*ಎಟುಕದ ಆಸೆಗಳು ನಿಜವಾಗುವುದು ಕನಸಿನಲ್ಲೇ

ಕಿತ್ತು ತಿನ್ನುವ ಬಡತನ. ಹೀಗಿದ್ದೂ ಅರಸನಾಗುವ ಆಸೆ ಹೊತ್ತರೆ ಹೇಗೆ? ತೀವ್ರ ಬಡತನವೇ ಏನೇನೋ ಆಸೆಗಳನ್ನು ಮನಸ್ಸಿನಲ್ಲಿ ಹುಟ್ಟಿಸುತ್ತದೆ. ಆದರೆ ಅವು ಒಂದೂ ಈಡೇರುವುದಿಲ್ಲ. ಭಿಕ್ಷುಕ ರಾಜನಾಗುವುದು ಸಾಧ್ಯವೆ? ಅದು ಕನಸಿನಲ್ಲಿ ಮಾತ್ರ ಸಾಧ್ಯ. ಇಂಥ ಅಘಟಿತ ಘಟನಾವಳಿಗಳು ತಮ್ಮ ಬದುಕಿನಲ್ಲಿ ಘಟಿಸಲಿ ಎಂದು ಎಲ್ಲರೂ ಆಸೆಪಡುತ್ತಾರೆ. ಲಾಟರಿ ಟಿಕೆಟ್‌ ಕೊಳ್ಳುವ ಪ್ರತಿಯೊಬ್ಬನೂ ಬಂಪರ್‌ ಬಹುಮಾನ ತನಗೇ ಸಿಕ್ಕುವುದೆಂದು ಅದಕ್ಕೆ ತಕ್ಕಂತೆ ಕನಸನ್ನು ಹೊಸೆಯುತ್ತಾನೆ. ತನ್ನ ಕನಸನ್ನು ಇತರರೊಂದಿಗೆ ಹಂಚಿಕೊಂಡಾಗ ಅವರು, ಅದೊಂದು ತಿರುಕನ ಕನಸು ಎಂದು ಅಪಹಾಸ್ಯ ಮಾಡದೆ ಬಿಡುವುದಿಲ್ಲ.
ತಿರುಕನ ಕನಸಿನ ಕುರಿತು ಮುಪ್ಪಿನ ಷಡಕ್ಷರಿಯವರು ಒಂದು ಒಳ್ಳೆಯ ಕವಿತೆಯನ್ನು ನಮಗೆ ಕೊಟ್ಟುಹೋಗಿದ್ದಾರೆ. ಅದು ಸದಾ ನಮ್ಮನ್ನು ಎಚ್ಚರಿಸುತ್ತ ಇರುತ್ತದೆ.
ತಿರುಕನೊಬ್ಬ ಊರ ಮುಂದಿನ ಮುರುಕು ಧರ್ಮಶಾಲೆಯಲ್ಲಿ ಮಲಗಿಕೊಂಡಿದ್ದಾಗ ಅವನಿಗೊಂದು ಕನಸು ಬೀಳುತ್ತದೆ. ಊರ ರಾಜ ಸತ್ತು ಹೋಗಿದ್ದಾನೆ. ಅವನಿಗೆ ಉತ್ತರಾಧಿಕಾರಿ ಇರುವುದಿಲ್ಲ. ಊರ ಜನರು ಪಟ್ಟದ ಆನೆಗೆ ಮಾಲೆಯನ್ನು ಕೊಟ್ಟು ಊರಲ್ಲಿ ಬಿಡುತ್ತಾರೆ. ಅದು ಯಾರಿಗೆ ಮಾಲೆಯನ್ನು ಹಾಕುತ್ತದೋ ಅವರೇ ರಾಜ ಎಂದು ಘೋಷಿಸುತ್ತಾರೆ. ಅದು ಈ ಭಿಕ್ಷುಕನ ಕೊರಳಿಗೆ ಮಾಲೆಯನ್ನು ಹಾಕುತ್ತದೆ. ಅವನೇ ರಾಜನಾಗುತ್ತಾನೆ. ಪಟ್ಟದರಸಿಯರು ಬರುತ್ತಾರೆ, ಮಕ್ಕಳಾಗುತ್ತಾರೆ. ಹೀಗಿರುವಾಗ ಒಮ್ಮೆ ಶತ್ರು ರಾಜರು ದಾಳಿ ಮಾಡುತ್ತಾರೆ.
ಘನಘೋರ ಯುದ್ಧವಾಗುತ್ತದೆ. ಯುದ್ಧದಲ್ಲಿ ಇವನಿಗೆ ಏಟುಗಳು ಬೀಳುತ್ತವೆ. ನೋವಿನಿಂದ ಇವನು ಕೂಗಿಕೊಂಡಾಗ ಎಚ್ಚರವಾಗುತ್ತದೆ. ಅದುವರೆಗಿನದೆಲ್ಲ ಕನಸು ಎಂದು ಸಮಾಧಾನ ತಳೆಯುತ್ತಾನೆ. ಮರುದಿನ ಬೆಳಿಗ್ಗೆ ಎಂದಿನಂತೆ ಭಿಕ್ಷೆ ಎತ್ತಲು ಅವನು ಹೋಗುತ್ತಾನೆ.