ಆ ಚೀಟಿ ಎತ್ತುವ ಹೊಣೆ ನನ್ನ ಮೇಲೆಯೇ ಬಂತು. ನಮ್ಮ ಮನೆ ಪಾಲಾಗುತ್ತಿತ್ತು. ನಮ್ಮ ತಂದೆ ಮತ್ತು ನಮ್ಮ ಚಿಕ್ಕಪ್ಪ ಬೇರೆಬೇರೆ ಉಳಿಯಲು ನಿರ್ಧರಿಸಿದ್ದರು. ಮನೆಯಲ್ಲಿಯ ಎಲ್ಲ ವಸ್ತುಗಳೂ ಪಾಲಾಗಿದ್ದವು. ಊರಿನ ಪಂಚರೆಲ್ಲ ಬಂದು ಕುಳಿತಿದ್ದರು. ಒಂದೊಂದೇ ಇರುವ ವಸ್ತುಗಳನ್ನು ಒಬ್ಬರಿಗೊಂದು ಒಬ್ಬರಿಗೊಂದು ಎಂದು ಪಂಚರು ಹಂಚಿದರು. ಕೊನೆಯಲ್ಲಿ ಉಳಿದದ್ದು ಆ ಫಿಲಿಪ್ಸ್ ರೇಡಿಯೋ ಮಾತ್ರ. ಅದಕ್ಕೆ ಸರಿಹೊಂದುವಂಥ ಬೇರೊಂದು ವಸ್ತು ಇರಲಿಲ್ಲ. ಹೀಗಾಗಿ ಅದು ಯಾರ ಸೊತ್ತಾಗಬೇಕು ಎಂಬುದನ್ನು ನಿರ್ಧರಿಸಲು ಚೀಟಿ ಎತ್ತುವುದೆಂದು ಪಂಚರಲ್ಲಿ ಒಬ್ಬರು ಸಲಹೆ ಮಾಡಿದರು. ನನ್ನ ತಂದೆ ಮತ್ತು ಚಿಕ್ಕಪ್ಪನ ಹೆಸರನ್ನು ಎರಡು ಚೀಟಿಯಲ್ಲಿ ಬರೆದು ಮಡಿಕೆ ಮಾಡಿ ಮಂಚದ ಮೇಲೆ ಎಸೆದು ಒಂದನ್ನು ಎತ್ತು ಎಂದು ನನ್ನನ್ನು ಕರೆದರು. ನಾನಿನ್ನೂ ಆಗ ಆರೇಳು ವರ್ಷದ ಹುಡುಗ. ನನ್ನ ಕೈ ನಡುಗುತ್ತಿತ್ತು. ನಮ್ಮ ತಂದೆಯ ಹೆಸರೇ ಬರಲಿ ಎಂದು ಮನಸ್ಸು ಹೇಳಿಕೊಳ್ಳುತ್ತಿತ್ತು. ಕಣ್ಣು ಮುಚ್ಚಿ ಒಂದು ಚೀಟಿ ಎತ್ತಿಕೊಟ್ಟೆ. ಪಂಚರು ಅದನ್ನು ಬಿಡಿಸಿದಾಗ ನನ್ನ ಚಿಕ್ಕಪ್ಪನ ಹೆಸರು ಅದರಲ್ಲಿತ್ತು. ಇದು ಕಳೆದ ಶತಮಾನದ ಅರುವತ್ತರ ದಶಕದ ಮಾತು. ಅದು ನಾಲ್ಕು ಬ್ಯಾಂಡ್ನ ಫಿಲಿಪ್ಸ್ ರೇಡಿಯೋ. ಆಗಿನ ಕಾಲದಲ್ಲೇ ೫೦೦ ರುಪಾಯಿ ಕೊಟ್ಟು ಹುಬ್ಬಳ್ಳಿಯಿಂದ ತಂದಿದ್ದರಂತೆ. ಅದನ್ನು ಮನೆಯಲ್ಲಿ ಹಚ್ಚುತ್ತಿದ್ದದ್ದು ನಮ್ಮ ಚಿಕ್ಕಪ್ಪನ ಮಗ ಮಾತ್ರ ಆಗಿದ್ದ. ಆತನಿಗೊಬ್ಬನಿಗೆ ಮಾತ್ರ ಅದನ್ನು ಹಚ್ಚುವುದಕ್ಕೆ ಅನುಮತಿ ಇತ್ತು. ಮನೆಯ ಮೇಲುಭಾಗದ ಮಾಡಿನಲ್ಲಿ ಅದರ ಒಂದು ಅಂಟೆನಾ ಜಾಳಿಗೆ ಥರದ ನಾಲ್ಕಿಂಚು