*ಕ್ಷುಲ್ಲಕ ವಿಷಯ ದೊಡ್ಡದು ಮಾಡುವುದು

ಏನ್‌ ಮಾರಾಯಾ ಅವ್ನು, ಕಡ್ಡಿಯ ಗುಡ್ಡ ಮಾಡ್ದ. ಎಲ್ಲ ಫಜೀತಿ ಆಗಿ ಹೋಯ್ತು ಎಂದು ಅಲವತ್ತುಕೊಳ್ಳುವುದನ್ನು ಕೇಳಿದ್ದೇವೆ. ಕಡ್ಡಿ ಬಹಳ ಚಿಕ್ಕದು. ಕಡ್ಡಿಗೆ ಹೋಲಿಸಿದರೆ ಗುಡ್ಡ ಬಹಳ ದೊಡ್ಡದು. ಚಿಕ್ಕ ವಿಷಯವನ್ನು, ನಿರ್ಲಕ್ಷಿಸಿಬಿಡಬಹುದಾದ ವಿಷಯವನ್ನು ದೊಡ್ಡದು ಮಾಡಿದ ಎನ್ನುವ ಅರ್ಥ ಇಲ್ಲಿದೆ. ಜೊತೆಯಲ್ಲಿಯೇ ಹಾಗೆ ಮಾಡುವ ಅಗತ್ಯವಿರಲಿಲ್ಲ ಎಂಬ ಧ್ವನಿಯೂ ಇದರ ಒಡಲಲ್ಲಿ ಇದೆ. ಇದೇ ರೀತಿಯ ಇನ್ನೂ ಹಲವು ಮಾತುಗಳು ನಮ್ಮಲ್ಲಿವೆ. ಉಗುರಿನಲ್ಲಿ ಆಗುವುದಕ್ಕೆ ಕೊಡಲಿ ಎತ್ತಿದ ಎಂಬುದು ಅವುಗಳಲ್ಲಿ ಒಂದು. ಉಗುರು ಕೊಡಲಿಗೆ ಹೋಲಿಸಿದರೆ ಏನೂ ಅಲ್ಲ. ಚಿಕ್ಕದರಲ್ಲಿಯೇ ಆಗುವುದಕ್ಕೆ ದೊಡ್ಡದು ಏಕೆ ಬೇಕಿತ್ತು ಎಂಬ ಆಕ್ಷೇಪವೂ ಇದರಲ್ಲಿದೆ. ಸಂಧಾನದಿಂದಲೋ ಸಮಾಧಾನದಿಂದಲೋ ಆಗುವುದಕ್ಕೆ ಹಿಂಸೆಯ ಮಾರ್ಗ ಏಕೆ ಬೇಕು ಎಂಬುದು ತತ್ವ. ಉಗುರಿನಿಂದ ಆಗಬೇಕಾದ ಕೆಲಸಗಳೂ ಇರುತ್ತವೆ. ಅಲ್ಲಿ ಕೊಡಲಿ ಯಾವ ಪ್ರಯೋಜನಕ್ಕೂ ಬರುವುದಿಲ್ಲ. ಕೊಡಲಿಗಿಂತ ಘನವಾದ ಕಾರ್ಯಗಳನ್ನು ಉಗುರು ಮಾಡಬಲ್ಲುದು ಎನ್ನುವುದಕ್ಕೆ ಪ್ರಹ್ಲಾದನ ಕಾಯ್ದ ನರಸಿಂಹನ ನೆನಪಿಸಿಕೊಳ್ಳಿ.