ಗಾಂಧಿ Ways

ನಾಯಕರಿವರು

ಗಾಂಧಿ ಬದುಕಿದ ರೀತಿ ಇಂದು ಲೋಕದೆಲ್ಲೆಡೆ ಆದರ್ಶವೆನಿಸಿದ್ದರೆ, ಅದಕ್ಕೆ ಅವರನ್ನು ಪ್ರಭಾವಿಸಿದ ಅಸಂಖ್ಯ ಇತರ ಮಾದರಿಗಳೂ ಕಾರಣ. ಗಾಂಧಿಜಯಂತಿ ಸಂದರ್ಭದಲ್ಲಿ ಅಂಥದೊಂದು ನೆನಪು.

ಆಧುನಿಕ ಜಗತ್ತಿಗೆ ಭಾರತದ ಅತಿ ದೊಡ್ಡ ಕೊಡುಗೆ ಯಾವುದೆಂದು ಯಾರಾದರೂ ಕೇಳಿದರೆ ‘ಮಹಾತ್ಮ ಗಾಂಧಿ’ ಎಂದು ಸ್ವಲ್ಪವೂ ಅನುಮಾನಿಸದೆ ಹೇಳಿಬಿಡಬಹುದು. ಗಾಂಧೀಜಿಯವರಿಗೆ ಸತ್ಯ ದೇವರಷ್ಟೇ ವಾಸ್ತವ. ದೇವರಷ್ಟೇ ಸರ್ವಶಕ್ತ. ವಾಸ್ತವವಾಗಿ ಸತ್ಯವೇ ದೇವರು. ಏಕೆಂದರೆ ಜಗತ್ತು ನಿಂತಿರುವುದೇ ಸತ್ಯದ ಅಡಿಗಲ್ಲಿನ ಮೇಲೆ. ಅದು ಎಂದಿಗೂ ನಾಶವಾಗುವಂಥದ್ದಲ್ಲ. ಗಾಂಧೀಜಿಗೆ ಅತ್ಯಂತ ಪ್ರಿಯವಾದ ಗ್ರಂಥ ಭಗವದ್ಗೀತೆಯಲ್ಲಿ ‘ಸತ್ಯಾನ್ನಸ್ತಿ ಪರೋ ಧರ್ಮಃ’ (ಸತ್ಯ ನಿಷ್ಠೆಗಿಂತ ದೊಡ್ಡ ಧರ್ಮ ಇನ್ನೊಂದಿಲ್ಲ) ಎಂದು ಹೇಳಿದೆ. ಹಿಂಸೆ ದೇಹ ಬಲವನ್ನು ನಂಬಿರುವ ಪ್ರಾಣಿಗಳ ಧರ್ಮ. ಆದರೆ ಮನುಷ್ಯ ಕೇವಲ ದೇಹ ಬಲವನ್ನು ನಂಬಿದವನಲ್ಲ. ಈ ಕಾರಣಕ್ಕೆ ಅಹಿಂಸೆ ಆತನ ವ್ರತವಾಗಬೇಕು ಎಂಬುದು ಗಾಂಧೀಜಿಯವರ ನಿಲವಾಗಿತ್ತು. ಪ್ರೀತಿಯ ನಿಯಮವೇ ಮನುಕುಲವನ್ನು ಆಳುವುದು ಎಂದು ಅವರು ಹೇಳುತ್ತಿದ್ದರು. ದ್ವೇಷ ಅರ್ಥಾತ್ ಹಿಂಸೆ ನಮ್ಮನ್ನು ಆಳುವಂತಿದ್ದರೆ ನಾವು ಎಂದೋ ನಾಶವಾಗಿಬಿಡುತ್ತಿದ್ದೆವು ಎನ್ನುವ ಅವರು ದ್ವೇಷವನ್ನು ಗೆಲ್ಲುವುದು ಪ್ರೀತಿ ಮಾತ್ರ ಎಂದು ನಂಬಿದ್ದರು.

