ಸಾವಿರ ನಿರೀಕ್ಷೆಗಳೊಂದಿಗೆ ನೂರು ನೋವುಗಳನ್ನು ಮರೆಯುವಾ….

ಇದು ಸಂದ ವರ್ಷಕ್ಕೊಂದು ಬೆನ್ನುಡಿ ಹೊಸ ವರ್ಷಕ್ಕೊಂದು ಮುನ್ನುಡಿ. ನಿನ್ನೆ ನಾಳೆಗಳ ಈ ಮಧ್ಯಬಿಂದುವಿನಲ್ಲಿ ಬದುಕೊಂದು ಬಯಲು. ಈ ಬಯಲನ್ನು ಬೆಳಗುವುದು ಹೇಗೆ? ಮಧ್ಯಬಿಂದುವಿನಿಂದ ಬೆಳಕು ಮುಂದೆ ಹರಿಯುವುದು ಹೇಗೆ? ಇದೆಂಥ ಕ್ರಿಯೆ? ಆರುತ್ತಿರುವ ಮೇಣದ ಬತ್ತಿಯಿಂದ ಇನ್ನೊಂದು ಮೇಣದ ಬತ್ತಿಯನ್ನು ಹಚ್ಚಿದಂತೆ ಇದು. ಈ ಬೆಳಕಿನ ಬತ್ತಿಯನ್ನು ಯಾರೂ ಒಯ್ಯದೆ ಹೋದರೆ ಬಯಲು ತುಂಬಾ ಕತ್ತಲೆಯೋ ಕತ್ತಲೆ. ಕಾರಣ ಬೆಳಕಿನ ಬತ್ತಿಯನ್ನು ಒಯ್ಯುವ ಅನಿವಾರ್ಯತೆ ನಮಗೆಲ್ಲರಿಗೂ ಇದೆ.
ನಿರೀಕ್ಷೆಗಳು ಸಾಗರದಷ್ಟು ಅಪಾರ. ಈ ಸಾಗರದ ಒಡಲೊಳಗೇ ಸುನಾಮಿಯಂಥ ನೋವೂ ಅಡಗಿದೆ. ಬದುಕಿನ ಬೆಳಕಿಗೆ ಬತ್ತಿಯೇ ಬೇಕು. ಹಾವಿನ ಹೆಡೆಯ ಮೇಲಿನ ಮಣಿಯಿಂದ, ಅದು ಎಷ್ಡೇ ಅಮೂಲ್ಯವಾಗಿರಲಿ, ಜಗತ್ತಿಗೆ ಬೆಳಕನ್ನು ನೀಡುವುದು ಸಾಧ್ಯವಿಲ್ಲ. ಫಲ ನೀಡದ ನಿರೀಕ್ಷೆಗಳನ್ನು ಇಂಥ ಹಾವಿನ ಹೆಡೆಯ ಮೇಲಿನ ಮಣಿಗೆ ಹೋಲಿಸಬಹುದು.
ಈ ಮಧ್ಯಬಿಂದುವಿನಲ್ಲಿ ಬೆಳಕು ಕತ್ತಲೆಯ ಜಿಜ್ಞಾಸೆಯಲ್ಲಿ ತೊಡಗಿದಾಗ ಅಪರಿಮಿತದ ಕತ್ತಲೆಯೊಳಗೆ ವಿಪರೀತದ ಬೆಳಕನ್ನಿಟ್ಟವರು ಯಾರೆಂಬ ಅಚ್ಚರಿ ಹುಟ್ಟದೆ ಇರದು. ಇದಕ್ಕೆ ಉತ್ತರ ಹುಡುಕುವುದೆಂದರೆ ಕೆಂಡದ ಗಿರಿಯ ಅರಗಿನ ಬಾಣದಲ್ಲಿ ಎಚ್ಚಿ ಮರಳಿ ಬಾಣವನ್ನು ಹುಡುಕಿದಂತೆಯೇ ಸೈ.
