*ಬದುಕಿಗೆ ಲೋಕಜ್ಞಾನ ಬಲು ಅಗತ್ಯ

ನಿನಗೇನು ಗೊತ್ತು ಪುಸ್ತಕದ ಬದನೆಕಾಯಿ ಎಂದು ಮನೆಯಲ್ಲಿದ್ದ ಹಿರಿಯರು ಶಾಲೆ ಕಾಲೇಜು ಕಟ್ಟೆ ಹತ್ತಿ ಎಲ್ಲವೂ ತಮಗೆ ಗೊತ್ತಿದೆ ಎಂದು ಅಹಂನಿಂದ ವರ್ತಿಸುವ ಮಕ್ಕಳಿಗೆ ಗದರುವುದನ್ನು ಕೇಳಿದ್ದೇವೆ. ಪುಸ್ತಕ ಓದಿದವರಿಗೆ ಬದನೆಕಾಯಿಯ ಚಿತ್ರ ನೋಡಿ ಗೊತ್ತಿರುತ್ತದೆ. ಆದರೆ ಅದನ್ನು ಹೇಗೆ ಬೆಳೆಯುತ್ತಾರೆ, ಅದರಿಂದ ಏನೇನು ಮಾಡಬಹುದು, ಆರೋಗ್ಯಕ್ಕೆ ಅದು ಪೂರಕವೋ ಮಾರಕವೋ ಇತ್ಯಾದಿ ಗೊತ್ತಿರುತ್ತದೆ ಎಂದು ಹೇಳಲು ಬರುವುದಿಲ್ಲ. ಬದುಕಿನ ಅನುಭವ ಇದನ್ನೆಲ್ಲ ಕಲಿಸಿಕೊಡುತ್ತದೆ.
ಜ್ಞಾನಾರ್ಜನೆಗೆ ಎರಡು ರೀತಿಗಳನ್ನು ಪ್ರಾಜ್ಞರು ಹೇಳಿದ್ದಾರೆ. ದೇಶ ನೋಡು ಕೋಶ ಓದು. ದೇಶ ನೋಡುವುದು ಎಂದರೆ ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ನೀಡುವುದು. ಅಲ್ಲಿಯ ಜನಜೀವನ ಆಚಾರ ವಿಚಾರಗಳನ್ನು ಅರಿತುಕೊಳ್ಳುವುದು. ದೇಶ ಸುತ್ತುವಾಗ ಪುಸ್ತಕದಲ್ಲಿ ಇಲ್ಲದಿರುವ ವಿಚಾರಗಳೂ ಅರಿವಿಗೆ ಬರುತ್ತವೆ. ಪುಸ್ತಕದಲ್ಲಿ ಓದಿದ್ದು ಮರೆತುಹೋಗಬಹುದು. ಆದರೆ ಜೀವನವನ್ನು ನೋಡಿ ಮನನ ಮಾಡಿಕೊಂಡಿದ್ದು ಮರೆತು ಹೋಗುವುದಿಲ್ಲ.
ಪ್ರವಾಸಕಥನಗಳಿಗೆ ಮಹತ್ವ ಬಂದಿರುವುದು ಈ ಹಿನ್ನೆಲೆಯಲ್ಲಿಯೇ. ಬದುಕು ಸಂಪನ್ನವಾಗಬೇಕೆಂದರೆ ಪುಸ್ತಕ ಜ್ಞಾನದ ಜೊತೆಯಲ್ಲಿ ಲೋಕಜ್ಞಾನವೂ ಬೇಕು ಎನ್ನುವುದನ್ನು ಇದು ಹೇಳುತ್ತದೆ.