*ಅಸೀಮ ತಿರಸ್ಕಾರದ ನಿರ್ಲಕ್ಷ್ಯ

ನಾವು ಏನೇನೋ ನಿರೀಕ್ಷೆ ಇಟ್ಟುಕೊಂಡು ಒಬ್ಬರ ಬಳಿ ಕೆಲಸ ಮಾಡಿಸಿಕೊಳ್ಳಲು ಹೋಗುತ್ತೇವೆ. ಮೊದಲು ಪುಸಲಾಯಿಸುತ್ತೇವೆ. ಬೆಣ್ಣೆಹಚ್ಚುತ್ತೇವೆ. ಆಸೆ ತೋರಿಸುತ್ತೇವೆ. ಅದರಿಂದಲೂ ಆಗುವುದಿಲ್ಲ ಎಂದಾದರೆ ಅಂಜಿಸಲು ನೋಡುತ್ತೇವೆ. ಹೀಗೆ ಸಾಮ ದಾನ ಭೇದ ದಂಡ ಎಂಬ ಚತುರೋಪಾ.ಗಳನ್ನೂ ಉಪಯೋಗಿಸುತ್ತೇವೆ,
ಆದರೆ ಆ ವ್ಯಕ್ತಿ ಯಾವುದಕ್ಕೂ ಬಗ್ಗದ ಆಸಾಮಿ. ಏನು ಬೇಕಾದರೂ ಆಗಿಹೋಗಲಿ, ನಮಗೇನೂ ಸಂಬಂಧವಿಲ್ಲ, ನಾನಂತೂ ನೀನಂದಂತೆ ಕೇಳುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುವಾಗ ಕುದುರೆ ಬಾಲ ಕೋಳಿ ಜುಟ್ಟು ಎಂಬ ಮಾತನ್ನು ಬಳಸುತ್ತಾನೆ. ಇದು ಅಸೀಮ ತಿರಸ್ಕಾರವಲ್ಲಗೆ ಮತ್ತೇನು?
ಬಾಲ ಇರುವುದು ಕುದುರೆಗೆ, ಜುಟ್ಟು ಇರುವುದು ಕೋಳಿಗೆ. ಅವುಗಳ ಬಗ್ಗೆ ಕೇಳುವುದಿದ್ದರೆ ಕುದುರೆಗೆ ಕೋಳಿಗಳಿಗೇ ಕೇಳಬೇಕು. ಅದನ್ನು ಬಿಟ್ಟು ನನ್ನನ್ನೇನು ಕೇಳುವುದು? ಊರ ಉಸಾಬರಿ ತಂದು ಗಂಟುಹಾಕಬೇಡ ಎಂದು ಎಚ್ಚರಿಸುವ ರೀತಿ ಇದು. ಅದನ್ನು ಇನ್ನೂ ಪರಿಣಾಮಕಾರಿಯಾಗಿ ಹೇಳುವುದು ಸಾಧ್ಯವಿಲ್ಲವೇನೋ?