ಮಧ್ಯಬಿಂದುವಿನ ಹಿಂದೆ ನೂರು ನೋವಿದೆ. ಅದೇ ರೀತಿ ಮುಂದೆ ಸಾವಿರ ನಿರೀಕ್ಷೆಗಳೂ ಇವೆ. ಈ ನಿರೀಕ್ಷೆಗಳು ಒಮ್ಮೊಮ್ಮೆ ಗಗನಕ್ಕೆ ನಿಚ್ಚಣಿಕೆಯನ್ನು ಇಡುವ ಪ್ರಯತ್ನವಾಗಿ ಕಾಣಬಹುದು. ಆದರೇನಂತೆ ಮರಳಿ ಯತ್ನವ ಮಾಡು, ಮರಳಿ ಮರಳಿ ಯತ್ನವ ಮಾಡು…
ವರ್ಷದುದ್ದಕ್ಕೂ ಹಿಂಸೆಯ ನಾನಾ ಮುಖಗಳನ್ನು ಕಂಡೆವು. ಯುದ್ಧಭೂಮಿಯಲ್ಲಿ ಶತ್ರುವಿನ ಮೇಲೆ ಗುಂಡು ಹಾರಿಸುವುದೇನೋ ಸರಿ. ಆದರೆ ಅಸಹಾಯಕ ನಾಗರಿಕರ ಮೇಲೆ ನಡೆಯುವ ದಾಳಿ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಇದು ಗಡಿಯಾಚೆಗಿನ ಶತ್ರುಗಳು ನಡೆಸಿದ ದಾಳಿ ಇರಬಹುದು ಅಥವಾ ಶೋಷಣೆಯನ್ನು ತೊಲಗಿಸುತ್ತೇವೆ ಎನ್ನುವ ನಕ್ಸಲರೇ ಇರಬಹುದು. ಇಂಥವುಗಳ ಮೂಲ ಕಾರಣ ಕಂಡು ಹಿಡಿದು ಪರಿಹಾರ ಪಡೆಯುವುದು ಮಧ್ಯಬಿಂದುವಿನ ಈಚೆಯ ಸವಾಲು.
ಇಂಥ ರಣಹೇಡಿ ಕೃತ್ಯಗಳನ್ನು ಎದುರಿಸಲು ಗಡಿಯಲ್ಲಿ ಸಾವಿಗಂಜದ ಸೈನಿಕರಿದ್ದಾರೆ, ನಾಡಿನೊಳಗಿನ ಸವಾಲನ್ನು ಎದುರಿಸಲು ಸಂದೀಪ ಉನ್ನಿಕೃಷ್ಣನ್ನಂಥ ಕಮಾಂಡೋಗಳಿದ್ದಾರೆ. ಅವರಿವರ ಹೆಗಲಿಗೆ ಜವಾಬ್ದಾರಿಯನ್ನು ಹಾಕಿ ನಿರುಮ್ಮಳವಾಗಿ ನಾವು ನೀವು ಕುಳಿತುಕೊಳ್ಳುವ ಸಮಯ ಇದಲ್ಲ. ರಾಷ್ಟ್ರ ಕಟ್ಟುವುದು ಯಾವುದೋ ಧರ್ಮದ, ಜಾತಿಯ ಇಲ್ಲವೇ ಕೆಲವೇ ಜನರ ಗುತ್ತಿಗೆಯಲ್ಲ. ನಮ್ಮ ನಿಮ್ಮ ಅಳಿಲು ಸೇವೆಗೆ ಅನಂತ ಅವಕಾಶ ಇಲ್ಲಿದೆ.
ಅರಸು ಮುನಿದರೆ ಮನೆಯೊಳಗಿರಬಾರದು ಎಂಬ ಮಾತೊಂದಿದೆ. ಆಳುವ ಪ್ರಭು, ಹೌದು ದೇಶವನ್ನು ಆಳುವ ಪ್ರಭುಶಕ್ತಿಯನ್ನು ಇದು ಹೇಳುತ್ತದೆ. ಆ ಶಕ್ತಿ ಬಲವಾಗಿದ್ದರೆ ಪ್ರಜೆಗಳಿಗೆ ನೆಮ್ಮದಿ. ನಮ್ಮ ಪ್ರಧಾನಿ ತಮ್ಮ ಪ್ರಧಾನಿಗಿರಿಯನ್ನು ತೋರಿಸಿದ ವರ್ಷ ಇದು. ಒಳಗು ಹೊರಗಿನ ವಿರೋಧದ ನಡುವೆಯೂ ಅಣು ಒಪ್ಪಂದವನ್ನು ಮಾಡಿಕೊಂಡು ಜಾಗತಿಕ ಮಟ್ಟದಲ್ಲಿ ದೇಶದ ವರ್ಚಸ್ಸನ್ನು ಅವರು ಹೆಚ್ಚಿಸಿದರು. ಭಾರತ ಅಮೆರಿಕಗಳ ಪರಸ್ಪರ ಹಿತಾಸಕ್ತಿಯ ಶಿಖರ ಇದು. ಆನೆಯೂ ಸಿಂಹವೂ ಒಂದಾಗಿ ಉಂಬುವ ಪರಿ ಇದು. ಈ ಒಪ್ಪಂದದ ಸದುಪಯೋಗ ಹೇಗೆ ಎಂಬುದು ಮಧ್ಯಬಿಂದುವಿನ ಮುಂದಿನ ಸವಾಲು.
ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು ಎನ್ನುವಿರಾದರೆ ಆತನೂ ತನ್ನ ನಿಣರ್ಾಯಕ ನಿಲವನ್ನು ಹೇಳಿದ್ದಾನೆ. ಈ ಪ್ರಭುವನ್ನು ಅಣಕಿಸುವಂಥ, ಚಾಪೆಯ ಕೆಳಗೆ ತೂರಬೇಡಿ ಎಂದರೆ ರಂಗೋಲಿಯ ಕೆಳಗೇ ತೂರುವಂಥ ಚಾಣಾಕ್ಷತೆಯನ್ನು ಜನಪ್ರತಿನಿಧಿಗಳು ತೋರಿಸಿದ್ದಾರೆ. ಇದಕ್ಕೇನಂತೀರಿ? ತನ್ನ ತಾನರಿದರೆ ನುಡಿಯಲ್ಲಿ ತತ್ವ ಎನ್ನುತ್ತಾರೆ. ಅದೇ, ಆತ್ಮ ನಿರೀಕ್ಷಣೆ ಇದೀಗ ನಡೆಯಬೇಕಾಗಿದೆ.
ತಿಂಗಳಿನ ಅಂಗಳದಲ್ಲಿ ದೇಶದ ಧ್ವಜವನ್ನು ಅರಳಿಸಿದ್ದು ಸಣ್ಣ ಸಾಧನೆಯೇನಲ್ಲ. ಜೊತೆಗೆ ಉಪಗ್ರಹಗಳ ಮಾರುಕಟ್ಟೆಯನ್ನು ಇಸ್ರೋ ಪ್ರವೇಶಿಸಿತು. ಬೇರೆ ದೇಶಗಳಿಗೆ ಉಪಗ್ರಹ ತಯಾರಿಸಿ ಕೊಡುವುದಷ್ಟೇ ಅಲ್ಲ, ಅವನ್ನು ನಾವು ತಯಾರಿಸಿದ ಉಡಾವಣೆ ನೌಕೆಯಲ್ಲಿಟ್ಟು ಉದ್ದೇಶಿತ ನೆಲೆಯನ್ನು ತಲುಪಿಸಿತು. ಇದು ಜಾಗತಿಕವಾಗಿ ದೇಶಕ್ಕೆ ದೊಡ್ಡ ಗೌರವವನ್ನು ತಂದುಕೊಟ್ಟಿತು. ನಿತ್ಯೋತ್ಸವ ತಾಯಿ ನಿತ್ಯೋತ್ಸವ.
ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ನಮ್ಮವರು ಅಪಾರ ಸಾಧನೆಯನ್ನು ಮಾಡಿದ್ದಾರೆ. ಇಂದಿನ ಸಾಧನೆ ಮುಂದಿನ ದಿನಗಳಲ್ಲಿ ಇನ್ನಷ್ಟು, ಮತ್ತಷ್ಟು, ಮಗದಷ್ಟು ಯಶಸ್ಸಿಗೆ ಪ್ರೇರಣೆಯಾಗಲಿದೆ. ಕ್ರಿಕೆಟ್ ಅಬ್ಬರದಲ್ಲಿ ಉಳಿದ ಕ್ರೀಡೆಗಳಿಗೆ ಪ್ರಾಯೋಜಕರ ಪ್ರೋತ್ಸಾಹಕರ ಕೊರತೆ ಇದೆ. ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸದ ಪರಿ ಉಳಿದ ಕ್ರೀಡೆಗಳಿಗೆ ದೊರೆಯುತ್ತಿರುವ ಪ್ರೋತ್ಸಾಹ.
ಲೋಕಾಯುಕ್ತರು ಲೋಕೋಪಕಾರ ಮಾಡುತ್ತಿದ್ದಾರೆ. ಅವರ ಬಲೆಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಬಿದ್ದಿವೆ. ಜನರ ವಿಶ್ವಾಸದ ಕುಸುಮದಲ್ಲಿ ಪರಿಮಳವ ಹರಡಿದ್ದಾರೆ ಅವರು. ಅನ್ಯಾಯದ ಐಭೋಗವನ್ನು ಅನುಭವಿಸುವವರಲ್ಲಿ ಭಯ ಹುಟ್ಟಿಸಿದ್ದಾರೆ.
ಭಾಷೆ, ಸಂಸ್ಕೃತಿಯೆಲ್ಲ ನಿರಾವಲಂಬನವಾದದ್ದು. ತನ್ನಿಂದ ತಾನೆ ಶ್ರೀಮಂತಗೊಳ್ಳುವಂಥದ್ದು. ಅನ್ಯಾಕ್ರಮಣದ ಸಂದರ್ಭದಲ್ಲಿ ಅದನ್ನು ಪೊರೆಯುವ ಪೋಷಿಸುವ ಉತ್ತರದಾಯಿತ್ವ ಹೊಂದುವವರು ಬೇಕು. ಲಿಂಗದ ಬೆಳಸು ತಂದು ಜಂಗಮದಲ್ಲಿ ಸವೆಸುವ ಪ್ರಾಮಾಣಿಕ ರಕ್ಷಕರು ಬೇಕು. ಅಂಥ ರಕ್ಷಕ ಪಡೆ ವಿವಿಧ ರೂಪಗಳಲ್ಲಿ ಹುಟ್ಟು ಪಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಮುಂದಿನ ದಿನವೂ ನುಡಿರಕ್ಷಕರು ನಮ್ಮ ಆಶಯದಂತೆ ಬೆಳೆಯಲಿ. ಕನ್ನಡ ಅಭಿಜಾತವೆಂದು ಮನ್ನಣೆ ಪಡೆದಿದೆ. ಅದಕು ಇದಕು ಎದಕೂ ಕನ್ನಡವೇ ಸತ್ಯ ನಿತ್ಯ ಎನ್ನುವಂತಾಗಲಿ.
ಈ ವತ್ಸರ ಆಗಲಿ ನಿರ್ಮತ್ಸರ: ಎಲ್ಲ ಮುಗಿದೇ ಹೋಯಿತು ಎನ್ನುವಾಗಲೂ ಜೀವಸೆಲೆಯೊಂದು ಅಂತರ್ಯದಲ್ಲಿರುತ್ತದೆ. ಎಲ್ಲ ಆಘಾತಗಳಿಂದ ಮೇಲೆದ್ದು ಬರಲು ಇದೇ ಪ್ರೇರಣೆ. ಯಾವುದೀ ಪ್ರವಾಹ? ಪರರ ನೋವಿಗೆ ಸ್ಪಂದಿಸುವ, ನೆರವಿಗೆ ಧಾವಿಸುವ, ಇವ ಯಾರವ ಯಾರವ ಎನ್ನದೆ ಇವ ನಮ್ಮವ ಇವ ನಮ್ಮವ ಎಂಬ ಭಾವ ಸದಾ ಸ್ಫುರಿಸಲಿ.
ಅಗೋ ದಿಗುತಟದಲ್ಲಿ ತೆರೆಯುತ್ತಿದೆ ಹಗಲಿನಕ್ಷಿ. ಹೊಸ ವತ್ಸರ, ಆಗಲಿ ಈ ವತ್ಸರ ನಿರ್ಮತ್ಸರ