*ಸಂಪತ್ತು ಇದ್ದಾಗ ಬೇಕಾಬಿಟ್ಟಿ ಖರ್ಚು ಮಾಡುವವ
ಅತಿಯಾಗಿ ದುಂದುವೆಚ್ಚ ಮಾಡುತ್ತಿರುವುದನ್ನು ಕಂಡಾಗ, ವೈಭವದ ಜೀವನ ನಡೆಸುವವರನ್ನು ಕಂಡಾಗ `ಅವಂದೇನು, ನಂದೋರಾಯನ ದರ್ಬಾರು' ಎಂದು ಹೇಳಿಬಿಡುತ್ತಾರೆ. ಹಾಗೆ ಹೇಳುವವರಿಗೆ ಈ ನಂದೋರಾಯ ಯಾರು ಎನ್ನುವುದು ಗೊತ್ತಿರುವುದಿಲ್ಲ. ದಾನದಲ್ಲಿ ಪ್ರಸಿದ್ಧರಾದವರು ಬಲಿ ಮತ್ತು ಕರ್ಣ ಇಬ್ಬರೇ. ಈ ನಂದೋರಾಯ ಯಾರು? ಈ ಮಾತು ಹುಟ್ಟಿಕೊಂಡ ಕಾಲದಲ್ಲಿ ಮತ್ತು ಪ್ರದೇಶದಲ್ಲಿ ಇದ್ದ ಬಹುದೊಡ್ಡ ಶ್ರೀಮಂತನಿರಬೇಕು. ದಾನ ಮಾಡಿ ಮಾಡಿ ಕೊನೆಯಲ್ಲಿ ಎಲ್ಲವನ್ನೂ ಕಳೆದುಕೊಂಡವನಿರಬೇಕು. ಅದಕ್ಕಾಗಿಯೇ
ಎಷ್ಟು ದಿನ ನಡೆಯುತ್ತದೆ ಈ ನಂದೋರಾಯನ ದರ್ಬಾರು?’ ಎಂದು ಹೇಳುವುದು. ಈ ಹೇಳಿಕೆಯಲ್ಲಿಯೇ ಎಚ್ಚರಿಕೆಯ ಧ್ವನಿಯೂ ಇದೆ. ಅತಿ ದಾನ ಅಪಾಯಕಾರಿ, ಕೊನೆಯಲ್ಲಿ ಬಿಕಾರಿಯಾಗಬೇಕಾಗುತ್ತದೆ ಎಂಬುದನ್ನು ಅದು ಸೂಚಿಸುತ್ತದೆ.
ಪುರಾಣದಲ್ಲಿ ಶ್ರೀಕೃಷ್ಣನ ಸಾಕು ತಂದೆ ನಂದ. ಇತಿಹಾಸದಲ್ಲಿ ಚಂದ್ರಗುಪ್ತ ಮೌರ್ಯನಿಂದ ಪದಚ್ಯುತನಾದ ನಂದವಂಶದ ಮಹಾಪದ್ಮನಂದ ಒಬ್ಬ ಇದ್ದಾನೆ. ಅವರೆಲ್ಲ ದೂರವಾಯಿತು. ಮಂಗಳೂರು ಸಮೀಪ ನಂದಿಪುರವಿದೆ. ಇಲ್ಲಿ ನಂದವಂಶದ ರಾಜರು ಆಳಿದ್ದರಂತೆ. `ನಂದೋರಾಯನ ದರ್ಬಾರು’ ಎಂಬ ಮಾತು ಪ್ರಚಲಿತದಲ್ಲಿರುವುದು ಕರಾವಳಿ ಭಾಗದಲ್ಲಿ. ಆದ ಕಾರಣ, ಇವರಿಂದಲೇ ಈ ಮಾತು ಪ್ರಚಲಿತದಲ್ಲಿ ಬಂದಿರಲೂಬಹುದು ಅಥವಾ ಯಾವುದಾದರೂ ಜಾನಪದ ಪುರುಷನಿರಬಹುದು ಈ ನಂದೋರಾಯ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.