 ಗಾಂಧೀಜಿಯ ಮೇಲೆ ಅಧಿಕ ಪ್ರಭಾವ ಬೀರಿದ್ದು ಯಾರು? ಹರಿಶ್ಚಂದ್ರ ನಾಟಕದ ಬಗ್ಗೆ ಎಲ್ಲರಿಗೂ ಗೊತ್ತು. 1894ರಲ್ಲಿ ಡರ್ಬಾನ್‌ನಲ್ಲಿ ಅವರು ಟಾಲ್‌ಸ್ಟಾಯ್‌ನ ‘ದೇವರ ಸಾಮ್ರಾಜ್ಯ ನಿಮ್ಮಲ್ಲೇ ಇದೆ’ (Kingdom of God is within you)ಎಂಬ ಬರೆಹವನ್ನು ಓದುತ್ತಾರೆ. ಇದರ ಮೂಲಕ ಅವರು ಏಸುವು ಪರ್ವತದ ಮೇಲಿನಿಂದ ಮಾಡಿದ ಅಪೂರ್ವ ಉಪದೇಶವನ್ನು ಅರಿಯುತ್ತಾರೆ. ಗುಜರಾತಿನ ಜೈನ ಸಮುದಾಯದ ಅಹಿಂಸಾ ಧರ್ಮವೂ ಅವರನ್ನು ಪ್ರಭಾವಿಸಿತ್ತು. ಸತ್ಯದ ಸಾಕ್ಷಾತ್ಕಾರಕ್ಕೆ ಅಹಿಂಸೆ ಬದಲಾಗದ ಹಾದಿ ಎಂದು ಅವರು ನಂಬಿದ್ದರು. ಅಹಿಂಸೆಯಿಂದ ದೈಹಿಕ ಮಾನಸಿಕ ಹಾಗೂ ಭಾವನಾತ್ಮಕ ಗಾಸಿ ಆಗುವುದಿಲ್ಲ. ನಾವೇನಾದರೂ ಕಳೆದುಕೊಳ್ಳುವುದಿದ್ದರೆ ಅದು ದ್ವೇಷ ಮತ್ತು ಸೇಡು. ಅಹಿಂಸೆಯ ಶಾಖೋತ್ಪತ್ತಿ ಸಾಮರ್ಥ್ಯ ಅಪರಿಮಿತ. ಅದು ಎಂಥ ಕಬ್ಬಿಣದಂಥ ಕಠೋರ ಮನಸ್ಸನ್ನೂ ಕರಗಿಸಿಬಿಡಬಲ್ಲುದು ಎಂದು ಅವರು ಹೇಳಿದ್ದಾರೆ.

 ಜಗತ್ತಿನ ಅತ್ಯಂತ ಬಲಿಷ್ಠ ಜನನಾಯಕ ಎಂದು ಪರಿಗಣಿತರಾಗಿದ್ದ ಗಾಂಧೀಜಿ ಆರಂಭದಲ್ಲಿ ಬರೀ ಪುಕ್ಕಲಾಗಿದ್ದರು. ಹಾವುಗಳು, ಭೂತ, ಕಳ್ಳರು ಮತ್ತು ಕತ್ತಲೆ ಎಂದರೆ  ಅವರಿಗೆ ಅತೀವ ಭಯ. ಅವರ ಮನೆಯಲ್ಲಿದ್ದ ಸೇವಕಿ ರಂಭಾ ಎಂಬವಳು ರಾಮನಾಮ ಜಪದಿಂದ ಭಯ ದೂರವಾಗುವುದೆಂದು ಹೇಳಿಕೊಟ್ಟಿದ್ದಳು. ಈ ರಾಮನಾಮ ಅವರ ಜೀವನದ ಕೊನೆಯವರೆಗೂ ಜೊತೆಯಾಯ್ತು.

