*ಬಿಡಿಸಲಾಗದ ಮಹಾ ಒಗಟು

`ಚಿದಂಬರ ರಹಸ್ಯ'ವೆಂಬುದು ಬಿಡಿಸಲಾಗದ ಮಹಾ ಒಗಟು ಎಂಬ ಅರ್ಥದಲ್ಲಿ ಬಳಕೆಯಾಗುತ್ತಿದೆ. ಇದೇ ಹೆಸರಿನಲ್ಲಿ ಪೂರ್ಣಚಂದ್ರತೇಜಸ್ವಿಯವರು ಒಂದು ಕಾದಂಬರಿಯನ್ನೂ ಬರೆದಿದ್ದಾರೆ. ಅದರ ಶೀರ್ಷಿಕೆಯೂ ಇದೇ ಅರ್ಥವನ್ನು ಸಮರ್ಥಿಸುತ್ತದೆ. ಏನಿದುಚಿದಂಬರ ರಹಸ್ಯ’? ಚಿದಂಬರ ಎಂಬುದು ತಮಿಳುನಾಡಿನ ಪವಿತ್ರ ಕ್ಷೇತ್ರ. ಇಲ್ಲಿಯ ದೇವಾಲಯದ ಗರ್ಭಗುಡಿಯಲ್ಲಿ ಶಿವನ ಲಿಂಗವಿಲ್ಲ. ಶಿವನನ್ನು ನಿರಾಕಾರ ರೂಪದಲ್ಲಿ ಇಲ್ಲಿ ಪೂಜಿಸಲಾಗುತ್ತದೆ. ಅಂದರೆ ಅದು ಅಂಬರ ರೂಪಿ ಶಿವ. ಅಂಬರವೆಂದರೆ ಆಕಾಶ ಎಂಬ ಅರ್ಥವೂ ಇದೆ. ಬಟ್ಟೆ ಎಂಬ ಅರ್ಥವೂ ಇದೆ. ಗರ್ಭಗುಡಿಯ ಮುಂದೆ ಬಟ್ಟೆಯ ಪರದೆಯೊಂದನ್ನು ಇಳಿಬಿಟ್ಟಿರುತ್ತಾರೆ. ಪರದೆಯ ಹಿಂದಿನದು ದೇವ ರಹಸ್ಯ. ಇದೇ ಚಿದಂಬರ ರಹಸ್ಯ. ದೇವಮೂಲವನ್ನು ಇದಮಿತ್ತಂ ಎಂದು ಶಬ್ದಗಳಲ್ಲಿ ಹೇಳುವುದು ಸಾಧ್ಯವಿದೆಯೆ? ಉಪನಿಷತ್ತುಗಳೇ ನೇತಿ ನೇತಿ ಎಂದು ಕೈಚೆಲ್ಲಿವೆ. ಗರ್ಭಗುಡಿಯ ಹೊರಗೆ ನಟರಾಜ ರೂಪಿ ಶಿವನ ಪ್ರತಿಮೆ ಇದೆ.
ಚಿತ್‌ ಎಂದರೆ ಮನಸ್ಸು. ಅಂಬರವೆಂದರೆ ಆಕಾಶ. ಮನಸ್ಸು ಕೂಡ ಆಕಾಶದಷ್ಟೇ ವಿಶಾಲವಾದದ್ದು. ಮನಸ್ಸನ್ನು ಅರಿಯುವುದೂ ಕಷ್ಟವಲ್ಲವೆ?
ಚಿದಂಬರಂನ ದೇವ ರಹಸ್ಯಕ್ಕೂ ಪ್ರಚಲಿತದಲ್ಲಿರುವ `ಚಿದಂಬರ ರಹಸ್ಯ’ಕ್ಕೂ ಅಷ್ಟೊಂದು ಹೋಲಿಕೆಯಾಗದು.