ವಿವೇಕ ಶಾನಭಾಗ ಅವರ ಹೊಸ ಕತೆಗಳ ಸಂಕಲನ ‘ಘಾಚರ್ ಘೋಚರ್’. ಇದರಲ್ಲಿ ಆರು ಕತೆಗಳಿವೆ. ಮೊದಲ ಕತೆ ಘಾಚರ್ ಘೋಚರ್ 63 ಪುಟಗಳಷ್ಟು ದೀರ್ಘವಾಗಿರುವುದರಿಂದ ಅದೊಂದು ಕಿರುಕಾದಂಬರಿಯೇ ಸೈ.
 ಇದರಲ್ಲಿ ಕಥಾನಾಯಕ, ಆತನ ಪತ್ನಿ ಅನಿತಾ, ಆತನ ತಂದೆ, ಚಿಕ್ಕಪ್ಪ, ತಾಯಿ, ಗಂಡನ ಬಿಟ್ಟು ಬಂದಿರುವ ತಂಗಿ ಮಾಲತಿ ಇವರನ್ನೊಳಗೊಂಡ ಒಂದು ಕೂಡು ಕುಟುಂಬವಿದೆ. ಚಿಕ್ಕಪ್ಪ ವೆಂಕಟಾಚಲನೇ ಕುಟುಂಬದ ಕೇಂದ್ರ ವ್ಯಕ್ತಿ. ಏಕೆಂದರೆ ಅವನು ಕುಟುಂಬದ ಆದಾಯ ಮೂಲ. ಬಡತನದಲ್ಲಿದ್ದ ಕುಟುಂಬವು ಈ ವೆಂಕಟಾಚಲ ಸೋನಾ ಮಸಾಲಾ ಕಾರ್ಖಾನೆಯನ್ನು ಆರಂಭಿಸಿದ ಮೇಲೆ ಸುಧಾರಿಸಿಕೊಳ್ಳುತ್ತದೆ. ಬಾಡಿಗೆ ಮನೆಯಿಂದ ಸ್ವಂತ ಮನೆಗೆ ಅವರು ತೆರಳುತ್ತಾರೆ. ಈ ಶ್ರೀಮಂತಿಕೆ ಅವರನ್ನು ಹೇಗೆ ಮಾನವೀಯ ನೆಲೆಯಲ್ಲಿ ಬಡವರನ್ನಾಗಿಸುತ್ತ ಹೋಗುತ್ತದೆ ಎಂಬುದನ್ನು ಕತೆಯು ಹೇಳುತ್ತದೆ. ಕತೆಯಲ್ಲಿ ಕಾಫಿಹೌಸಿನ ಸಪ್ಲೈಯರ್ ವಿನ್ಸೆಂಟ್ ಹಾಗೂ ಕಥಾನಾಯಕನ ಪತ್ನಿ ಅನಿತಾ ಸಾಕ್ಷಿಪ್ರಜ್ಞೆಯಂತೆ ಇದ್ದಾರೆ.
 ವೆಂಕಟಾಚಲನಿಗೆ ಮದುವೆಯಾಗಿಲ್ಲ. ಆತ ಆದಾಯದ ಮೂಲವಾಗಿದ್ದರಿಂದ ಮದುವೆಯಾಗುವಂತೆ ಆತನ ಮೇಲೆ ಯಾರೂ ಒತ್ತಡ ತಂದಿಲ್ಲ. ಆತ ಮದುವೆಯಾದರೆ ಈ ಶ್ರೀಮಂತಿಕೆಗೆ ಅಂತ್ಯ ಬರುತ್ತದೆ ಎಂಬ ಆತಂಕ ಅವರಿಗೆ. ಮದುವೆಯಾಗಿಲ್ಲದ ಕಾರಣಕ್ಕೆ ಆತನಿಗೆ ವಿವಾಹೇತರ ಸಂಬಂಧವಿದೆ. ಇದು ಗೊತ್ತಿದ್ದರೂ ಮನೆಯವರು ಗೊತ್ತಿಲ್ಲದಂತೆ ಇದ್ದಾರೆ. ಒಂದು ದಿನ ಆತನ ಅಂಥ ಸ್ನೇಹಿತೆಯೊಬ್ಬಳು ಮನೆ ಬಾಗಿಲಿಗೇ ಬಂದಳು. ಕಥಾನಾಯಕನ ತಾಯಿ ಮತ್ತು ತಂಗಿ ಅವಳ ಮೇಲೆ ಎರಗಿ ತೀರಾ ಅಪಮಾನಿಸಿ ಕಳುಹಿಸುತ್ತಾರೆ. ವಾಸ್ತವವನ್ನು ಕೆದಕಲು ಹೋಗುವ ಅನಿತಾ ಅವರ ಕಣ್ಣ್ಲಲಿ ಖಳನಾಯಕಿಯಾಗುತ್ತಾಳೆ.
 ಕಥಾನಾಯಕನ ಅಪ್ಪ ಚಹಾಪುಡಿ ಮಾರುವ ಕಂಪನಿಯೊಂದರಲ್ಲಿ ಸೇಲ್ಸ್ ಮನ್ ಆಗಿದ್ದವನು. ಸಂಬಳ ಖರ್ಚಿಗೆ ಸಾಲುತ್ತಿರಲಿಲ್ಲ. ಅನಿವಾರ್ಯವಾಗಿ ಕೆಲಸ ಬಿಡಬೇಕಾಗಿ ಬಂದಾಗ ತಮ್ಮನ ಜೊತೆ ಸೇರಿ ಮಸಾಲಾ ಫ್ಯಾಕ್ಟರಿ ಆರಂಭಿಸಿದ. ಅದರಲ್ಲಿ ಅರ್ಧ ಪಾಲುದಾರ ಆತ.ದಿಢೀರ್ ಶ್ರೀಮಂತಿಕೆ ಆತನಿಗೆ ಭಯ ಹುಟ್ಟಿಸುತ್ತದೆ. ಸಿರಿ ಗರದ ಹಾಗೆ ಬಡಿಯಬಾರದು. ಅದು ಮರದ ಹಾಗೆ ನಿಧಾನವಾಗಿ ಬೆಳೆಯಬೇಕು ಎನ್ನುತ್ತಿದ್ದ ಅವನು.
 ಮಾಲತಿಯ ಮದುವೆ ಎರಡೇ ವರ್ಷದಲ್ಲಿ ಕುಸಿದು ಬಿದ್ದಿದ್ದಕ್ಕೂ ಅವಳ ಶ್ರೀಮಂತಿಕೆಯ ಮದವೇ ಕಾರಣ. ಗೂಂಡಾಗಳನ್ನು ಒಯ್ದು ತನ್ನ ಆಭರಣಗಳನ್ನು ಆಕೆ ಗಂಡನ ಮನೆಯಿಂದ ತಂದದ್ದು ಒಂದು ಅತಿರೇಕದ ಪ್ರಸಂಗ. ಮಾಲತಿಯದು ಗಂಡ ಸದಾ ಕೆಲಸ ಕೆಲಸ ಎಂದು ಸಾಯುತ್ತಾನೆ; ತನ್ನೊಂದಿಗೆ ತಿರುಗಲು ಪುರುಸೊತ್ತಿಲ್ಲ ಎಂಬ ಆಕ್ಷೇಪ. ಅದೇ ಅನಿತಾಗೆ, ತನ್ನ ಗಂಡನಿಗೆ ಕೆಲಸವಿಲ್ಲ. ಇನ್ನೊಬ್ಬರ ಹಂಗಿನ ಕೂಳಿನಲ್ಲಿ ಬಿದ್ದಿದ್ದಾನೆ ಎಂಬ ಆಕ್ಷೇಪ. ವಿಭಿನ್ನ ಮನೋಧರ್ಮದವರ ಮುಖಾಮುಖಿಯನ್ನು ವಿವೇಕರು ಇಲ್ಲಿ ಚೆನ್ನಾಗಿ ನಿರ್ವಹಿಸಿದ್ದಾರೆ.
