*ಗುಟ್ಟನ್ನು ಬಿಟ್ಟುಕೊಡದ ತಂತ್ರಗಾರರು

ಕಪಕ್ಷಿಯೊಂದು ಕೊಳದ ನೀರಿನಲ್ಲಿ ಧ್ಯಾನದ ಭಂಗಿಯಲ್ಲಿ ನಿಂತುಕೊಂಡಿತ್ತು. ಅದರ ಎರಡೂ ಕಣ್ಣುಗಳೂ ಮುಚ್ಚಿದ್ದವು. ಒಂದು ಕಾಲನ್ನು ಮೇಲೆ ಎತ್ತಿ ಹಿಡಿದಿತ್ತು. ಅರೇ, ಇದೇನಿದು, ಬಕ ಯಾವಾಗ ಸನ್ಯಾಸವನ್ನು ಸ್ವೀಕರಿಸಿತು ಎಂಬ ಆಶ್ಚರ್ಯ ಕೊಳದಲ್ಲಿಯ ಎಲ್ಲ ಮೀನುಗಳಿಗೆ. ಇನ್ನು ತಮಗೆ ಅಪಾಯವಿಲ್ಲ ಎಂದು ಅವು ಎಣಿಸಿದವು. ಬಕ ತಮಗೆ ಏನೂ ಮಾಡುವುದಿಲ್ಲವೆಂದು ಮೀನುಗಳು ಅದರ ಸುತ್ತಲೂ ಜಮಾಯಿಸಲು ಆರಂಭಿಸಿದವು.
ಬಕ ನಿಧಾನಕ್ಕೆ ಕಣ್ಣು ತೆರೆದದ್ದು ಅವುಗಳಿಗೆ ಕಾಣಲಿಲ್ಲ. ಆ…. ಎಂದು ತೆರೆದ ಬಾಯನ್ನು ನೀರಿನೊಳಕ್ಕೆ ಇಳಿಸಿ ಅದು ಒಂದು ಮೀನನ್ನು ಎತ್ತಿಯೇ ಬಿಟ್ಟಿತು. ಬಕನ ಧ್ಯಾನದ ಉದ್ದೇಶ ಮೀನು ಹಿಡಿಯುವುದೇ ಆಗಿತ್ತು ಎನ್ನುವುದು ಲೋಕಕ್ಕೆ ಅರಿವಾಗಿದ್ದು ಆಗಲೇ.
ಬಕ ಹೊಟ್ಟೆಬಾಕ ಪಕ್ಷಿ. ಈ ಕಾರಣಕ್ಕಾಗಿಯೇ ಮಹಾಭಾರತದ ಬಕಾಸುರನಿಗೆ ಆ ಹೆಸರು ಬಂದಿರಬಹುದು.
ಬಕ ಧ್ಯಾನಿಗಳು ನಮ್ಮ ಸುತ್ತಲೂ ನಿತ್ಯ ಕಾಣಸಿಗುತ್ತಾರೆ. ತಮ್ಮದೇ ತಂತ್ರವನ್ನು ಅವರು ಹೆಣೆಯುತ್ತಾ ಇರುತ್ತಾರೆ. ಆದರೆ ಅದರ ಗುಟ್ಟನ್ನು ಅವರು ಬಿಟ್ಟುಕೊಡುವುದಿಲ್ಲ.
ಹಿಂದೆ ಗೂಢಚಾರರು ಶತ್ರು ದೇಶದಲ್ಲಿ ಗೂಢಚರ್ಯೆಯಲ್ಲಿ ತೊಡಗಿರುತ್ತಿದ್ದರು. ಈಗಲೂ ಇರಬಹುದು. ಅವರು ತಮ್ಮ ಕಾರ್ಯ ಸಾಧನೆಯಾಗುವವರೆಗೂ ಯಾವುದೇ ಸುಳುಹು ದೊರೆಯದಂತೆ ಇದ್ದುಬಿಡುತ್ತಿದ್ದರು. ಅಣ್ಣನಂತೆಯೋ, ತಮ್ಮನಂತೆಯೋ, ಕೆಲವೊಮ್ಮೆ ಶತ್ರುದೇಶದಲ್ಲಿ ಮದುವೆಯಾಗಿ ಸಂಸಾರ ಹೂಡುವಂಥ ಸ್ಥಿತಿ ಬಂದರೂ ತಮ್ಮ ಗುರಿಯನ್ನು ಸಾಧಿಸಿಕೊಳ್ಳುತ್ತಿದ್ದರು. ಎಲ್ಲ ಮುಗಿದ ಮೇಲಷ್ಟೇ ಪರಿಣಾಮ ಗೊತ್ತಾಗುವುದು.