ಅಗಲ ಆರಡಿ ಉದ್ದದ ಪಟ್ಟಿ ಕಟ್ಟಿದ್ದರು. ರೇಡಿಯೋದಿಂದ ಪ್ರತಿದಿನ ಪ್ರದೇಶ ಸಮಾಚಾರ, ವಾರ್ತೆಗಳು, ಸಿನಿಮಾ ಹಾಡುಗಳು, ರೈತರಿಗೆ ಸಲಹೆ, ವಾರದಲ್ಲೊಮ್ಮೆ ಬರುತ್ತಿದ್ದ ಹರಿದಾಸರ ಕೀರ್ತನೆಗಳು, ಧಾರವಾಡ ಆಕಾಶವಾಣಿಯ ನಾಟಕಗಳನ್ನು ಕೇಳುತ್ತಿದ್ದೆವು. ಆಗಿನ ಕಾಲಕ್ಕೆ ಊರಲ್ಲಿ ನಮ್ಮ ಮನೆಯಲ್ಲಿ ಮಾತ್ರ ರೇಡಿಯೋ ಇದ್ದಿತ್ತು. ಅದೊಂದು ಒಣ ಜಂಭವೂ ನಮ್ಮ ಮನೆಯವರಲ್ಲಿತ್ತು. ಚೀಟಿ ಎತ್ತಿ ರೇಡಿಯೋ ಕಳೆದುಕೊಂಡು ನನಗೆ ನಾನೇ ಖಳನಾಗಿದ್ದೆ. ನೆಹರು ನಿಧನರಾದಾಗ ಆ ಸುದ್ದಿಯನ್ನು ಕೇಳುವುದಕ್ಕೆ ನೂರಾರು ಜನರು ನಮ್ಮ ಮನೆಯ ಮುಂದೆ ಸೇರಿದ್ದರಂತೆ. ಹಾಗೆಯೇ ಲಾಲ್ಬಹಾದ್ದೂರ ಶಾಸ್ತ್ರಿ ತಾಷ್ಕೆಂಟಿನಲ್ಲಿ ನಿಧನರಾದಾಗಲೂ ಜನ ಸೇರಿದ್ದರಂತೆ. ನಮ್ಮ ಮನೆಯ ಫಿಲಿಪ್ಸ್ ರೇಡಿಯೋ ಚಿಕ್ಕಪ್ಪನ ಪಾಲಿಗೆ ಹೋದ ಮೇಲೆ ನಮ್ಮಣ್ಣ ಒಂದು ಬುಷ್ ರೇಡಿಯೋ ತಂದಿದ್ದ. ಅದಾದ ಮೇಲೆ ಒಂದು ಮರ್ಫಿ ರೇಡಿಯೋ ಕೂಡ ತಂದ ನೆನಪು. ಸಂಜೆ ೬-೪೦ರ ಪ್ರದೇಶ ಸಮಾಚಾರದ ಬಳಿಕ ಕೃಷಿರಂಗ ಕಾರ್ಯಕ್ರಮವನ್ನು ಧಾರವಾಡ ಆಕಾಶವಾಣಿಯವರು ಪ್ರಸಾರ ಮಾಡುತ್ತಿದ್ದರು. ಅದರ ಟೈಟಲ್ ಸಾಂಗ್ ‘ಕರಿ ಎತ್ತು ಕಾಳಿಂಗ ಬಿಳಿ ಎತ್ತು ಮಾಲಿಂಗ ಸಹಕಾರದೆತ್ತು ಸಾಲೆಳೆಯೋ ಅಲೆಲೆಲೆಲೋ…’ ಇವತ್ತಿಗೂ ಕಿವಿಯಲ್ಲಿ ಮಾರ್ದನಿಸುತ್ತದೆ. ರೈತರೊಂದಿಗೆ ಚರ್ಚೆ, ಕೃಷಿಗೆ ಸಂಬಂಧಿಸಿದ ಸಲಹೆಗಳು, ರೈತ ಮಹಿಳೆಯರ ಹಾಡುಗಳು, ಕೃಷಿಕರ ಬದುಕಿನ ಕಿರು ರೂಪಕಗಳು ಇವನ್ನೆಲ್ಲ ನಮ್ಮ ಮನೆಯಲ್ಲಿ ಕೇಳಿಸಿಕೊಳ್ಳುತ್ತಿದ್ದರು. ಮಣ್ಣು ಪರೀಕ್ಷೆ ಹೇಗೆ ಮಾಡಿಸಬೇಕು, ಯಾವ ಮಣ್ಣಿಗೆ ಯಾವ ಶ್ರಾಯಕ್ಕೆ ಯಾವ ಬೆಳೆ ಸೂಕ್ತ ಎಂಬೆಲ್ಲ ಮಾಹಿತಿಯನ್ನು ಕೃಷಿರಂಗ ನೀಡುತ್ತಿತ್ತು. ರೇಡಿಯೋ ನಮ್ಮೂರ ಜನರಲ್ಲಿ ಕೃಷಿಯ ಬಗ್ಗೆ ಹೊಸ ಅರಿವನ್ನು ಬಿತ್ತುತ್ತಿತ್ತು. ಒಳ್ಳೆಯ ಬೀಜ ಎಲ್ಲಿ ದೊರೆಯುತ್ತದೆ, ಬೀಜೋಪಚಾರ ಹೇಗೆ ಮಾಡಬೇಕು, ಗೊಬ್ಬರ ಹೇಗೆ ನೀಡಬೇಕು, ಯಾವ ಕೀಟ ನಾಶಕ ಬಳಸಬೇಕು ಎಂಬೆಲ್ಲ ವಿವರ ರೇಡಿಯೋದಿಂದ ತಿಳಿಯುತ್ತಿತ್ತು. ನಮ್ಮೂರಿನ ಗ್ರಾಮ ಸೇವಕ ಅಂದರೆ ಈಗಿನ ಕೃಷಿ ಸಹಾಯಕ ರೇಡಿಯೋದಲ್ಲಿ ಬಂದಿದ್ದನ್ನು ಇನ್ನಷ್ಟು ಹೆಚ್ಚು ಒತ್ತಿ ಹೇಳಿ ಜನರು ಹೊಸ ಬತ್ತದ ಬೆಳೆ ಬೆಳೆಯುವಂತೆ ಮಾಡಿದ್ದ. ನಮ್ಮೂರಲ್ಲಿ ಬೇಸಿಗೆಯಲ್ಲಿ ಐಆರ್೮ ಎಂಬ ಬತ್ತದ ತಳಿ ಮೊದಲು ಪರಿಚಯಿಸಿದ್ದು ಈ ಗ್ರಾಮಸೇವಕರೇ. ಗಿಡ್ಡತಳಿಯ ಬತ್ತ ೧೦೦ರಿಂದ ೧೧೦ ದಿನಗಳಲ್ಲಿ ಕಟಾವಿಗೆ ಬರುತ್ತಿತ್ತು. ಇಳುವರಿ ಮೊದಲಿನ ತಳಿಗಿಂತ ನಾಲ್ಕು ಪಟ್ಟು ಹೆಚ್ಚಾಗಿತ್ತು. ಇದನ್ನು ಬೆಳೆಯುವ ವಿಧಾನವನ್ನು ನಮ್ಮೂರ ಜನರು ರೇಡಿಯೋ ಕೇಳುವ ಮೂಲಕ ತಿಳಿದುಕೊಳ್ಳುತ್ತಿದ್ದರು. ನಮ್ಮೂರ ಮಧ್ಯದಲ್ಲಿರುವ ಮಂಜುವಿನ ಅಂಗಡಿಯಲ್ಲಿ ರೇಡಿಯೋದಲ್ಲಿ ಬಂದ ಸುದ್ದಿ ಚರ್ಚೆಯಾಗುತ್ತಿತ್ತು. ಆಕಾಶವಾಣಿ ಇತ್ತೀಚೆಗೆ ‘ಮರಳಿ ಮಣ್ಣಿಗೆ’ ಎಂಬ ಕೃಷಿ ಕುರಿತ ಕಾರ್ಯಕ್ರಮವನ್ನು ನಬಾರ್ಡ್ ನೆರವಿನೊಂದಿಗೆ ಪ್ರಸಾರ ಮಾಡಿತ್ತು. ರೈತರಲ್ಲಿ ಹಣಕಾಸು ಸಾಕ್ಷರತೆ ಉಂಟುಮಾಡುವ, ಹಣದ ವ್ಯವಹಾರದಲ್ಲಿ ಒಳಗೊಳ್ಳುವಂತೆ ಮಾಡುವ ಕಾರ್ಯಕ್ರಮ ಅದಾಗಿತ್ತು. ಬ್ಯಾಂಕುಗಳಲ್ಲಿ ಖಾತೆ ತೆರೆಯುವುದಕ್ಕೇ ಅಂಜುತ್ತಿದ್ದ ನಮ್ಮೂರ ಜನರು ರೇಡಿಯೋ ಬೋಧನೆಯಿಂದ ಬ್ಯಾಂಕಿನೊಳಗೆ ಕಾಲಿರಿಸುವ ಧೈರ್ಯ ಮಾಡಿದರು. ಹಾಗೆಯೇ ‘ಯುವವಾಣಿ’ ಕಾರ್ಯಕ್ರಮ ಯುವ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸಿತ್ತು. ಮುಂದೊಂದು