರ್ಶೆಯಾಗಬಲ್ಲುದು ಎಂಬುದನ್ನು “ನಿಜ ಕವಲು’ ಕತೆಯ ಮೂಲಕ ಸತ್ಯನಾರಾಯಣ ಅವರು ಸಾಬೀತುಪಡಿಸುತ್ತಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿ “ಕವಲು’ ಪ್ರಸಿದ್ಧವಾದದ್ದು. ದುಡಿಯುವ ವರ್ಗದ ಮಹಿಳೆಯ ಬಗ್ಗೆ ಭೈರಪ್ಪ ಕರ್ಮಠರಾಗಿ ಚಿಂತಿಸಿ ಕೃತಿ ರಚಿಸಿದ್ದಾರೆ ಎಂಬ ಟೀಕೆಗಳು ಕೇಳಿ ಬಂದಿವೆ. ದುಡಿಯುವ ಮಹಿಳೆಯೊಬ್ಬಳ ಬದುಕನ್ನು ಚಿತ್ರಿಸುವ ಮೂಲಕ ಕವಲು ಅದಲ್ಲ, ನಿಜ ಕವಲು ಇಲ್ಲಿದೆ ಎಂಬುದನ್ನು ಹೇಳಿದಂತೆ ಭಾಸವಾಗುತ್ತದೆ. ರಾಜಮ್ಮನೆಂಬ ಕಂಡಕ್ಟರ್ ರಾತ್ರಿ ಡ್ಯೂಟಿಗೆ ಹೋಗುವುದು, ಅವಳ ಗಂಡನಿಗೆ ಮತ್ತು ಮಕ್ಕಳಿಗೆ ಅವಳನ್ನು ಕಂಡಕ್ಟರ್ ಎಂದು ಇತರರಿಗೆ ಪರಿಚಯಿಸಲು ಇಷ್ಟವಿಲ್ಲದಿರುವುದು, ಆದರೆ ಆಕೆಯ ಆದಾಯದ ಮೇಲೆ ಹಕ್ಕು ಸ್ಥಾಪಿಸುವುದು, ಇಷ್ಟೆಲ್ಲ ಇರುಸು ಮುರಿಸಿನ ನಡುವೆಯೂ ಕೆಲಸ ಮಾಡುವ ಸಂಸ್ಥೆಯಲ್ಲಿ, ಬದುಕುವ ಮನೆಯಲ್ಲಿ ಹೊಂದಾಣಿಕೆಯನ್ನು ಮಾಡಿಕೊಂಡು ಸಂಸಾರ ರಥವನ್ನು ಎಳೆಯುವುದು ಎಲ್ಲವನ್ನೂ ಬಿಡಿಬಿಡಿಯಾಗಿ ವಿವರಿಸುವರು. ಮೂಡುವ ಸೂರ್ಯ ದಶ ದಿಕ್ಕುಗಳಿಗೂ ಕವಲಾಗಿ ಹೊರಡುವ ಸಂಭ್ರಮವನ್ನು ವರ್ಣಿಸುವ ರಾಜಮ್ಮ ಕವಲಿನ ಅರ್ಥವಿಸ್ತಾರವನ್ನು ಬೋಧಿಸುವ ಪರಿ ವಿಸ್ಮಯವನ್ನು ಉಂಟುಮಾಡುತ್ತದೆ. ಮಾಸ್ತಿಯವರ ಒಂದು ಪಾತ್ರವೇ ರಾಜಮ್ಮ ಎನ್ನುವ ಹಾಗೆ ಹೂಬೇಹೂಬಾಗಿ ಸತ್ಯನಾರಾಯಣ ಅವರು ಕಟ್ಟಿಕೊಟ್ಟಿದ್ದಾರೆ.
 ಜೋನ್ ಪಿ. ಸೈಲೋ ಉರ್ಫ್ ಜೆಪಿ ಎಂಬ ಮಹಿಳೆ ತನಗೆ ಆಫೀಸಿನಲ್ಲಿ ಕಿರುಕುಳ ನೀಡುತ್ತಿದ್ದ ಮೇಲಧಿಕಾರಿಯಿಂದ ತಪ್ಪಿಸಿಕೊಳ್ಳಲು ಬೇರೆ ವಿಭಾಗಕ್ಕೆ ತನ್ನನ್ನು ವರ್ಗಾಯಿಸುವಂತೆ ಕೋರಿಕೆ ಸಲ್ಲಿಸಿದಾಗ ನಿರೂಪಕ ಆತನನ್ನು ಹೈದ್ರಾಬಾದಿಗೆ ವರ್ಗಾಯಿಸುತ್ತಾನೆ. ಆದರೆ ತನಗೆ ಕಿರುಕುಳ ಕೊಟ್ಟವನ ಮನೆಯಲ್ಲಿ ತೊಂದರೆಯಿದೆ. ಆತನ ಮಗ ಅಂಗವಿಕಲ. ಆತನ ವರ್ಗವಾದರೆ ಅವರ ಕುಟುಂಬಕ್ಕೆ ತೊಂದರೆ ಯಾಗುತ್ತದೆ ಎಂಬ ಕಾರಣವನ್ನು ನೀಡಿ ಜೆಪಿ ಈ ವರ್ಗಾವಣೆಯನ್ನು ವಿರೋಧಿಸುತ್ತಾಳೆ. ತುಂಟಾಟ ಮಾಡುವ ಮಗುವನ್ನು ಲಘುವಾಗಿ ಶಿಕ್ಷಿಸುವ ತಾಯಿಯಂತೆ ಜೆಪಿ ಭಾಸವಾಗಿ “ಚಿಕ್ಕತಾಯಿ’ ಎಂಬ ಶೀರ್ಷಿಕೆಯನ್ನು ಸಮರ್ಥಿಸುತ್ತದೆ.
