ಹಾಗೆ ನೋಡಿದರೆ ಪ್ರತಿಯೊಬ್ಬರೂ ಕತೆಗಾರರೇ. ಪ್ರತಿಯೊಬ್ಬರಲ್ಲೂ ಕತೆಗಾರ ಒಳಗೆ ಅವಿತಿರುತ್ತಾನೆ. ಹೊರಗೆ ಬರುವುದಕ್ಕೆ ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ. ಕತೆ ಹೇಳುವ ಹರ್ಕತ್ತು ಎಲ್ಲರಿಗೂ ಒಂದಲ್ಲ ಒಂದು ಸಲ ಬಂದೇ ಬರುವುದು. ಮನೆಯಲ್ಲಿ ಚಿಕ್ಕಮಕ್ಕಳು ಇದ್ದಾಗಲಂತೂ ಇದು ವಿಪರೀತ. ಒಮ್ಮೊಮ್ಮೆ ಕಿರುಕುಳ ಅನ್ನಿಸಿಬಿಡುವಷ್ಟು. ಕತೆ ಕತೆ ಕಾರಣ ಬೆಕ್ಕಿಗೆ ತೋರಣ ಎಂದು ಹಾಡಿಕೊಂಡು ಚಿಕ್ಕಂದಿನಲ್ಲಿ ನಾವು ಕುಣಿದದ್ದು ಇಂದು ನೆನಪಾಗುತ್ತಿದೆ. ಕತೆಗಾಗಿ ಆಗ ನಾವು ಹಿರಿಯರನ್ನು ಕಾಡಿದ್ದೇ ಕಾಡಿದ್ದು. ಚಿಕ್ಕ ಮಕ್ಕಳು ಮನೆಯಲ್ಲಿ ಅಜ್ಜ ಅಜ್ಜಿ ಇದ್ದರೆ ಅವರನ್ನು ಕತೆ ಹೇಳುವಂತೆ ಪೀಡಿಸುವರು. ಟಿ.ವಿ. ಯುಗದ ಮುಂಚಿನ ಅಜ್ಜ ಅಜ್ಜಿಯರಲ್ಲಂತೂ ಕತೆಯ ದೊಡ್ಡ ಭಂಡಾರವೇ ಇರುತ್ತಿತ್ತು. ರಕ್ತಬೀಜಾಸುರನ ಸಂತತಿಯಂತೆ ಒಂದಾದ ಮೇಲೆ ಒಂದರಂತೆ ಕತೆ ಹೇಳಿಯೇ ಹೇಳುವವರು ಅವರು. ಕತೆ ಕೇಳುವವರು ದಣಿಯುತ್ತಿದ್ದರೇ ಹೊರತು ಕತೆ ಹೇಳಿ ಅವರೆಂದೂ ಸೋಲುತ್ತಿರಲಿಲ್ಲ. ಟಿ.ವಿ. ಧಾರಾವಾಹಿಯಂತೆ ಇಂದು ಸ್ವಲ್ಪ, ನಾಳೆ ಸ್ವಲ್ಪ ಎಂದು ತಿಂಗಳುಗಳ ಕಾಲ ರಾತ್ರಿ ಮೊಮ್ಮಕ್ಕಳನ್ನು ಕೂಡಿಸಿಕೊಂಡು ಕತೆ ಹೇಳುವ ಅಜ್ಜ ಅಜ್ಜಿಯರೂ ಇದ್ದರು. ಒಂದೂರಲ್ಲಿ ಒಬ್ಬ ರಾಜ. ಅವನಿಗೊಬ್ಬ ಮಂತ್ರಿ. ಎಲ್ಲಿಯೋ ಒಬ್ಬ ರಾಜಕುಮಾರಿ. ಆಕೆಯನ್ನು ಏಳು ಸಮುದ್ರಗಳ ಆಚೆಗೆ ಏಳು ಸುತ್ತಿನ ಕೋಟೆಯಲ್ಲಿ ಬಂಧಿಸಿಡುವ ಮಾಯಾವಿ. ಆ ರಾಜಕುಮಾರಿಯನ್ನು