ದಿನ ಯುವವಾಣಿಯಲ್ಲಿ ನನ್ನ ಭಾಷಣ ಮತ್ತು ಕವನ ವಾಚನವೂ ಪ್ರಸಾರವಾಗಿತ್ತು. ರೇಡಿಯೋದಲ್ಲಿ ಭಾಷಣ ಮಾಡಿದ್ದಾನಂತೆ ಎಂದು ನಮ್ಮೂರಲ್ಲಿ ನನ್ನ ಇಮೇಜ್ ಬೆಳೆದುಬಿಟ್ಟಿತ್ತು. ನಮ್ಮೂರಿನ ಹುಡುಗರು ಗೋವಾ, ರತ್ನಗಿರಿಗೆ ಮೀನುಲಾಂಚಿನಲ್ಲಿ ಕೆಲಸ ಮಾಡಲು ಹೋಗತೊಡಗಿದ ಮೇಲೆ ನಮ್ಮೂರ ಕೇರಿಯಲ್ಲಿ ಹತ್ತಾರು ರೇಡಿಯೋಗಳು ಬಂದವು. ಕೇಳುಗರ ಮೆಚ್ಚಿನ ಚಿತ್ರಗೀತೆಗಳಿಗೆ ಕೋರಿಕೆ ಸಲ್ಲಿಸಿ ನಮ್ಮೂರಿನ ಕೆಲವು ಹೊಂತಕಾರಿಗಳು ಆಕಾಶವಾಣಿ ಧಾರವಾಡಕ್ಕೆ ಪತ್ರಬರೆಯಲಾರಂಭಿಸಿದರು. ಇದರಿಂದ ನಮ್ಮೂರಿನ ಹಲವು ಹೆಸರುಗಳು ಆಕಾಶದಲ್ಲಿ ತೇಲಿಬಂದವು. ತಾನು ಕದ್ದುಮುಚ್ಚಿ ಪ್ರೀತಿಸುತ್ತಿದ್ದ ಒಬ್ಬ ಹುಡುಗಿಯ ಹೆಸರನ್ನು ನಮ್ಮೂರಿನವನೊಬ್ಬ ಆಕಾಶವಾಣಿ ಕೇಳುಗರ ಕೋರಿಕೆಯ ಗೀತೆಗಳು ವಿಭಾಗಕ್ಕೆ ಕಳುಹಿಸಿಬಿಟ್ಟ. ಹಾಗೆ ಕಳುಹಿಸಿದ್ದು ಆಕಾಶವಾಣಿಯಲ್ಲಿ ಬಂದೂ ಬಿಟ್ಟಿತು. ಇದರಿಂದ ಆತನ ಗುಟ್ಟಿನಲ್ಲಿದ್ದ ಪ್ರೇಮ ರಟ್ಟಾಗಿ ಕೊನೆಗೆ ಅವರ ಕಲ್ಯಾಣವೂ ನಡೆದುಹೋಯಿತು. ಮುಂದೆ ಅವರು ತಮ್ಮ ಮಗನಿಗೆ ಆಕಾಶ ಎಂದೂ ಮಗಳಿಗೆ ವಾಣಿ ಎಂದು ಹೆಸರಿಟ್ಟುಕೊಂಡರು. ಆಕಾಶವಾಣಿಯು ವಾರದಲ್ಲಿ ಒಂದು ದಿನ ಹಿಂದಿಪಾಠವನ್ನು ಮಾಡುತ್ತಿತ್ತು. ಇದನ್ನು ಕೇಳಿ ಉತ್ತೇಜಿತರಾದ ನಮ್ಮೂರ ಶಾಲೆಯ ನಾಯಕ ಮಾಸ್ತರರು ಹಿಂದಿ ಪ್ರಚಾರ ಸಭಾದ ಮೂಲಕ ಹಿಂದಿ ಪ್ರಥಮ, ಹಿಂದಿ ರತ್ನ, ರಾಷ್ಟ್ರಭಾಷಾ ಮೊದಲಾದ ಪರೀಕ್ಷೆಗಳನ್ನು ನಮ್ಮೂರಿನಲ್ಲಿ ನಡೆಸಿಯೇಬಿಟ್ಟರು. ಇದರಿಂದಾಗಿ ನಮ್ಮೂರಿನ ಹಲವು ಹುಡುಗರು ಕಿಸಾನ್ ಅಂದರೆ ರೈತ, ಬೈಂಸ್ ಅಂದರೆ ಎಮ್ಮೆ, ಗಾಯ್ ಅಂದರೆ ಆಕಳು ಎಂಬುದನ್ನೆಲ್ಲ ಕಲಿತುಕೊಂಡರು. ವಾರದಲ್ಲಿ ಒಂದು ದಿನ ಹರಿದಾಸರ ಕೀರ್ತನೆಗಳು ಇದೇ ರೇಡಿಯೋದಲ್ಲಿ ಬರುತ್ತಿದ್ದವು. ಮನೆಮಂದಿಯೆಲ್ಲ ಈ ಸಮಯದಲ್ಲಿ ರೇಡಿಯೋ ಹತ್ತಿರ ಮುಕುರುತ್ತಿದ್ದರು. ಈ ಕೀರ್ತನೆ ಕೇಳುವುದಕ್ಕೆ ಹತ್ತಾರು ಜನರು ನಮ್ಮ ಮನೆಗೆ ಬರುತ್ತಿದ್ದರು. ಹಾಗೆಯೇ ‘ಚಿಣ್ಣರ ಚಿಲಿಪಿಲಿ’ ಎಂಬ ಮಕ್ಕಳ ಕಾರ್ಯಕ್ರಮ. ಮಕ್ಕಳ ಮುದ್ದು ಮಾತು, ಅಡ್ಡಪ್ರಶ್ನೆಗಳು ರಂಜಿಸುತ್ತಿದ್ದವು. ವಿವಿಧ ಭಾರತಿ ಮತ್ತು ರೇಡಿಯೋ ಸಿಲೋನಿನ ಹಿಂದಿ ಮತ್ತು ಕನ್ನಡ ಸಿನಿಮಾ ಹಾಡುಗಳು, ಅದರ ನಡುವೆ ಬರುತ್ತಿದ್ದ ಬಿನಾಕಾ ಜಾಹೀರಾತು ರೇಡಿಯೋದ ಜನಪ್ರಿಯತೆಯನ್ನು ಆಕಾಶಕ್ಕೇರಿಸಿತ್ತು. ಶರಾವತಿ ಹೊಳೆಸಾಲಿನಲ್ಲಿ ವರದಕ್ಷಿಣೆಯ ಲಿಸ್ಟಿನಲ್ಲಿ ರೇಡಿಯೋ ಸೇರಿಹೋಗಿತ್ತು. ಕೆಮಿ ಅಥವಾ ಫೆವರ್ಲಬ ವಾಚುಗಳ ಜೊತೆಗೆ ರೇಡಿಯೋಗೂ ಸ್ಥಾನ ದೊರೆತಿತ್ತು. ಎರಡು ಬ್ಯಾಂಡಿನ ರೇಡಿಯೋ, ಅದಕ್ಕೊಂದು ಚರ್ಮದ ಕವಚ. ಮಾವನ ಮನೆಗೆ ಅಳಿಯ ಹೊರಟನೆಂದರೆ ಬಗಲಲ್ಲಿ ರೇಡಿಯೋ ನೇತುಬೀಳುವುದು ಗ್ಯಾರಂಟಿ. ಹೆಂಡತಿಯ ಜೊತೆಯಲ್ಲಿ ಚಿತ್ರಗೀತೆಗಳನ್ನು ಕೇಳುತ್ತ ಯಾವುದೋ ಲಹರಿಯಲ್ಲಿ ಆತ ನಡೆಯುತ್ತಿದ್ದರೆ ಕಾಲು ನೆಲದ ಮೇಲೆ ಇರುತ್ತಿರಲಿಲ್ಲ. ಹಾಗೆಯೇ ಮೀನು ಹಿಡಿಯಲು ಬರುತ್ತಿದ್ದ ಮಂದ ಕೂಡ ರೇಡಿಯೋ ತರುತ್ತಿದ್ದ. ಹಾಡು ಕೇಳುವುದಕ್ಕೆ ಮೀನುಗಳು ಹತ್ತಿರ ಬರುತ್ತವೆ ಎಂದು ಆತ ತಮಾಷೆ ಮಾಡುತ್ತಿದ್ದ. ಟೀವಿ ಇಲ್ಲದ ಕಾಲದಲ್ಲಿ ರೇಡಿಯೋ ನನಗೆ ಅಮರಿಕೊಂಡಿದ್ದು ಕ್ರಿಕೆಟ್ ಮೂಲಕ. ನಮಗೆ ಸ್ಕೋರ್ ಕೇಳುವ ಹುಚ್ಚು. ೧೯೭೫ರಲ್ಲಿ ಕ್ಲೈವ್ ಲಾಯ್ಡ್ ನೇತೃತ್ವದ ತಂಡ ಭಾರತ ಪ್ರವಾಸಕ್ಕೆ ಬಂದಿತ್ತು. ಭಾರತ ತಂಡಕ್ಕೆ ಮನ್ಸೂರ್ ಅಲಿಖಾನ್ಪಟೌಡಿ ಕ್ಯಾಪ್ಟನ್. ಯಾರಾದರೂ ಚಿಕ್ಕ ರೇಡಿಯೋ ಕಿವಿಗೆ ಹಿಡಿದುಕೊಂಡು ಹೋಗುತ್ತಿದ್ದರೆ ಅವರನ್ನು ತಡೆದು ಸ್ಕೋರ್ ಕೇಳದೆ ಬಿಡುತ್ತಿರಲಿಲ್ಲ. ಹೊನ್ನಾವರದ ಪೇಟೇಯಲ್ಲಿ ಕೋಳಿಶಾಸ್ತ್ರಿಗಳ ಹೊಟೆಲ್ ಇತ್ತು. ಶಾಸ್ತ್ರಿಯವರಿಗೂ ಕೋಳಿಗೂ ಹೇಗೆ ಸಂಬಂಧ ಬಂತೋ ಗೊತ್ತಿಲ್ಲ. ಅವರ ಮಗನಿಗೆ ಕ್ರಿಕೆಟ್ನಲ್ಲಿ ಭಾರೀ ಹುಚ್ಚು. ಅವರ ಹೊಟೇಲಿನ ರೇಡಿಯೋದಲ್ಲಿ ಕ್ರಿಕೆಟ್ ಕಾಮೆಂಟರಿಯನ್ನು ದೊಡ್ಡದಾಗಿ ಹಚ್ಚುತ್ತಿದ್ದರು. ಶಾಲೆಗೆ ಹೋಗುವ ನಾವು ಹತ್ತಾರು ಹುಡುಗರು ಅವರ ಹೊಟೇಲಿನ ಮುಂದೆ ನಿಂತುಬಿಡುತ್ತಿದ್ದೆವು. ಅವರು ಒಂದು ಹಲಗೆಯ ಮೇಲೆ ಕ್ರಿಕೆಟ್ ಸ್ಕೋರ್ ಬರೆಯುತ್ತಿದ್ದರು. ಇದನ್ನು ಪ್ರತಿ ಹದಿನೈದು ನಿಮಿಷಕ್ಕೆ ಬದಲಾಯಿಸುತ್ತಿದ್ದರು. ನಾವು ಅಂಗಡಿ ಮುಂದೆ ನಿಲ್ಲುವುದರಿಂದ ಟ್ರಾಫಿಕ್ ಜಾಮ್ ಆಗಿಬಿಡುವುದು. ಆಗ ಅವರು ಸ್ವಲ್ಪ ಹೊತ್ತು ರೇಡಿಯೋ ಬಂದ್ ಮಾಡುತ್ತಿದ್ದರು. ಹಾಗೆಯೇ ಹೊನ್ನಾವರ ಪೇಟೆಯಲ್ಲಿ ಬಾಬು ನಾಯ್ಕ ಎನ್ನುವವರ ಕಿರಾಣಿ ಅಂಗಡಿ ಇತ್ತು. ಅವರೂ ಕ್ರಿಕೆಟ್ ಮ್ಯಾಚ್ ಆದಾಗ ರೇಡಿಯೋದಿಂದ ಕಾಮೆಂಟರಿ ಕೇಳುತ್ತಿದ್ದರು. ನಾನೂ ಅವರ ಅಂಗಡಿಯಲ್ಲಿ ಹೋಗಿ ಕುಳಿತು ಕೇಳುತ್ತಿದ್ದೆ. ಟೋನಿ ಲೂಯಿಸ್ ನೇತೃತ್ವದ ಇಂಗ್ಲಂಡ್ ತಂಡ ಭಾರತ ಪ್ರವಾಸ ಮಾಡಿತ್ತು. ನನ್ನ ಕ್ರಿಕೆಟ್ ಜ್ಞಾನ ಪರೀಕ್ಷೆ ಮಾಡುವುದಕ್ಕಾಗಿ ಅವರು ನನಗೆ ಪೊಕಾಕ್ ಅಂದರೆ ಏನು ಎಂದು ಕೇಳಿದ್ದರು. ಪೊಕಾಕ್ ಇಂಗ್ಲೆಂಡ್ ತಂಡದ ಸ್ಪಿನ್ ಬೌಲರ್ ಆಗಿದ್ದ. ನಾನು ಹೇಳಿದಾಗ ಅವರು ತಲೆದೂಗಿದ್ದರು. ಸಂಜಯ ಗಾಂಧಿ ವಿಮಾನ ಅಪಘಾತದಲ್ಲಿ ಸತ್ತಿದ್ದು, ಇಂದಿರಾ ಗಾಂಧಿ ಹತ್ಯೆ ನಡೆದ ಸುದ್ದಿ ಎರಡನ್ನೂ ಮೊದಲ ಸಲ ಕೇಳಿದ್ದು ನಾನು ರೇಡಿಯೋದಲ್ಲಿಯೇ. ಸಂಜಯ ಗಾಂಧಿ ಸಾವಿನ ಸುದ್ದಿ ಕೇಳಿ ನನ್ನ ಇಡೀ ಶರೀರ ಒಂದು ಕ್ಷಣ ತಣ್ಣಗಾಗಿಬಿಟ್ಟಿತ್ತು. ಸಾಯಬಾರದ ವಯಸ್ಸಿನಲ್ಲಿ ಅವರು ಸತ್ತಿದ್ದರು. ಸುದ್ದಿ ದೃಢಪಡಿಸಿಕೊಳ್ಳಲು ಹತ್ತಾರು ಸ್ಟೇಶನ್ ತಿರುವಿದ್ದೆ ನಾನು. ನಮ್ಮೂರಿನವರಿಗೆ ಈ ಸುದ್ದಿಯನ್ನು ಮೊದಲು ಹೇಳಿದವನು ನಾನೇ ಆಗಿದ್ದೆ. ರಾಮಕೃಷ್ಣ ಹೆಗಡೆಯವರು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಅವರ ಭಾಷಣ ಕೇಳಿಸಿಕೊಳ್ಳಲೂ ಜನ ಸೇರಿದ್ದರು. ಕಪಿಲ್ ದೇವ್ ನೇತೃತ್ವದ ತಂಡ ೧೯೮೩ರಲ್ಲಿ ವಿಶ್ವಕಪ್ ಫೈನಲ್ ಗೆದ್ದ ಪಂದ್ಯದ ಕಾಮೆಂಟರಿ ಪೂರ್ತಿ ಕೇಳಿಸಿಕೊಂಡಿದ್ದೆ. ಆದರೆ ನಮ್ಮೂರಲ್ಲಿ ಕ್ರಿಕೆಟ್ ಪ್ರೇಮಿಗಳು ಆಗ ಯಾರೂ ಇರದ ಕಾರಣ ಆ ಸಂತೋಷ ನಾನು ಮಾತ್ರ ಅನುಭವಿಸುವಂತಾಯಿತು. ನಮ್ಮ ಮನೆಯಲ್ಲಿ ರೇಡಿಯೋ ಇಲ್ಲದೇ ಇದ್ದಾಗ ಹೊಳೆಯಾಚೆಯ ಸಂತಾನ್ ಎಂಬವರ ಮನೆಯಲ್ಲಿ ಹಚ್ಚುವ ಇಲ್ಲವೆ ಭಟ್ಟರ ಅಂಗಡಿಯಲ್ಲಿ ಹಚ್ಚುವ ರೇಡಿಯೋದಲ್ಲಿ ರಾತ್ರಿ ೭-೩೫ಕ್ಕೆ ಬರುವ ವಾರ್ತೆಗಳನ್ನು ಕೇಳುವುದಕ್ಕೆ ಹೊಳೆದಂಡೆಗೆ ಬಂದು ನಿಲ್ಲುತ್ತಿದ್ದೆ. ಕ್ರೀಡಾ ಸುದ್ದಿ ವಾರ್ತೆಯ ಕೊನೆಯಲ್ಲಿ ಬರುವುದು. ಆ ಹತ್ತು ನಿಮಿಷ ನನಗೆ ತಪಸ್ಸಿನ ಅವಧಿ. ನನ್ನ ಅದೃಷ್ಟ ಚೆನ್ನಾಗಿದ್ದರೆ ಸರಿಯಾಗಿ ಕೇಳಿಸುವುದು. ಇಲ್ಲದಿದ್ದರೆ ಗರ್ರ್ರ್…. ಎಂಬ ಸದ್ದು. ಸರಿಯಾಗಿ ಮಾಹಿತಿ ತಿಳಿಯದೆ ಮರುದಿನ ಪೇಪರ್ ಬರುವವರೆಗೂ ನಾನು ಚಡಪಡಿಸಿದ್ದು ಇದೆ. ಒಂದು ಬಾರಿ ದಿಲ್ಲಿಯಿಂದ ವಾರ್ತೆ ಓದಿದವರೊಬ್ಬರು ಗೀತ್ ಸೇಠಿ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಳು ಎಂದು ಓದಿದ್ದರು. ಗೀತ್ ಸೇಠಿ ಮಹಿಳೆ ಎಂದು ಅವರೋ ಅಥವಾ ಆ ಸುದ್ದಿಯನ್ನು ತಯಾರಿಸಿ ಕೊಟ್ಟವರೋ ತಿಳಿದುಕೊಂಡಿರಬೇಕು. ಪ್ರದೇಶ ಸಮಾಚಾರ ಓದುವ ನಾಗೇಶ ಶಾನಭಾಗ, ವಾರ್ತೆಗಳನ್ನು ಓದುವ ಎಂ.