ತಮ್ಮದೆನ್ನುವ ಊರು ಬಿಟ್ಟ ನನ್ನಂಥವರಿಗೆ ಊರ ದಾರಿ ಬಹು ದೂರ ಮತ್ತು ಅಷ್ಟೇ ಹತ್ತಿರ ಕೂಡ. ದೂರ ಏಕೆಂದರೆ ನಾವು ಊರಿಗೆ ಹೋಗುವುದೇ ಅಪರೂಪವಾಗಿರುತ್ತದೆ. ಹೋಗಬೇಕು ಅಂದುಕೊಂಡಾಗಲೆಲ್ಲ ಏನೇನೋ ಅಡಚಣೆಗಳು ಎದುರಾಗಿ ಪ್ರಯಾಣ ಮುಂದಕ್ಕೆ ಹೋಗುತ್ತಲೇ ಇರುತ್ತದೆ. ಹತ್ತಿರ ಏಕೆಂದರೆ ಅನಕ್ಷಣವೂ ನಾವು ನಮ್ಮೂರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತೇವೆ. ನಮ್ಮ ಹೃದಯದ ಚಿಪ್ಪಿನಲ್ಲಿ ಅಡುಗಾಗಿ ವಾಸನೆಯಾಡುತ್ತಲೇ ಇರುತ್ತದೆ ನಮ್ಮೂರು. ನಮ್ಮ ಮಾತಿನಲ್ಲಿ, ಅಷ್ಟೇಕೆ ನಮ್ಮ ಇರುವಿಕೆಯಲ್ಲಿಯೇ ನಮ್ಮ ಎದುರಿನವರಿಗೆ ನಮ್ಮೂರು ಪ್ರತಿಫಲಿಸುತ್ತಿರುತ್ತದೆ. ಪ್ರತಿ ಬಾರಿ ಊರಿಗೆ ಹೋಗುವಾಗಲೂ ಒಂದು ಅಳುಕು ನನ್ನಲ್ಲಿ ಇರುತ್ತದೆ. ಊರಿನಲ್ಲಿ ಯಾರ್ಯಾರ ಸಾವಿನ ಸುದ್ದಿಯನ್ನು ಕೇಳಬೇಕಾಗುತ್ತದೆಯೋ ಅಂದುಕೊಳ್ಳುತ್ತಲೇ ಹೋಗುತ್ತೇನೆ. ಊರವರು ಅಂದಮೇಲೆ ಅದ್ಯಾವುದೋ ಸ್ತರದಲ್ಲಿ ಅವರೊಂದಿಗೆ ಸಂಬಂಧ ಬೆಳೆದಿರುತ್ತದೆ. ಒಮ್ಮೊಮ್ಮೆ ನಾವು ಪರಸ್ಪರ ಮಾತನ್ನೇ ಆಡಿರುವುದಿಲ್ಲ. ಅನ್ಯರ ಹೇಳಿಕೆಗಳ ಮೇಲಿಂದಲೇ ಕೆಲವರ ಬಗ್ಗೆ ನಾವು ಅಭಿಪ್ರಾಯಗಳನ್ನು ಕಟ್ಟಿಕೊಂಡಿರತ್ತೇವೆ. ಅಂಥವರೊಂದಿಗೂ ಅದ್ಯಾವುದೋ ಸಂಬಂಧವನ್ನು ಮನಸ್ಸು ಬೆಸೆದಿರುತ್ತದೆ. ಮನೆಗೆ ಹೋಗಿ ಹೊಕ್ಕಿದ ಕೂಡಲೇ ಅಣ್ಣ ಇಂಥ ‘ಅಪಶಕುನ’ದ ಸುದ್ದಿ ಹೇಳುವುದಿಲ್ಲ. ಮಧ್ಯಾಹ್ನದ ಊಟವೆಲ್ಲ ಆದಮೇಲೆ ಒಂದು