*ಹೇಳಿದ್ದರ ವಿರುದ್ಧ ಮಾಡುವುದು

ಕ್ಕಳು ತಮಗೆ ಅದೇನೋ ಬೇಕು ಎಂದು ತುಂಬಾ ಹಟ ಮಾಡುತ್ತಾರೆ. ಅವರು ಕೇಳಿದ್ದನ್ನು ಬಿಟ್ಟು ಬೇರೆ ಏನೇನೋ ಕೊಡುತ್ತೇವೆ ಎಂದರೂ ಅವರು ಸುಮ್ಮನಾಗುವುದೇ ಇಲ್ಲ. ಕೋಪ ಹೆಚ್ಚಾದಾಗ ಕೆಲವೊಮ್ಮೆ ತಲೆಯನ್ನು ಗೋಡೆಗೋ ನೆಲಕ್ಕೋ ಬಡಿದುಕೊಳ್ಳುವುದೂ ಇದೆ. ಇದನ್ನು ಕಂಡಾಗ, ಅದೇನು ಚಂಡಿ ಹಿಡಿದವರಂಗೆ ಮಾಡುತ್ತದೋ ಏನೋ ಎಂದು ಗೊಣಗುವುದಿದೆ.
ಯಾರು ಈ ಚಂಡಿ? ಏನು ಚಂಡಿ ಕತೆ? ಉದ್ದಾಲಕ ಎಂಬ ಋಷಿಯೊಬ್ಬರು ಇದ್ದರು. ಅವರ ಹೆಂಡತಿಯೇ ಈ ಚಂಡಿ. ಆಕೆ ತಾನು ಹೇಳಿದಂತೆ ನಡೆಯಬೇಕು ಎಂದು ಹಟವನ್ನು ಸಾಧಿಸುವವಳು. ಗಂಡ ಒಂದನ್ನು ಹೇಳಿದರೆ ಅದಕ್ಕೆ ವಿರುದ್ಧವಾಗಿ ನಡೆಯುವವಳು.
ಒಮ್ಮೆ ಅವರ ಮನೆಗೆ ಹಿರಿಯರು ಬಂದಾಗ ಉದ್ದಾಲಕ ತಮ್ಮ ಹೆಂಡತಿಯ ಸಮಸ್ಯೆಯನ್ನು ಹೇಳಿಕೊಂಡರು. ಆಗ ಅವರು ಒಂದು ಉಪಾಯವನ್ನು ಉದ್ದಾಲಕರಿಗೆ ಹೇಳಿಕೊಡುತ್ತಾರೆ. ಏನು ಆಗಬೇಕೆಂದಿದೆಯೋ ಅದರ ವಿರುದ್ಧವಾಗಿ ಹೇಳು. ಆಗ ಅವಳು ಸರಿಯಾದುದನ್ನೇ ಮಾಡುತ್ತಾಳೆ ಎಂಬುದು ಆ ಉಪಾಯ.
ಇಂದು ಅಡುಗೆ ಮಾಡಬೇಡ ಎಂದರೆ ಅವಳು ಅಡುಗೆ ಮಾಡುವಳು. ಉದ್ದಾಲಕ ಹೇಗೋ ಆ ಉಪಾಯದಿಂದ ಆಕೆಯನ್ನು ಸಹಿಸಿಕೊಂಡು ಇದ್ದರು.
ಒಂದು ದಿನ ಅವರ ತಂದೆಯ ಶ್ರಾದ್ಧ. ಯಾವುದೋ ಧ್ಯಾನದಲ್ಲಿದ್ದ ಉದ್ದಾಲಕರು ಪಿಂಡವನ್ನು ನದಿಯಲ್ಲಿ ಚೆಲ್ಲು ಎಂದು ಸರಿಯಾಗಿಯೇ ಹೇಳುತ್ತಾರೆ. ಚಂಡಿಯು ಅದನ್ನು ರಸ್ತೆಯಲ್ಲಿ ಚೆಲ್ಲುತ್ತಾಳೆ. ಇದರಿಂದ ಉದ್ದಾಲಕರಿಗೆ ಕೋಪ ಬಂದು ಕಲ್ಲಾಗಿ ಹೋಗು ಎಂದು ಶಾಪವನ್ನು ಆಕೆಗೆ ಕೊಡುತ್ತಾರೆ.
ಮುಂದೆ ಪಾಂಡವರು ಅಶ್ವಮೇಧ ಯಾಗವನ್ನು ಮಾಡಿದಾಗ ಯಜ್ಞ ಕುದುರೆ ಅಲ್ಲಿ ಬಂದು ನಿಲ್ಲುತ್ತದೆ. ಅರ್ಜುನ ಬಂದು ಕಲ್ಲನ್ನು ಮೆಟ್ಟಿದಾಗ ಚಂಡಿಗೆ ಶಾಪ ವಿಮೋಚನೆಯಾಗುತ್ತದೆ.