 ಲಂಡನ್ನಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಮುಂಬಯಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದಾಗಲೂ ಪುಕ್ಕಲುತನ ಅವರನ್ನು ಬಿಟ್ಟಿರಲಿಲ್ಲ. ಅವರ ಮೊದಲ ಕೇಸಿನಲ್ಲಿ ಅವರಿಗೆ ವಾದಿಸಲು ಆಗಲೇಇಲ್ಲ. ಈ ಬಗ್ಗೆ ಅವರು ತಮ್ಮ ಆತ್ಮಕತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ: ‘ನಾನು ಎದ್ದುನಿಂತುಕೊಂಡೆ. ಆದರೆ ನನ್ನ ಹೃದಯ ಪಾತಾಳಕ್ಕೆ ಕುಸಿದುಹೋಯಿತು. ತಲೆ ಸುತ್ತುತ್ತಿತ್ತು. ಇಡೀ ಕೋರ್ಟೇ ಸುತ್ತುತ್ತಿರುವುದೊ ಎನಿಸುತ್ತಿತ್ತು. ಕೇಳಲು ಯಾವ ಪ್ರಶ್ನೆಯೂ ಹೊಳೆಯಲಿಲ್ಲ. ನ್ಯಾಯಾಧೀಶರಿಗೆ ನಗುವೇ ಬಂದಿರಬೇಕು. ಆದರೆ ನನಗೆ ಏನೂ ಕಾಣಿಸುತ್ತಿರಲಿಲ್ಲ. ಕುಳಿತುಬಿಟ್ಟೆ. ಕೇಸು ನಡೆಸಲಾರೆ ಎಂದು ಕಕ್ಷಿದಾರಳಿಗೆ ಹೇಳಿದೆ…’ ತಮ್ಮ ಸ್ಥಿತಿಯ ಬಗ್ಗೆ ಗಾಂಧೀಜಿಗೆ ತುಂಬಾ ನಾಚಿಕೆಯಾಗಿತ್ತು. ಕೇಸು ನಡೆಸುವ ಧೈರ್ಯ ಬರೆವವರೆಗೂ ಯಾವ ಕೇಸನ್ನೂ ತೆಗೆದುಕೊಳ್ಳಬಾರದು ಎಂದು ನಿರ್ಧಾರ ಮಾಡಿದರು. ದಕ್ಷಿಣ ಆಫ್ರಿಕಾಗೆ ಹೋಗುವ ತನಕವೂ ಅವರು ಬೇರೆ ಕೇಸನ್ನು ತೆಗೆದುಕೊಳ್ಳಲೇ ಇಲ್ಲ.

ಪುಕ್ಕಲು ಗಾಂಧೀ ಮಹಾನ್ ಧೈರ್ಯಶಾಲಿಯಾಗಿ ಪರಿವರ್ತನೆಯಾದುದರ ಹಿಂದಿನ ರಹಸ್ಯ ಅವರ ಆಧ್ಯಾತ್ಮಿಕ ಸ್ವಭಾವದ ವಿಕಸನ. ಲಂಡನ್ನಿಗೆ ಹೋಗುವವರೆಗೂ ಗಾಂಧೀಜಿ ಭಗವದ್ಗೀತೆಯನ್ನು ಓದಿರಲೇ ಇಲ್ಲ. ಅಲ್ಲಿ ಎಡ್ವಿನ್ ಆರ್ನಾಲ್ಡ್‌ರ ‘ದಿವ್ಯಗೀತ’ (Song Celestial) ಕೃತಿಯ ಮೂಲಕ ಗೀತೆಯ ಪರಿಚಯ ಆಗಿದ್ದ ಇಬ್ಬರು ಥಿಯಾಸೊಫಿಸ್ಟ್‌ರಿಂದ ಗಾಂಧೀಜಿ ಗೀತೆಯ ಬಗ್ಗೆ ತಿಳಿದರು. ಇದುವರೆಗೂ ತಾವು ಅದನ್ನು ಓದದೆ ಇದ್ದಬಗ್ಗೆ ಅವರಿಗೆ ನಾಚಿಕೆಯಾಯಿತು. ತಮ್ಮ ಸ್ನೇಹಿತರ ಜೊತೆ ಸೇರಿ ಅವರು ಅದನ್ನು ಓದತೊಡಗಿದರು. ಅದರಲ್ಲಿಯ ಎರಡನೆ ಅಧ್ಯಾಯದ ಎರಡು ಶ್ಲೋಕಗಳು ಅವರ ಮನಸ್ಸಿನಲ್ಲಿ ನಾಟಿತು.

 ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ

 ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಭಿಜಾಯತೇ

 ಕ್ರೋಧಾತ್ ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿ ವಿಭ್ರಮಃ

 ಸ್ಮೃತಿ ಭ್ರಂಶಾತ್ ಬುದ್ಧಿನಾಶಃ ಬುದ್ಧಿನಾಶಾತ್ ಪ್ರಣಶ್ಯತಿ

ಗಾಂಧೀಜಿಯವರು ಮುಂದೆ ಗೀತೆಯನ್ನು ಗುಜರಾತಿಯಲ್ಲಿ ಬರೆದರು. ಸಂಸ್ಕೃತದಲ್ಲಿ ಬಾಯಿಪಾಠ ಮಾಡಿದರು. ಸತ್ಯವನ್ನು ಅರಿಯಲು ಶ್ರೇಷ್ಠತಮ ಗ್ರಂಥ ಎಂದು ಅವರು ಗೀತೆಯ ಬಗ್ಗೆ ಹೇಳಿದರು.