ಬಿಡಿಸಿಕೊಂಡು ಬರಲು ರಾಜಕುಮಾರ, ಮಂತ್ರಿ ಕುಮಾರ ಪಡುವ ಹರಸಾಹಸ, ದಾರಿಯಲ್ಲಿ ಅವರಿಗೆ ಮಾಯಾವಿಯ ರಹಸ್ಯವನ್ನು ಹೇಳುವ ಅಡುಗೂಲಜ್ಜಿ, ಪಂಜರದ ಗಿಳಿಯಲ್ಲಿ ಅವಿತಿರುವ ಮಾಯಾವಿಯ ಪ್ರಾಣಪಕ್ಷಿ, ಕ್ಷಣಕ್ಷಣಕ್ಕೂ ರೋಮಾಂಚಕ ತಿರುವುಗಳು. ಇಂಥ ಫ್ಯಾಂಟಸಿ ಇಲ್ಲದಿದ್ದರೆ ಕತೆ ರುಚಿಸುವುದೇ ಇಲ್ಲ. ಹೇಳುವವರು ಸಮರ್ಥರಿದ್ದರೆ ಹಾವಭಾವಗಳೊಂದಿಗೆ ಸಾಭಿನಯವಾಗಿ ಹೇಳುವರು. ಧ್ವನಿಯ ಏರಿಳಿತ, ಹುಬ್ಬುಗಳ ಸಂಕೋಚ, ವಿಸ್ತರಣೆ ಇವೆಲ್ಲ ರೋಮಗಳನ್ನು ನಿಮಿರಿಸುವುದು. ಅವರನ್ನು ಸುತ್ತುವರಿದು ಮೈಯೆಲ್ಲ ಕಣ್ಣಾಗಿಸಿ ಕಿವಿಯಾಗಿಸಿ ಕೇಳುವವರು ಮಕ್ಕಳು. ಮಕ್ಕಳೂ ಜನ್ಮತಃ ಸಹಜಾಭಿನಯ ಪಟುಗಳೇ. ತಾವು ಕೇಳಿಸಿಕೊಂಡ ಕತೆಯನ್ನು ಇನ್ನೊಬ್ಬರಿಗೆ ತಮ್ಮ ಅಕಲಿಗೆ ನಿಲುಕಿದ್ದಷ್ಟನ್ನು ಸಾಭಿನಯಪೂರ್ವಕವಾಗಿಯೇ ಹೇಳುವರು. ಈ ರೀತಿ ಹೇಳುವುದಕ್ಕೆ ಅವರಿಗೆ ತಮ್ಮ ಓರಿಗೆಯ ಹುಡುಗರೇ ಬೇಕೆಂದೇನಿಲ್ಲ. ಹೆತ್ತವರಾದರೂ ಸರಿ, ಪಟ್ಟುಬಿಡದೆ ತಾವು ಹೇಳಬೇಕಾದ್ದನ್ನು ಕೇಳಿಸಿಯೇ ಬಿಡುವರು. ಅಜ್ಜ ಅಜ್ಜಿಯರು ಹೇಳುವ ಕತೆ ಮಕ್ಕಳ ಕಥನದಲ್ಲಿ ಪುನರ್್ ಸೃಷ್ಟಿಯಾಗುವುದು. ಕೆಲವು ಅಂಶ ಬಿಟ್ಟುಹೋಗಬಹುದು. ಹೀಗೆ ಮಕ್ಕಳ ಮಾನಸಿಕ ಬೆಳವಣಿಗೆ ಈ ಕತೆ ಕೇಳುವ ಕ್ರಿಯೆಯಲ್ಲಿ ಆಗುವುದು. ಕತೆಗಾರ ಮಂಜಣ್ಣನಂಥವರು ಪ್ರತಿ ಊರಲ್ಲಿಯೂ ಇರುವರು. ಮನೆಯಲ್ಲಿ ಕತೆ ಕೇಳಿ ತೃಪ್ತರಾಗದ ಮಕ್ಕಳು ಇಂಥವರನ್ನು ಆಶ್ರಯಿಸುವರು. ಇಂಥವರ ಬದುಕಿನ ಹತ್ತು ಹದಿನೆಂಟು ಆಚರಣೆಗಳೆಲ್ಲ ಕತೆಗಳ ರೂಪ ತಾಳಿರುತ್ತವೆ. ತಮ್ಮದೇ ಅನುಭವ ಎನ್ನುವಂತೆ ಪರಿಸರದಿಂದ ಕತೆಗಳನ್ನು ಮೊಗೆದು ನಿರೂಪಿಸುವ ಅವರ ಕ್ರಮ ಆಕರ್ಷಣೀಯವಾದದ್ದು. ನಾನು ಚಿಕ್ಕವನಿದ್ದಾಗಲಂತೂ ನಮ್ಮ ತೋಟದಲ್ಲಿ ಕೆಲಸ ಮಾಡುವ ಮರಿ ದೇವಪ್ಪ, ದೋಣಿ ಬೊಮ್ಮ, ಕೋಲಕಾರ ಗೋಯ್ದ ಮೊದಲಾದವರು ಹೇಳುತ್ತಿದ್ದ ಕತೆಗಳನ್ನು ಕೇಳಿ ಮೈಮರೆಯುತ್ತಿದ್ದೆ. ಮರಿದೇವಪ್ಪ ಹೇಳಿದ್ದ ಹಾಯ್ಗೂಳಿಯ ಕತೆಯನ್ನು ನೆನಪಿಸಿಕೊಂಡರೆ ಇಂದಿಗೂ ರೋಮಾಂಚನವಾಗುವುದು. ನನ್ನ ಅಜ್ಜ ಅಜ್ಜಿಯರು ನಾನು ಚಿಕ್ಕವನಿದ್ದಾಗಲೇ ತೀರಿಕೊಂಡಿದ್ದರು. ನನ್ನ ಕತೆ ಕೇಳುವ ಹುಚ್ಚನ್ನು ನನ್ನ ಎರಡನೆಯ ಅಣ್ಣ ಪೂರ್ತಿ ಮಾಡಿದ. ರಾತ್ರಿ ನಾವಿಬ್ಬರೂ ಒಟ್ಟಿಗೆ ಮಲಗುತ್ತಿದ್ದೆವು. ನಿತ್ಯವೂ ಒಂದೊಂದು ಕತೆಯನ್ನು ಅವನು ಹೇಳುತ್ತಿದ್ದ. ಒಮ್ಮೊಮ್ಮೆ ಅವನು ಹೇಳಿದ ಕತೆಯನ್ನು ಮರುದಿನ ನನ್ನಿಂದ ಹೇಳಿಸಿ ಕೇಳುತ್ತಿದ್ದ. ಮಂತ್ರ ತಿಳಿಯದೆ ಶಿಲೆಗಳಾಗುವ ರಾಜಕುಮಾರಿಯರು, ಕೀಲು ಕುದುರೆಯ ಮೇಲೆ, ತೇಲುವ ಚಾಪೆಯ ಮೇಲೆ ಪಯಣಿಸುವವರು, ಮಂತ್ರ ಜಲದ ಮಹಿಮೆ ಇತ್ಯಾದಿ ಅದೆಷ್ಟೋ ಕತೆಗಳನ್ನು ಅವನು ನನಗೆ ಹೇಳಿದ್ದ. ಮಳೆಗಾಲದ ರಾತ್ರಿಗಳಲ್ಲಿ ನಮ್ಮಪ್ಪ ರಾಮಾಯಣ, ಭಾಗವತ, ದೇವಿಪುರಾಣಗಳನ್ನು ಪ್ರವಚನದ ಧಾಟಿಯಲ್ಲಿ ದೊಡ್ಡದಾಗಿ ಮನೆ ಮಂದಿಯೆಲ್ಲ ಕೇಳುವಂತೆ ಓದಿ ಹೇಳುತ್ತಿದ್ದರು. ಅದನ್ನು ಕೇಳುತ್ತ ಕೇಳುತ್ತ ಎಷ್ಟೋಸಲ ನಾನು ನಿದ್ರೆ ಮಾಡಿಬಿಡುತ್ತಿದ್ದೆ. ಇದೂ ನನ್ನ ಕತೆ ಕೇಳುವ ಹಸಿವನ್ನು ಕೆಲಮಟ್ಟಿಗೆ ಹಿಂಗಿಸಿತು. ಸ್ವಲ್ಪ ದೊಡ್ಡವನಾಗುತ್ತಿದ್ದಂತೆ ಚಂದಮಾಮ, ಬಾಲಮಿತ್ರಗಳು ತುಂಬಿದ್ದ ಕಪಾಟಿನ ಬಾಗಿಲನ್ನು ನನ್ನ ದೊಡ್ಡ ಅಣ್ಣ ನನಗೆ ತೆರೆದು ಬಿಟ್ಟ. ಅಲ್ಲಿಯೇ ಈಸೋಪನ ಕತೆಗಳು, ಪಂಚತಂತ್ರ ಎಲ್ಲವನ್ನೂ ಓದಿದ್ದು. ಬಳಿಕ ನಮ್ಮೂರಿನ ಏಕೈಕ ಖಾಸಗಿ ಲೈಬ್ರರಿ ಭಟ್ಟರ ಅಂಗಡಿಯ ಲೈಬ್ರರಿಯನ್ನು ಹೊಗಿಸಿದವನೂ ನಮ್ಮ ದೊಡ್ಡಣ್ಣನೇ. ಇವೆಲ್ಲ ನನ್ನ ಕತೆಯ ಹುಚ್ಚನ್ನು ತಣಿಸಿದವು. ನಮ್ಮ ಜಾನಪದರಲ್ಲಂತೂ ಕತೆಯ ದೊಡ್ಡ ಭಾಂಡಾರವೇ ಇದೆ. ಅದಕ್ಕೆ ಕನ್ನ ಹೊಡೆಯುವುದು ಸಾಮಾನ್ಯರಿಗೆ ಸಾಧ್ಯವಾದುದಲ್ಲ. ಬೃಹತ್ ಕತೆ, ಬುದ್ಧನ ಜಾತಕ ಕತೆ, ಬೇತಾಳ ಕತೆಗಳು ಜೊತೆಗೆ ಅರೇಬಿಯನ್್ ನೈಟ್ಸ್ ಮೊದಲಾದವು ಕಥಾಪ್ರಪಂಚದ ಹರಹನ್ನು ವಿಸ್ತರಿಸಿವೆ. ಕತೆಯನ್ನು ಕೇಳುವುದು ಕೇಳುಗರಲ್ಲಿ ತನ್ಮಯತೆಯನ್ನು ಉಂಟುಮಾಡುತ್ತದೆ. ಈ ಗುಣ ಮುಂದೆ ಓದಿನಲ್ಲಿಯೂ ಸಹಾಯ ಮಾಡುತ್ತದೆ. ಚಿಂತನಾಕ್ರಮಕ್ಕೆ ಸೃಜನಾತ್ಮಕತೆಯನ್ನು ರೂಢಿಸುತ್ತದೆ. ಮಕ್ಕಳು ಕತೆಗಾಗಿ ಪೀಡಿಸಿದಾಗ ದೊಡ್ಡವರು ಬೇಸರಿಸದೆ ಅವರಿಗೆ ಕತೆಯನ್ನು ಹೇಳಬೇಕು. ಇದರಿಂದ ಮಕ್ಕಳ ಮನೋ ವಿಕಾಸಕ್ಕೆ ಸಹಕಾರಿಯಾಗುತ್ತದೆ. ಈ ಕತೆಯ ಹಸಿವೇ ಮುಂದೆ ಅವರು ದೊಡ್ಡ ಕತೆಗಾರರು ಆಗಲು ಸಹಕಾರಿಯೂ ಆಗಬಹುದು. ಇಲ್ಲವೆ ಬದುಕಿನ ಅನ್ಯ ನೆಲೆಗಳಲ್ಲಿ ಸೃಜನಶೀಲ ಗುಣಗಳನ್ನು ಬೆಳೆಸಿಕೊಳ್ಳಲು ಅನುವಾಗಬಹುದು. ಇಷ್ಟೆಲ್ಲ ಕಥನ ಮೀಮಾಂಸೆಗೆ ಕಾರಣ ಇಷ್ಟೆ, ನನ್ನ ಇಬ್ಬರು ಮಕ್ಕಳು ಕತೆ ಹೇಳು ಕತೆ ಹೇಳು ಎಂದು ನನ್ನನ್ನು ಪೀಡಿಸುತ್ತಿದ್ದಾರೆ.