ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಜವಾಬ್ದಾರಿಯದು. ಪ್ರಭುತ್ವ ಮತ್ತು ಪ್ರಜೆಯ ನಡುವೆ ಕೊಂಡಿಯಾಗಿ ಕೆಲಸ ಮಾಡುವ ಪತ್ರಿಕೆಗಳು ಪ್ರಜೆಗಳ ನಡುವೆ ಸೌಹಾರ್ದ ಬದುಕನ್ನು ಉಂಟುಮಾಡುವ ಕೆಲಸವನ್ನೂ ಮಾಡುತ್ತವೆ. ವಿವಿಧತೆ ಇರುವಲ್ಲಿ ಏಕತೆ. ಇದೊಂದು ಆದರ್ಶ. ಇದನ್ನು ನಮ್ಮ ರಾಷ್ಟ್ರದ ಅಗ್ಗಳಿಕೆ ಎನ್ನುವಂತೆ ಹೇಳಲಾಗುತ್ತಿದೆ.
 ಸಮಾಜದ ವಿವಿಧ ವರ್ಗಗಳೊಂದಿಗೆ ಸುಮಧುರ ಬಾಂಧವ್ಯವನ್ನು ಬೆಸೆಯುವ ಜವಾಬ್ದಾರಿ ತಾನೇತಾನಾಗಿ ಪತ್ರಿಕೆಯ ಹೆಗಲೇರಿರುತ್ತದೆ. ಒಂದೇ ಜನಾಂಗದ ಪ್ರಜೆಗಳಿರುವ ದೇಶದಲ್ಲಿ ಸೌಹಾರ್ದದ ಸಮಸ್ಯೆ ಇರುವುದಿಲ್ಲ. ಆದರೆ ಭಾರತದಂಥ ಹಲವು ಜನಾಂಗಗಳ, ಹಲವು ಭಾಷೆಗಳ, ಹಲವು ಮತ ಧರ್ಮಗಳ ಜನರಿರುವ ದೇಶದಲ್ಲಿ ಹೃದಯಗಳನ್ನು ಬೆಸೆಯುವ ಅಗತ್ಯವಿರುತ್ತದೆ. ಇದನ್ನೇ ಭಾವೈಕ್ಯತೆ ಎನ್ನುವುದು.
 ಪತ್ರಿಕೆಗಳಲ್ಲಿ ಕೆಲಸ ಮಾಡುವವರ ಮೇಲೆ ಸೌಹಾರ್ದವನ್ನು ಕಾಯ್ದುಕೊಳ್ಳಲೇ ಬೇಕಾದ ಒತ್ತಡವಿರುತ್ತದೆ. ಕಾನೂನಿನ ಪ್ರಕಾರ ಅದು ಅವರ ಕರ್ತವ್ಯವೂ ಆಗಿರುತ್ತದೆ. ಎರಡು ಕೋಮಿನವರ ನಡುವೆ ಯಾವುದೋ ಕಾರಣಕ್ಕೆ ಸಂಘರ್ಷ ಏರ್ಪಡಬಹುದು. ಅದು ಆರಂಭದಲ್ಲಿ ಒಂದು ಕಿಡಿಯಾಗಿರುತ್ತದೆ. ಈ ಕಿಡಿ ಅಲ್ಲಿಯೇ ಆರಿಹೋಗುವಂತೆಯೂ ಮಾಡಬಹುದು. ಇಲ್ಲವೇ ಅದು ಭುಗಿಲೇಳುವಂತೆಯೂ ಮಾಡಬಹುದು. ಪತ್ರಿಕೆಯೂ ಸೇರಿದಂತೆ ವಿವಿಧ ವಿದ್ಯುನ್ಮಾನ ಮಾಧ್ಯಮಗಳು ಯಾವ ರೀತಿಯಲ್ಲಿ ಈ ಘಟನೆಯನ್ನು ನಿರ್ವಹಿಸುತ್ತವೆ ಎಂಬುದನ್ನು ಇದು ಅವಲಂಬಿಸಿದೆ.
 ಎರಡು ಕೋಮುಗಳಿಗೆ ಸೇರಿದ ಗುಂಪುಗಳ ನಡುವೆ ಘರ್ಷಣೆ ಎನ್ನುವುದನ್ನು ಎರಡು ಗುಂಪುಗಳ ನಡುವೆ ಎಂದು ಬರೆಯಬಹುದು. ಇಂಥ ಘರ್ಷಣೆಗಲೆಲ್ಲ ಕೆಲವು ಕಿಡಿಗೇಡಿಗಳಿಂದ ಸಂಭವಿಸಿರುತ್ತವೆ. ಇದನ್ನು ದೊಡ್ಡದು ಮಾಡಿದರೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಸಂಭವಿಸುತ್ತದೆ. ಜನಗಳ ಮನಸ್ಸು ಕಲುಷಿತವಾಗುತ್ತದೆ.
