ಬಾಲಸಾಹಿತ್ಯವನ್ನು ರಚಿಸುವುದು ಸಿದ್ಧಪ್ರಸಿದ್ಧ ಸಾಹಿತಿಗಳಿಗೇ ಕಷ್ಟದ ಕೆಲಸ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ಮನಸ್ಸು ಉಳ್ಳವರಿಗೆ ಮಾತ್ರ ಇದು ಸುಲಭವಾಗುತ್ತದೆ. ಬಣ್ಣದ ತಗಡಿನ ತುತ್ತೂರಿ ಬರೆದ ಜಿ.ಪಿ.ರಾಜರತ್ನಂ ಅವರಿಗೆ, ಬೊಮ್ಮನಹಳ್ಳಿಯ ಕಿಂದರಿಜೋಗಿ ಬರೆದ ಕುವೆಂಪುರವರಿಗೆ ಅಂಥ ಪ್ರತಿಭೆ ಇತ್ತು. ಓದುವುದರ ಜೊತೆಗೆ ಹಾಡುವುದು ಮತ್ತು ಅಭಿನಯಿಸುವುದು ಎಲ್ಲವೂ ಈ ಕವಿತೆಗಳಲ್ಲಿ ಸಾಧ್ಯವಿತ್ತು. ಬಾಲ್ಯದಲ್ಲಿ ಓದಿದ ಆ ಹಾಡುಗಳನ್ನು ವೃದ್ಧರಾದಮೇಲೂ ನೆನಪಿನ ಗಣಿಯಿಂದ ಹೊರಗೆ ತೆಗೆಯಬಹುದು. ತಮ್ಮ ಮೊಮ್ಮಕ್ಕಳೆದುರಿಗೆ ಹಾಡಿ ನಲಿಸಬಹುದು.
ಇಂಥ ಸವಾಲಿನ ಕೆಲಸವನ್ನು ಪ್ರೇಮಾ ಶಿವಾನಂದ ಅವರು ಮಾಡಿದ್ದಾರೆ. `ಮೋಡಗಳ ಜಗಳ' ಎಂಬ ಮಕ್ಕಳ ಚಿತ್ರಕಥಾಪಟವನ್ನು ಅವರು 4ರಿಂದ 6 ವರ್ಷದೊಳಗಿನ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಹೊರತಂದಿದ್ದಾರೆ. ಇದು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಇದೆ. ಪ್ರೇಮಾ ಅವರು ನಾಡಿನ ಪ್ರಮುಖ ಪತ್ರಿಕೆಗಳ ಮೂಲಕ ಸಾಹಿತ್ಯಾಸಕ್ತರಿಗೆ ಪರಿಚಿತರಾದವರು.
ಒಂದು ಸಲ ಒಂದು ಮೋಡಕ್ಕೆ ತಲೆ ನೋವು ಕಾಣಿಸಿಕೊಂಡು ನೆಗಡಿಯೂ ಆಗುತ್ತದೆ. ಅದು ಅಳುವುದಕ್ಕೆ ಆರಂಭಿಸಿದಾಗ ಇನ್ನೊಂದು ಮೋಡ ಅಣಕಿಸಿ ನಗುತ್ತದೆ. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗುತ್ತದೆ. ಜಗಳ ಸಿಟ್ಟು ಸೆಡವುಗಳಿಂದ ಕೂಡಿ ಗುಡುಗು ಮಿಂಚುಗಳಾಗುತ್ತವೆ. ಮಳೆ ಆರಂಭವಾಗುತ್ತದೆ. ಆಗಸದಲ್ಲಿ ಕಗ್ಗತ್ತಲು. ಜನರು ಅಂಜುತ್ತಾರೆ. ಆಗ ಕಿರಿಯ ಮೋಡಗಳು ಇಬ್ಬರ ಜಗಳ ನಿಲ್ಲಿಸಲು ಸೂರ್ಯನ ಬಳಿ ತೆರಳುತ್ತವೆ. ಸೂರ್ಯ ಆಗಮಿಸಿ ಇಬ್ಬರಿಗೂ ತಿಳಿಹೇಳಿ ಸಮಾಧಾನಪಡಿಸಿ ಕೈಕುಲುಕಿಸಿ ಜಗಳ ನಿಲ್ಲಿಸುತ್ತಾನೆ. ಮಳೆ ನಿಲ್ಲುತ್ತದೆ. ಸೂರ್ಯನ ಕಿರಣಗಳು ಹರಿದಾಡುತ್ತವೆ. ಜಗಳವಾಡುತ್ತಿದ್ದ ಮೋಡಗಳ ಸ್ನೇಹದ ಕುರುಹಾಗಿ ಕಾಮನಬಿಲ್ಲು ಮೂಡುತ್ತದೆ.
