*ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಲಿ
ಪ್ರತಿಭೆ ಅರಳಲು ಸೂಕ್ತವಾದ ಅವಕಾಶ ಬೇಕು. ಸೂಕ್ತ ಅವಕಾಶ ದೊರೆಯದೆ ಎಷ್ಟೋ ಪ್ರತಿಭೆ ಮುರುಟಿ ಹೋಗುತ್ತದೆ. ಅವಕಾಶ ಸಿಗದ ಪ್ರತಿಭೆಯನ್ನು ಕಂಡು `ಅವನ ಬದುಕು ಕಾಡ ಬೆಳದಿಂಗಳು' ಆಗಿ ಹೋಯ್ತು ಎಂದು ಅನುಕಂಪ ತೋರಿಸುತ್ತೇವೆ. ಕಾಡಿನಲ್ಲಿಯ ಬೆಳದಿಂಗಳು ಎಷ್ಟೊಂದು ಆಹ್ಲಾದಕರವಾಗಿದ್ದರೂ ಯಾರ ಗಮನಕ್ಕೂ ಬರದೆ ಹೋಗುತ್ತದೆಯಲ್ಲವೆ? ಹಾಗೆ ಇದು. ಇದನ್ನೇ ಕೆಲವರು ವನಸುಮ ಎಂದು ಹೇಳುತ್ತಾರೆ. ವನಸುಮವೆಂದರೆ ಕಾಡಿನಲ್ಲಿ ಅರಳಿದ ಹೂವು. ಈ ಹೂವು ಬೀರುವ ಸುವಾಸನೆ ಯಾರಿಗೂ ತಟ್ಟದೆ ಹೋಗುತ್ತದೆ. ಅದರ ಸೌಂದರ್ಯ ಯಾರ ಆಸ್ವಾದನೆಗೂ ಸಿಗುವುದಿಲ್ಲ. ದೇವರ ಅಡಿಗೂ ಇಲ್ಲ, ಹೆಣ್ಣಿನ ಮುಡಿಗೂ ಇಲ್ಲ ಎಂಬಂಥ ಸ್ಥಿತಿ. ಪ್ರತಿಭೆಯನ್ನು ಗುರುತಿಸುವುದು, ಅದಕ್ಕೆ ಸೂಕ್ತ ಸ್ಥಾನಮಾನವನ್ನು ಕೊಡುವ ಕೆಲಸ ಆಗಬೇಕು ಎನ್ನುವುದಕ್ಕಾಗಿ ಈ ಮಾತನ್ನು ಹೇಳುತ್ತಾರೆ. ಮುದ್ದಣನ ಕತೆ ಯಾರಿಗೆ ಗೊತ್ತಿಲ್ಲ?
ಭವತಿ ಭಿಕ್ಷಾಂದೇಹಿ’ ಎಂಬ ಸಪ್ತಾಕ್ಷರಿ ಮಂತ್ರವೇ ಆಧಾರ ಎನ್ನುವಂಥ ಸ್ಥಿತಿ ಅವರದು. ನಂದಳಿಕೆ ಲಕ್ಷ್ಮೀನಾರಾಯಣಪ್ಪನ ಕೃತಿಯನ್ನು ಪ್ರಕಟಿಸುವವರು ಯಾರೂ ಇರಲಿಲ್ಲ. ತಮ್ಮದೇ ಹಸ್ತಪ್ರತಿಯನ್ನು ಅವರು `ಮುದ್ದಣ’ ಎಂಬ ಪ್ರಾಚೀನ ಕವಿ ಬೆದ ಕಾವ್ಯ ಎಂದು ಹೇಳಿದರು. ಆಗಷ್ಟೇ ಅದು ಪ್ರಕಟವಾಗಿದ್ದು.
ಪ್ರತಿಭೆ ಎದುರಿಗಿದ್ದರೂ ಅದನ್ನು ಗುರುತಿಸದಿದ್ದರೆ ಅದು ಕಾಡ ಬೆಳದಿಂಗಳೇ. ಅದು ವನಸುಮವೂ ಹೌದು.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.