ಕತೆಯೇನೋ ಯಾವಾಗಲೂ ತನ್ನ ಪಾಡಿಗೆ ತಾನು ತನ್ನದೇ ಜಗತ್ತಿನಲ್ಲಿ ಇರುತ್ತದೆ. ಅದನ್ನು ನೋಡುವುದರಿಂದ, ಹೇಳುವವರಿಂದ, ಬರೆಯುವವರಿಂದ ಕತೆಯ ಒಂದಷ್ಟು ಭಾಗ ಮಾತ್ರ ಈ ಜಗತ್ತಿಗೆ ಬರುತ್ತದಷ್ಟೆ.. (ಒಂದು ಭೋಜನ ಮೀಮಾಂಸೆ) ಎಂಬ ನಂಬಿಕೆಯಿಂದ ಬರೆಯುತ್ತಿರುವ ಕತೆಗಾರ ಕೆ. ಸತ್ಯನಾರಾಯಣ ಅವರ `ಮನುಷ್ಯರು ಬದಲಾಗುವರೆ?’ ಕಥಾಸಂಕಲನ ಮನುಷ್ಯ ಜಗತ್ತಿನ ಹಲವು ಸೂಕ್ಷ್ಮ ಸುಳಿಹುಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ನೆರವಾಗುತ್ತದೆ. ಕತೆಗಾರನ ಮುಂದೆ ವಿಶಾಲವಾದ, ವಿಚಿತ್ರವಾದ ಜಗತ್ತಿದೆ. ಅವರವರ ನೋಟಕ್ಕೆ ತಕ್ಕಂತೆ ಅದು ಅವರಿಗೆ ದಕ್ಕುತ್ತದೆ. ಹಾಗೆ ದಕ್ಕಿಸಿಕೊಳ್ಳುವಾಗ ಅವರಿಗೆ ಜವಾಬ್ದಾರಿಯೂ ಇರುತ್ತದೆ. ಅದನ್ನೇ ಅವರು ಈ ಮೇಲೆ ಹೇಳಿದ ಕತೆಯ ಒಂದು ಪಾತ್ರ, ಪ್ರಸಿದ್ಧ ವಿಮರ್ಶಕ ರಾಜಶೇಖರ ಅವರ ಮಾತುಗಳಲ್ಲಿ ಹೀಗೆ ಹೇಳಿಸುತ್ತಾರೆ.. “ನಾವೆಲ್ಲರೂ ನಾಡಿನ ಪಳಗಿದ ಕಥನಕಾರರು. ಕತೆಯನ್ನು ಎಲ್ಲಿಂದ ಪ್ರಾರಂಭಿಸಬೇಕು, ಎಲ್ಲಿಗೆ ನಿಲ್ಲಿಸಬೇಕು, ಯಾವ ವಿಚಾರ, ಯಾವ ಭಾವ, ಯಾವ ತಿರುವು, ಯಾವ ಭೇದಭಾವಕ್ಕೆ ಎಷ್ಟೆಷ್ಟು ಪ್ರಾಮುಖ್ಯತೆ ನೀಡಬೇಕು ಎನ್ನುವುದು ನಿಮಗೆ ಬಿಟ್ಟಿದ್ದು. ಆದರೆ ಏನನ್ನೂ ಬಿಡಬೇಡಿ, ಯಾವುದನ್ನೂ ಬಿಡಬೇಡಿ, ಯಾವೊಂದು ನೆಲೆಗೂ ಮೋಸ ಮಾಡಬೇಡಿ ಎಂದು ಮಾತ್ರ ಕೇಳಿಕೊಳ್ಳುತ್ತೇನೆ.”

ನಿಜ, ಒಂದು ಭೋಜನ ಮೀಮಾಂಸೆ ಎಂಬ ಕತೆಯಲ್ಲಿ ಕಥನ ಸಾಹಿತ್ಯದ, ಒಟ್ಟಾರೆ ಸಾಹಿತ್ಯದ ಮೀಮಾಂಸೆಯೂ ಇದೆ. ಇದು ಕೇವಲ ಇದೊಂದೇ ಕತೆಯಲ್ಲಿ ಅಲ್ಲ, ಇನ್ನೂ ಕೆಲವು ಕತೆಗಳಲ್ಲಿ ಇಂಥ ಕಥನ ಮೀಮಾಂಸೆ ಬರುತ್ತದೆ. ಬರೆದವರೇ ಬರವಣಿಗೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಹೋಗಬಾರದು…. `ಒಂದೇ ಬರವಣಿಗೆ ಬರೆದವರಿಗೂ ಸೇರಿದಂತೆ ಸಕಲರಿಗೂ ಬೇರೆ ಬೇರೆಯಾಗಿ ಕಾಣುತ್ತದೆ. ನಮ್ಮ ಬರವಣಿಗೆ ಹೀಗೇ ಕಾಣುತ್ತಿರಬೇಕು ಎಂದು ನಮ್ಮ ಆಸೆ...'' ಎಂಬ ಮಾತುಹನಿ ಟ್ರಾಪ್‌’ ಕತೆಯ ರಾಮ್‌ ಸಿಂಗ್‌ ಮೂಲಕ ಹೇಳಿಸುತ್ತಾರೆ.