 ಬೇರೆ ಬೇರೆ ಹಿತಾಸಕ್ತಿಗಳು ಸಮಾಜವನ್ನು ತಮ್ಮ ಸ್ವಾರ್ಥಕ್ಕಾಗಿ ಒಡೆಯಲು ಯತ್ನಿಸುತ್ತಲೇ ಇರುತ್ತವೆ. ರಾಜಕೀಯ ಪಕ್ಷಗಳಂತೂ ಇಂಥ ಕಂದಕಗಳನ್ನು ಸೃಷ್ಟಿಸುತ್ತಲೇ ಇರುತ್ತವೆ. ತಮ್ಮ ಕಡೆ ಮತಗಳ ಕ್ರೋಡೀಕರಣ ಮಾಡಬೇಕು ಎಂಬುದು ಅವುಗಳ ಲೆಕ್ಕಾಚಾರ. ಯಾರದೇ ತಲೆಗಳು ಉರುಳಿದರೂ ತಮ್ಮ ವೋಟ್ಬ್ಯಾಂಕ್ ಒಡೆಯಬಾರದು ಎಂಬ ಜಿದ್ದಿನಲ್ಲಿ ಸಮಾಜದ ಸ್ವಾಸ್ಥ್ಯ ಅವುಗಳಿಗೆ ಗೌಣವಾಗಿಬಿಡುತ್ತವೆ.
 ಸರ್ವಜನಾಂಗದ ಶಾಂತಿಯ ತೋಟ ಎಂದು ಕವಿಗಳು ನಮ್ಮ ರಾಜ್ಯವನ್ನು ಹೊಗಳಿದರು. ಹುಟ್ಟಿನಿಂದಲೇ ವ್ಯಕ್ತಿಯ ಘನತೆ ನಿಧರ್ಾರವಾಗುವ ಸಮಾಜವಿರುವ ಈ ದೇಶದಲ್ಲಿ ಭಾವೈಕ್ಯತೆ ಎನ್ನುವುದು ಸಾಧಿಸಬೇಕಾಗಿರುವ ಲಕ್ಷ್ಯ. 
 ಹಿಂದೂ- ಮುಸ್ಲಿಮರು- ಕ್ರೈಸ್ತರು, ದಲಿತರು- ಸವಣರ್ೀಯರು, ಕನ್ನಡಿಗರು- ಮರಾಠಿಗರು, ಹಿಂದಿ ಮಾತನಾಡುವವರು- ಹಿಂದಿ ಬಾರದವರು,  ಶ್ರೀಮಂತರು- ಬಡವರು, ಕಪ್ಪು ಬಣ್ಣದವರು- ಬಿಳಿ ಬಣ್ಣದವರು ಈ ವೈರುಧ್ಯಗಳ ನಡುವೆ ಭಾವೈಕ್ಯತೆಯನ್ನು ಮೂಡಿಸುವುದುದ ಹೇಗೆ? ಪ್ರಜ್ಞಾವಂತ ಪತ್ರಕರ್ತ ತನ್ನ ಮಿತಿಯೊಳಗೆ ಭಾವೈಕ್ಯತೆಯನ್ನು ಸಮಾಜದಲ್ಲಿ ಮೂಡಿಸಬಹುದು. ಭಿನ್ನ ಕೋಮಿನ ಜನರು ಒಟ್ಟಿಗೆ ಸೇರಿ ಮಾಡುವ ಉತ್ಸವಗಳನ್ನು ಪ್ರಾಮುಖ್ಯತೆ ನಿಡಿ ಪ್ರಕಟಿಸಬೇಕು. ಹೀಗೆ ಮಾಡುವುದರಿಂದ ಒಂದು ಸದ್ಭಾವನೆಯ ಸಂದೇಶ ಸಮಾಜಕ್ಕೆ ತಲುಪುತ್ತದೆ. ಹಿಂದೂ ಧರ್ಮದ ಯುವತಿಯನ್ನು ಮುಸ್ಲಿಂ ಧರ್ಮದ ಯುವಕ ಅಥವಾ ಮುಸ್ಲಿಂ ಯುವತಿಯನ್ನು ಹಿಂದೂ ಯುವಕ ಮದುವೆಯಾದರೆ ಅದನ್ನು ಕೋಮು ಸೌಹಾರ್ದದ ಉದಾಹರಣೆ ಎಂದು ಬಿಂಬಿಸಬೇಕೇ ಹೊರು ಮತಾಂತರಕ್ಕೆ ನಡೆಸಿದ ಪ್ರಯತ್ನ ಎಂದು ವರದಿ, ವಿಶ್ಲೇಷಣೆ ಮಾಡಬಾರದು. ಗಣಪತಿಯ ಮೆರವಣಿಗೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದನ್ನು ದೊಡ್ಡದಾಗಿ ಪ್ರಕಟಿಸುವ ಪತ್ರಿಕೆಗಳು ಹಿಂದೂ- ಮುಸ್ಲಿಮರು ಜೊತೆಯಾಗಿ ಗಣಪತಿ ಉತ್ಸವ ಆಚರಿಸಿದರೆ ಅಷ್ಟೇ ಮಹತ್ವ ನೀಡಿ ಪ್ರಕಟಿಸುವುದಿಲ್ಲ.
 ಪತ್ರಿಕೆಗಳು ಇಂದು ಉದ್ಯಮದ ಸ್ವರೂಪವನ್ನು ಪಡೆದಿವೆ. ಜಾಹೀರಾತುಗಳನ್ನು ನೀಡುವವರ ಬಯಕೆಗಳು ಅಪರೋಕ್ಷವಾಗಿ ತಮ್ಮ ಇಷ್ಟದಂತೆ ವರದಿಗಳು ಬರುವಂತೆ ನೋಡಿಕೊಳ್ಳಬಹುದು.