*ಗುಟ್ಟನ್ನು ಬಿಟ್ಟುಕೊಡದ ತಂತ್ರಗಾರರು
ಬಕಪಕ್ಷಿಯೊಂದು ಕೊಳದ ನೀರಿನಲ್ಲಿ ಧ್ಯಾನದ ಭಂಗಿಯಲ್ಲಿ ನಿಂತುಕೊಂಡಿತ್ತು. ಅದರ ಎರಡೂ ಕಣ್ಣುಗಳೂ ಮುಚ್ಚಿದ್ದವು. ಒಂದು ಕಾಲನ್ನು ಮೇಲೆ ಎತ್ತಿ ಹಿಡಿದಿತ್ತು. ಅರೇ, ಇದೇನಿದು, ಬಕ ಯಾವಾಗ ಸನ್ಯಾಸವನ್ನು ಸ್ವೀಕರಿಸಿತು ಎಂಬ ಆಶ್ಚರ್ಯ ಕೊಳದಲ್ಲಿಯ ಎಲ್ಲ ಮೀನುಗಳಿಗೆ. ಇನ್ನು ತಮಗೆ ಅಪಾಯವಿಲ್ಲ ಎಂದು ಅವು ಎಣಿಸಿದವು. ಬಕ ತಮಗೆ ಏನೂ ಮಾಡುವುದಿಲ್ಲವೆಂದು ಮೀನುಗಳು ಅದರ ಸುತ್ತಲೂ ಜಮಾಯಿಸಲು ಆರಂಭಿಸಿದವು.
ಬಕ ನಿಧಾನಕ್ಕೆ ಕಣ್ಣು ತೆರೆದದ್ದು ಅವುಗಳಿಗೆ ಕಾಣಲಿಲ್ಲ. ಆ…. ಎಂದು ತೆರೆದ ಬಾಯನ್ನು ನೀರಿನೊಳಕ್ಕೆ ಇಳಿಸಿ ಅದು ಒಂದು ಮೀನನ್ನು ಎತ್ತಿಯೇ ಬಿಟ್ಟಿತು. ಬಕನ ಧ್ಯಾನದ ಉದ್ದೇಶ ಮೀನು ಹಿಡಿಯುವುದೇ ಆಗಿತ್ತು ಎನ್ನುವುದು ಲೋಕಕ್ಕೆ ಅರಿವಾಗಿದ್ದು ಆಗಲೇ.
ಬಕ ಹೊಟ್ಟೆಬಾಕ ಪಕ್ಷಿ. ಈ ಕಾರಣಕ್ಕಾಗಿಯೇ ಮಹಾಭಾರತದ ಬಕಾಸುರನಿಗೆ ಆ ಹೆಸರು ಬಂದಿರಬಹುದು.
ಬಕ ಧ್ಯಾನಿಗಳು ನಮ್ಮ ಸುತ್ತಲೂ ನಿತ್ಯ ಕಾಣಸಿಗುತ್ತಾರೆ. ತಮ್ಮದೇ ತಂತ್ರವನ್ನು ಅವರು ಹೆಣೆಯುತ್ತಾ ಇರುತ್ತಾರೆ. ಆದರೆ ಅದರ ಗುಟ್ಟನ್ನು ಅವರು ಬಿಟ್ಟುಕೊಡುವುದಿಲ್ಲ.
ಹಿಂದೆ ಗೂಢಚಾರರು ಶತ್ರು ದೇಶದಲ್ಲಿ ಗೂಢಚರ್ಯೆಯಲ್ಲಿ ತೊಡಗಿರುತ್ತಿದ್ದರು. ಈಗಲೂ ಇರಬಹುದು. ಅವರು ತಮ್ಮ ಕಾರ್ಯ ಸಾಧನೆಯಾಗುವವರೆಗೂ ಯಾವುದೇ ಸುಳುಹು ದೊರೆಯದಂತೆ ಇದ್ದುಬಿಡುತ್ತಿದ್ದರು. ಅಣ್ಣನಂತೆಯೋ, ತಮ್ಮನಂತೆಯೋ, ಕೆಲವೊಮ್ಮೆ ಶತ್ರುದೇಶದಲ್ಲಿ ಮದುವೆಯಾಗಿ ಸಂಸಾರ ಹೂಡುವಂಥ ಸ್ಥಿತಿ ಬಂದರೂ ತಮ್ಮ ಗುರಿಯನ್ನು ಸಾಧಿಸಿಕೊಳ್ಳುತ್ತಿದ್ದರು. ಎಲ್ಲ ಮುಗಿದ ಮೇಲಷ್ಟೇ ಪರಿಣಾಮ ಗೊತ್ತಾಗುವುದು.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.