 ಸೋನಾ ಮಸಾಲಾ ಕಾರ್ಖಾನೆ ಆರಂಭಿಸದೆ ಇದ್ದಿದ್ದರೆ ಮಾಲತಿ ಗಂಡನ ಮನೆ ಬಿಟ್ಟುಬರುತ್ತಿರಲಿಲ್ಲ ಎಂದು ಕಥಾನಾಯಕನಿಗೆ, ಆತನ ಅಪ್ಪನಿಗೆ ಇಬ್ಬರಿಗೂ ಅನಿಸುತ್ತದೆ. ‘ದುಡ್ಡಿನ ಧಿಮಾಕು ಕೆಲವು ಅನಿವಾರ್ಯತೆಗಳನ್ನು ಸಹಿಸಿಕೊಳ್ಳುವ ತಾಕತ್ತನ್ನು ಅವಳಲ್ಲಿ ಕಡಿಮೆ ಮಾಡಿರಬಹುದು’ ಎಂಬ ಮಾತು ಕಥೆಯಲ್ಲಿ ಬರುತ್ತದೆ. ಇದಕ್ಕೆ ಪೂರಕವಾದ ಇನ್ನೊಂದು ಮಾತು, ‘ದುಡ್ಡು ನಮ್ಮನ್ನೇ ಆಡಿಸುತ್ತದೆ ಎನ್ನುವ ಮಾತು ಸುಳ್ಳಲ್ಲ. ಅದಕ್ಕೂ ಒಂದು ಸ್ವಭಾವ, ಶಕ್ತಿ ಇರುತ್ತದೋ ಏನೋ. ಕಡಿಮೆ ಇದ್ದಾಗ ಅದು ನಮ್ಮ ಅಳವಿನಲ್ಲಿದ್ದು, ಹೆಚ್ಚಾದಾಗ ಅದರ ಬಲ ಬೆಳೆದು ನಮ್ಮನ್ನೇ ಆಕ್ರಮಿಸತೊಡಗುತ್ತದೆಯೋ ಏನೋ. ದುಡ್ಡು ನಮ್ಮನ್ನು ಎತ್ತಿಕೊಂಡುಹೋಗಿ ಬಿರುಗಾಳಿಯ ನಡುವೆ ಬೀಸಾಕಿತ್ತು.’
 ಇಂಥ ಕುಟುಂಬದಲ್ಲಿ ಅನಿತಾ ಹೊರಗಿನವಳು. ‘ಅವಳು ಈ ಕುಟುಂಬದ ಸಂಬಂಧಗಳನ್ನು ಒಳಗಿನವಳಾಗಿ ನೋಡುವಹಾಗೆ ಮಾಡುವುದು ಹೇಗೆಂದು ನನಗೆ ತಿಳಿಯಲಿಲ್ಲ. ಹಾಗೆ ನೋಡದೇ ಅವು ಅರ್ಥವೇ ಆಗುವುದಿಲ್ಲ.’ ಇದು ಕಥಾನಾಯಕನ ಅಳಲು.
 ಈ ಕುಟುಂಬದವರು ಹಳೆಯ ಮನೆಯಲ್ಲಿ ಇದ್ದಾಗ ಇರುವೆಯನ್ನು ಸಾಯಿಸಲು ಎಷ್ಟೊಂದು ಮುತುವರ್ಜಿ ವಹಿಸಿ ಅದರ ಬಗ್ಗೆ ಚರ್ಚಿಸುತ್ತಿದ್ದರೋ ಅದೇ ರೀತಿಯಲ್ಲಿ ಈಗ ಶ್ರೀಮಂತಿಕೆ ಬಂದ ಮೇಲೆ ಮನುಷ್ಯರನ್ನು ಕೊಲ್ಲುವ, ಆರೋಪದಿಂದ ಬಚಾವಾಗುವ, ಆಯುಧದಿಂದ, ಆಯುಧವಿಲ್ಲದೆಯೇ ಕೊಲ್ಲುವ ತಂತ್ರಗಳ ಬಗ್ಗೆ ಅತ್ಯಂತ ನಿರುಮ್ಮಳವಾಗಿ ಚರ್ಚಿಸುತ್ತಾರೆ. ಕಥಾನಾಯಕನಿಗೆ, ಇವರೆಲ್ಲ ಸೇರಿ ತವರು ಮನೆಗೆ ಹೋಗಿರುವ ತನ್ನ ಪತ್ನಿ ಅನಿತಾಳನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದಾರೋ ಎಂಬ ಆತಂಕ ಕಾಡುತ್ತದೆ. ಇದೇ ಕತೆಯ ಕೊನೆ.