ಸಣ್ಣ ನಿದ್ದೆ, ಅದಾದ ಮೇಲೆ ಹಲಸಿನ ಕಾಯಿ ಹಪ್ಪಳ ಮುರಿದು ಬಾಯಲ್ಲಿ ಕುರುಕುರು ಮಾಡುತ್ತಲೋ, ಹಲಸಿನ ಬೇಳೆಯನ್ನು ಬೇಯಿಸಿ ಬೆಲ್ಲದಲ್ಲಿ ಕಾಯಿಸಿದ ಗುಡ್ನವನ್ನು ಮೆಲ್ಲುತ್ತಲೋ ಚಾ ಕುಡಿಯುವಾಗ ಇಂಥ ಸುದ್ದಿ ಹೊರಬೀಳುತ್ತದೆ. ಕಳೆದ ಬಾರಿ ಹೋದಾಗ ಗೋದಾವರಿ ಸತ್ತು ಹೋದಳು, ಅವಳು ಸತ್ತ ತಿಂಗಳೊಳಘೇ ಅವಳ ಅವ್ವನೂ ಹೋದಳು ಎಂದಾಗ ನನಗೆ ಆಘಾತವಾಗಿತ್ತು. ಗೋದಾವರಿಯದೇನು ಸಾಯುವಂಥ ಪ್ರಾಯವಲ್ಲ. ಮದುವೆಯಾಗಿ ಎರಡು ವರ್ಷ ಪೂರ್ತಿ ಮುಗಿದಿರಲಿಲ್ಲ. ಪತ್ತೆಯಾಗದ ರೋಗ ಅಮರಿಕೊಂಡು ಸತ್ತುಹೋದಳಂತೆ. ಅವಳ ಸಾವಿನ ದುಃಖದಲ್ಲಿ ಅವಳ ಅಮ್ಮನೂ ಸತ್ತಳು. ಅವಳು ಮೊದಲೇ ಗೂಂಕಿಯಾಗಿದ್ದಳು. ಸಾಯುವವಳಿಗೊಂದು ನೆವ ಸಿಕ್ಕಿತು. ಇಂಥ ಅನಿರೀಕ್ಷಿತ ಸಾವಿನ ಸುದ್ದಿಗಳಿಂದಾಗಿಯೇ ನಾನು ಅಳುಕಿದ್ದು. ಹಪ್ಪಳ ಬಾಯಲ್ಲಿ ನೀರಾಗುತ್ತಿರುವಾಗ ಅಣ್ಣ ಬಾಯಿ ಬಿಟ್ಟ; ಕುರುಡ ನಾಗಪ್ಪ ಹೋದ. ಅವನು ಹೋದ ನಾಲ್ಕು ದಿನಕ್ಕೇ ಮೊನ್ನ ಆಚಾರಿನೂ ದಾರಿ ಕೂಡಿದ. ಮಾತಾಡಿಕೊಂಡು ಸತ್ತವರ ಹಾಗೆ ಸತ್ತರು ನೋಡು ಎಂದು ಹೇಳುತ್ತ ಚಾ ಗುಟುಕರಿಸಿದ. ನನಗೆ ಹಪ್ಪಳದ ಚೂರು ಗಂಟಲಲ್ಲಿ ಚುಚ್ಚಿದ ಹಾಗೆ ಆಯಿತು. ಬಾಯಿ ಇಲ್ಲದ ಮೊನ್ನ ಆಚಾರಿ, ಕಣ್ಣಿಲ್ಲದ ನಾಗಪ್ಪ ಇಬ್ಬರೂ ಸರ್ವೇಂದ್ರಿಯಗಳೂ ಸಕ್ರಿಯವಾಗಿದ್ದವರಿಗಿಂತ ಹೆಚ್ಚು ಕ್ರಿಯಾಶೀಲರಾಗಿದ್ದರು. ಅವರಿಲ್ಲದ ಊರು ಹೆಳವನ ಹಾಗೆ ಅನ್ನಿಸಿಬಿಟ್ಟಿತು ನನಗೆ ಆ ಕ್ಷಣಕ್ಕೆ. ಕುರುಡು ನಾಗಪ್ಪನ ಕರಾಮತ್ತು ಹೊಳೆಸಾಲಿನಲ್ಲೆಲ್ಲ ಮಾತೇ ಮಾತು. ನಾಗಪ್ಪ ಹುಟ್ಟು ಕುರುಡನಾಗಿರಲಿಲ್ಲ. ಅವನು ಏಳೆಂಟು ವರ್ಷದವನಿದ್ದಾಗ ಸಿಡುಬು ಬಂದು ಅವನ ಎರಡೂ ಕಣ್ಣುಗಳು ಹೋಗಿದ್ದವು. ಆ ಏಳೆಂಟು ವರ್ಷಗಳಲ್ಲಿಯೇ ಅವನು ತಾನು ನೋಡಿದ್ದ ಜಗತ್ತನ್ನು ಇದುವರೆಗೂ ಎದೆಯ ಗೂಡಿನಲ್ಲಿ ಜೋಪಾನವಾಗಿರಿಸಿಕೊಂಡಿದ್ದ. ಅವನ ಸಮಕಾಲೀನ ಹಿರಿಯ ತಲೆಗಳೆಲ್ಲ ಅವನ ಮಿದುಳಿನಲ್ಲಿ ಅಚ್ಚಾಗಿದ್ದರು. ಇವನು ಹುಟ್ಟಿದ ಘಳಿಗೆಗೆ ಘಳಿಗೆಗಳು ಸೇರುತ್ತ ಸೇರುತ್ತ ಹೋದಂತೆ ಅವರೆಲ್ಲ ಈ ಲೋಕದಿಂದ ವಿದಾಯ ಪಡೆದುಕೊಳ್ಳುತ್ತಿದ್ದರು. ತನ್ನ ಸಮವಯಸ್ಕರನ್ನು ನಾಗಪ್ಪ ಅವರ ಮಾತಿನಿಂದಲೇ ಗುರುತಿಸುತ್ತಿದ್ದ. ನಾಗಪ್ಪ ನಾಗಪ್ಪನಾಗಿಯೇ ಇದ್ದುದಕ್ಕೆ ಮತಯಾರೂ ನಾಗಪ್ಪ ಆಗಲಿಕ್ಕೆ ಸಾಧ್ಯವಾಗದ ಹಲವು ಗುಣವಿಶೇಷಗಳು ಕಾರಣ. ನಾಗಪ್ಪ ತನ್ನ ಕುರುಡುತನವನ್ನು ಇಕ್ಕಿಮೆಟ್ಟಿದ್ದ. ಗದ್ದೆಯ ಹಾಳೆಗಳಮೇಲೆ ಮಳೆಗಾಲದ ಕೆಸರಿನಲ್ಲಿಯೂ ಜಾರಿ ಬೀಳದೆ ಅವನು ನಡೆಯುತ್ತಿದ್ದ. ಕೈಯಲ್ಲಿ ಸಣ್ಣದೊಂದು ಬಡಿಗೆಯನ್ನು ಹಿಡಿದು ತಡಕುತ್ತ ಸಾಗುವ ಅವನ ಪರಿ ಅವನದೇ ಆಗಿತ್ತು. ದಾರಿಯಲ್ಲಿ ಎದುರುಬಂದವನ್ನು ಅವರ ಹೆಸರು ಹಿಡಿದು ಮಾತನಾಡಿಸಿಯೇ ಅವನು ಮುಂದುವರಿಯುತ್ತಿದ್ದ. ಎದುರಿಗೆ ಫಣಿಯ ಸಿಕ್ಕಿದರೆ, `ಮೊನ್ನೆ ಕೋಳಿಪಡೆಗೆ ನನ್ನ ಬಿಟ್ಟಿಯೇ ನೀನು ಹೋದೆ ಅಲ್ಲವಾ ?’ ಎಂದು ಆಕ್ಷೇಪಿಸುತ್ತಿದ್ದ. ಸ್ವಲ್ಪ ದೂರ ಹೋದ ಮೇಲೆ, `ಅದಕ್ಕಾಗಿಯೇ ನಿನ್ನ ಕೋಳಿ ಹೋಯ್ತು’ ಎಂದು ತನ್ನಷ್ಟಕ್ಕೇ ಹೇಳಿಕೊಳ್ಳುತ್ತಿದ್ದ. ತೇರು, ಜಾತ್ರೆಗಳಲ್ಲಿ ನಡೆಯುವ ನಡೆಯುವ ಕೋಳಿಪಡೆಗಳಲ್ಲಿ ಕುರುಡು ನಾಗಪ್ಪ ಒಡ್ಡ ಕಟ್ಟುತ್ತಿದ್ದ. ದುಡ್ಡು ಬಂತು ಅಂದರೆ ಕಳ್ಳೋ, ಸಾರಾಯಿಯನ್ನೋ ಕುಡಿದು ಮಜಾ ಉಡಾಯಿಸಿಬಿಡುತ್ತಿದ್ದ. ಕುರುಡು ನಾಗಪ್ಪ ಊರಲ್ಲಿ ಕೆಲವರ ಹಿತ್ತಲದಲ್ಲಿಯ ತೆಂಗಿನ ಮರಗಳನ್ನು ಹತ್ತಿ ಕಾಯಿ ಕೊಯ್ಲು ಮಾಡುತ್ತಿದ್ದ. ಯಾವ ಹಿಂಡಿಗೆ ಬೆಳೆದಿದೆ, ಯಾವುದು ಬೊಂಡ ಎಂದೆಲ್ಲ ಅರಿತು ಹಿಂಡಗಿಯ ಬುಡಕ್ಕೆ ಕತ್ತಿ ಹಾಕಿ ಎಳೆದು ಕತ್ತರಿಸಿಬಿಡುತ್ತಿದ್ದ. ಕಾಯಿ ಕೊಯ್ಲು ಮಾಡುವಲ್ಲಿಯ ಅವನ ಹಿಕ್ಮತ್ತು ಕಣ್ಣಿದ್ದವರು ನಾಚುವ ಹಾಗೆ ಮಾಡಿತ್ತು. ಹೀಗೆ ಕುಯ್ದ ಕಾಯಿಯ ಸಿಪ್ಪೆ ಸುಲಿಯುವುದರಲ್ಲಿಯೂ ಅವನು ನಿಸ್ಸೀಮ. ಕಾಯಿ ಸುಲಿಯುವ ಶೂಲಿಗೆಯನ್ನು ಕಾಯಿ ರಾಶಿಯ ಮುಂದೆ ನೆಲದಲ್ಲಿ ಹುಗಿದು ಸೊಂಟಕ್ಕೆ ಬೈರಾಸ ಬಿಗಿದು ಸುಲಿಯತೊಡಗಿದನೆಂದರೆ ತಾಸಿಗೆ ನೂರು ಕಾಯಿಯ ಸಿಪ್ಪೆ ಸುಲಿದು ಒಗೆದುಬಿಡುತ್ತಿದ್ದ. ಇದೇ ನಾಗಪ್ಪನೇ ಯಾರದಾದರೂ ಮನೆಯ ಕೆರೆಯಲ್ಲೋ ಬಾವಿಯಲ್ಲೋ ಕೊಡಪಾನ ಬಿದ್ದು ಮುಳುಗಿದರೆ ಆ ಬಾವಿಯಲ್ಲಿ ಇಳಿದು ಕೊಡಪಾನವನ್ನು ಎತ್ತುತ್ತಿದ್ದ. ಇದೆಲ್ಲ ಕೇಳಿದವರಿಗೆ ಹುಬ್ಬೇರಿಸುವ ಹಾಗೆ ಮಾಡಿದರೂ ಹೊಳೆಸಾಲಿನಲ್ಲಿ ಅದೊಂದು ಸುದ್ದಿಯೇ ಅಲ್ಲ ಎಂಬಷ್ಟು ಸಹಜ ಕ್ರಿಯೆಯಾಗಿತ್ತು. ನೆಲ ಮುಗಿಲು ಪಾತಾಳಗಳ ಕೆಲಸವನ್ನು ಸಹಜವಾಗಿಯೇ ಮಾಡಬಲ್ಲವನಾಗಿದ್ದ ನಾಗಪ್ಪ ತನ್ನ ಕುರುಡುತನವನ್ನು ಇಕ್ಕಿ ಮೆಟ್ಟಿದ್ದ ಎಂದರೆ ಅದು ಅತಿಶಯೋಕ್ತಿಯ ಮಾತಲ್ಲ. ಕೆಲವರು ಹೇಳುತ್ತಿದ್ದರು, ನಾಗಪ್ಪ ಹೆಸರಿಗೆ ತಕ್ಕಂತೆ ಇದ್ದಾನೆ ಎಂದು. ಅವನ ನಡಿಗೆಯಲ್ಲಿ ಹಾವಿನ ಚಲನೆಯನ್ನು ಗುರುತಿಸಿದ್ದರು ಜನ. ಹಾವು ಮರವನ್ನೂ ಹತ್ತಬಲ್ಲದು, ನೀರಿನಲ್ಲಿಯೂ ಸಾಗಬಲ್ಲುದು. ಹಾಗೇ ನಾಗಪ್ಪ ಎನ್ನುವುದು ಅವರ ಅಂಬೋಣ. ನಾಗಪ್ಪ ನಾಗನ ಹಾಗೆ ದ್ವೇಷವನ್ನೂ ಸಾಧಿಸಬಲ್ಲ ಎಂಬುದಕ್ಕೆ ಪುರಾವೆ ಎನ್ನುವಂತೆ ಈ ಘಟನೆಯನ್ನು ಹೇಳುತ್ತಾರೆ ಅವರು. ಅದೊಂದು ವರ್ಷ ಊರಲ್ಲಿ ದೀಪಾವಳಿಯ ಸಂಭ್ರಮ. ಹೊಸದಾಗಿ ಮದುವೆಯಾದವರ ಸಂಭ್ರಮವಂತೂ ಇನ್ನಷ್ಟು ಅಧಿಕ. ಮಾವನ ಮನೆಗೆ ಹೆಂಡತಿಯೊಂದಿಗೆ ಹೋಗಿಬರುವ ಧಿಮಾಕು ಏನು ಕಡಿಮೆಯದಲ್ಲ. ಪುಂಡಲೀಕ ಅದೇ ವರ್ಷ ಮದುವೆಯಾಗಿದ್ದ. ಕೇರಿಯ ಈ ತುದಿಗೆ ಅವನ ಮನೆಯಾದರೆ ಮತ್ತೊಂದು ತುದಿಗೆ ಅವನ ಮಾವನ ಮನೆ. ಮಾವನ ಮನೆಗೆ ಹೋಗುವ ಮದುಮಕ್ಕಳಿಗೆ ಹಿಂಡಲಕಾಯಿಯಿಂದ ಹೊಡೆಯುವದು ರೂಢಿ. ಕುರುಡು ನಾಗಪ್ಪನ ಅಣ್ಣನ ಮಗ ಧರ್ಮ ಗದ್ದೆಯ ಹಾಳೆಯ ಮೇಲೆ ಓಲಾಡುತ್ತ ಮಾವನ ಮನೆಗೆ ಹೊರಟಿದ್ದ ಪುಂಡಲೀಕ ದಂಪತಿಗೆ ಹಿಂಡಲಕಾಯಿಂದ ಹೊಡೆದುಬಿಟ್ಟ. ಗಳಿತು ಹಣ್ಣಾಗಿದ್ದ ಹಿಂಡಲಕಾಯಿ ಒಡೆದು ಮದುಮಕ್ಕಳ ಹೊಸ ಬಟ್ಟೆಯನ್ನು ಹೊಲಸು ಮಾಡಿತು. ಪುಂಡಲೀಕನಿಗೆ ಸಿಟ್ಟುಬಂತು. ಧರ್ಮನನ್ನು ಹಿಡಿದುಕೊಂಡು ನಾಲ್ಕು