*ಹೆಂಡಗುಡುಕರೆಲ್ಲ ಈಗ ದೇವದಾಸರು

ಹೆಂಡ ಕುಡಿದು ರಸ್ತೆಯಲ್ಲಿ ಬಿದ್ದವರನ್ನು ಕಂಡಾಗ, ಇವನೊಬ್ಬ ದೇವದಾಸ, ಬೆಳಿಗ್ಗೆ ಎದ್ದ ಕೂಡಲೇ ಶುರು ಮಾಡಿದ್ರೆ ಎಚ್ಚರ ತಪ್ಪೋವರೆಗೂ ಕುಡೀತಾನೆ ಇರ್ತಾನೆ ಎಂದು ವ್ಯಾಖ್ಯಾನ ಮಾಡುವವರು ಇದ್ದಾರೆ. ಕತೆಯ ಪಾತ್ರಗಳೋ ಪುರಾಣದ ಪಾತ್ರಗಳೋ ಪ್ರತಿಮೆಗಳಾಗಿ ಆಡು ಭಾಷೆಯಲ್ಲಿ ಸೇರಿಹೋದ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಸತ್ಯಹರಿಶ್ಚಂದ್ರ ಅವನು, ದಾನಶೂರ ಕರ್ಣ ನೋಡು, ಶಕುನಿ ಇದ್ದಹಾಗೆ ಇದ್ದಾನೆ, ಹಚ್ಚಿಹಾಕುವುದರಲ್ಲಿ ನಾರದ ಮುನಿ…. ಹೀಗೆ ಹೇಳುತ್ತಲೇ ಹೋಗಬಹುದು.
ದೇವದಾಸ ಎಂಬುದು ಶರತ್‌ಚಂದ್ರ ಚಟ್ಟೋಪಾಧ್ಯಾಯರು ಬಂಗಾಳಿಯಲ್ಲಿ ಬರೆದ ಕಾದಂಬರಿ. ಇದರ ನಾಯಕ ದೇವದಾಸ. ಈತನ ಬಾಲ್ಯ ಸ್ನೇಹಿತೆ ಪಾರ್ವತಿ. ಇಬ್ಬರಲ್ಲೂ ಗಾಢವಾದ ಪ್ರೇಮ. ಪಾರ್ವತಿ ಬೇರೆಯವರನ್ನು ಮದುವೆಯಾದಾಗ ದೇವದಾಸ ಹೆಂಡದ ದಾಸನಾಗಿ ತನ್ನ ಜೀವನವನ್ನೆಲ್ಲ ಹಾಳುಮಾಡಿಕೊಳ್ಳುತ್ತಾನೆ.
ದೇವದಾಸ ಚಲನಚಿತ್ರವಾಗಿಯೂ ಹೆಸರು ಮಾಡಿದೆ. 1928ರಷ್ಟು ಹಿಂದೆಯೇ ದೇವದಾಸ್‌ ಮೂಕಿ ಚಿತ್ರವಾಗಿ ತೆರೆಯ ಮೇಲೆ ಬಂದಿತ್ತು. 1935ರಲ್ಲಿ ಪಿ.ಸಿ.ಬರುವಾ ಬಂಗಾಳಿಯಲ್ಲಿ ದೇವದಾಸನ ಪಾತ್ರ ಮಾಡಿದರು. ಅವರೇ ಮೊದಲ ಹಿಂದಿ ದೇವದಾಸ ನಿರ್ದೇಶನ ಮಾಡಿದರು. ಇದರಲ್ಲಿ ಕೆ.ಎಲ್‌.ಸೈಗಲ್‌ ದೇವದಾಸನ ಪಾತ್ರ ನಿರ್ವಹಿಸಿದ್ದರು. 1955ರಲ್ಲಿ ಬಿಮಲ್‌ರಾಯ್‌ ಮತ್ತೆ ಮತ್ತೆ ಹಿಂದಿಯಲ್ಲಿ ದೇವದಾಸನ ಸಿನಿಮಾ ಮಾಡಿದರು. ಇದರಲ್ಲಿ ದಿಲೀಪ್‌ಕುಮಾರ್‌ ದೇವದಾಸನ ಮತ್ತು ವೈಜಯಂತಿಮಾಲಾ ಪಾರೂ (ಪಾರ್ವತಿ) ಪಾತ್ರ ಮಾಡಿದ್ದರು. ಇದಾದ 47 ವರ್ಷಗಳ ಬಳಿಕ ಸಂಜಯಲೀಲಾ ಬನ್ಸಾಲಿಯವರು ದೇವದಾಸನನ್ನು ಮತ್ತೆ ನಿರ್ಮಿಸಿದರು. ಇದರಲ್ಲಿ ಶಾರುಖ್‌ಖಾನ್‌ ದೇವದಾಸನ ಮತ್ತು ಐಶ್ವರ್ಯಾ ರೈ ಪಾರೂ (ಪಾರ್ವತಿ) ಪಾತ್ರದಲ್ಲಿ ಮಿಂಚಿದ್ದಾರೆ. ತೆಲುಗಿನಲ್ಲಿ ಬಹಳ ಹಿಂದೆ ನಾಗೇಶ್ವರರಾವ್‌ ದೇವದಾಸನಾಗಿ ಮಿಂಚಿದ್ದರು.
ಅಖಂಡ ಪ್ರೇಮಿಯೊಬ್ಬ ಸೆರೆಗುಡುಕನ ಪ್ರತಿಮೆಯಾಗಿ ಜನಮಾನಸದಲ್ಲಿ ಬಳಕೆಯಾಗುತ್ತಿರುವುದು ವಿಚಿತ್ರವೇ ಸರಿ.