 ಗಾಂಧೀಜಿಯವರ ಮೇಲೆ ಪ್ರಭಾವ ಬೀರಿದ ಮತ್ತೊಬ್ಬರೆಂದರೆ ರಸ್ಕಿನ್. 1904ರಲ್ಲಿ ಅವರು ಜೊಹಾನ್ಸ್‌ಬರ್ಗ್‌ನಿಂದ ಡರ್ಬಾನ್‌ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ಕಿನ್‌ನ ‘ಕಟ್ಟಕಡೆಯವನಿಗೆ’ (Unto this Last) ಓದಿದರು. ಅದು ಒಡನೆಯೇ ನಾನು ಕ್ರಿಯಾಶೀಲನಾಗುವಂತೆ ಪ್ರೇರೇಪಿಸಿತು. ರಸ್ಕಿನ್‌ನ ಈ ಕೃತಿಯಲ್ಲಿ ನನ್ನದೇ ಆಳವಾದ ಚಿಂತನೆಗಳು ಇವೆ ಎಂಬುದನ್ನು ನಾನು ಕಂಡುಕೊಂಡೆ ಎಂದು ಅವರು ತಮ್ಮ ಆತ್ಮಕತೆಯಲ್ಲಿ ಬರೆದಿದ್ದಾರೆ. ಇದನ್ನು ಅವರು ಗುಜರಾತಿಗೆ ಅನುವಾದಿಸಿ ‘ಸರ್ವೋದಯ’ ಎಂದು ಹೆಸರಿಟ್ಟರು. ಗಾಂಧೀಜಿಯವರ ಆರ್ಥಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಅಂಕುರವೊಡೆದದ್ದು ಈ ಕೃತಿಯ ಮೂಲಕ.

 ಗಾಂಧೀಜಿ ತಮ್ಮ ಹೋರಾಟದ ಮಾರ್ಗಕ್ಕೆ ಸತ್ಯಾಗ್ರಹ ಎಂದು ಹೆಸರಿಟ್ಟಿದ್ದು 1906ರ ಸೆಪ್ಟೆಂಬರ್ 11ರಂದು. ಜೊಹಾನ್ಸ್‌ಬರ್ಗ್‌ನ ಇಂಪೀರಿಯಲ್ ಥಿಯೇಟರ್‌ನಲ್ಲಿ ಗಾಂಧೀಜಿ ಒಂದು ಸಭೆಯನ್ನು ಕರೆದಿದ್ದರು. ಆ ಸಭೆಯಲ್ಲಿ ತಮ್ಮ ಹೋರಾಟದ ರೂಪುರೇಷೆಯನ್ನು ವಿವರಿಸಿ ಈ ಅಹಿಂಸಾತ್ಮಕ ಹೋರಾಟಕ್ಕೆ ಒಂದು ಹೆಸರು ಸೂಚಿಸುವಂತೆ ಸಭೆಗೆ ಹೇಳಿದರು. ಅವರ ಸೋದರ ಸಂಬಂಧಿ ಮದನಲಾಲ್ ಗಾಂಧಿ ಸದಾಗ್ರಹ ಎಂಬ ಹೆಸರನ್ನು ಸೂಚಿಸಿದರು. ಗಾಂಧೀಜಿ ಅದನ್ನು ಸತ್ಯಾಗ್ರಹ ಎಂದು ತಿದ್ದಿದರು.

ಗಾಂಧೀಜಿಯವರ ದೃಷ್ಟಿಯಲ್ಲಿ ಸತ್ಯಾಗ್ರಹ ಎಂದರೆ ಸತ್ಯಕ್ಕಾಗಿ ಹೋರಾಡುವುದು. ವಿರೋಧಿಗೆ ಕಷ್ಟವನ್ನುಂಟುಮಾಡುವುದಲ್ಲ. ಬದಲಿಗೆ, ತಾನೇ ಕಷ್ಟವನ್ನು ಸಹಿಸಿಕೊಳ್ಳುವುದು.

 ಟಾಲ್‌ಸ್ಟಾಯ್ ಗಾಂಧೀಜಿಯವರ ಮೇಲೆ ಎಷ್ಟೊಂದು ಪ್ರಭಾವ ಬೀರಿದ್ದರು ಎಂದರೆ ಜೊಹಾನ್ಸ್‌ಬರ್ಗ್‌ನಲ್ಲಿ ಸತ್ಯಾಗ್ರಹಿಗಳ ಕುಟುಂಬಗಳಿಗಾಗಿ ಸ್ಥಾಪಿಸಿದ ಆಶ್ರಮಕ್ಕೆ ಟಾಲ್‌ಸ್ಟಾಯ್ ಆಶ್ರಮ ಎಂದೇ ಹೆಸರಿಟ್ಟರು. ಗಾಂಧೀಜಿಯವರನ್ನು ಪ್ರಭಾವಿಸಿದ ಇನ್ನೊಬ್ಬರೆಂದರೆ ಹೆನ್ರಿ ಡೇವಿಡ್ ಥೋರೊ. 1908ರ ಅಕ್ಟೋಬರ್‌ನಲ್ಲಿ ಗಾಂಧೀಜಿ ವೋಕ್ಸ್‌ರಸ್ಟ್ ಸೆರೆಯಲ್ಲಿ ಇದ್ದಾಗ ಥೋರೊನ ಸವಿನಯ ಶಾಸನ ಭಂಗ (Civil Disobediance)  ಕೃತಿಯನ್ನು ಓದಿದರು. ಥೋರೋ ತನ್ನ ಸೆರೆವಾಸದ ಬಗ್ಗೆ ಹೇಳಿದ್ದು ಇವರ ಮೇಲೆ ಗಾಢವಾದ ಪ್ರಭಾವ ಬೀರಿತು. ಗಾಂಧೀಜಿ ಈ ಕೃತಿ ಓದುವುದಕ್ಕಿಂತ ಮೊದಲೇ ದಕ್ಷಿಣ ಆಫ್ರಿಕದಲ್ಲಿ ಪ್ರಭುತ್ವ ವಿರೋಧಿ ಹೋರಾಟವನ್ನು ಆರಂಭಿಸಿದ್ದರು. ಅದನ್ನು ಅವರು ಸಹನಶೀಲ ಪ್ರತಿರೋಧ (Passive Resistance)  ಎಂದು ಕರೆದಿದ್ದರು. ಇದು ಪೂರ್ತಿ ಅರ್ಥವನ್ನು ಧರಿಸದು ಎನ್ನಿಸಿದ ಕಾರಣಕ್ಕೆ ಗುಜರಾತಿ ಓದುಗರಿಗಾಗಿ ತಾವು ಸತ್ಯಾಗ್ರಹ ಎಂಬ ಶಬ್ದವನ್ನು ಟಂಕಿಸಿದ್ದಾಗಿ ಭಾರತ ಸೇವಕ ಸಮಾಜದ ಕೋದಂಡರಾವ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹವನ್ನು ಕೈಗೊಂಡಾಗ ಜಗತ್ತಿನಾದ್ಯಂತ ಸಾವಿರಕ್ಕೂಅಧಿಕ ಪತ್ರಿಕೆಗಳಲ್ಲಿ ಅದು ಸುದ್ದಿಯಾಯಿತು. ನ್ಯೂಯಾರ್ಕ್ ಟೈಮ್ಸ್ ಸಂಪಾದಕೀಯ ಬರೆಯಿತು. ‘ಬ್ರಿಟನ್ ಅಮೆರಿಕವನ್ನು ಚಹದಿಂದ ಕಳೆದುಕೊಂಡಿತು. ಭಾರತವನ್ನು ಉಪ್ಪಿನಿಂದ ಕಳೆದುಕೊಳ್ಳುತ್ತಿದೆ’ ಎಂಬುದು ಅದರಲ್ಲಿಯ ಪ್ರಸಿದ್ಧವಾದ ಸಾಲು. ಟೈಮ್ ಪತ್ರಿಕೆ 1931ರ ಜನವರಿ 4ರ ಸಂಚಿಕೆಯಲ್ಲಿ ಗಾಂಧಿಯವರನ್ನು ವರ್ಷದ ವ್ಯಕ್ತಿ ಎಂದು ಮುಖಪುಟದಲ್ಲಿ ಹೆಸರಿಸಿತು.