 “ಡಾಕ್ಟರ್್ನ ಹುಚ್ಚುಮಗು’ ಕೂಡ ಇಂಥ ಮಾನವೀಯ ನೆಲೆಯಲ್ಲಿಯೇ ತೆರೆದುಕೊಳ್ಳುವುದು. ಪ್ರೀತಿಯ ಮೂಲವನ್ನು ಶೋಧಿಸುವ ಈ ಕತೆ ನಮ್ಮ ಅಂತರಂಗವನ್ನು ಕಲಕಿಬಿಡುತ್ತದೆ. ಆರ್ಥಿಕ ಸಾಮ್ರಾಜ್ಯಶಾಹಿ ಅಮೆರಿಕದ ವಿರುದ್ಧ ಭಾರತದ ರಸ್ತೆಬದಿಯ ಗೂಡಂಗಡಿಯವನು ಹೇಗೆ ಸ್ಪರ್ಧಿಸಬಲ್ಲ ಎಂಬುದನ್ನು “ಓಬಳಯ್ಯ ಸುತ್ತಮುತ್ತ’ ಕತೆಯಲ್ಲಿ ವಿವರಿಸುವರು. ಜಾಗತೀಕರಣ, ಸ್ವದೇಶೀ ಆಂದೋಳನ ಇತ್ಯಾದಿಗಳ ಪರಿಚಯವಿಲ್ಲದ ಓಬಳಯ್ಯ ಫುಟ್‌ಪಾತ್‌ನಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಪುಟ್ಟ ವ್ಯಾಪಾರ ಮಾಡುವವನು. “ಓಬಳಯ್ಯ ಏನೂ ಆಗೋಲ್ಲ. ಟೀಗೆ ಬೆರೆಸುವ ಹಾಲು ಆದಷ್ಟು ಗಟ್ಟಿಯಾಗೇ ಇರಲಿ. ಕಡಮೆ ಬೆಲೆಗೆ ಸಿಗುತ್ತೆ ಅಂತಾ ಹಾಳುಮೂಳು ಟೀ ಸೊಪ್ಪು ಬೆರಸಬೇಡಿ…. ನೋಡೇಬಿಡೋಣ ಯಾರು ಏನು ಮಾಡ್ತಾರೆ ಅಂತಾ..’ ಹೀಗೆ ಧೈರ್ಯ ತುಂಬುವ ದಿವಾಕರ ಸ್ವಾಮಿ ಒಂದು ಸಂಕೇತವಾಗುತ್ತಾರೆ.
 “ಹೆಗ್ಗುರುತು’ ಕತೆಯೂ ಹಣದ ಸರ್ವವ್ಯಾಪಕತೆ, ಹಣದ ಕಾರಣದಿಂದಲೇ ಬಡವರನ್ನು ಅನುಮಾನಿಸುವುದು, ಹಣವಿದ್ದವರೇ ಬಡವರಿಗೆ ಅಗ್ಗದಲ್ಲಿ ಔಷಧ ದೊರಕದಂತೆ ಮಾಡುವುದರ ಕಥನದ ಕೊನೆಯಲ್ಲಿ ಆಶಾವಾದದ ಒಂದು ಸಂದೇಶವಿದೆ.
 ಕೆಲವು ಕೃತಿಗಳನ್ನು ವಿಮರ್ಶೆಯ ಸಿದ್ಧ ಮಾನದಂಡಗಳಿಂದ ಒರೆಗೆ ಹಚ್ಚಬಹುದು. ಇನ್ನು ಕೆಲವು ಕೃತಿಗಳು ಅವುಗಳನ್ನು ವಿಮರ್ಶಿಸಬೇಕಾದ ಮಾನದಂಡಗಳನ್ನು ತಮ್ಮ ಅಂತರ್ಯದಲ್ಲೇ ಹೊಂದಿರುತ್ತವೆ. ವಿಮರ್ಶೆಯ ಪಾರಿಭಾಷಿಕಗಳೂ ಅದರೊಳಗೇ ಇರುತ್ತವೆ. ಕೆ.ಸತ್ಯನಾರಾಯಣ ಅವರ ಈ ಕೃತಿಯು ಎರಡನೆಯ ವರ್ಗಕ್ಕೆ ಸೇರಿದ್ದು. ಈ ಕಾರಣಕ್ಕಾಗಿಯೇ ಅವರು ಇತರ ಕತೆಗಾರರಿಂದ ಭಿನ್ನವಾಗಿ ನಿಲ್ಲುತ್ತಾರೆ.