*ದಂಡನಾಧಿಕಾರದಿಂದ ಬರುವ ಮಾತು

ತೀರ್ಥ ಪವಿತ್ರ ಜಲ. ಜಲಕ್ಕೆ ಪಾವಿತ್ರ್ಯ ಹೇಗೆ ಬರುತ್ತದೆ? ಗಂಗಾನದಿಯನ್ನು ದೇವನದಿ ಎಂದು ಕರೆಯುತ್ತಾರೆ. ಹೀಗಾಗಿ ಗಂಗಾಜಲ ಪವಿತ್ರ ಜಲವಾಗುತ್ತದೆ. ಅದು ತೀರ್ಥವೂ ಆಗುತ್ತದೆ. ನಮ್ಮಲ್ಲಿ ಎಲ್ಲ ನದಿಗಳನ್ನೂ ಪವಿತ್ರ ಎಂದೇ ಭಾವಿಸಲಾಗುತ್ತದೆ. ಝರಿಗಳನ್ನು ತೀರ್ಥ ಎನ್ನುತ್ತೇವೆ. ರಾಮತೀರ್ಥ, ಲಕ್ಷ್ಮಣ ತೀರ್ಥ, ಅಗಸ್ತ್ಯ ತೀರ್ಥ ಇತ್ಯಾದಿ. ಇನ್ನು ಸಾಮಾನ್ಯ ಬಾವಿಯ ನೀರು ತೀರ್ಥದ ಮಟ್ಟಕ್ಕೆ ಏರುವುದು ಯಾವಾಗ?
ಇದಕ್ಕೆ ನಮ್ಮ ಶಾಸ್ತ್ರದಲ್ಲಿ ಉಪಾಯಗಳಿವೆ. ಬಾವಿಯ ನೀರನ್ನು ಶಂಖದ ಮೂಲಕ ಹಾಯಿಸಿದಾಗ ಅದು ತೀರ್ಥವಾಗುತ್ತದೆ. ಇದನ್ನು ನಿತ್ಯ ದೇವರ ಪೂಜೆ ಮಾಡುವಾಗ ಬಳಸುತ್ತಾರೆ.
ನಾವು ನಿತ್ಯವೂ ಅದೆಷ್ಟೋ ಅದ್ಭುತವಾದ ಮಾತುಗಳನ್ನು ಆಡುತ್ತಿರುತ್ತೇವೆ. ಆದರೆ ಕೇಳುವವರಿಗೆ ಅದು ಮಹತ್ವದ್ದು ಎನಿಸುವುದಿಲ್ಲ. ಅದೇ ಮಾತನ್ನು ಪ್ರಧಾನಿಯೋ, ರಾಷ್ಟ್ರಪತಿಯೋ, ಮಠದ ಸ್ವಾಮಿಗಳೋ ಹೇಳಿದಾಗ ದೊಡ್ಡದಾಗಿ ಪ್ರಚಾರವನ್ನು ಪಡೆಯುತ್ತದೆ.
ಹೀಗೇ ಮಾಡಿ ಎಂದು ಬೇರೆಯವರಿಗೆ ಹೇಳುತ್ತಿರುತ್ತೇವೆ. ಆದರೆ ಅವರು ಅದನ್ನು ಮಾಡುವುದಿಲ್ಲ. ಆದರೆ ದಂಡನಾಧಿಕಾರ ಇರುವ ವ್ಯಕ್ತಿ ಹೇಳಿದಾಗ ಅದನ್ನು ತಲೆ ತಗ್ಗಿಸಿಕೊಂಡು ಮಾಡುತ್ತಾರೆ. ಇಂಥ ಸಂದರ್ಭಗಳಲ್ಲೇ ಶಂಖದಿಂದ ಬಂದದ್ದು ತೀರ್ಥ ಎಂಬ ಮಾತು ಬಳಕೆಯಾಗುವುದು.