ಗಾಂಧೀಜಿಯವರಿಗೆ ನೊಬೆಲ್ ಪ್ರಶಸ್ತಿಯನ್ನು ಕೊಡಲಿಲ್ಲ ಎಂಬ ಕೊರಗು ಭಾರತೀಯರಿಗೆ ಇದೆ. ಆದರೆ ಪ್ರಖ್ಯಾತರಾದ ನೊಬೆಲ್ ಪ್ರಶಸ್ತಿ ಪಡೆದವರ ದೊಡ್ಡ ಸಾಲೇ ಗಾಂಧೀಜಿಯವರನ್ನು ಮೆಚ್ಚಿಕೊಂಡಿತ್ತು. ರವೀಂದ್ರನಾಥ ಠಾಕೂರರು ಬುದ್ಧನನ್ನು ಗಾಂಧೀಜಿಯವರಲ್ಲಿ ಕಂಡಿದ್ದರು. ರೋಮೋರೋಲಾ ಅವರು, ಮಹಾತ್ಮಾಗಾಂಧಿ- ವಿಶ್ವಾತ್ಮನೊಂದಿಗೆ ಒಂದಾದ ವ್ಯಕ್ತಿ ಎಂದು ಹೇಳಿದರು. ಇದೇ ಹೆಸರಿನ ಜೀವನ ಚರಿತ್ರೆ ಬರೆದರು. ಇದು ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಿಗೂ ಅನುವಾದವಾಯಿತು. ಯುರೋಪಿಗೆ ಗಾಂಧಿಯವರ ಸತ್ಯಾಗ್ರಹದ ಅರ್ಥವನ್ನು ಗ್ರಹಿಸುವುದಕ್ಕೆ ನೆರವಾದವರು ಈ ರೋಮೋ ರೋಲಾ. ಜಾರ್ಜ್ ಬರ್ನಾಡ್ ಷಾ ಗಾಂಧಿಯವರನ್ನು ದಯೆಯೇ ಮೈತಳೆದಂತೆ ಎಂದರು. ದಲೈ ಲಾಮಾ ಅವರು ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸುವಾಗ ಗಾಂಧೀಜಿಯವರನ್ನು ಸ್ಮರಿಸುತ್ತ ಸ್ವೀಕರಿಸಿದರು.

ದಕ್ಷಿಣ ಆಫ್ರಿಕದ ಆಲ್ಬರ್ಟ್ ಲುಥುಲಿ, ಡೆಸ್ಮಂಡ್ ಟುಟು ಮತ್ತು ನೆಲ್ಸನ್ ಮಂಡೇಲಾ, ಅರ್ಜೆಂಟೈನಾದ ಅಡಾಲ್ಫೋ ಪೆರೆಜ್, ಎಸ್‌ಕ್ವಿಟಲ್, ಕೊಸ್ಟಾರಿಕಾದ ಆಸ್ಕರ್ ಅರಿಯಾನ್ ಸ್ಯಾನ್ಸ್, ಪೊಲೆಂಡಿನ ಲೆಕ್ ವೆಲೇಸಾ, ಫ್ರಾನ್ಸ್‌ನ ರೆಗೆ ಕ್ಯಾಪಿನ್, ಇಸ್ರೇಲ್‌ನ ಷಿಮಾನ್ ಪೆರೇಸ್, ಐರ್ಲೆಂಡಿನ ಮೈರೀಡ್ ಕಾರಿಗಡ್ ಮತ್ತು ಬೆಟ್ಟೆ ವಿಲಿಯಮ್ಸ್, ನಮ್ಮವರೇ ಆದ ಮದರ್ ತೆರೆಸಾ, ಅಮರ್ತ್ಯ ಸೆನ್, ಮ್ಯಾನ್‌ಮಾರ್‌ನ ಆಂಗ್ ಸಾನ್ ಸೂಕೀ, ಕೀನ್ಯಾದ ವಾಂಗರೈ ಮಥಾಯ್, ಅಮೆರಿಕದ ಅಧ್ಯಕ್ಷರುಗಳಾದ ಜಿಮ್ಮಿ ಕಾರ್ಟರ್ ಮತ್ತು ಬರಾಕ್ ಒಬಾಮಾ ಇವರೆಲ್ಲ ಗಾಂಧೀಜಿಯಿಂದ ತಾವು ಪ್ರಭಾವಿತರಾಗಿರುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