ಮಳೆಯಾಗುವ ಪ್ರಕೃತಿ ಸಹಜವಾದ ಕ್ರಿಯೆಯನ್ನು ಮಕ್ಕಳ ಮನಸ್ಸಿಗೆ ನಾಟುವ ಹಾಗೆ ಮೋಡಕ್ಕೆ ನೆಗಡಿಯಾಗುವುದು, ಮೋಡಗಳ ಜಗಳ, ಅದರಿಂದ ಸಿಡಿಲು ಮಿಂಚು.. ಹೀಗೆ ಕಥೆಯ ರೂಪದಲ್ಲಿ ಪ್ರೇಮಾ ಅವರು ಕಟ್ಟಿಕೊಟ್ಟಿದ್ದಾರೆ. ಸಮರ್ಥ ನಿರ್ದೇಶಕರು ಇದನ್ನು ನಾಟಕವಾಗಿಯೂ ರಂಗದ ಮೇಲೆ ತರಬಹುದಾಗಿದೆ.
ಮುಖಪುಟವೂ ಸೇರಿ ಕೇವಲ 12 ಪುಟಗಳಲ್ಲಿ ಸುಂದರವಾದ ಗ್ರಾಫಿಕ್ಸ್ನಲ್ಲಿ ಬಹುಬಣ್ಣಗಳ ಚಿತ್ರದೊಂದಿಗೆ ಮೋಡಗಳ ಜಗಳವನ್ನು ಕಟ್ಟಿಕೊಡಲಾಗಿದೆ. ಕನ್ನಡ ಮತ್ತು ಅದರ ಇಂಗ್ಲಿಷ್ ಅನುವಾದ ಅದೇ ಅದೇ ಪುಟಗಳಲ್ಲಿ ಇರುವುದು ಅನುಕೂಲವಾಗಿದೆ. ಇಂಗ್ಲಿಷ್ ಚೆನ್ನಾಗಿರುವ ಮಕ್ಕಳು ಕನ್ನಡವನ್ನೂ ಕನ್ನಡ ಚೆನ್ನಾಗಿರುವ ಮಕ್ಕಳು ಇಂಗ್ಲಿಷನ್ನೂ ಕಲಿತುಕೊಳ್ಳುವುದಕ್ಕೂ ಇದು ಸಹಾಯ ಮಾಡುತ್ತದೆ. ಇಂಗ್ಲಿಷ್ ಅನುವಾದವನ್ನು (The cloud clash) ಬೃಂದಾ ರಾವ್ ಮಾಡಿದ್ದಾರೆ. ಯುವ ಕಲಾವಿದೆ ಸ್ನೇಹಾ ಪೈ ಇದರಲ್ಲಿಯ ಚಿತ್ರಗಳನ್ನು ಚೆಂದವಾಗಿ ಬಿಡಿಸಿದ್ದಾರೆ. ಎನ್.ಬಿ.ಗ್ರಾಫಿಕ್ಸ್ನವರ ಮುದ್ರಣವೂ ಕಣ್ಸೆಳೆಯುತ್ತದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.