ಹಾಗೆಯೇ ಜೀವನ ಮೀಮಾಂಸೆಯೂ ಇಲ್ಲಿಯ ಕತೆಗಳಲ್ಲಿದೆ. ಮೊದಲನೆಯ ಕತೆ, ವಾಷಿಂಗ್‌ಟನ್‌ ಮೆಮೋರಿಯಲ್‌ ಮುಂದೆ, ಇದರಲ್ಲಿ, ವಕೀಲನಾಗಿ ವಿಫಲನಾದ ವ್ಯಕ್ತಿ ಗುಡಿಬಂಡೆ ದಿವಾಕರ ಅಮೆರಿಕದಲ್ಲಿ ಹೇಗೆ ಫ್ಯಾಮಿಲಿ ಕೌನ್ಸೆಲರ್ ಆಗಿ ಯಶಸ್ವಿಯಾದ ಎಂಬುದನ್ನು ಹೇಳುತ್ತದೆ. ಇವನ ಜೀವನ ಸಿದ್ಧಾಂತ ಹೀಗಿದೆ, ಜೀವನ ನೇರವಾಗಿದೆ, ಸರಳವಾಗಿದೆ, ಅನಗತ್ಯವಾಗಿ ಸಂಕೀರ್ಣ ಮಾಡಿಕೊಳ್ಳಬೇಡಿ. ಜೀವನ ಸಂಕೀರ್ಣವಾಗೋಕ್ಕೆ ಕಾರಣ ಸಮಸ್ಯೆಯ ಸಂಕೀರ್ಣತೆಯಲ್ಲ, ನಮ್ಮ ನಮ್ಮ ಅಹಂಕಾರ. ಇದು ಗಂಡು-ಹೆಣ್ಣಿನ ಸಂಬಂಧಕ್ಕೂ ಅನ್ವಯಿಸುತ್ತದೆ. ದೇಶ-ದೇಶಗಳ ನಡುವಿನ ಸಂಬಂಧಕ್ಕೂ ಕೂಡ ಅನ್ವಯಿಸುತ್ತದೆ...'' ಹಾಗೆಯೇ ಇನ್ನೊಂದು ಕಡೆ ಆತನೇ, ಹೇಳುವ ಈ ಮಾತನ್ನು ಗಮನಿಸಿ,ಯಾವ ಮದುವೆನೂ ಶೇಕಡ 51ಕ್ಕಿಂತ ಹೆಚ್ಚು ಯಶಸ್ವಿಯಾಗೋಲ್ಲ. ಎಲ್ಲ ಕಾಲದಲ್ಲೂ, ಎಲ್ಲ ಸಂಸ್ಕೃತಿಯಲ್ಲೂ ದಾಂಪತ್ಯ ಜೀವನದ ಪೀಕ್‌ ಪರ್ಫಾರ್ಮನ್ಸ್ ಅಷ್ಟೇ. ಮನುಷ್ಯನ ಜಾಣತನ ಎಲ್ಲಿದೆ ಅಂದರೆ, ಅದು ಯಾವತ್ತೂ ಶೇಕಡ 49ಕ್ಕಿಂತ ಕಡಿಮೆ ಆಗದಂತೆ ನೋಡಿಕೊಳ್ಳೋದು.” ಇದನ್ನೇ ಆತ ದಾಂಪತ್ಯದ ಆಚೆಗೂ ಗೆಳೆತನಕ್ಕೆ, ಮನುಷ್ಯರ, ದೇಶಗಳ ಎಲ್ಲ ಸಂಬಂಧಕ್ಕೂ ಕೂಡ ಅನ್ವಯಿಸುತ್ತೆ ಎಂದು ಹೇಳುತ್ತಾನೆ.

`ಹನುಮಂತಾಚಾರ್‌ ಉಯಿಲು’ ಕತೆಯಲ್ಲಿ ಸಾವು ಮತ್ತು ಬದುಕಿನ ಜಿಜ್ಞಾಸೆ ಬರುತ್ತದೆ. “ಬದುಕುವುದು, ನಿತ್ಯವೂ ಬದುಕುವುದು, ಬದುಕುತ್ತಾ ಹೋಗುವುದೇ ಸಹಜವಾದದ್ದು. ಮನುಷ್ಯ ಹುಟ್ಟುವುದೇ ಬದುಕುವುದಕ್ಕೆ, ಬದುಕುತ್ತಾ ಹೋಗುವುದಕ್ಕೆ. ಸಾವೆನ್ನುವುದು Disruption, Source of disturbance. ಬದುಕು ಇಷ್ಟವಾಗದವರು, ಬದುಕಿನ ಬಗ್ಗೆ ಅಸೂಯೆ ಪಡುವವರು ನೀಡುವ ಶಾಪ……” ಎಂದು ಹೇಳುವ ಹನುಮಂತಾಚಾರ್‌ ಸಾವಿನ ಸಂದರ್ಭದಲ್ಲಿ ಊರುಬಿಟ್ಟು ಓಡಿಹೋಗಿ ನಂತರ ಮರಳುವವರು. ಕಾರಣ ಏನೆಂದರೆ, ಸಾವಿನ ಸಂದರ್ಭದಲ್ಲಿ ಬಳಸುವ ಕೃತ ಭಾಷೆ, ಯಾಂತ್ರಿಕವಾದ ಭಾವ ವ್ಯಕ್ತಪಡಿಸಸುವುದು ಇವೆಲ್ಲ ಅವರಿಗೆ ಇಷ್ಟವಾಗದಿರುವುದು. ಇದರಲ್ಲಿ ಮಾಧ್ಯಮದ ನಿವಿರಾದ ಲೇವಡಿಯೂ ಇದೆ.

ಹಾಗೆಯೇ `ಕಾಮತರ ಪಂಜಾಬಿ ಸೊಸೆ’ ಕತೆಯಲ್ಲಿಯ ಸೊಸೆ ಸ್ವರೂಪ ಧಿಲ್ಲಾನ್‌ ತನ್ನ ಒಳಗುದಿಯನ್ನೆಲ್ಲ ತೋಡಿಕೊಂಡ ಬಳಿಕ ಹೇಳುವ, “ಇದನ್ನೆಲ್ಲ ನಾನು ಹೇಳಿದ್ದು, ಯಾರಲ್ಲಾದರೂ ತೋಡಿಕೊಳ್ಳಬೇಕು ಎಂದಲ್ಲ. ನನ್ನ ನಿರ್ಧಾರ ಗಟ್ಟಿಯಾಗಲೆಂದು. ಒಳ್ಳೆಯ ಮಾತುಗಳನ್ನು ಇನ್ನೊಬ್ಬರೊಡನೆ ಹಂಚಿಕೊಳ್ಳುವುದರಿಂದ ನಾವು ಆ ಮಾತುಗಳಿಗೆ ಬದ್ಧರಾಗುತ್ತೇವೆ. ಹಾಗಾಗಿ ಯಾವಾಗಲೂ ಒಳ್ಳೆಯ ಮಾತುಗಳನ್ನು ಆಡುತ್ತಿರಬೇಕು….” ಹೀಗೆ ಬದುಕಿನ ಒಂದು ಗಾಢವಾದ ಸತ್ಯವನ್ನು ಹೃದಯಕ್ಕೆ ತಟ್ಟುವ ಒಂದು ಸನ್ನಿವೇಶವನ್ನು ಸೃಷ್ಟಿಸಿ ಪಾತ್ರವೊಂದರ ಮೂಲಕ ಹೇಳಿಸುವುದು ಸತ್ಯನಾರಾಯಣ ಅವರ ವಿಶಿಷ್ಟ ಕಲೆ.

