*ಸಂತಾನ/ ಸಸ್ಯಸಮೃದ್ಧಿಯ ಪ್ರತೀಕ

ಹೆಣ್ಣುಗಳ ವಿಷಯದಲ್ಲಿ ದುರ್ಬಲರಾಗಿರುವವರು, ಅತಿ ಕಾಮುಕರನ್ನು ಕಂಡಾಗ `ಒಳ್ಳೆ ಜೋಕುಮಾರ ಇದ್ದಾಂಗ ಇದ್ದಾನೆ’ ಎಂದು ಉತ್ತರ ಕರ್ನಾಟಕದಲ್ಲಿ ಬಯ್ಯುವುದನ್ನು ಕೇಳಿದ್ದೇವೆ. ಜೋಕುಮಾರ ಒಬ್ಬ ಜನಪದ ದೇವತೆ. ಅತಿ ಕಾಮಿ ಮತ್ತು ಏಳೇ ದಿನ ಬದುಕಿದ್ದವ ಎಂಬ ಜನಪದ ಕತೆ ಇದೆ. ಕಾಮುಕತೆಯಿಂದಾಗಿಯೇ ತನ್ನ ಜೀವಕ್ಕೆ ಎರವಾದವ ಎಂಬುದರಲ್ಲಿ ನೀತಿಯೂ ಇದೆ.
ಭಾದ್ರಪದ ಮಾಸದ ಅಷ್ಟಮಿಯ ದಿನ ಜೋಕುಮಾರನ ಹಬ್ಬ ಆಚರಣೆ ನಡೆಯುತ್ತದೆ. ಹುಣ್ಣಿಮೆಯ ವರೆಗೂ ಇದು ಇರುತ್ತದೆ. ಜೋಕು ಮುನಿಯ ಅಂಶದಿಂದ ಹುಟ್ಟಿದ ಇವನು ಜೋಕುಮಾರನಾದ ಎಂಬ ವಿವರಣೆಯೂ ಇದೆ.
ಜೋಕುಮಾರನ ಉಲ್ಲೇಖ 12ನೇ ಶತಮಾನದ ಕನ್ನಡ ಸಾಹಿತ್ಯ ಕೃತಿಗಳಲ್ಲಿ ಇದೆ. ಅಂದರೆ ಆ ಹೊತ್ತಿಗೇ ನಮ್ಮ ಜನಪದದ ಒಂದು ಭಾಗವಾಗಿದ್ದ ಈ ಜೋಕುಮಾರ. ಜೋಕುಮಾರನ ಆರಾಧನೆ ಮಾಡಿದರೆ ಸಂತಾನಪ್ರಾಪ್ತಿಯಾಗುವುದು ಎಂಬ ನಂಬಿಕೆ ಇದೆ.
ಉತ್ತರ ಕರ್ನಾಟದ ಕೆಲವು ಕಡೆ ಮನೆಯಲ್ಲಿ ಮಗಳೋ ಸೊಸೆಯೋ ಗರ್ಭ ಧರಿಸಿದರೆ ಕಟ್ಟಿಗೆಯಿಂದ ತಯಾರಿಸಿದ ಶಿಶ್ನದ ರೂಪವನ್ನು ಜೋಕುಮಾರನ ಗರ್ಭಗುಡಿಯಲ್ಲಿ ಇಟ್ಟುಬರುವ ಪದ್ಧತಿ ಇದೆ.
ಜೋಕುಮಾರನ ಚಿತ್ರ, ಮೂರ್ತಿಗಳಲ್ಲೂ ದೊಡ್ಡದಾದ ಜನನೇಂದ್ರಿಯವನ್ನೇ ರೂಪಿಸಿರುತ್ತಾರೆ. ಅತಿಯಾದ ಕಾಮ, ಅದರಿಂದಾಗುವ ಪರಿಣಾಮ, ಸಂತಾನಪ್ರಾಪ್ತಿ ಇತ್ಯಾದಿ ಸಂಕೀರ್ಣ ಆಶಯದ ಜೋಕುಮಾರ ಪ್ರಕೃತಿಯಲ್ಲಿ ಬೆಳೆ ಮೈದೋರುವ ಕ್ರಿಯೆಯಲ್ಲೂ ಸಾಕಾರಗೊಳ್ಳುತ್ತಾನೆ.