*ಕೆಲಸದಆರಂಭದಲ್ಲಿಯೇ ಒದಗುವ ವಿಘ್ನ
ಚಿಕ್ಕ ಮಕ್ಕಳಿಗೆ ಸೆಟೆಬೇನೆ ಬರುತ್ತದೆ. ಇದೊಂದು ಥರ ಅಪಸ್ಮಾರ ರೋಗ. ದೊಡ್ಡದಾಗಿ ಅಳುತ್ತ ಹಟ ಮಾಡುತ್ತ ರಚ್ಚೆ ಹಿಡಿಯುತ್ತ ಮಕ್ಕಳ ಮುಖ ಕಪ್ಪಿಟ್ಟು ಪ್ರಜ್ಞೆ ತಪ್ಪುತ್ತಾರೆ. ಸರಿಯಾದ ಪ್ರಮಾಣದಲ್ಲಿ ಆಮ್ಲಜನಕದ ಪೂರೈಕೆ ಆಗದೆ ಇರುವುದೇ ಇದಕ್ಕೆ ಕಾರಣ. ಇದು ವೈದ್ಯಕೀಯ ವಿಜ್ಞಾನದ ಕಾರಣ. ಆದರೆ ಹೆತ್ತವರು ಇದನ್ನು ಬಾಲಗ್ರಹ ಎಂದು ಕರೆದು ದೇವರಿಗೆ ಪೂಜೆ ಮಾಡಿಸುತ್ತಾರೆ. ಭಟ್ಟರಿಂದ ಯಂತ್ರ ಕಟ್ಟಿಸುವುದು, ಹರಕೆ ಹೊರುವುದು ಇತ್ಯಾದಿ ಮಾಡುತ್ತಾರೆ. ಬಾಲಗ್ರಹವೆಂದರೆ ಇಲ್ಲಿ ಚಿಕ್ಕ ಮಕ್ಕಳಿಗೆ ಕಾಡುವ ಉಪದ್ರವ. ಬೆಳೆಯುವ ಮಕ್ಕಳಿಗೆ ಈ ರೀತಿಯಾದರೆ ಬೆಳವಣಿಗೆ ಕುಂಠಿತವಾಗುತ್ತದೆ.
ಯಾವುದಾದರೂ ಕಾಮಗಾರಿಯನ್ನು ಆರಂಭಿಸಿ ಅದು ಆರಂಭದಲ್ಲಿಯೇ ತೊಂದರೆಯನ್ನು ಅನುಭವಿಸಿದರೆ, ಕೆಲಸವು ತಡೆದು ತಡೆದು ಸಾಗುತ್ತಿದ್ದರೆ ಆಗ ಆ ಕಾಮಗಾರಿಗೆ ಬಾಲಗ್ರಹ ತಾಕಿದೆ ಎಂದು ಹೇಳುತ್ತಾರೆ.
ಕೇವಲ ಕಾಮಗಾರಿಯಲ್ಲ, ಯಾವುದೇ ಕೆಲಸವಾಗಿರಲಿ, ಆರಂಭದಲ್ಲಿಯೇ ಒದಗುವ ವಿಘ್ನಕ್ಕೆ ಈಗ ಬಾಲಗ್ರಹ ಪೀಡೆ ಎಂದು ಕರೆಯುವುದು ರೂಢಿಯಾಗಿಬಿಟ್ಟಿದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.