*ಹತ್ತಿರದಲ್ಲಿರುವವರೇ ನಿರ್ಲಕ್ಷ್ಯಕ್ಕೆ ಈಡಾಗುವವರು

ದೀಪ ಜಗತ್ತಿಗೆಲ್ಲ ಬೆಳಕನ್ನು ಕೊಡುತ್ತದೆ. ಆದರೆ ಆ ದೀಪದ ಬುಡಕ್ಕೇ ಕತ್ತಲು. ಇದೆಂಥ ವಿಪರ್ಯಾಸ? ಇಂಥ ವಿಪರ್ಯಾಸಗಳನ್ನು ಹೇಳುವುದಕ್ಕಾಗಿಯೇ ದೀಪದ ಬುಡಕ್ಕೆ ಕತ್ತಲು ಎಂದು ಹೇಳುವುದು. ಕಡಲಿನ ನಂಟು, ಉಪ್ಪಿಗೆ ಬಡತನ ಎಂಬ ಮಾತೂ ಇದೇ ಅರ್ಥವನ್ನು ವಿಸ್ತರಿಸುವಂಥದ್ದು.
ಇಂಥ ಬಡತನವನ್ನು ಅನುಭವಿಸುವವರು ನಮ್ಮ ಸುತ್ತೆಲ್ಲ ಇದ್ದಾರೆ. ಹೆಸರು ಕ್ಷೀರಸಾಗರ ಚಹಾಗೆ ಹಾಲಿಲ್ಲ ಎಂದು ಹೇಳುವುದನ್ನು ಕೇಳಿಲ್ಲವೆ? ಹೊರಗಿನ ತೋರಿಕೆಗೆ, ಓ ಅವನಿಗೇನು? ಬಳ್ಳದಲ್ಲಿಯೇ ಮುತ್ತು ರತ್ನ ಅಳೆಯುವ ಭಾಗ್ಯ ಅವನಿಗೆ ಎಂದು ಅಸೂಯೆ ಪಡುತ್ತೇವೆ. ಆದರೆ ಅವನ ಸ್ಥಿತಿ ಅವನಿಗೇ ಗೊತ್ತು. ಸಾವಿರ ಚಿಂತೆಗಳು ಅವನನ್ನು ಕಾಡುತ್ತ ಇರುತ್ತವೆ. ರಾಜನಾದರೂ ಅವನಿಗೆ ಅವನದೇ ಸಮಸ್ಯೆ ಇರುತ್ತದೆ.
ಬೆಳಕು-ಕತ್ತಲು ಎಂದರೆ ಸುಖ-ದುಃಖ ಎಂದು ಆಧ್ಯಾತ್ಮದ ಲೇಪವನ್ನು ಅದಕ್ಕೆ ಹಚ್ಚುವವರೂ ಇದ್ದಾರೆ. ಸುಖ ದುಃಖಗಳು ಜೊತೆಜೊತೆಯಲ್ಲಿಯೇ ಇರುತ್ತವೆ ಎಂಬ ವಿವರಣೆ ಅವರದು.
ಇನ್ನು, ಹತ್ತಿರದಲ್ಲೇ ಇರುವವರು ಉಪೇಕ್ಷೆಗೆ ಒಳಗಾದಾಗಲೂ ಈ ಮಾತನ್ನು ಹೇಳುತ್ತಾರೆ, ನಿತ್ಯವೂ ಮನೆಗೆ ಒಬ್ಬರು ಬರುತ್ತಲೇ ಇರುತ್ತಾರೆ. ನಿಮ್ಮ ಮನೆಯಲ್ಲಿ ಒಂದು ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದ ಬಗ್ಗೆ ನೀವು ಅವರೊಂದಿಗೆ ಚರ್ಚಿಸಿಯೂ ಇರುತ್ತೀರಿ. ಆದರೆ ಕಾರ್ಯಕ್ರಮಕ್ಕೆ ಅವರು ಬರುವುದೇ ಇಲ್ಲ. ನಿಮಗೆ ಆಶ್ಚರ್ಯ. ಅವರಿಗೆ ಕಾರ್ಯಕ್ರಮಕ್ಕೆ ಬರುವುದಕ್ಕೆ ನೀವು ಆಮಂತ್ರಣವನ್ನೇ ಕೊಟ್ಟಿಲ್ಲ ಎಂಬುದು ನಿಮಗೆ ಕೊನೆಯಲ್ಲಿ ಗೊತ್ತಾಗುತ್ತದೆ. ಆಮೇಲೆ ಹೇಳಿದರಾಯಿತು ಬಿಡು ಎಂದೋ, ನಿತ್ಯವೂ ಬರುತ್ತಾರೆ, ಅಂದೂ ಬರುತ್ತಾರೆ ಎಂಬಂಥ ಉಪೇಕ್ಷೆಯಿಂದಲೋ ಇಂಥ ಪ್ರಮಾದಗಳು ಸಂಭವಿಸುತ್ತವೆ.