*ತಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸವಿಲ್ಲದವರು

`ಹಾಡಿದ್ದೇ ಹಾಡಿದ ಕಿಸಬಾಯಿದಾಸ’ ಎಂದು ಛೇಡಿಸುವುದು ಸಾಮಾನ್ಯ. ಒಂದೇ ಮಾತನ್ನು ಹತ್ತು ಹಲವು ಬಾರಿ ಹೇಳುವವರಿಗೆ ಹೀಗೆ ಹೇಳುತ್ತಾರೆ. ಕಿಸಬಾಯಿ ಎಂದರೆ ಅಗಲವಾಗಿ ತೆರೆದಿರುವ ಬಾಯಿ. ಬಾಯಿ ತೆರೆಯುವುದು ಎಂದರೆ ಮಾತನಾಡುವುದು ಎಂದರ್ಥ. ಸದಾ ಬಾಯಿ ತೆರೆದಿರುವುದೆಂದರೆ ಬರೀ ಮಾತನ್ನೇ ಆಡುತ್ತಿರುವ ಜನ ಅವರು ಎಂದು.
ಸದಾ ಮಾತನಾಡುವವರಿಗೆ ಹೊಸ ವಿಷಯ ಎಲ್ಲಿ ಸಿಗಬೇಕು? ಅದೇ ಅದೇ…. ಅದೇ ಪ್ಲೇಟನ್ನು ತಿರುವಿ ಹಾಕಿ ಹಳೆಯ ಹಾಡನ್ನು ಮತ್ತೆ ಮತ್ತೆ ಕೇಳುವುದಿಲ್ಲವೆ, ಹಾಗೆ ಇದು. ಅದಕ್ಕೇ ಇರಬೇಕು, ಅತಿ ಮಾತನಾಡುವವರನ್ನು ಗ್ರಾಮಾಫೋನ್‌ ಎಂದು ಹೇಳುವುದು. ಗ್ರಾಮಾಫೋನ್‌ ಈಗ ಅಪರೂಪವಾಗಿದೆ. ಹೀಗಾಗಿ ಅವರನ್ನು ಟೇಪ್‌ರೆಕಾರ್ಡರ್‌ ಎಂದು ಹೇಳುವುದ ಬಳಕೆಗೆ ಬಂದಿದೆ.
ಹೇಳಿದ್ದನ್ನೇ ಹೇಳುವುದು ಒಂದು ಮಾನಸಿಕ ರೋಗವೂ ಹೌದು. ತನಗೆ ತನ್ನ ಮೇಲೆ ವಿಶ್ವಾಸ ಇಲ್ಲದಿದ್ದಾಗ, ಬೇರೆಯವರ ಸಾಮರ್ಥ್ಯದ ಕುರಿತು ವಿಶ್ವಾಸ ಇಲ್ಲದಿದ್ದಾಗ ಹೇಳಿದ್ದನ್ನೇ ಹೇಳುತ್ತಿರುತ್ತಾರೆ. ಮೊದಲು ತನ್ನ ಮೇಲೆ ತನಗೆ ನಂಬಿಕೆ ಇರಬೇಕು. ಹಾಗಿದ್ದಾಗ ಮಾತ್ರ ಇತರರ ಮೇಲೆ ನಂಬಿಕೆ ಇಡುವುದು ಸಾಧ್ಯವಾಗುತ್ತದೆ.
ಇತರರ ಮೇಲೆ ನಂಬಿಕೆ ಕಡಿಮೆಯಾದಾಗ ತಾನು ಮಾಡಿದ್ದು ಉತ್ತಮ, ಮಗ ಮಾಡಿದ್ದು ಮಧ್ಯಮ, ಆಳು ಮಾಡಿದ್ದು ಹಾಳು ಎಂಬಂಥ ಮಾತು ಚಲಾವಣೆಗೆ ಬರುತ್ತದೆ. ತಾನೊಬ್ಬನೇ ಸರಿ, ಉಳಿದವರೆಲ್ಲ ತಪ್ಪು ಎಂಬ ಭ್ರಮೆ ಮನಸ್ಸಿಗೆ ಆವರಿಸಿದಾಗಲೂ ಕಿಸಬಾಯಿದಾಸರಾಗುತ್ತಾರೆ ಜನ.