 ಘಾಚರ್ ಘೋಚರ್ ಎಂಬ ಪದ ಒಂದು ಅರ್ಥವಿಲ್ಲದ ಉದ್ಗಾರ. ಮಂತ್ರವಾದಿಗಳ ಹ್ರಾಂ ಹ್ರೀಂ ಹ್ರೂಂ ಫಟ್ ಎಂಬ ಸದ್ದಿನಂತೆ. ಅನಿತಾಳ ತಮ್ಮ ಗಾಳಿಪಟದ ದಾರ ಸಿಕ್ಕುಸಿಕ್ಕಾದಾಗ ಅದಕ್ಕೆ ಬಳಸಿದ್ದು. ಅದು ಮೊದಲು ಅವರಿಬ್ಬರ, ನಂತರ ಆ ಕುಟುಂಬದ ನಾಲ್ವರ ಪದವಾಗಿ ಬಳಕೆಯಾಗುತ್ತಿರುತ್ತದೆ. ಒಂದು ಕುಟುಂಬದೊಳಗಿನ ಸಂಬಂಧಗಳು ಕೂಡ ಗಾಳಿಪಟದ ದಾರದ ಹಾಗೆಯೇ. ಎಚ್ಚರ ತಪ್ಪಿದರೆ ಇದೇ ರೀತಿ ಘೋಚರ್ ಘೋಚರ್ ಆಗುತ್ತದೆ. ಈ ಪದ ಹೇಗೆ ಒಂದು ಕುಟುಂಬದ ಜನರಿಗೆ ಮಾತ್ರ ಪರಿಚಯವಿತ್ತೋ ಹಾಗೆಯೇ ಕುಟುಂಬದ ಸಮಸ್ಯೆಗಳನ್ನು ಬೀದಿರಂಪ ಮಾಡಿಕೊಳ್ಳಬಾರದು ಎಂಬುದು ಈ ಕಥಾನಕದ ತಿರುಳು ಇರಬಹುದು. ಇಡೀ ಕಥಾನಕ ವಿವೇಕ ಶಾನುಭಾಗರ  ಕಥನ ಸಾಮರ್ಥ್ಯದ ಅದಮ್ಯ ಸ್ವರೂಪವನ್ನು ವಿಶದಪಡಿಸುತ್ತದೆ.
 ‘ನಿರ್ವಾಣ’ ಕತೆ  ಬದುಕಿನಲ್ಲಿ ನೆಮ್ಮದಿ ಇಲ್ಲದೆ, ಹಣವನ್ನು ಗಳಿಸುವುದರ ನಿರರ್ಥಕತೆಯನ್ನು ಹೇಳುತ್ತದೆ. ವಿದೇಶದಲ್ಲಿ ಇಬ್ಬರು ಅಪರಿಚಿತರು ಮುಖಾಮುಖಿಯಾಗಿ ಪರಿಚಿತರಂತೆಯೇ ತಮ್ಮ ಕತೆಗಳನ್ನು ಹೇಳಿಕೊಳ್ಳುವುದು ಬದುಕಿನ ನಿರ್ವಾತವನ್ನು ತಿಳಿಸುತ್ತದೆ. ಅನ್ಯರೆದುರು ತಮ್ಮನ್ನು ತೆರೆದುಕೊಳ್ಳುವುದೆಂದರೆ ಬಯಲಲ್ಲಿ ಬೆತ್ತಲಾದಂತೆ. ಖಾಸಗಿತನವನ್ನು ಕಳೆದುಕೊಳ್ಳುವುದೇ ನಿರ್ವಾಣ.
 ‘ಕೋಳಿ ಕೇಳಿ ಮಸಾಲೆ?’ ಕತೆಯಲ್ಲಿ ಸೃಜನಶೀಲತೆಯ ಮೇಲೆ ಒದಗಿದ ಗಂಡಾಂತರವನ್ನು ರೂಪಕದಲ್ಲಿ ಹೇಳಿದ್ದಾರೆ. ‘ರಿಸ್ಕ್ ತಗೊಂಡು’ ಕತೆಯಲ್ಲಿ ಪ್ರೇಮವಿರಲಿ, ಕಾಮವಿರಲಿ ಸ್ವಲ್ಪ ರಿಸ್ಕ್ ತಗೆದುಕೊಂಡರೆ ಮಾತ್ರವೇ ಬದುಕಿನ ಆಳ ಅಗಲಗಳನ್ನು ತಲುಪಲು ಸಾಧ್ಯ ಎಂಬುದನ್ನು ಹೇಳುತ್ತಾರೆ.