ಐಎಎಸ್‌ ಅಧಿಕಾರಿಯಾಗಿದ್ದ ಶಿವಗಾಮಿ ನಂತರ ತನ್ನ ನೌಕರಿಗೆ ರಾಜಿನಾಮೆ ನೀಡಿ, ಚುನಾವಣೆಗೆ ಸ್ಪರ್ಧಿಸಿದ್ದು, ಸೋತಿದ್ದು, ಐಎಎಸ್‌ ಪರೀಕ್ಷೆಗೆ ಕುಳಿತವರಿಗೆ ತರಬೇತಿ ನೀಡುವುದು, ನಂತರ ಸುಪ್ರೀಂ ಕೋರ್ಟಿನ ವಕೀಲೆಯಾಗಿದ್ದು ಇವೆಲ್ಲ ಮನುಷ್ಯನೊಬ್ಬ ಬದುಕಿನಲ್ಲಿ ಬದಲಾದ ಹಂತಗಳನ್ನು ಹೇಳುತ್ತದೆ. ಮನುಷ್ಯ ಬದಲಾಗುವುದು ಒಂದು ಸಹಜ ಪ್ರಕ್ರಿಯೆ. ಆದರೆ ಹೀಗೆ ಬದಲಾಗುವಾಗ ತಮ್ಮ ವ್ಯಕ್ತಿತ್ವದ ಸಮಗ್ರತೆಯನ್ನು ಹೇಗೆ ಶಿವಗಾಮಿ ಕಾಯ್ದುಕೊಂಡಳು ಎಂಬುದನ್ನು `ಶಿವಗಾಮಿ ಬದಲಾದಳೆ(ರೆ)?’ ಕತೆ ಹೇಳುತ್ತದೆ. ವ್ಯಕ್ತಿಯ ಮತ್ತು ಜೊತೆಜೊತೆಗೆ ಸಮಾಜದ ತಂತಿಯ ಮೇಲಿನ ನಡಿಗೆಯನ್ನು ಕತೆ ಸೊಗಸಾಗಿ ನಿರೂಪಿಸುತ್ತದೆ.

ಸಾರ್ವಜನಿಕ ಬದುಕು ಮತ್ತು ಕೌಟುಂಬಿಕ ಬದುಕಿನ ದ್ವಿಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುವ ಸಂಧ್ಯಾ ಪ್ರಾಶಾಂತರ ಬದುಕು ಕದ್ದು(!) ಕೇಳಿಸಿಕೊಂಡ ಕಥೆ'ಯಲ್ಲಿ ಸರಳವಾಗಿ ಮೂಡಿಬಂದಿದೆ. ಅವರದು ಬೂಟಾಟಿಕೆಯ ಬದುಕು ಎನಿಸಿದರೂ ಈ ಜಗತ್ತು ಇರುವುದೇ ಹೀಗೆ ಅಲ್ಲವೆ ಅನ್ನಿಸಿ ಅವರ ಬಗ್ಗೆ ಸಾಫ್ಟ್‌ಕಾರ್ನ್‌ರ್‌ ತಾಳಿಬಿಡುತ್ತೇವೆ. ಹಾಗೆಯೇನಾಲ್ವಡಿಯವರ ವಿವೇಚನೆ’ ಎಂಬ ಕತೆ ಇತಿಹಾಸದ ಯಾವುದೋ ಕಳೆದುಹೋದ ಪುಟದ ದಾಖಲೆಯಂತಿದೆ. ಒಬ್ಬ ಪ್ರಜಾನುರಾಗಿ ದೊರೆ ತನ್ನ ಅಧಿಕಾರಿಗಳನ್ನು ನೇಮಿಸಿಕೊಳ್ಳುವಾಗ ಎಷ್ಟೊಂದು ಸೂಕ್ಷ್ಮವಾಗಿ ಇರಬಹುದು ಎಂಬುದನ್ನು ಇದು ಹೇಳುತ್ತದೆ.

ಕತೆಗಾರ ಸತ್ಯನಾರಾಯಣರು ತಮ್ಮ ಮಾಗಿದ ವಯಸ್ಸಿನಲ್ಲಿ ಬರೆದಿರುವ ಇಲ್ಲಿಯ 15 ಕತೆಗಳು ಬದುಕಿನ ಹಲವು ಸಾಧ್ಯತೆಗಳನ್ನು ತೆರೆದಿಡುತ್ತವೆ. ಆ ಮೂಲಕ ತಾವು ಬದುಕಿನ ಅಂಚಿನಲ್ಲಿದ್ದೇವೆ ಎಂಬ ಹತಾಶೆಯಲ್ಲಿದ್ದವರಿಗೆ ಜೀವನೋತ್ಸಾಹವನ್ನು ತುಂಬುತ್ತವೆ. ಮನುಷ್ಯರು ಬದಲಾಗುತ್ತಾರೆ. ಈ ಬದಲಾಗುವಿಕೆಯೇ ನಿಜವಾದ ಜೀವನ. ಬದಲಾಗುವಿಕೆ ಇಲ್ಲದಿದ್ದರೆ ಬದುಕು ಹರಿವ ನೀರಾಗದೆ ಮಲೆತ ಕೊಚ್ಚೆಗುಂಡಿಯಾಗುತ್ತದೆ. ಇದನ್ನು ಸಂವಹನಗೊಳಿಸುವಲ್ಲಿ ಈ ಕತೆಗಳ ಮೂಲಕ ಸತ್ಯನಾರಾಯಣ ಅವರು ಯಶಸ್ವಿಯಾಗಿದ್ದಾರೆ.