 ಟ್ರಾನ್ಸ್‌ವಾಲ್ ಗೆಜೆಟ್‌ನ ಸಂಪಾದಕರಾಗಿದ್ದ ಹೆನ್ರಿ ಪೋಲಾಕ್ ಭಾರತೀಯ ಸತ್ಯಾಗ್ರಹಿಗಳ ಪರವಾಗಿ ಕೋರ್ಟ್‌ಗಳಲ್ಲಿ ವಕಾಲತ್ತು ವಹಿಸಿದ್ದರು. ಅವರ ಪತ್ನಿ ವಿಲ್ಲಿ ಗ್ರಹಾಂ ಪೋಲಾಕ್ ಅವರು ‘ಮಿ.ಗಾಂಧಿ, ದಿ ಮ್ಯಾನ್‌’ ಎಂಬ ಜೀವನ ಚರಿತ್ರೆ ಬರೆದರು. ಗಾಂಧಿಯವರ ಮೇಲೆ ಬಂದ ಮೊದಲ ಜೀವನ ಚರಿತ್ರೆ ಇದು. ಜೋಸೆಫ್ ಜೆ.ಡೋಕ್ ಅವರು ಬ್ಯಾಪ್ಟಿಸ್ಟ್ ಧರ್ಮಗುರು. 1907ರಲ್ಲಿ ಗಾಂಧೀಜಿಯವರು ಪಠಾಣರ ತಂಡದಿಂದ ಹಲ್ಲೆಗೊಳಗಾದಾಗ ಅವರನ್ನು ತಮ್ಮ ಮನೆಗೆ ಕರೆದೊಯ್ದು ಹತ್ತು ದಿನ ಇರಿಸಿಕೊಂಡು ಉಪಚರಿಸಿದ್ದರು. ಗಾಂಧೀಜಿ ವಿದೇಶಕ್ಕೆ ಹೋದಾಗಲೆಲ್ಲ ‘ಇಂಡಿಯನ್ ಒಪಿನಿಯನ್‌’ ಪತ್ರಿಕೆಯ ಸಂಪಾದಕತ್ವವನ್ನು ಅವರೇ ನಿರ್ವಹಿಸುತ್ತಿದ್ದರು. ಇವರೂ ಗಾಂಧೀಜಿಯ ಜೀವನ ಚರಿತ್ರೆ ಬರೆದಿದ್ದಾರೆ. ಗಾಂಧಿ ಒಬ್ಬ ಅದ್ಭುತ ವ್ಯಕ್ತಿ ಅವರೊಂದಿಗೆ ನಡೆದಾಡುವುದೇ ಒಂದು ಶಿಕ್ಷಣ. ಇವರನ್ನು ಅರಿಯುವುದೆಂದರೆ ಪ್ರೀತಿಸಿದಂತೆಯೇ ಎಂದು ಅವರು ಬರೆದಿರುವರು. ಹರ್ಮನ್ ಕಾಲೆನ್‌ಬಾಕ್ ತಮ್ಮ ಬೌದ್ಧ ಮತದ ಬಗೆಗಿನ ಒಲವಿನಿಂದಾಗಿ ಗಾಂಧಿಗೆ ಹತ್ತಿರವಾದವರು. ತಮ್ಮ 1100 ಎಕರೆ ಭೂಮಿಯನ್ನ ಅವರು ದಾನ ಮಾಡಿದ್ದರು. ಆ ಭೂಮಿಯಲ್ಲಿಯೇ ಗಾಂಧೀಜಿ ಟಾಲ್‌ಸ್ಟಾಯ್ ಫಾರ್ಮ್ ಸ್ಥಾಪಿಸಿ ಸತ್ಯಾಗ್ರಹಿಗಳ ಕುಟುಂಬವನ್ನು ನೆಲೆಗೊಳಿಸಿದ್ದರು. ದಕ್ಷಿಣ ಆಫ್ರಿಕದ ಸರ್ವೋದಯ ಚಳವಳಿಯಲ್ಲಿ ಗಾಂಧಿ ನಂತರ ಎರಡನೆ ಸ್ಥಾನದಲ್ಲಿ ಇದ್ದವರು ಅವರು.

