ಈ ಶತಮಾನ ಕಂಡಿರುವ ಅತ್ಯಂತ ಭೀಕರವಾದ ಮಾನವ ದುರಂತ ಕೊರೋನಾ ವೈರಸ್ಸಿನ ಹಾವಳಿ ಮಾಡಿರುವ ಗಾಯ ಮಾಯುವುದಕ್ಕೆ ಹಲವು ವರ್ಷಗಳೇ ಬೇಕಾಗಬಹುದು. ಸಮಾಜಜೀವಿಯಾದ ಮನುಷ್ಯ ಅನಿವಾರ್ಯವಾಗಿ ತನ್ನನ್ನೇ ತಾನು ಹೇಗೆ ಒಂದೊಂದು ದ್ವೀಪವಾಗಿ ಮಾರ್ಪಡಿಸಿಕೊಳ್ಳಬೇಕಾಗಿ ಬಂತು ಎಂಬುದು ಇದೀಗ ಬದುಕಿರುವ ಎಲ್ಲರ ಅನುಭವವೂ ಆಗಿದೆ. ಈ ಕೋವಿಡ್‌ ಆಘಾತವನ್ನು ಸೃಜನಶೀಲ ಮನಸ್ಸು ಹೇಗೆ ಪರಿಭಾವಿಸಿತು ಎಂಬುದು ಒಂದು ಕುತೂಹಲ. ಹಲವರು ಹಲವು ರೀತಿಯಲ್ಲಿ ಇದಕ್ಕೆ ಬರೆಹದ ರೂಪವನ್ನು ಕೊಟ್ಟಿದ್ದಾರೆ. ಬಹುತೇಕ ಎಲ್ಲರೂ ಮೋಡ ಕರಗಿ ನೀರಾಗಿ ಸುರಿದ ಮೇಲೆ ನಿರಭ್ರ ಆಕಾಶ ಕಾಣುವ ಹಾಗೆ ಒಳ್ಳೆಯ ದಿನ ಬಂದೇಬರುತ್ತದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈ ದುರಂತದ ಸಮಯದಲ್ಲಿ ಮಾನವನ ಸ್ವಾರ್ಥ ಹೇಗೆ ನಾಚಿಕೆಪಡುವಹಾಗೆ ಮಾಡಿತು, ಹಲವರ ಮಾನವೀಯತೆ ಹೇಗೆ ಹೃದಯ ತಟ್ಟುವ ಹಾಗೆ ಮಾಡಿತು ಎಂಬುದನ್ನು ತಮ್ಮದೇ ರೀತಿಯಲ್ಲಿ ಹೇಳಿದ್ದಾರೆ.
ಹಿರಿಯ ಸಾಹಿತಿ ಕೆ.ಸತ್ಯನಾರಾಯಣ ಅವರು ಕೋವಿಡ್‌ನ ಸುಮಾರು 40 ದಿನಗಳ ಕಾಲ ತಮ್ಮ ಮನಸ್ಸಿನಲ್ಲಾದ ಭಯ, ಆತಂಕ, ಪಲ್ಲಟಗಳಿಗೆ ಅಕ್ಷರ ರೂಪ ನೀಡಿದ್ದಾರೆ. ಹಾಗೆ ನೋಡಿದರೆ ಇದೊಂದು ಸೃಜನಶೀಲ ಕೃತಿಯಲ್ಲ. ಆ ಕ್ಷಣದಲ್ಲಿ ತಮಗೆ ಅನಿಸಿದ್ದನ್ನು ದಿನಚರಿಯ ರೂಪದಲ್ಲಿ ಬರೆದಿಟ್ಟು ಕೋವಿಡ್‌ ದಿನಚರಿ' ಎಂಬ ಹೆಸರಿನಲ್ಲಿ ನಂತರ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಸಾಮಾನ್ಯವಾಗಿ ದಿನಚರಿಗಳಲ್ಲಿ ಅಂದಂದು ಏನೇನು ನಡೆಯಿತು, ಅದಕ್ಕೆ ತಮ್ಮ ಪ್ರತಿಕ್ರಿಯೆ ಏನು ಎಂಬ ವಿಷಯಗಳು ನಮೂದಾಗಿರುತ್ತವೆ. ಸೃಜನಶೀಲ ಕೃತಿಯೊಂದರಲ್ಲಿ ತಕ್ಷಣದ ಆಲೋಚನೆ ಬರೆಹದ ರೂಪದಲ್ಲಿ ದಾಖಲು ಆಗುವುದಿಲ್ಲ. ಒಂದು ವಿಷಯವನ್ನು ಕುರಿತು ಮತ್ತೆ ಮತ್ತೆ ಆಲೋಚಿಸುತ್ತ ಹೀಗೆ ಬರೆದರೆ ಸರಿಯೇ, ಹಾಗೆ ಬರೆದರೆ ಉತ್ತಮವಲ್ಲವೆ ಎಂಬೆಲ್ಲ ಸೃಜನಶೀಲ ಸಾಧ್ಯತೆಗಳನ್ನು ತರ್ಕಿಸಿ ನಂತರ ಬರೆಹಕ್ಕೆ ತೊಡಗುವುದು ಮತ್ತು ಬರೆಯುತ್ತಿರುವಾಗಲೇ ಹೊಸ ತಿರುವುಗಳನ್ನು ಪಡೆದುಕೊಳ್ಳುವುದು ಇವೆಲ್ಲ ಸಾಮಾನ್ಯ. ಈ ಎಲ್ಲ ಮಿತಿಗಳ ನಡುವೆಯೂ ಮಾನವ ಸ್ವಭಾವದ ಹಲವು ವೈಚಿತ್ರ್ಯಗಳನ್ನುಕೋವಿಡ್‌ ದಿನಚರಿಯ’ಲ್ಲಿ ಕಟ್ಟಿಕೊಡಲಾಗಿದೆ. ಸಾವು ಯಾವ ಕ್ಷಣದಲ್ಲಾದರೂ ನಮ್ಮನ್ನು ಸೆಳೆದುಕೊಳ್ಳಬಹುದು ಎಂಬ ಆತಂಕದಲ್ಲಿ ಮೂಡುವ ಆಲೋಚನೆಗಳು ಬಹುತೇಕ ಪ್ರಾಮಾಣಿಕವೂ ಆಗಿರುವುದರಿಂದ ಅವು ಮನಸ್ಸಿಗೆ ತಟ್ಟುತ್ತವೆ. ನ್ಯಾಯಾಲಯಗಳಲ್ಲಿ ಕೂಡ ಸಾಯುತ್ತಿರುವ ವ್ಯಕ್ತಿಯ ಹೇಳಿಕೆಯನ್ನು ಪ್ರಮಾಣವೆಂದು ಪರಿಗಣಿಸಲಾಗುತ್ತದೆ.
ನಾವು ಕೂಡ ಇದೇ ಕಾಲಘಟ್ಟದಲ್ಲಿ ಬದುಕಿರುವುದರಿಂದ ಮತ್ತು ಎಲ್ಲರ ಅನುಭವವೂ ಇದೇ ಆಗಿರುವ ಕಾರಣ ಈ ಕೃತಿಯು ಹೊಸತು ಎಂದು ಏನೂ ಅನಿಸುವುದಿಲ್ಲ. ಬಹುಶಃ ಆಲ್ಬರ್ಟ್‌ ಕಮೂನ ಪ್ಲೇಗ್‌ ಕಾದಂಬರಿಯೂ ಆ ಕಾಲದಲ್ಲಿ ಅಂಥ ಮನೋವೇದಕ ಅನ್ನಿಸುತ್ತಿರಲಿಲ್ಲವೇನೋ. ಇಂಥ ಅನುಭವಗಳ ಸಾಂದ್ರೀಕರಣಕ್ಕೆ ಕಾಲದ ಒಂದು ಅಂತರ ಅಗತ್ಯವಿರುತ್ತದೆ ಎಂಬುದು ನನ್ನ ಭಾವನೆ. ಆದರೆ ಸತ್ಯನಾರಾಯಣರ ಕೃತಿ ಸಾವಿನೂರಿನ ದಾರಿಯಲ್ಲಿ ಅಧ್ಯಾತ್ಮದ ಹಲವು ಹೊಳಹುಗಳನ್ನು ಒಳಗೊಂಡಿದೆ. ಅದಕ್ಕೊಂದು ಉದಾಹರಣೆ ಇಲ್ಲಿದೆ, ಯಾವಾಗಲೂ ನಮ್ಮ ಬಗ್ಗೆಯೇ ನಾವು ಯೋಚಿಸುತ್ತ ಸುತ್ತ ಮುತ್ತಲಿನ ತಕ್ಷಣದ ಪ್ರಪಂಚದಲ್ಲಿ ನಮಗಿಂತ ಉದಾತ್ತರಾಗಿರುವವರನ್ನು ಗಮನಿಸುವುದೇ ಇಲ್ಲ. ಮೂರು ಡಾಕ್ಟರ್‌ಗಳ ಫೋಟೋ ಬಂದಿದೆ ಒಟ್ಟಿಗೇ. ಇವರೆಲ್ಲರೂ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲೇ ತೀರಿಹೋದವರು. ಒಬ್ಬರ ವಯಸ್ಸು ಮಾತ್ರ 50 ದಾಟಿದೆ. ಇವರ ಸೇವೆ, ಕಾಣಿಕೆ ಯುದ್ಧದಲ್ಲಿ ಸಾಯುವ ಸೈನಿಕರ ತ್ಯಾಗದಷ್ಟೇ ಅನುಪಮವಾದದ್ದು. ನಾವು ಗಮನಿಸುವುದಿಲ್ಲ, ಗೌರವಿಸುವುದಿಲ್ಲ. ಅವರ ಬಗ್ಗೆ ನಮಗೆ ಹಕ್ಕಿದೆಯೆಂಬ ಭಾವನೆಯಿಂದ ವರ್ತಿಸುತ್ತೇವೆ.' ಇಂಥ ಸೂಕ್ಷ್ಮ ಅವಲೋಕನಗಳು ಅಲ್ಲಲ್ಲಿ ಓದುಗರಿಗೆ ಎದುರಾಗುತ್ತವೆ. ಹಾಗೆಯೇ ಸಾರ್ವಕಾಲಿಕ ಸತ್ಯವೆನ್ನಬಹುದಾದ ಆತ್ಮವಿಮರ್ಶೆಯೂ ಇಲ್ಲಿದೆ.ಒಬ್ಬರ ಸಾವಿನ ಸುದ್ದಿ ಬಂದಾಗ ನಾವು ಅವರು ಮಾಡಿರುವ ಮೌಲಿಕ ಕೆಲಸವನ್ನು ಬಹಿರಂಗವಾಗಿ ಹೇಳಿದರೂ, ಮನಸ್ಸಿನೊಳಗಡೆ ನಮಗೆ ಅವರು ಮಾಡಿರುವ ಗಾಯ, ನೋವುಗಳನ್ನು ಕುರಿತು ಕೂಡ ಯೋಚಿಸುತ್ತಿರುತ್ತೇವೆ. ಸಾಮಾಜಿಕ ಸಭ್ಯತೆ, ಸೌಜನ್ಯಕ್ಕಾಗಿ ಅದನ್ನೆಲ್ಲ ಹೇಳುವುದಿಲ್ಲ ಅಷ್ಟೇ’ ಎಂಬ ಮಾತನ್ನು ಗಮನಿಸಬೇಕು. ಹಾಗೆಯೇ, ...