ರಂಗರಾವ್, ನಾಗಮಣಿ ಎಸ್.ರಾವ್, ವತ್ಸಲಾ ಅಯ್ಯಂಗಾರ್, ಬಸಪ್ಪ ಮಾದರ, ನಾಟಕದಲ್ಲಿ ಬರುತ್ತಿದ್ದ ಯಮುನಾಮೂರ್ತಿ ಹೆಸರುಗಳು ಮನೆಮಂದಿಗೆಲ್ಲ ಚಿರಪರಿಚಿತವಾಗಿದ್ದವು. ನಾಗೇಶ ಶಾನಭಾಗ ಅವರು ನಮ್ಮೂರಿನ ಪಕ್ಕದೂರಿನವರು ಎಂಬುದು ಗೊತ್ತಾಗಿ ಒಮ್ಮೆ ಧಾರವಾಡಕ್ಕೆ ಹೋದಾಗ ಅವರ ಮನೆಗೆ ಹೋಗಿ ಭೆಟ್ಟಿಯಾಗಿದ್ದೆ. ಅವರ ಮನೆಯಲ್ಲಿ ನಾಗರ ಪಂಚಮಿ ಹಬ್ಬದ ಉಂಡೆಯನ್ನು ತಿಂದು ಬಂದದ್ದು ನೆನಪಾಗುತ್ತಿದೆ. ರೇಡಿಯೋ ಅಂದರೆ ನನಗೆ ಕ್ರಿಕೆಟ್ ಕಾಮೆಂಟರಿ. ಮೈದಾನದಲ್ಲಿ ನಡೆಯುತ್ತಿದ್ದ ಆಟದ ರೋಚಕತೆಯನ್ನು ಕೇಳುಗರಿಗೆ ತಲುಪಿಸುವ ಆ ಧ್ವನಿಯ ಏರಿಳಿತ, ಬೌಂಡರಿ, ಸಿಕ್ಸರುಗಳ ಸಂಭ್ರವನ್ನು ದಾಟಿಸುತ್ತಿದ್ದ ಬಗೆ ನಿಜಕ್ಕೂ ರೋಮಾಂಚಕ. ಆಲ್ ಇಂಡಿಯಾ ರೇಡಿಯೋದಲ್ಲಿ ಆಗಿನ ಕಾಲದ ಕ್ರಿಕೆಟ್ ಕಾಮೆಂಟೇಟರ್ಗಳು ಇಂಗ್ಲಿಷಿನಲ್ಲಿ ಸುರೇಶ ಸುರಯ್ಯ, ಜಯಪ್ರಕಾಶ್ ನಾರಾಯಣ, ಆಕಾಶ್ಲಾಲ್, ಹಿಂದಿಯಲ್ಲಿ ಜಸದೇವ್ ಸಿಂಗ್ ಮತ್ತು ಸುಶೀಲ್ ದೋಷಿ. ರೇಡಿಯೋದಲ್ಲಿ ಈಗ ಕ್ರಿಕೆಟ್ ಕಾಮೆಂಟರಿ ಬಂದ್ ಆಗಿದೆ. ರೇಡಿಯೋದ ಸ್ಥಾನವನ್ನು ಟೀವಿ ತುಂಬಿಕೊಂಡಿದೆ. ಆದರೂ ಮುಂಜಾನೆ ವಾಕಿಂಗ್ ಹೋಗುವಾಗ, ಕಾರಿನಲ್ಲಿ ಪ್ರವಾಸ ಹೋದಾಗ ಮತ್ತೆ ಎಫ್ಎಂ ರೇಡಿಯೋ ರಂಜನೆಯನ್ನು ಮುಂದುವರಿಸಿದೆ. ಮಾಹಿತಿಯನ್ನೂ ನೀಡುತ್ತಿದೆ. ಕಾಲದ ಅಗತ್ಯಕ್ಕೆ ತಕ್ಕಂತೆ ರೇಡಿಯೋ ಕೂಡ ರೂಪಾಂತರಗೊಂಡಿದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.