ಒಗಾಯಿಸಿಬಿಟ್ಟ. ಅದೇ ಊರಲ್ಲಿ ದೊಡ್ಡ ಸುದ್ದಿಯಾಗಿಬಿಟ್ಟಿತು. ಹಬ್ಬದ ಮಾರನೆ ದಿನ ಊರ ಮಧ್ದ ಅಂಗಡಿಯಲ್ಲಿ ಪಂಚಾಯ್ತಿ ಸೇರಿತು. ಪುಂಡಲೀಕ ಹಬ್ಬದ ದಿನ ಹುಡುಗನನ್ನು ಹೊಡೆದದ್ದು ತಪ್ಪು. ಅವನು ತಪ್ಪುಕೊಡಬೇಕು ಎಂಬುದು ಧರ್ಮನ ಮನೆಯವರ ವಾದವಾಗಿತ್ತು. ಹಬ್ಬದಲ್ಲಿ ಹಿಂಡಲಕಾಯಿಯಿಂದ ಹೊಡೆಯುವುದು ನಡೆದುಕೊಂಡು ಬಂದ ಪದ್ಧತಿ. ಹೀಗಿದ್ದಾಗ ಆ ಹುಡುಗನಿಗೆ ಹೊಡೆದದ್ದು ತಪ್ಪು ಎಂದೇ ಎಲ್ಲರೂ ಹೇಳಿದರು. ತಪ್ಪುಕೊಡುವುದಕ್ಕೆ ಪುಂಡಲೀಕ ಒಪ್ಪಲೇ ಇಲ್ಲ. ಹಟ ಅಂದರೆ ಹಟ ನೋಡು ಪುಂಡಲೀಕನದು ಎಂದು ಊರವರು ಹೇಳಿಕೊಳ್ಳುವ ಹಾಗೆ ಅವನು ಹಟ ಮಾಡತೊಡಗಿದ. ಪಂಚಾಯ್ತಿಯಲ್ಲಿ ಕುರುಡು ನಾಗಪ್ಪನೂ ಇದ್ದ. ತನ್ನ ಅಣ್ಣನ ಮಗನನ್ನು ಹೊಡೆದವನ್ನು ಹಾಗೇ ಬಿಡಬಾರದು ಅಂದುಕೊಂಡ. ಹಟ ಮಾಡುವವನ ತಲೆಯ ಮೇಲೆ ಮೆಣಸು ಅರೆಯದಿದ್ದರೆ ನನ್ನ ಹೆಸರು ನಾಗಪ್ಪನೇ ಅಲ್ಲ ಎಂದು ಪ್ರತಿಜ್ಞೆ ಮಾಡಿದವನ ಹಾಗೆ ಮೆಲ್ಲಗೆ ಮೆಲ್ಲಗೆ ಪುಂಡಲೀಕನ ಬಳಿ ಸಾರಿದ. ಪುಂಡಲೀಕನ ಮಾತಿನ ಮೇಲಿಂದಲೇ ಅವನು ಎಲ್ಲಿ ಕುಳಿತಿದ್ದಾನೆ ಎನ್ನುವುದನ್ನು ಅಂದಾಜು ಮಾಡಿ ಅತ್ತ ಸರಿದಿದ್ದ ಅವನು.ಸರಿ. ಪುಂಡಲೀಕನ ಹಿಂದೆಯೇ ಹೋಗಿ ನಿಂತ ನಾಗಪ್ಪ, ಮಾಡಿದ ತಪ್ಪಿಗೆ ದಂಡ ಕೊಡ್ತಿಯೋ ಇಲ್ವೋ ಎಂದು ಕೇಳಿದ. ಪುಂಡಲೀಕ ಮತ್ತೆ ಅದೇ ಧರ್ತಿಯಲ್ಲಿ, ಕೊಡುವುದಿಲ್ಲ ಅಂದ್ರೆ ಕೊಡುವುದಿಲ್ಲ ಎಂದುಬಿಟ್ಟ. ಈ ಪಂಚಾಯ್ತಿಗೆ ಕಿಮ್ಮತ್ತೇ ಇಲ್ಲವಾ ಹಾಗಾದ್ರೆ. ನಿನಗೆ ಏನಾದ್ರೂ ಆದ್ರೆ ನೀನು ಯಾರ ಕಡೆ ಹೊತ್ಕೊಂಡು ಹೋಗ್ತಿಯೋ ಎಂದು ಹೇಳಿದವನೇ ನಾಗಪ್ಪ ಕಾಲ್ಲಿದ್ದ ಮೆಟ್ಟನ್ನು ತೆಗೆದು ಪುಂಡಲೀಕನಿಗೆ ನಾಲ್ಕು ಇಕ್ಕಿರಸಿಯೇ ಬಿಟ್ಟ. ಅಲ್ಲಿ ಇದ್ದವರಿಗೆಲ್ಲ ಏನು ನಡೆಯುತ್ತಿದೆ ಎನ್ನುವುದು ಗೊತ್ತಾಗುವುದರೊಳಗೆಯೇ ಎಲ್ಲವೂ ನಡೆದು ಹೋಗಿತ್ತು. ಥಂಡು ಬಡಿದ ಪುಂಡಲೀಕನಿಗೆ ಏನು ಮಾಡಬೇಕು ಎನ್ನುವುದೇ ಗೊತ್ತಾಗಲಿಲ್ಲ. ಕ್ಷಣ ಬಿಟ್ಟು ಪುಂಡಲೀಕ ನಾಗಪ್ಪನ ಮೇಲೆ ಏರಿ ಹೋಗಲು ನೋಡಿದ. ಆದರೆ ಉಳಿದವರು ಅವನನ್ನು ಹಿಡಿದುಕೊಂಡು ಕುರುಡು ನಾಗಪ್ಪನನ್ನು ಹೊಡೆತದಿಂದ ತಪ್ಪಿಸಿದರು. ಈ ಪ್ರಕರಣ ಆದಮೇಲೆ ಎಲ್ಲರೂ ಕುರುಡು ನಾಗಪ್ಪನ ಸಹವಾಸ ಬೇಡ್ವೋ ಮಾರಾಯ ಎಂದು ಹಳುವ ಹಾಗೆ ಆಯ್ತು. ಪುಂಡಲೀಕ ಎರಡು ದಿನ ಬಿಟ್ಟು ಪೊಲೀಸು ಕಂಪ್ಲೇಟು ಕೊಡ್ತೆ ಹಾಗೆ ಹೀಗೆ ಎಂದು ಒದರಾಡಿದ. ಸಾಕ್ಷಿ ಹೇಳಲು ಯಾರೂ ಬರುವುದಿಲ್ಲ, ಕುರುಡ ಹೊಡೆದನೆಂದರೆ ಕೋರ್ಟಿನಲ್ಲಿ ಸಾಬೀತು ಮಾಡಲು ಸಾಧ್ಯವಿಲ್ಲ ಎಂದೆಲ್ಲ ಕೆಲವರು ಅವನ ತಲೆಯಲ್ಲಿ ತುಂಬಿದ ಮೇಲೆ ಅವನು ತಣ್ಣಗಾದ. ಕುರುಡು ನಾಗಪ್ಪನ ರಸಿಕತೆಯ ಬಗ್ಗೆಯೂ ಕತೆಗಳಿವೆ. ಕುರುಡುತನದಿಂದಾಗಿಯೇ ಮದುವೆಯಿಂದ ಅವನು ವಂಚಿತನಾಗಿದ್ದ. ಮಾನವ ಸಹಜ ಬಯಕೆಗಳು ಅವನ ಅಂತರ್ಯದಲ್ಲಿ ಇದ್ದೇ ಇತ್ತು. ಮಾಯೆಯ ಗೆದ್ದವರುಂಟೆ ಜಗದಲಿ? ಗದ್ದೆಯ ಹಾಳೆಯ ಮೇಲೆ ನಾಗಪ್ಪ ಹೋಗುವಾಗ ಅವನಿಗೆ ಕಣ್ಣು ಕಾಣಿಸದಿದ್ದರೂ ಎದುರು ಬಂದವರು