*ಹೆಂಡಗುಡುಕರೆಲ್ಲ ಈಗ ದೇವದಾಸರು
ಹೆಂಡ ಕುಡಿದು ರಸ್ತೆಯಲ್ಲಿ ಬಿದ್ದವರನ್ನು ಕಂಡಾಗ, ಇವನೊಬ್ಬ ದೇವದಾಸ, ಬೆಳಿಗ್ಗೆ ಎದ್ದ ಕೂಡಲೇ ಶುರು ಮಾಡಿದ್ರೆ ಎಚ್ಚರ ತಪ್ಪೋವರೆಗೂ ಕುಡೀತಾನೆ ಇರ್ತಾನೆ ಎಂದು ವ್ಯಾಖ್ಯಾನ ಮಾಡುವವರು ಇದ್ದಾರೆ. ಕತೆಯ ಪಾತ್ರಗಳೋ ಪುರಾಣದ ಪಾತ್ರಗಳೋ ಪ್ರತಿಮೆಗಳಾಗಿ ಆಡು ಭಾಷೆಯಲ್ಲಿ ಸೇರಿಹೋದ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಸತ್ಯಹರಿಶ್ಚಂದ್ರ ಅವನು, ದಾನಶೂರ ಕರ್ಣ ನೋಡು, ಶಕುನಿ ಇದ್ದಹಾಗೆ ಇದ್ದಾನೆ, ಹಚ್ಚಿಹಾಕುವುದರಲ್ಲಿ ನಾರದ ಮುನಿ…. ಹೀಗೆ ಹೇಳುತ್ತಲೇ ಹೋಗಬಹುದು.
ದೇವದಾಸ ಎಂಬುದು ಶರತ್ಚಂದ್ರ ಚಟ್ಟೋಪಾಧ್ಯಾಯರು ಬಂಗಾಳಿಯಲ್ಲಿ ಬರೆದ ಕಾದಂಬರಿ. ಇದರ ನಾಯಕ ದೇವದಾಸ. ಈತನ ಬಾಲ್ಯ ಸ್ನೇಹಿತೆ ಪಾರ್ವತಿ. ಇಬ್ಬರಲ್ಲೂ ಗಾಢವಾದ ಪ್ರೇಮ. ಪಾರ್ವತಿ ಬೇರೆಯವರನ್ನು ಮದುವೆಯಾದಾಗ ದೇವದಾಸ ಹೆಂಡದ ದಾಸನಾಗಿ ತನ್ನ ಜೀವನವನ್ನೆಲ್ಲ ಹಾಳುಮಾಡಿಕೊಳ್ಳುತ್ತಾನೆ.
ದೇವದಾಸ ಚಲನಚಿತ್ರವಾಗಿಯೂ ಹೆಸರು ಮಾಡಿದೆ. 1928ರಷ್ಟು ಹಿಂದೆಯೇ ದೇವದಾಸ್ ಮೂಕಿ ಚಿತ್ರವಾಗಿ ತೆರೆಯ ಮೇಲೆ ಬಂದಿತ್ತು. 1935ರಲ್ಲಿ ಪಿ.ಸಿ.ಬರುವಾ ಬಂಗಾಳಿಯಲ್ಲಿ ದೇವದಾಸನ ಪಾತ್ರ ಮಾಡಿದರು. ಅವರೇ ಮೊದಲ ಹಿಂದಿ ದೇವದಾಸ ನಿರ್ದೇಶನ ಮಾಡಿದರು. ಇದರಲ್ಲಿ ಕೆ.ಎಲ್.ಸೈಗಲ್ ದೇವದಾಸನ ಪಾತ್ರ ನಿರ್ವಹಿಸಿದ್ದರು. 1955ರಲ್ಲಿ ಬಿಮಲ್ರಾಯ್ ಮತ್ತೆ ಮತ್ತೆ ಹಿಂದಿಯಲ್ಲಿ ದೇವದಾಸನ ಸಿನಿಮಾ ಮಾಡಿದರು. ಇದರಲ್ಲಿ ದಿಲೀಪ್ಕುಮಾರ್ ದೇವದಾಸನ ಮತ್ತು ವೈಜಯಂತಿಮಾಲಾ ಪಾರೂ (ಪಾರ್ವತಿ) ಪಾತ್ರ ಮಾಡಿದ್ದರು. ಇದಾದ 47 ವರ್ಷಗಳ ಬಳಿಕ ಸಂಜಯಲೀಲಾ ಬನ್ಸಾಲಿಯವರು ದೇವದಾಸನನ್ನು ಮತ್ತೆ ನಿರ್ಮಿಸಿದರು. ಇದರಲ್ಲಿ ಶಾರುಖ್ಖಾನ್ ದೇವದಾಸನ ಮತ್ತು ಐಶ್ವರ್ಯಾ ರೈ ಪಾರೂ (ಪಾರ್ವತಿ) ಪಾತ್ರದಲ್ಲಿ ಮಿಂಚಿದ್ದಾರೆ. ತೆಲುಗಿನಲ್ಲಿ ಬಹಳ ಹಿಂದೆ ನಾಗೇಶ್ವರರಾವ್ ದೇವದಾಸನಾಗಿ ಮಿಂಚಿದ್ದರು.
ಅಖಂಡ ಪ್ರೇಮಿಯೊಬ್ಬ ಸೆರೆಗುಡುಕನ ಪ್ರತಿಮೆಯಾಗಿ ಜನಮಾನಸದಲ್ಲಿ ಬಳಕೆಯಾಗುತ್ತಿರುವುದು ವಿಚಿತ್ರವೇ ಸರಿ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.