ನಕದಾಸರು ನಮಗೆ ಮುಖ್ಯವಾಗುವುದು ಎರಡು ಕಾರಣಗಳಿಗಾಗಿ. ಒಂದು, ಅವರು ರಚಿಸಿದ ಕೀರ್ತನಗಳು ಮತ್ತು ಇತರ ಸಾಹಿತ್ಯ ಕೃತಿಗಳಿಗಳಿಗಾಗಿ. ಇದು ಸಾಹಿತ್ಯದ ಭಾಗ. ಇನ್ನೊಂದು, ಸಮಕಾಲೀನ ಸಮಾಜದಲ್ಲಿ ಅವರು ಬಹುದೊಡ್ಡ ಸಮುದಾಯದ ನಾಯಕನೆಂದು ಪರಿಗಣಿಸಲ್ಪಟ್ಟು ಆ ಜನಾಂಗದ ಅಸ್ಮಿತೆಗೆ ಅವರು ನೆಲೆಯನ್ನು ಒದಗಿಸಿದ್ದಕ್ಕಾಗಿ. ಇದು ಸಾಮಾಜಿಕ ಭಾಗ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕನಕ ಅಧ್ಯಯನ ಪೀಠ ಸ್ಥಾಪನೆ, ಕನಕ ಭವನಗಳ ನಿರ್ಮಾಣ, ಕನಕದಾಸ ಪ್ರಶಸ್ತಿಯ ಸ್ಥಾಪನೆ ಮೊದಲಾದವೆಲ್ಲ ಕನಕದಾಸರ ಪ್ರಾಮುಖ್ಯತೆಯನ್ನು ಹೇಳುತ್ತದೆ. ಈ ಕಾರಣಕ್ಕಾಗಿಯೇ ಉಳಿದ ದಾಸವರೇಣ್ಯರಿಂದ ಕನಕದಾಸರು ಪ್ರತ್ಯೇಕವಾಗಿ ನಿಲ್ಲುತ್ತಾರೆ.
 ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠ, ಕನಕದಾಸ ಸಂಶೋಧನ ಕೇಂದ್ರವು ಕನಕದಾಸ ಅಧ್ಯಯನ: ಸಮಗ್ರ ಸಂಪುಟ ಭಾಗ-1ನ್ನು “ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ’ ಹೆಸರಿನಲ್ಲಿ ಹೊರತಂದಿದೆ. ಇದರ ಸಂಪಾದಕರು ಡಾ.ಬಿ.ಶಿವರಾಮ ಶೆಟ್ಟಿ.
 ಈ ಕೃತಿಯಲ್ಲಿ ಕನಕದಾಸರ ಬದುಕಿಗೆ ಸಂಬಂಧಪಟ್ಟಂತೆ 118 ಲೇಖನಗಳಿವೆ. ಕನಕದಾಸರ ಜನನ, ಅವರು ಬದುಕಿ ಬಾಳಿದ ಪ್ರದೇಶಗಳು, ಅವರ ಕಾಲ, ಅವರ ಜಾತಿ ಮತ ಮೊದಲಾದವು, ಉಡುಪಿಯ ಕನಕನ ಕಿಂಡಿಯ ಕುರಿತ ವಿಚಾರಗಳ ಆಲೋಚನೆ ಮೊದಲಾದವು ಈ ಲೇಖನಗಳಲ್ಲಿವೆ. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಿಂದ ತೊಡಗಿ ಇಪ್ಪತ್ತೊಂದನೆಯ ಶತಮಾನದ ಈ ವರೆಗಿನ ಲೇಖನಗಳು ಇದರಲ್ಲಿವೆ.
 ಕನಕದಾಸರು 15-16ನೆ ಶತಮಾನಗಳಲ್ಲಿ ಬದುಕಿದವರು. ಅವರು ಸುಮಾರು 98 ವರ್ಷ ಬದುಕಿದ್ದರಂತೆ. ನಾನ್ನೂರೈವತ್ತು ವರ್ಷಗಳ ಹಿಂದಿನ ಕನಕ ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಹೇಗೆ ಸಾಂಸ್ಕೃತಿಕವಾಗಿ ಮುಖ್ಯವಾಗುತ್ತಾರೆ ಎಂಬ ಜಿಜ್ಞಾಸೆ ಈ ಕೃತಿಯ ಅನುಸಂಧಾನದಿಂದ ಸಾಧ್ಯ. 