ಗಂಡಸರೋ ಹೆಂಗಸರೋ ಎನ್ನುವುದನ್ನು ಅರಿತುಬಿಡುತ್ತಿದ್ದ. ಅವನ ಗ್ರಹಣ ಶಕ್ತಿ ಅಷ್ಟೊಂದು ಚುರುಕಾಗಿತ್ತು. ಹೆಂಗಸರೆಂದು ತಿಳಿದರೆ ನಾಗಪ್ಪ ಸ್ವಲ್ಪ ಎಡವಿದ ಹಾಗೆ ಮಾಡಿ ಅವರ ಮೇಲೆ ಬೀಳುತ್ತಾನೆ ಎನ್ನುವ ಹುಕಿ ಅವನ ಬಗೆಗೆ ಪ್ರಚಲಿತದಲ್ಲಿತ್ತು. ಕೆಲವರು ಅವನ ಎದುರಿಗೇ ಇದನ್ನು ಹೇಳಿಯೂ ಇರುತ್ತಿದ್ದರು. ಕುರುಡ ಹೇಳಿ ಹೀಗೆ ಫಾರ್ಸು ಮಾಡೂದಾ? ಎಂದು ನಾಗಪ್ಪ ಪ್ರಶ್ನಿಸಿ ಅವರ ಬಾಯಿ ಮುಚ್ಚಿಸುತ್ತಿದ್ದ. ನಾಗಪ್ಪನ ಮದುವೆಯಾಗಿರಲಿಲ್ಲ. ಹಾಗಂತ ಅವನು ಬ್ರಹ್ಮಚಾರಿಯೂ ಅಲ್ಲ ಎಂಬು ಗುಸುಗುಸು ಇತ್ತು. ನಾಗಪ್ಪನ ವಿಷಯದಲ್ಲಿ ಎಲ್ಲವೂ ಬಹಿರಂಗವಾಗಿಯೇ ಚರ್ಚೆಯಾಗುತ್ತಿದ್ದರೂ ಇದು ಮಾತ್ರ ಹಾಗೆ ಚರ್ಚೆಯಾಗುತ್ತಿರಲಿಲ್ಲ. ನಾಗಪ್ಪ ಸಂಜೆಯ ಹೊತ್ತಿಗೆ ಮಂಜುವಿನ ಅಂಗಡಿಯಲ್ಲಿ ಅರ್ಧಕಿಲೋ ಸಣ್ಣಕ್ಕಿಯನ್ನು ಕಟ್ಟಿಸಿ ಹೆಗಲ ಮೇಲಿನ ಬೈರಾಸದ ಒಂದು ತುದಿಯಲ್ಲಿ ಕಟ್ಟಿ ಬೆನ್ನಮೇಲೆ ನೇತುಬೀಳಿಸಿಕೊಂಡು ಹೊರಟನೆಂದರೆ ಅವನು ಯಾರ ಮನೆಯ ದಣಪೆಯ ಬಾಗಿಲಲ್ಲಿ ನಿಂತಿರುತ್ತಾನೆ ಎನ್ನುವುದು ಎಲ್ಲರಿಗೂ ಗೊತ್ತು. ಇಂಥ ನಾಗಪ್ಪ ಸತ್ತನೆಂದಾಗ ಹೊಳೆಸಾಲಿನ ಒಂದ ರೋಚಕ ಅಧ್ಯಾಯ ಮುಗಿದುಹೋಯಿತು ಅಂದುಕೊಂಡೆ. ಕುರುಡನ ಜೊತೆಯಲ್ಲಿ ಮೊನ್ನ ಆಚಾರಿಯೂ ಸತ್ತಿದ್ದು ಕಾಕತಾಳೀಯವೇ ಇರಬಹುದು. ಆದರೆ ತಮ್ಮ ಊನವನ್ನು ಮೀರಿ ಬದುಕಿದ ಅವರಿಬ್ಬರಲ್ಲಿಯೂ ಸಾಮ್ಯ ಇತ್ತು. ಮೊನ್ನನ ಬಗೆಗೆ ಮತ್ತೊಮ್ಮೆ…….