*ತೋಳುಬಲವಲ್ಲ, ಬಾಯಿ ಬಲ

ಸುಮ್ಮನೆ ಬಡಾಯಿ ಕೊಚ್ಚುಕೊಳ್ಳುವವರನ್ನು ಕಂಡಾಗ,`ಸಾಕೋ ಗೊತ್ತಿದೆ, ನಿಂದು ಉತ್ತರನ ಪೌರುಷ’ ಎಂದು ಛೇಡಿಸುವುದನ್ನು ಕೇಳಿದ್ದೇವೆ. ಕೈಯಲ್ಲಿ ಆಗದಿದ್ದರೂ ಎಲ್ಲವನ್ನೂ ತಾನು ಮಾಡುವೆ ಎಂದು ಹೇಳುವವರಿಗೂ, ಬೇರೆಯವರು ಮಾಡಿದ್ದನ್ನು ತಾನೇ ಮಾಡಿದ್ದೇನೆ ಎಂದು ಹೇಳಿಕೊಳ್ಳುವವರಿಗೂ ಹೀಗೇ ಹೇಳುವುದು.
ಯಾರೀತ ಉತ್ತರ? ಏನವನ ಪೌರುಷ?
ವಿರಾಟನಗರಿಯ ಮಹಾರಾಜ ವಿರಾಟನ ಮಗ ಉತ್ತರ. ಪಾಂಡವರು ತಮ್ಮ ಅಜ್ಞಾತವಾಸದ ಅವಧಿಯನ್ನು ಕಳೆಯಲು ಬಂದದ್ದು ಅಲ್ಲಿಯೇ. ಅಜ್ಞಾತವಾಸದ ಕೊನೆಯಲ್ಲಿ ಪಾಂಡವರು ಅಲ್ಲಿರುವುದರ ಬಗ್ಗೆ ಕೌರವರಿಗೆ ಅದು ಹೇಗೋ ಗೊತ್ತಾಗಿಬಿಡುತ್ತದೆ. ಅವರು ತಂತ್ರವೊಂದನ್ನು ರೂಪಿಸಿ ಸಹದೇವನ ರಕ್ಷಣೆಯಲ್ಲಿದ್ದ ವಿರಾಟರಾಯನ ಗೋವುಗಳನ್ನು ಅಪಹರಿಸುತ್ತಾರೆ.
ಗೋವುಗಳನ್ನು ಬಿಡಿಸಿಕೊಳ್ಳಲು ವಿರಾಟನ ಪಡೆ ಹೋಗಲೇಬೇಕು. ಅದಕ್ಕೆ ನಾಯಕರು ಯಾರು? ಕೀಚಕ ಭೀಮನಿಂದ ಹತನಾದ ಮೇಲೆ ವಿರಾಟನ ಬಲ ಕುಂದಿತ್ತು. ಯುವರಾಜ ಉತ್ತರಕುಮಾರನೇ ಸೇನೆಯನ್ನು ಮುನ್ನಡೆಸಬೇಕು ಎಂದು ನಿರ್ಧಾರವಾಗುತ್ತದೆ. ಹೆಂಗಸರ ಗುಂಪಿನಲ್ಲಿ ಉತ್ತರ ತನ್ನ ಸಾಮರ್ಥ್ಯದ ಬಗ್ಗೆ ಕೊಚ್ಚಿಕೊಳ್ಳುತ್ತಾನೆ. ತನಗೆ ತಕ್ಕ ಸಾರಥಿ ಇಲ್ಲವೆಂದು ಹೇಳುತ್ತಾನೆ. ಬೃಹನ್ನಳೆಯ ರೂಪದಲ್ಲಿದ್ದ ಅರ್ಜುನ ತನಗೆ ಸಾರಥ್ಯ ಬರುತ್ತದೆ. ತಾನು ಹಿಂದೆ ಅರ್ಜುನನಿಗೆ ಸಾರಥಿಯಾಗಿ ಕೆಲಸ ಮಾಡಿದ್ದೆ ಎಂದು ಹೇಳುತ್ತಾನೆ.
ಅರ್ಜುನ ರಥವನ್ನು ನಡೆಸಿಕೊಂಡು ಕೌರವ ಸೇನೆಯ ಮುಂದೆ ತಂದಾಗ ಭಯದಿಂದ ಉತ್ತರಕುಮಾರನಲ್ಲಿ ನಡುಕ ಆರಂಭವಾಗಿರುತ್ತದೆ. ರಥದಿಂದ ಇಳಿದು ಓಡತೊಡಗುತ್ತಾನೆ. ಅರ್ಜುನ ಅವನನ್ನು ಹಿಡಿದು ನಿಲ್ಲಿಸಿ, ಅವನಿಗೆ ಸಾರಥ್ಯವನ್ನು ವಹಿಸಿ ತಾನು ಯುದ್ಧವನ್ನು ಮಾಡಿ ಗೆಲ್ಲುತ್ತಾನೆ.
ಇದೇ ಉತ್ತರನ ತಂಗಿ ಉತ್ತರೆಯೇ ಅಭಿಮನ್ಯುವಿನ ಪತ್ನಿ. ತನ್ನ ಕಳಂಕವನ್ನು ತೊಡೆದುಕೊಳ್ಳಲು ಉತ್ತರಕುಮಾರ ಮಹಾಭಾರತ ಯುದ್ದದಲ್ಲಿ ವೀರಾವೇಶದಿಂದ ಹೋರಾಡಿ ಮಡಿಯುತ್ತಾನೆ.