 ಕನಕದಾಸರ ಕುರಿತು ಕೆಲವು ಪವಾಡಗಳು ಪ್ರಚಲಿತದಲ್ಲಿವೆ. ಅವುಗಳನ್ನು ಒರೆಗೆ ಹಚ್ಚುವ ಪ್ರಯತ್ನ ಈ ಕೃತಿಯಲ್ಲಿ ಆಗಿದೆ. ಇದರಲ್ಲಿಯ ಮೊದಲ ಲೇಖನ ಕೆ.ವೆಂಕಟರಾವ್ ಎನ್ನುವವರು 1871ರಲ್ಲಿ ಬರೆದುದು. ಇದರಲ್ಲಿ ಕನಕದಾಸರನ್ನು ಬೇಡ ಎಂದು ಹೇಳಿದ್ದಾರೆ. ಕನಕದಾಸನು ಎಂಬ ಏಕವಚನ ಪ್ರಯೋಗವಿದೆ. ಈ ಲೇಖನದಲ್ಲಿ ತರ್ಕಕ್ಕೆ ನಿಲ್ಲದ ಹಲವು ಸಂಗತಿಗಳಿವೆ. 1873ರಲ್ಲಿ ಕಿಟ್ಟೆಲ್ ಬರೆದ ಮತ್ತು ಎಡ್ವರ್ಡ್ ಪಿ.ರೈಸ್ ಬರೆದ 1915ರ ಇಂಗ್ಲಿಷ್ ಲೇಖನಗಳೂ ಇಲ್ಲಿವೆ.
 ಬೆಟಗೇರಿ ಕೃಷ್ಣಶರ್ಮ, ಹಾ.ಮಾ.ನಾಯಕ, ವಿ.ಸೀತಾರಾಮಯ್ಯ, ರಂ.ಶ್ರೀ.ಮುಗಳಿ, ದೇ.ಜವರೇಗೌಡ, ಕಟ್ಟೆ ಶೇಷಾಚಾರ್ಯ, ಆರ್.ಆರ್.ದಿವಾಕರ, ಅರವಿಂದ ಮಾಲಗತ್ತಿ ಮೊದಲಾದವರೆಲ್ಲ ಇಲ್ಲಿ ಬರೆದಿದ್ದಾರೆ. ಎಲ್ಲ 118 ಲೇಖನಗಳನ್ನು ಅವಲೋಕಿಸಿದಾಗ ಒಂದು ಅಂಶ ಸ್ಪಷ್ಟವಾಗುತ್ತದೆ. ಕಳೆದ ಶತಮಾನದ ಎಂಬತ್ತರ ದಶಕದ ವರೆಗೂ ಕನಕದಾಸರ ಬಗ್ಗೆ ಕೆಲವು ಪವಾಡಗಳು, ಅವರ ಕೀರ್ತನಗಳು, ಅವರ ಕಾವ್ಯಗಳ ಬಗ್ಗೆಯಷ್ಟೇ ಚರ್ಚೆಗಳು ನಡೆಯುತ್ತಿದ್ದವು. ಆ ನಂತರ ಕನಕ ಒಂದು ಸಾಂಸ್ಕೃತಿಕ ವಾಗ್ವಾದದ ಭಾಗವಾಗಿ, ಒಂದು ರಾಜಕೀಯ ಮುದ್ದೆಯಾಗಿ ಚರ್ಚೆಗೆ ಒಳಗಾಗುತ್ತಾರೆ. ಉಡುಪಿಯ ಕನಕ ಗೋಪುರದ ಸಂಬಂಧದಲ್ಲಿ ನಡೆದ ವಾಗ್ವಾದ, ತಲೆದೋರಿದ ವಿವಾದ ಎಲ್ಲವೂ ಸಾಂಸ್ಕೃತಿಕ ರಾಜಕಾರಣ ಎನ್ನಿಸದೆ ಇರದು.
 ಕನಕನ ಕಿಂಡಿ ಹೇಗೆ ಉಂಟಾಯಿತು ಎಂಬ ಬಗ್ಗೆ ಕಳೆದ ಶತಮಾನದ ಮೂರನೆ ದಶಕದಲ್ಲಿಯೇ ಜಿಜ್ಞಾಸೆ ನಡೆದ ಬಗ್ಗೆ ಇದರಲ್ಲಿ ಲೇಖನವಿದೆ. ಆದರೆ ಇಪ್ಪತ್ತೊಂದನೆಯ ಶತಮಾನದಲ್ಲಿ ಕನಕನಿಗಾಗಿ ಕೃಷ್ಣ ತಿರುಗಿ ನಿಂತನು ಎಂಬುದನ್ನು ನಂಬುವುದಕ್ಕೇ ಹೆಚ್ಚು ಒತ್ತು ನೀಡುತ್ತಿರುವ ಗುಮಾನಿ ಮೂಡುವುದು. ಇದಕ್ಕೆ ಸಾಂಸ್ಕೃತಿಕ ರಾಜಕಾರಣವೇ ಕಾರಣ. ಯೋಧನಾಗಿದ್ದು ಹರಿದಾಸನಾಗಿ ಪರಿವರ್ತನೆಗೊಂಡ ಕನಕದಾಸ ಇದೀಗ ಒಂದು ರಾಜಕೀಯ ಶಕ್ತಿಯಾಗಿ ಪರಿವರ್ತನೆಗೊಂಡಿರುವುದೂ ಅಧ್ಯಯನಯೋಗ್ಯವಾದ ವಿಷಯವೇ ಆಗಿದೆ. ಚಂದ್ರಕಾಂತ ಬಿಜ್ಜರಗಿಯವರು “ದಾಸರ ಜಾತಿ-ಮತ’ ಎಂಬ ನೂರಾರು ಪುಟಗಳ ವಿಸ್ತಾರವಾದ ಲೇಖನವನ್ನು ಬರೆದಿರುವರು. ಕನಕದಾಸರು ಕುರುಬರೆ, ಬೇಡರೆ, ಕಬ್ಬಿಲರೆ ಇತ್ಯಾದಿ ಅಂಶಗಳನ್ನು ಅವರು ಚರ್ಚಿಸುತ್ತಾರೆ. ಹಲವು ಶಾಸನಗಳನ್ನು, ಹಲವು ಕಾವ್ಯಗಳನ್ನು ಚರ್ಚೆಗೆ ಬಳಸಿಕೊಳ್ಳುವ ಅವರ ಅಧ್ಯಯನದ ಪರಿ ಗೌರವ ಮೂಡಿಸದೆ ಇರದು. “ಕನಕನ ಕಿಂಡಿ ಮತ್ತು ಶಾಸನಗಳು’ ಎಂಬ ಲೇಖನವನ್ನು ಕಸಗಾರು ಮಾಧವರಾವ್ ಬರೆದಿರುವರು. “ಕನಕನ ಕಿಂಡಿಯೂ ಕೃಷ್ಣನ ಹುಂಡಿಯೂ- ಚಾರಿತ್ರಿಕ ವಿಶ್ಲೇಷಣೆ’ ಎಂಬ ಲೇಖನವನ್ನು ಡಾ.ಆರ್ಕೆ ಮಣಿಪಾಲ ಬರೆದಿರುವರು. ಇವುಗಳಲ್ಲಿಯ ಚಿಂತನೆಗಳೆಲ್ಲ ರಾಜಕೀಯ ಆಶಯವನ್ನು ಹೊಂದಿರುವಂಥದ್ದು.
 ಈ ಹಿನ್ನೆಲೆಯಲ್ಲಿ ಇಲ್ಲಿಯ ಬರೆಹಗಳನ್ನು ಹೊಸ ಮಾನದಂಡದೊಂದಿಗೆ ಅನುಸಂಧಾನ ಮಾಡಬೇಕಾಗುತ್ತದೆ. ಸಾಹಿತ್ಯಿಕವಾಗಿ ಮುಖ್ಯವಾಗುವ ಕನಕದಾಸರು ಸಾಮಾಜಿಕವಾಗಿಯೂ ನಮಗೆ ಏಕೆ ಮುಖ್ಯವಾಗುತ್ತಾರೆ ಎಂಬುದಕ್ಕೆ ಉತ್ತರವನ್ನು ಕಂಡುಕೊಂಡರೆ ಹಲವು ಪ್ರಮೇಯಗಳಿಗೆ ಸಮಾಧಾನ ದೊರೆಯುತ್ತದೆ. 
 ಒಂದು ವಿಶ್ವವಿದ್ಯಾನಿಲಯದಂಥ ಸಂಸ್ಥೆ ಒಬ್ಬ ಸಂತನ ವಿಷಯದಲ್ಲಿ ಇಷ್ಟೊಂದು ವಿಸ್ತಾರವಾದ ಯೋಜನೆಯನ್ನು ರೂಪಿಸಿದೆ ಎಂದರೆ ಅದೊಂದು ಹೆಮ್ಮೆಪಡುವ ವಿಚಾರವೇ. ಈ ಮೂಲಕ ಅದು ತನ್ನ ಸಾಂಸ್ಕೃತಿಕ ಜವಾಬ್ದಾರಿಯನ್ನು ಪೂರೈಸಿದೆ. ಇನ್ನೂ ಹಲವು ಸಂಪುಟಗಳು ಈ ಯೋಜನೆಯಲ್ಲಿ ಬರಲಿವೆ. ಕನಕನ ಇತಿಹಾಸವನ್ನೆಲ್ಲ ಹೇಳಿದ ಮೇಲೆ ಚರ್ವಿತಚರ್ವಣವಾಗುವ ಅಪಾಯವಿರುತ್ತದೆ. ಇನ್ನು ಅವರ ಕೃತಿಗಳ ಆಶಯದ ಪ್ರಚಾರವಾಗಬೇಕಿದೆ. ಕುಲಕುಲವೆಂದು ಬಡಿದಾಡದಿರಿ ಎಂದ ದಾಸವರೇಣ್ಯರ ಕುಲದ ಬಗ್ಗೆಯೇ ನೂರಾರು ಪುಟಗಳಲ್ಲಿ ಚರ್ಚೆ ನಡೆದಿರುವುದು ಮತ್ತು ಅದರ ಹಿಂದಿರುವ ರಾಜಕೀಯದ ಆಶಯಗಳನ್ನು ಗ್ರಹಿಸಿದಾಗ ಏನನ್ನಿಸಬಹುದು?