*ಗುರಿ ತಲುಪದ ಅತಂತ್ರ ಸ್ಥಿತಿ

ಲ್ಲಿಯೂ ಸಲ್ಲದ ಇಲ್ಲಿಯೂ ಸಲ್ಲದ ಸ್ಥಿತಿಯನ್ನು ಅನುಭವಿಸುವವರಿಗೆ ತ್ರಿಶಂಕು ಎಂದು ಹೇಳುತ್ತಾರೆ. ತ್ರಿಶಂಕು ಸ್ವರ್ಗವಾಯಿತು ಅವನ ಸ್ಥಿತಿ ಎಂದು ಹಾಸ್ಯ ಮಾಡುತ್ತಾರೆ ಇಲ್ಲವೇ ಮರುಕ ಪಡುತ್ತಾರೆ.
ಏನಿದು ತ್ರಿಶಂಕು? ಮೂರು ಪಾಪಗಳೇ ತ್ರಿಶಂಕು. ಇದನ್ನು ಮಾಡಿದವನೇ ತ್ರಿಶಂಕು. ಪುರಾಣ ಪ್ರಸಿದ್ಧ ತ್ರಿಶಂಕು ಮಹಾರಾಜನ ಕತೆ ಯಾರಿಗೆ ಗೊತ್ತಿಲ್ಲ? ಈ ಮಹಾತ್ಮನ ತಂದೆ ಸತ್ಯವ್ರತನೇ ತ್ರಿಶಂಕು.
ಈತ ತನ್ನ ಯವ್ವನದಲ್ಲಿ ವಿವಾಹಿತ ಸ್ತ್ರೀಯೊಬ್ಬಳನ್ನು ಮೋಹಿಸಿ ಆಕೆಯ ಅಪಹರಣ ಮಾಡಿದ್ದ. ಇದರಿಂದ ಆತನ ತಂದೆ ಕೋಪಗೊಂಡು ನಾಯಿಯ ಮಾಂಸವನ್ನು ತಿನ್ನುವವರ ಕೇರಿಯಲ್ಲಿ ಹೋಗಿ ವಾಸಿಸು ಎಂದು ಶಾಪವನ್ನು ಕೊಟ್ಟಿದ್ದ. ಈತ ಊರ ಹೊರಗೆ ವಾಸಿಸುತ್ತಿದ್ದ ಕಾಲದಲ್ಲಿ ಹನ್ನರಡು ವರ್ಷಗಳ ಕ್ಷಾಮ ಬಂತು. ಜನರು ಹಸಿವಿನಿಂದ ಸಾಯುತ್ತಿದ್ದರು. ತಪಸ್ಸಿಗೆ ತೆರಳಿದ್ದ ವಿಶ್ವಾಮಿತ್ರ ಮುನಿಯ ಕುಟುಂಬವನ್ನು ಪೋಷಿಸುವ ಹೊಣೆಯನ್ನು ಸತ್ಯವ್ರತ ವಹಿಸಿಕೊಂಡ. ಎಲ್ಲಿಯೂ ಆಹಾರ ಸಿಗದೆ ಹೋದಾಗ ಒಂದು ದಿನ ಈತ ತನ್ನ ಗುರು ವಶಿಷ್ಠನ ಗೋವನ್ನೇ ಕೊಂದು ಅದನ್ನು ಶುದ್ಧಗೊಳಿಸದೆಯೇ ತಾನೂ ತಿಂದು ವಿಶ್ವಾಮಿತ್ರನ ಕುಟುಂಬದವರಿಗೂ ತಿನ್ನಿಸುತ್ತಾನೆ.
ಇದರಿಂದ ವಶಿಷ್ಠರಿಗೆ ಕೋಪ ಬರುತ್ತದೆ. ತಂದೆಗೆ ದುಃಖವನ್ನು ಉಂಟುಮಾಡಿದ್ದೀಯಾ, ಪರಸ್ತ್ರೀಯನ್ನು ಮೋಹಿಸಿದ್ದೀಯಾ, ಗೋಹತ್ಯೆಯನ್ನು ಮಾಡಿದ್ದೀಯಾ. ಈ ಮೂರು ಪಾಪಗಳಿಂದಾಗಿ ನೀನು ತ್ರಿಶಂಕು ಎಂದು ವಶಿಷ್ಠರು ಕರೆದರು.
ತಪಸ್ಸಿನಿಂದ ಮರಳಿದ ವಿಶ್ವಾಮಿತ್ರರು ತಮ್ಮ ಕುಟುಂಬಕ್ಕೆ ತ್ರಿಶಂಕು ನೆರವಾಗಿದ್ದನ್ನು ಕಂಡು ಸಂತೋಷಪಟ್ಟು ಆತನನ್ನು ಊರಿಗೆ ಕರೆತಂದು ಪಟ್ಟಾಭಿಷೇಕ ಮಾಡಿದರು. ವರ್ಷಗಳು ಉರುಳಿದವು. ತ್ರಿಶಂಕು ಮಹಾರಾಜನಿಗೆ ಸಶರೀರಿಯಾಗಿ ಸ್ವರ್ಗಕ್ಕೆ ಹೋಗಬೇಕು ಎಂಬ ಬಯಕೆಯಾಗಿ ಅದನ್ನು ಈಡೇರಿಸಲು ಯಾಗ ಮಾಡುವಂತೆ ವಶಿಷ್ಠರನ್ನು ಕೋರುತ್ತಾನೆ. ಆದರೆ ವಶಿಷ್ಠರು ನಿರಾಕರಿಸುತ್ತಾರೆ. ವಿಶ್ವಾಮಿತ್ರರು ಅದನ್ನು ಒಪ್ಪಿಕೊಂಡು ಯಾಗವನ್ನು ಆರಂಭಿಸಿ ತ್ರಿಶಂಕುವನ್ನು ಸ್ವರ್ಗಕ್ಕೆ ಕಳುಹಿಸುತ್ತಾರೆ. ಆದರೆ ಇಂದ್ರನು ಇದನ್ನು ಒಪ್ಪದೆ ತ್ರಿಶಂಕುವನ್ನು ಕೆಳಕ್ಕೆ ತಳ್ಳುತ್ತಾನೆ. ಆಗ ವಿಶ್ವಾಮಿತ್ರರು ಆತನನ್ನು ಅರ್ಧದಲ್ಲಿಯೇ ತಡೆದು ಪ್ರತಿಸ್ವರ್ಗವನ್ನೇ ತ್ರಿಶಂಕುವಿಗಾಗಿ ನಿರ್ಮಿಸಿಕೊಡುತ್ತಾರೆ.