 ‘ಸುಧೀರನ ತಾಯಿ’ ಕತೆಯಲ್ಲಿ ಸರೋಜಿನಿ ತಾನು ಎತ್ತರವಾಗಿದ್ದ ಕಾರಣಕ್ಕೇ ಗಂಡು ಸಿಗದೆ ಉಪೇಂದ್ರನಂಥ ಹೆಡ್ಡನನ್ನು ಮದುವೆಯಾಗಬೇಕಾಗುತ್ತದೆ. ಆತನಲ್ಲಿ ಆಕೆ ಒಳ್ಳೆಯದು ಎನ್ನುವ ಯಾವುದೇ ಗುಣ ಕಾಣದೇ ಇದ್ದಾಗ ಆತನ ಬಗ್ಗೆ ತಿರಸ್ಕಾರ ಮೂಡುತ್ತದೆ. ಆತ ಮನೆ ಬಿಟ್ಟು ಹೋದಾಗಲೂ ಆತನ ಬಗ್ಗೆ ಯಾವುದೇ ಕರುಣೆ ಮೂಡುವುದಿಲ್ಲ. ಆದರೆ ಮಗನ ಮದುವೆಯಾಗಿ ಹತ್ತು ವರ್ಷಗಳ ಬಳಿಕ ಚಿಕಿತ್ಸೆಗೆಂದು ಮುಂಬಯಿಗೆ ಮಗನ ಮನೆಗೆ ಹೋದವಳಿಗೆ ಮೌಲ್ಯಗಳು ಬದಲಾಗಿರುವುದು ಗೊತ್ತಾಗುತ್ತದೆ. ತನಗೆ ಎತ್ತರ ಶಾಪವಾಗಿದ್ದರೆ ಈಗಿನವರಿಗೆ ಅದೇ ವರವಾಗಿದೆ. ಇಂಥ ಸಂದರ್ಭದಲ್ಲಿ ಅವಳ ಗಂಡ ಎಲ್ಲಿಯೋ ಇದ್ದಾನೆ ಎಂಬ ಸುದ್ದಿ ತಿಳಿದು ಅವಳು ಸಂಭ್ರಮಿಸುತ್ತಾಳೆ. ಆತನನ್ನು ತಾನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ ಎಂಬುದು ಅವಳಿಗೆ ಬೋಧೆಯಾಗುತ್ತದೆ. ಬದುಕೆಂಬುದು ನಾವು ಅದನ್ನು ಗ್ರಹಿಸುವ ರೀತಿಯಲ್ಲಿಯೇ ಇದೆ ಎಂಬ ಅಧ್ಯಾತ್ಮ ಇಲ್ಲಿಯದು.
 ‘ವಿಚಿತ್ರ ಕತೆ’ ತಾನು ಸಾಯುತ್ತೇನೆಂದು ತಿಳಿದ ವ್ಯಕ್ತಿಯೊಬ್ಬ ಕೊನೆಗಾಲದಲ್ಲಿ ಸತ್ಯ ಹೇಳಬೇಕೆಂುಕೊಂಡು ಎಲ್ಲ ಹೇಳತೊಡಗುತ್ತಾನೆ. ಆದರೆ ತಾನು ಸದ್ಯ ಸಾಯುವುದಿಲ್ಲ ಎಂದು ತಿಳಿದಾಗ ಆ ಸಮಾಜದಲ್ಲಿ ಅವನಿಗೆ ಬದುಕುವುದು ಸಾಧ್ಯವಾಗುವುದಿಲ್ಲ. ಮುಖವಾಡವಿಲ್ಲದೆ ಸಮಾಜದಲ್ಲಿ ಬದುಕಲು ಆಗುವುದಿಲ್ಲ ಎಂಬ ಸತ್ಯದ ಅನಾವರಣ ಇಲ್ಲಿಯದು.
 ವಿವೇಕ ಶಾನಭಾಗರ ಕಥನದ ಹೆಚ್ಚಗಾರಿಕೆ ಇರುವುದು, ಓದುತ್ತಿದ್ದಂತೆ ನಾವು ಅವುಗಳೊಳಗಿನ ಒಂದು ಪಾತ್ರವಾಗಿಬಿಡುವುದರಲ್ಲಿ. ವ್ಯಕ್ತಿ, ಘಟನೆ, ಹಾವಭಾವಗಳೆಲ್ಲ ಹಿಂದೆಲ್ಲೋ ನಾವು ಅನುಭವಿಸಿದಂತೆ ಭಾಸವಾಗುವುದರಲ್ಲಿ. ಭೂತ ವರ್ತಮಾನಗಳನ್ನು ಏಕೀಭವಿಸಿ ಸನ್ನಿವೇಶಗಳ ನಿರ್ವಹಣೆಯಲ್ಲಿ ವಿವೇಕವನ್ನು ಮೆರೆಯುವ ಶಾನಭಾಗರು ನಮಗೆ ಮೆಚ್ಚುಗೆಯಾಗುತ್ತಾರೆ. ಚಿತ್ತಾಲ, ಕಾಯ್ಕಿಣಿಯವರ ಕಥನ ಪರಂಪರೆಯ ಮುಂದುವರಿದ ಭಾಗವಾಗಿ ನಿಲ್ಲುತ್ತಾರೆ ಅವರು.