ಮೋಡಗಳು ಕವುಚಿಕೊಂಡಿವೆ
ಆಗಸದ ತುಂಬ
ಸೂರ್ಯನ ಪ್ರಖರ ಕಿರಣಗಳಾಗಲಿ
ಚಂದ್ರನ ತಂಗದಿರಾಗಲಿ
ಯಾವವೂ ನಿಮ್ಮ ತಲುಪುವುದೇ ಇಲ್ಲ

ಮೋಡಗಳು ಕವುಚಿಕೊಂಡಿವೆ
ಮಬ್ಬುಗತ್ತಲೆ ಕವಿದಿದೆ ಹೊರಗೆ
ಹಗಲಲ್ಲೇ ಮನೆಯೊಳಗೆ ಹಚ್ಚಿದ ದೀಪ
ಆಗೋ ಈಗೋ ಬಂದೇ ಬಿಡುವುದು
ಮಳೆ ಎನ್ನುವಂತೆ ಬಿರುಗಾಳಿ
ಪತರಗುಟ್ಟುವ ಬೆಳಕು

ಸಂದಣಿಸಿದ ಮೋಡಗಳು
ಹೊಡೆದ ಡಿಕ್ಕಿಗೆ ಫಳ್‌ ಫಳ್‌ ಮಿಂಚು
ಒಮ್ಮೆಲೇ ಕತ್ತಲೆಲ್ಲ ಬೆತ್ತಲು
ಒಬ್ಬರ ಮುಖ ಒಬ್ಬರು ದಿಟ್ಟಿಸಲು
ಸಿಕ್ಕಿತು ಒಂದರೆಕ್ಷಣ
ಅದೇ ಬದುಕು ಕಣಾ

ಕವಿದ ಮೋಡ ಕರಗಲೇ ಬೇಕು
ಮುಪ್ಪಿನೆಡೆಗೆ ಸಾಗಲೇ ಬೇಕು ತರುಣ
ಮಳೆ ಸುರಿಯೆ ಧರೆ ತಣಿಯೆ
ಬಿಸಿ ಮೈಯಲ್ಲಿ ಬೆವರು ಹರಿಯೆ
ಇಳೆಯಲ್ಲಿ ಹಸಿರೊಡೆದು
ಹೊಸ ಜೀವಕ್ಕೆ ಬಸಿರು

ಮೋಡಗಳಾಚೆಗಿದೆ ನಿರಭ್ರ ಆಕಾಶ
ಕೆಂಡದ ಮಳೆಗರೆದರೂ ಬೇಕೆನಿಸುವ ಸೂರ್ಯ
ತಣ್ಣಗಿನ ಬೆಳದಿಂಗಳ ಸುರಿವ ಚಂದ್ರ
ಅನಂತ ತಾರೆಗಳ ಚೆಂದದ ತೋಟ

ಇರಲಿ ಸ್ವಲ್ಪವೇ ಸಹನೆ
ಕವಿದ ಮೋಡ ಕರಗಿಯೇ ಕರಗುತ್ತದೆ
ಮೋಡಗಳಾಚೆಗಿದೆ ಅನಂತ ಅವಕಾಶ