• ಕಠಿಣವಾದ ಒರೆಗಲ್ಲು

ಅಗ್ನಿ ಪರೀಕ್ಷೆ ಎನ್ನುವುದು ಕಠಿಣವಾದ ಒರೆಗಲ್ಲು. ಒಬ್ಬನ ಸಾಮರ್ಥ್ಯವನ್ನು ಕಠಿಣವಾದ ಸನ್ನಿವೇಶಗಳಲ್ಲಿ ಒರೆಗೆ ಹಚ್ಚಿ ನೋಡುವುದು ಅಗ್ನಿಪರೀಕ್ಷೆಯಾಗುತ್ತದೆ. ಅಗ್ನಿಯು ಎಲ್ಲವನ್ನೂ ದಹಿಸಿಹಾಕುತ್ತದೆ. ಬಂಗಾರವನ್ನು ಶುದ್ಧಗೊಳಿಸುವಾಗ ಅದನ್ನು ಬೆಂಕಿಯಲ್ಲಿ ಹಾಕುತ್ತಾರೆ. ಹೊಲಸೆಲ್ಲ ಹೋಗಿ ಶುದ್ಧ ಚಿನ್ನ ಉಳಿಯುತ್ತದೆ. ಪುಟದೆಣ್ಣೆ ಕಾಯಕಲ್ಪವೂ ಬಂಗಾರಕ್ಕಿದೆ. ಹಿಂದೆ ತಮ್ಮ ಪಾವಿತ್ರ್ಯವನ್ನು, ನಿರಪರಾಧಿತನವನ್ನು ಸಾಬೀತುಗೊಳಿಸಲು ಕೆಲವು ದಿವ್ಯಗಳನ್ನು ಪಾಲಿಸಬೇಕಿತ್ತು. ಕಾ್ದ ಗುಂಡನ್ನು ಕೈಯಿಂದ ಹಿಡಿಯುವುದು, ಅಗ್ನಿಯ ಪ್ರವೇಶ ಮಾಡುವುದು, ಬಿಸಿ ಎಣ್ಣೆಯಲ್ಲಿ ಕೈ ಅದ್ದುವುದು ಮೊದಲಾದವು ಆ ಕಾಲದ ದಿವ್ಯಗಳು. ಶ್ರೀರಾಮನು ರಾವಣನನ್ನು ಕೊಂದ ಬಳಿಕ ಸೀತೆಯ ಪಾವಿತ್ರ್ಯದ ಬಗ್ಗೆ ಉಳಿದವರು ಶಂಕೆಯನ್ನು ವ್ಯಕ್ತಪಡಿಸಬಾರದೆೆಂದು ಆಕೆಯಿಂದ ದಿವ್ಯವನ್ನು ಅಪೇಕ್ಷಿಸುತ್ತಾನೆ. ಸೀತೆ ಅಗ್ನಿ ಪರೀಕ್ಷೆಯನ್ನು ಎದುರಿಸುತ್ತಾಳೆ. ಅಗ್ನಿಯು ಆಕೆಯನ್ನು ಸುಡುವುದಿಲ್ಲ. ಸೀತೆಯ ಅಗ್ನಿ ಪರೀಕ್ಷೆಯೇ ಪ್ರಸಿದ್ಧವಾದದ್ದು. ಈಗ ಶಾಲೆಯ ಪರೀಕ್ಷೆ ಕಠಿಣವಾಗಿತ್ತು ಎನ್ನುವುದನ್ನು ಹೇಳುವಾಗಲೂ, `ಅಗ್ನಿಪರೀಕ್ಷೆಯಾಗಿತ್ತು’, ಪಾರಾದೆ ಎಂದೂ ಬಳಕೆಯಾಗುತ್ತಿದೆ.