ನಮ್ಮ ದುಃಖದಲ್ಲಿ ಸಂತಾಪಗೈಯುವಿಕೆಯಲ್ಲಿ ಹೃತ್ಪೂರ್ವಕತೆ ಕಡಿಮೆ ಎಂದು ದುಃಖ ವ್ಯಕ್ತಪಡಿಸಿದಾಗಲೆಲ್ಲ ನಮಗೆ ಗೊತ್ತಾಗುತ್ತಲೇ ಇರುತ್ತದೆ. ಆದರೆ ಮತ್ತೆ ಅದೇ ಸೋಗು ಹಾಕುತ್ತೇವೆ' ಎಂಬ ಸಾಲುಗಳಲ್ಲಿರುವ ಆತ್ಮನಿರೀಕ್ಷಣೆ ಮನಸ್ಸಿಗೆ ತಟ್ಟುತ್ತದೆ. ಮತ್ತು,ನಾವು ಸತ್ತೇ ಸಾಯುತ್ತೇವೆ, ನಮ್ಮ ಆಪ್ತರು ಕೂಡ ಇನ್ನೇನು ಸತ್ತೇ ಹೋಗುತ್ತಾರೆ ಎಂಬ ಭಾವನೆ ಗಟ್ಟಿಯಾದ ತಕ್ಷಣ, ನಾವು ಇನ್ನೂ ಕ್ರೂರಿಗಳಾಗುತ್ತೇವೆ. ನಮ್ಮ ಜೊತೆ ಯಾರೂ ಸಾಯುವುದಿಲ್ಲವೆಂಬ ಕಾರಣಕ್ಕೂ ಇರಬಹುದು’ ಎಂಬ ಹೇಳಿಕೆಯನ್ನು ಗಮನಿಸಿ. ಇಂಥ ಸಾರ್ವತ್ರಿಕವಾದ ಸತ್ಯಗಳು ಇರುವ ಕಾರಣಕ್ಕೆ ಇದು ಸಾವಿನೂರಿನ ದಾರಿಯ ಅಧ್ಯಾತ್ಮ ಎಂದೆನ್ನಿಸುವುದು.
ಬದುಕುವ ಹಕ್ಕಿನಷ್ಟೇ ಮುಖ್ಯವಾದದ್ದು ಸಾಯುವ ಹಕ್ಕು ಕೂಡ. ನಿರ್ದಿಷ್ಟ ರೀತಿಯಲ್ಲಿ ಸಾಯಲು ಬಯಸುವ ಹಕ್ಕು ಎಂಬ ಲೇಖಕರ ಅಭಿಪ್ರಾಯಕ್ಕೆ ಭಿನ್ನ ಅಭಿಪ್ರಾಯವೂ ಸಾಧ್ಯ. ಸಾವು ಯಾವಾಗಲೂ ಆಕಸ್ಮಿಕವೇ. ತನ್ನ ಇಷ್ಟದಂತೆ ಸಾಯುವುದು ಆತ್ಮಹತ್ಯೆಯಂಥ ಸಂದರ್ಭಗಳಲ್ಲಿ ಸಾಧ್ಯ. ಕಾನೂನಿನ ಪ್ರಕಾರ ಆತ್ಮಹತ್ಯೆ ಅಪರಾಧ. ಹಕ್ಕು ಯಾವಾಗಲೂ ಅಪರಾಧವಾಗಿರಲಿಕ್ಕೆ ಸಾಧ್ಯವಿಲ್ಲ ಅಲ್ಲವೆ?
