*ಅಧಿಕಾರದ ಅನಿಶ್ಚಿತತೆ

ಶಿಕ್ಷೆಯ ವಿಧಾನಗಳೇ ವಿಚಿತ್ರ. ಹೇಳಿಕೇಳಿ ಶಿಕ್ಷೆ ಎನ್ನುವುದೇ ಕ್ರೂರವಾದುದು. ಇದನ್ನು ಇನ್ನಷ್ಟು ಕ್ರೂರಗೊಳಿಸುವ ಕ್ರಮಗಳೂ ಇವೆ. ಅದು ಶಿಕ್ಷೆ ವಿಧಿಸುವವರ ಮನೋವೃತ್ತಿಯನ್ನು ಅವಲಂಬಿಸಿರುತ್ತದೆ. ಶಿಕ್ಷೆ ವಿಧಿಸುವ ವ್ಯಕ್ತಿ ಸ್ವಲ್ಪ ದಯಾಳುವಾಗಿದ್ದರೆ ಶಿಕ್ಷೆ ಸರಳ ಮತ್ತು ನೇರವಾಗಿರುತ್ತದೆ. ಆತ ವಿಕ್ಷಿಪ್ತ ಮನೋಭಾವದ ವ್ಯಕ್ತಿಯಾಗಿದ್ದರೆ ವಿಚಿತ್ರ ಶಿಕ್ಷೆಗಳನ್ನು ನೀಡುತ್ತಾನೆ.
ಹಿಂದೆಲ್ಲ ಶಿಕ್ಷೆಯನ್ನು ವಿಧಿಸುವ ಅಧಿಕಾರ ರಾಜರಲ್ಲಿ ಮಾತ್ರ ಇರುತ್ತಿತ್ತು. ಹುಲಿಯ ಪಂಜರದಲ್ಲಿ ಹಾಕಿ ಕೊಲ್ಲಿಸುವುದು, ಆನೆಯ ಕಾಲಲ್ಲಿ ತುಳಿಸಿ ಕೊಲ್ಲಿಸುವುದು, ಕಾದ ಎಣ್ಣೆಯಲ್ಲಿ ಕೈ ಅದ್ದಿಸುವುದು, ಕಣ್ಣುಗಳನ್ನು ಕೀಳಿಸುವುದು, ನೇಣು ಹಾಕುವುದು ಇತ್ಯಾದಿ ಇತ್ಯಾದಿ. ಹಿಂಸಾ ವಿನೋದಿ ಮನಸ್ಸು ಶಿಕ್ಷೆಯ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತದೆ.
ತೂಗುಗತ್ತಿಯ ಕೆಳಗೆ ಅಪರಾಧಿಯನ್ನು ನಿಲ್ಲಿಸುವ ಶಿಕ್ಷೆಯೂ ಇಂಥ ಹಿಂಸಾ ವಿನೋದಿ ಮನಸ್ಸು ಕಂಡುಕೊಂಡ ವಿಧಾನವೇ ಆಗಿದೆ. ಭಾರವಾದ ಕತ್ತಿಯನ್ನು ಹರಿದು ತುಂಡಾಗಿ ಬೀಳುವಂಥ ಹಗ್ಗಕ್ಕೆ ಕಟ್ಟಿ ಮೇಲಕ್ಕೆ ನೇತು ಹಾಕಿ ನಂತರ ಅದು ತೂಗಾಡುವ ಹಾಗೆ ಮಾಡುತ್ತಾರೆ. ಅಪರಾಧಿ ಕೆಳಗೆ ನಿಂತಿರುತ್ತಾನೆ, ಕತ್ತಿಯ ಭಾರಕ್ಕೆ ಹಗ್ಗ ಹರಿದು ಅವನ ತಲೆಯ ಮೇಲೆ ಬಿದ್ದರೆ ಆತನಿಗೆ ಸಾವು. ಕತ್ತಿ ತೂಗುತ್ತಿರುವುದರಿಂದ ಅದು ಅವನ ಆಚೆಗೂ ಬೀಳಬಹುದು. ಹಾಗೆ ಬಿದ್ದರೆ ಅದು ಅವನ ಅದೃಷ್ಟ. ಶಿಕ್ಷೆಯಿಂದ ಆತ ಬಚಾವ್‌. ಅವನು ಅನುಭವಿಸುವ ಮನೋವೇದನೆ ಅತ್ಯಂತ ಯಾತನಾಮಯವಾದುದು.
ಅಧಿಕಾರದ ಅನಿಶ್ಚಿತತೆಯನ್ನು ಹೇಳುವಾಗ, ಮುಂಬರುವ ಅಪಾಯವನ್ನು ಸೂಚಿಸುವಾಗ ತೂಗುಗತ್ತಿ ಎಂಬ ಪದವನ್ನು ಉಪಯೋಗಿಸುತ್ತಾರೆ.