ಮೆಡಲಿನ್ಸ್‌ಸ್ಲೇಡ್ ಬ್ರಿಟಿಷ್ ನೌಕಾಧಿಕಾರಿಯ ಮಗಳು. ರೋಮೋರೋಲಾನ ಪುಸ್ತಕದ ಮೂಲಕ ಗಾಂಧೀಜಿಯ ಬಗ್ಗೆ ಅರಿತರು. ಬ್ರಿಟಿಷ್ ಸಾಮ್ರಾಜ್ಯದ ಕಡು ವೈರಿಯ ಜೊತೆ ಸೇರುವುದು ಆಕೆಯ ತಂದೆಗೆ ಇಷ್ಟವಾಗಲಿಲ್ಲ. 1925ರಲ್ಲಿ ಆಕೆ ಗಾಂಧೀಜಿಯವರ ಆಶ್ರಮಕ್ಕೆ ಬಂದಾಗ ಗಾಂಧೀಜಿ ಹೇಳಿದರು, ‘ಇನ್ನು ಮೇಲೆ ನೀನು ನನ್ನ ಮಗಳು.’ ಆಕೆಗೆ ಮೀರಾಬಹೆನ್ ಎಂದು ಹೆಸರಿಟ್ಟರು. ಜೈಲು ಸೇರಿದ ಅವಧಿ ಬಿಟ್ಟರೆ ಅವಳು ಸದಾ ಗಾಂಧೀಜಿಯ ಜೊತೆಯೇ ಇರುತ್ತಿದ್ದಳು. 1931ರಲ್ಲಿ ಆಕೆ ಲಂಡನ್ನಿಗೂ ಹೋದಳು. ಮೂರುವರ್ಷಗಳ ಬಳಿಕ ಅಮೆರಿಕದ ಪ್ರವಾಸ ಮಾಡಿ ಭಾರತದ ಸ್ಥಿತಿ ಬಗ್ಗೆ ಅಲ್ಲಿ ವಿವರಿಸಿದಳು. ಗಾಂಧೀಜಿ ಮತ್ತು ವೈಸ್‌ರಾಯ್‌ಗಳ ನಡುವೆ ರಾಯಭಾರಿಯಾಗಿ ಇವಳು ಕೆಲಸ ಮಾಡಿದಳು. ಗಾಂಧೀಜಿಯ ಕೊಲೆಯಾದ ನಂತರವೂ ಹನ್ನೊಂದು ವರ್ಷ ಇವಳು ಭಾರತದಲ್ಲಿಯೇ ಇದ್ದಳು. ನಂತರ ಇಂಗ್ಲೆಂಡಿಗೆ ತೆರಳಿದ ಬಳಿಕ ‘ಸ್ಪಿರಿಟ್ ಪಿಲ್‌ಗ್ರಿಮೇಜ್‌’ ಎಂಬ ಆತ್ಮಕಥೆಯನ್ನು ಬರೆದಳು. ಗಾಂಧೀಜಿಗೆ ಸಲ್ಲಿಸಿದ ಭಾವಪೂರ್ಣ ಶ್ರದ್ಧಾಂಜಲಿ ಅದು.

 ಚಾರ್ಲಿ ಚಾಪ್ಲಿನ್, ಲಾಂಜಾ ಡೆಲ್ ವಾಸ್ರೋ, ಸತ್ಯಾನಂದ ಸ್ಪೋಕ್ಸ್ ಆದ ಸ್ಯಾಮ್ಯುಯಲ್ ಇವಾನ್ಸ್ ಸ್ಪೋಕ್ಸ್, ಸಿಸಿಲಿಯ ಗಾಂಧಿ ಎಂದು ಖ್ಯಾತರಾದ ಡನೀಲೊ ಡೊಲ್ಸಿ, ಲಾರೆನ್ಸ್ ವಿಲ್‌ಫ್ರೆಡ್ ಬೇಕರ್, ಅಹಂಗಮಾಗೆ ಟ್ಯೂಡರ್ ಅರಿಯರತ್ನೆ ಮೊದಲಾದವರು ಗಾಂಧೀಜಿಯ ಪ್ರಭಾವಕ್ಕೆ ಒಳಗಾಗಿ ಅವರ ದಾರಿಯಲ್ಲೇ ನಡೆದ ಹಾಗೂ ತಮ್ಮ ದೇಶದಲ್ಲಿ ಗಾಂಧಿ ವಿಚಾರಧಾರೆಯನ್ನು ಹರಡಿದವರಲ್ಲಿ ಪ್ರಮುಖರು. ಗಾಂಧೀ ಮಾರ್ಗದಲ್ಲಿ ಜಗತ್ತಿನ ಅನೇಕ ಕಡೆ ಹೋರಾಟಗಳು ನಡೆದು ಯಶಸ್ವಿಯೂ ಆಗಿವೆ.  ಗಾಂಧಿ ಬತ್ತಲಾರದ ಗಂಗೆ. ಅದು ಪ್ರವಹಿಸುತ್ತಲೇ ಇರುತ್ತದೆ. ಬಾಯಾರಿದವರಿಗೆ ಅಮೃತಧಾರೆ,  ಹೊಲಗಳಿಗೆ ಹರಿದರೆ ಬಂಗಾರದ ತೆನೆ. ನನಗೆ ಯಾರೂ ಇಲ್ಲ ಎಂಬ ಅಸಹಾಯಕ ಭಾವನೆ ಕಾಡಿದಾಗ ನಾನಿದ್ದೇನೆಂಬ ಭರವಸೆಯನ್ನು ನೀಡುತ್ತದೆ. ಅದಕ್ಕಿಂತ ಇನ್ನೇನು ಬೇಕು?