ಕೃತಿಯಲ್ಲಿ ಸೃಜನಕ್ರಿಯೆಗೆ ಸಂಬಂಧಿಸಿದಂತೆ ಕೆಲವು ವಿಚಾರಗಳು ಇವೆ. 1. ಓದುವುದಾಗಲಿ, ಬರೆಯುವುದಾಗಲಿ ಸಂಸಾರದ, ಜಗತ್ತಿನ ಎಲ್ಲ ಜಂಜಾಟಗಳು, ಏಳುಬೀಳುಗಳ ಮಧ್ಯೆಯೇ ನಡೆಯಬೇಕು. ಆವಾಗಲೇ ಓದು ಬರಹಕ್ಕೆ ಬೇಕಾದ ಜೀವಂತಿಕೆಯ ಒತ್ತಡ, ಚೈತನ್ಯ ಸೃಷ್ಟಿಯಾಗುವುದು. 2. ಬರೆಯುವುದೆಂದರೆ, ಬರಹಗಾರನಾಗುವುದೆಂದರೆ ಅದು ಕೌಶಲ್ಯದ ಮಾತು ಮಾತ್ರವಲ್ಲ, ಜೈವಿಕವಾಗಿ, ಭಾವನಾತ್ಮಕವಾಗಿ ಕೂಡ ಲೇಖಕನಾದವನು ಒಂದು ವಿಶಿಷ್ಟ ವಿಭಿನ್ನ ಪ್ರಾಣಿ. ಪ್ರತಿ ಕ್ಷಣ ಮಿಡಿಯುವಂತಹ ಒಂದು ತಂತು ಅವನಲ್ಲಿರುತ್ತದೆ. ಇದು ದೇವರು ಅವನಿಗೆ ಕೊಟ್ಟ ವರ ಮತ್ತು ಶಾಪ. ಈ ವರವನ್ನು ಆತ ಹಗುರವಾಗಿ ಕಾಣಬಾರದು, ಭ್ರಷ್ಟಗೊಳಿಸಬಾರದು, ಕ್ಷುಲ್ಲಕವಾಗಿ ಕಾಣಬಾರದು. ತುಂಬಾ ಜತನದಿಂದ ಕಾಪಾಡಿಕೊಳ್ಳಬೇಕು. 3. ಬರಹಗಾರನಾಗಬೇಕಾದರೆ ಎಲ್ಲಕ್ಕಿಂತ ಮುಖ್ಯವಾಗಿ ನಾನೊಬ್ಬ ಸಾಮಾನ್ಯ ಮನುಷ್ಯ ಎಂದು ಒಪ್ಪಿಕೊಳ್ಳಬೇಕು. ನಾನು ಬರೆಯುವುದು ಕೂಡ ಬಹುಪಾಲು ಸಾಧಾರಣವಾಗಿರುತ್ತದೆ, ತಪ್ಪು ಒಪ್ಪುಗಳಿಂದ ಕೂಡಿರುತ್ತದೆ, ಯಾವತ್ತೋ ಒಂದು ದಿನ ಅರ್ಥಪೂರ್ಣವಾಗಿ ಬರೆಯಬಹುದು, ಬರೆಯದೆಯೂ ಇರಬಹು ಎಂಬ ಎರಡೂ ಸಾಧ್ಯತೆಗಳನ್ನು ಒಪ್ಪಿಕೊಳ್ಳಬೇಕು.
ಇಂಥ ಚಿಂತನೆಯ ಲೇಖಕರಿಂದ ಜವಾಬ್ದಾರಿಯುತ ಬರೆಹಗಳೇ ಬರುತ್ತವೆ. ಕೃತಿಯಲ್ಲಿ ಹಲವು ವೃತ್ತಿಯವರು, ಅಧಿಕಾರಸ್ಥರ ಮನೋಧರ್ಮ ಹೇಗಿರುತ್ತದೆ ಎಂಬುದರ ಮೇಲೆ ಲೇಖಕರು ಬೆಳಕುಚೆಲ್ಲುತ್ತಾರೆ. ಕೋವಿಡ್‌ ಸಮಯದಲ್ಲಿ ಯಾವೆಲ್ಲ ವೃತ್ತಿಯವರು ಏನೇನು ಮಾಡಿಕೊಂಡಿದ್ದರೋ ಎಲ್ಲರ ಗಮನಕ್ಕೆ ಬಂದಿರುವುದು ಸಾಧ್ಯವಿಲ್ಲ. ಆದರೆ ಮಾಧ್ಯಮದವರು ಮಾತ್ರ ಕೋವಿಡ್‌ ಬಿಕ್ಕಟ್ಟಿನಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಜನರಿಗೆ ಸುದ್ದಿಯನ್ನು ತಲುಪಿಸಿದ್ದಂತೂ ನಿಜ. ಅದರಿಂದ ಜನರಿಗೆ ಎಷ್ಟು ಲಾಭವಾಯಿತೋ ಗೊತ್ತಿಲ್ಲ. ಆದರೆ ಕೆಲಸವಿಲ್ಲದೆ ಮನೆಯಲ್ಲೇ ಕುಳಿತಿರಬೇಕಾದರೆ ಸಕಲ ವಿದ್ಯಮಾನಗಳನ್ನು ವರದಿ ಮಾಡಿದ್ದಾರೆ ಅವರು. ಅದರಲ್ಲಿ ಹಲವು ಅತಿರೇಕಗಳೂ ಇರಬಹುದು. ಪತ್ರಕರ್ತರ ಬಗ್ಗೆ ಒಂದು ಮಾತನ್ನು ಸತ್ಯನಾರಾಯಣ ಅವರು ಹೀಗೆ ಹೇಳಿದ್ದಾರೆ. “… ಪ್ರತಿಭೆ ಮತ್ತು ಬದ್ಧತೆಯನ್ನೇ ಮಾನದಂಡವಾಗಿಟ್ಟುಕೊಂಡರೆ, ಬಹುಪಾಲು ಪತ್ರಕರ್ತರು, ಸಂಪಾದಕರು ತೀರಾ ಸಾಧಾರಣ ಜನ. ಮಾಧ್ಯಮ ಕೆಲಕಾಲ ಅವರ ಹಿಡಿತದಲ್ಲಿ ಇರುವುದರಿಂದ ಇಲ್ಲದ ಸಾರ್ವಜನಿಕ, ಸಾಂಸ್ಕೃತಿಕ ವ್ಯಕ್ತಿತ್ವವನ್ನು ತಮಗೆ ತಾವೇ ಆರೋಪಿಸಿಕೊಳ್ಳುತ್ತಾರೆ. ಒಮ್ಮೆ ಪತ್ರಿಕೆಯಿಂದ ನಿವೃತ್ತರಾದ ಮೇಲೆ ಹೇಳಹೆಸರಿಲ್ಲದೆ ಕಳೆದುಹೋಗುತ್ತಾರೆ. ಇವರದೇ ಒಂದು ದೊಡ್ಡ ಪಡೆ…” ಈ ಮಾತು ಕೇವಲ ಪತ್ರಕರ್ತರಿಗೆ ಮಾತ್ರವಲ್ಲ, ಯಾವುದೇ ಅಧಿಕಾರಸ್ಥಾನದಲ್ಲಿದ್ದವರಿಗೂ ಅನ್ವಯಿಸುತ್ತದೆ. ಒಳ್ಳೆಯದು ಮಾಡಿದ್ದಷ್ಟೇ ನೆನಪಿನಲ್ಲಿ ಉಳಿಯುತ್ತದೆ.
ಇತ್ತೀಚೆ ನಾನು ಅಮೆಜಾನ್‌ ಪ್ರೈಮ್‌ನಲ್ಲಿ ಒಂದು ವೆಬ್‌ ಸೀರಿಸ್‌ ನೋಡಿದೆ. ಅದು Unpaused – naya safar. ಐದು ಕಂತುಗಳಲ್ಲಿದೆ. ಕೋವಿಡ್‌ ತಲ್ಲಣಗಳನ್ನು ದೃಶ್ಯ ಮಾಧ್ಯಮದಲ್ಲಿ ಹೇಗೆ ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡಬಹುದು ಎಂಬುದಕ್ಕೆ ಸೃಜನಾತ್ಮಕ ಪುರಾವೆ ಅದು. ಕೋವಿಡ್‌ ಸಂಬಂಧದ ನೋವಿನ ಸಂವಹನದಲ್ಲಿ ಅಕ್ಷರ ಮಾಧ್ಯಮಕ್ಕಿಂತ ದೃಶ್ಯಮಾಧ್ಯಮ ಶಕ್ತಿಯುತ ಎಂದು ಅನಿಸಿತು.
ಹಲವು ಸೃಜನಶೀಲ ಕೃತಿಗಳನ್ನು ಪರಿಣಾಮಕಾರಿಯಾಗಿ ರಚಿಸಿರುವ ಕೆ.ಸತ್ಯನಾರಾಯಣ ಅವರಿಂದ ಇನ್ನಷ್ಟು ಕೃತಿಗಳು ಬರಲಿ.