*ಮಾನಸಿಕ ಸಮತೋಲನ ಕಳೆದುಕೊಂಡವರು

ತುಂಬ ಚಡಪಡಿಕೆಯ ಸ್ವಭಾವದವರನ್ನು ಕಂಡಾಗ, `ಅವ್ನ ನೋಡು, ಕಾಲು ಸುಟ್ಟ ಬೆಕ್ಕಿನಂಗೆ ಮಾಡ್ತಾ ಅವ್ನೆ' ಎಂದು ಹೇಳುವುದು ಸಾಮಾನ್ಯ. ಬೆಕ್ಕಿನ ಕಾಲು ಬಲು ಮೃದುವಾದದ್ದು. ಸದ್ದಿಲ್ಲದೆ ಹೆಜ್ಜೆಯನ್ನು ಇಕ್ಕುತ್ತ ಇಲಿಯ ಬೇಟೆಯಾಡುವುದರಲ್ಲಿ ಅದು ನಿಸ್ಸೀಮ. ಬೇಟೆಗೆ ಅದರ ಕಾಲೇ ಪ್ರಮುಖ ಸಾಧನ. ಅಂಥ ಕಾಲು ಸುಟ್ಟು ಹೋದರೆ ಅದಕ್ಕೆ ಚಡಪಡಿಕೆ ಸಹಜ. ನಿಂತಲ್ಲಿ ನಿಲ್ಲುವುದಿಲ್ಲ ಅದು.

ಮನುಷ್ಯನಿಗೂ ಅಂತಹ ಚಡಪಡಿಕೆ ಶುರುವಾಗುವುದು ಯಾವಾಗ? ಆತನ ಅಹಂಗೆ ಧಕ್ಕೆಯಾದಾಗ, ಸಾಧಿಸಬೇಕು ಅಂದುಕೊಂಡಿದ್ದನ್ನು ಸಾಧಿಸಲು ಆಗದೇ ಹೋದಾಗ, ತನಗೆ ಆಗದವರು ಅದೇನೋ ಮಹತ್ವದನ್ನು ಸಾಧಿಸಿದಾಗ. ಒಟ್ಟಾರೆ ತನ್ನ ಇಚ್ಛೆಗೆ ವಿರುದ್ಧವಾದದ್ದು ನಡೆದಾಗ ಅದನ್ನು ಸಹಿಸಲು ಸಾಧ್ಯವಾಗದೆ ಚಡಪಡಿಕೆಗೆ ಮನುಷ್ಯ ಒಳಗಾಗುತ್ತಾನೆ. ಆಗ ಕಾಲುಸುಟ್ಟ ಬೆಕ್ಕಿನಂತೆ ಆತ ವರ್ತಿಸುತ್ತಾನೆ. ಹೊಟ್ಟೆಕಿಚ್ಚಿನ ಇನ್ನೊಂದು ರೂಪವೂ ಹೌದು ಇದು.

ಕೆಲವರು ಇದನ್ನು`ಬಾಲ ಸುಟ್ಟ ಬೆಕ್ಕಿನಂತೆ’ ಎಂದೂ ಹೇಳುತ್ತಾರೆ. ಏಕೆಂದರೆ ಬೆಕ್ಕು ಸುಮ್ಮನೆ ಬಿದ್ದುಕೊಂಡಿದ್ದಾಗಲೆಲ್ಲ ತನ್ನ ಬಾಲವನ್ನು ಮಾಲಿಶ್‌ ಮಾಡಿಕೊಳ್ಳುತ್ತಲೇ ಇರುತ್ತದೆ. ಆ ಬಾಲವನ್ನೇ ಸುಟ್ಟುಬಿಟ್ಟರೆ ಅದಕ್ಕೆ ಚಡಪಡಿಕೆ ಸಹಜ ಅಲ್ಲವೆ?
ಮಾನಸಿಕವಾಗಿ ಸಮತೋಲನ ಇದ್ದರೆ ಇದೆಲ್ಲ ಆಗುವುದೇ ಇಲ್ಲ. ಮನಸ್ಸಿನ ಮೇಲೆ ಹತೋಟಿ ಇಲ್ಲದವರಲ್ಲಿ, ಇಚ್ಛಾಶಕ್ತಿಯ ಕೊರತೆಯನ್ನು ಎದುರಿಸುವವರಲ್ಲಿ ಇಂಥ ಸಮಸ್ಯೆ ಸಾಮಾನ್ಯ.