*ಗುರಿಯಿಲ್ಲದ ಪಯಣ ಸಾಧನ

ದುಕನ್ನು ಜಟಕಾ ಬಂಡಿಗೆ ಹೋಲಿಸುವುದು ಕ್ಲೀಷೆಯೆನ್ನುವಷ್ಟು ಸಲ ಆಗಿದೆ. ಡಿ.ವಿ.ಜಿ.ಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಇದನ್ನು ಬರೆಯುವ ಮೊದಲು ಬೇರೆ ಯಾರಾದರೂ ಈ ಹೋಲಿಕೆ ನೀಡಿದ್ದರೋ ಇಲ್ಲವೋ ಗೊತ್ತಿಲ್ಲ. ಜಟಕಾ ಬಂಡಿಯಿಂದ ಡಿ.ವಿ.ಜಿ.ಯವರಿಗೆ ಹೆಸರು ಬಂತೋ ಡಿ.ವಿ.ಜಿ.ಯವರಿಂದ ಜಟಕಾ ಬಂಡಿ ಹೆಸರಾಯಿತೋ ಎಂಬುದನ್ನು ಹೇಳುವುದು ಕಷ್ಟ. ಮಂಕುತಿಮ್ಮನಂತೆಯೇ ಜಟಕಾ ಸಾಬೀಯೂ ಪ್ರಸಿದ್ಧನಾಗಿದ್ದಾನೆ.
ಬಂಡಿ ಎಂದರೆ ಸಂಸಾರ. ಅದು ನಡೆಯಬೇಕೆಂದರೆ ಎರಡು ಗಾಲಿ ಗಂಡ ಮತ್ತು ಹೆಂಡತಿ ಅಗತ್ಯ. ಇಬ್ಬರೂ ಅನ್ಯೋನ್ಯವಾಗಿ ಇದ್ದರೆ ಸಂಸಾರ ಎಂಬುದು ಆನಂದ ಸಾಗರ.
ಇಂಥ ಸಂಸಾರ ಬಂಡಿಯನ್ನು ನಡೆಸುವ ಸಾಬೀ ವಿಧಿ. ನಾವು ಹೋಗಬೇಕೆಂದಲ್ಲಿ ಅದು ಹೋಗುವುದಿಲ್ಲ. ವಿಧಿಯೆಂಬ ಸಾಬೀ ಇಷ್ಟಪಟ್ಟಲ್ಲಿಗೆ ಈ ಬಂಡಿ ಹೋಗುವುದು.
ಮನುಷ್ಯ ಪ್ರಯತ್ನದಲ್ಲಿ ನಂಬಿಕೆ ಇಟ್ಟವರಿಗೆ ಇದು ಅಜೀರ್ಣವಾದರೆ ಆಶ್ಚರ್ಯವಿಲ್ಲ.
ಜಟಕಾಬಂಡಿ ಇಂದು ಅಪರೂಪವಾಗುತ್ತಿದೆ. ಅದನ್ನು ನಡೆಸುವ ಸಾಬೀಗಳು ಬೇರೆಬೇರೆ ಉದ್ಯೋಗ ಹುಡುಕಿಕೊಂಡಿದ್ದಾರೆ. ಆದರೆ ಡಿ.ವಿ.ಜಿ.ಯವರ ಕಗ್ಗದ ಮೂಲಕ ಎಂದೆಂದಿಗೂ ಅವರು ಅಮರರಾಗಿದ್ದಾರೆ.