ಭಾಗ 1.ಬೆಡಗು


ಅವಳು ಸತ್ತಳಂತೆ' ಅವ್ವ ಹೇಳಿದಳು. ನನಗೇ ಹೇಳಿದಳು ಅಂದುಕೊಂಡೆ ನಾನು. ಮತ್ತೆ ಮತ್ತೆ ಅದನ್ನೇ ಅವ್ವ ಪುನರಾವರ್ತಿಸಿದಾಗ ನನಗೆ ಅನುಮಾನ. ಅವಳು ಹೇಳಿದ್ದು ನನಗಲ್ಲ. ತನಗೆ ತಾನೇ ಹೇಳಿಕೊಳ್ಳುತ್ತಿದ್ದಾಳೆ ಎನ್ನುವುದು ನನಗೆ ಖಾತ್ರಿಯಾಯಿತು. ಧ್ವನಿಯಲ್ಲಿ ದುಃಖವಿತ್ತೆ, ಎಲ್ಲವೂ ಸರಿಹೋಯಿತು ಎಂಬ ಸಮಾಧಾನವಿತ್ತೆ ಒಂದೂ ಗೊತ್ತಾಗದೆ ತಬ್ಬಿಬ್ಬಾದೆ. ಅವ್ವ, ಸತ್ತದ್ದು ಯಾರು?’ ಎಂದು ಪ್ರಶ್ನಿಸಿದೆ. ನನ್ನ ಪ್ರಶ್ನೆ ಅವ್ವನ ಕಿವಿಯ ಮೇಲೆ ಬಿದ್ದಂತೆ ನನಗೆ ತೋರಲಿಲ್ಲ. ಅವಳು ತನ್ನದೇ ಲೋಕದಲ್ಲಿ ಗರ್ಕಾಗಿದ್ದಳು. ಮೆರೆಯವುದಕ್ಕೂ ಒಂದು ಲೆಕ್ಕ ಬೇಡ್ವಾ? ಹಾರಗುದ್ರಿ ಬೆನ್ನ ಏರಿದವರ ಥರ, ಕಿವಿಲಿ ಗಾಳಿ ಹೊಕ್ಕಿದ ಗೂಳಿ ಹಾಗೆ ಎಲ್ಲ ಕಳ್ಚಿಕೊಂಡು ಇರ್ತೇನೆ ಅಂದ್ರೆ ಆಗ್ತದಾ?' ಅವ್ವ ತನಗೆ ತಾನೇ ಹೇಳಿಕೊಳ್ಳುತ್ತ ಇದ್ದಳು. ಬೆಳಿಗ್ಗೆಯಿಂದ ಮನೆ ಬಿಟ್ಟು ಹೊರಗೆ ಹೋಗದೆ ಇದ್ದ ಅವ್ವನಿಗೆ ಈ ಸತ್ತ ಸುದ್ದಿ ತಂದು ಒಪ್ಪಿಸಿದವರು ಯಾರು ಎಂಬುದು ತಕ್ಷಣಕ್ಕೆ ಹೊಳೆಯಲಿಲ್ಲ. ತಾಸು ಮೊದಲು ರಾಮಪ್ಪಚ್ಚಿ ಬಂದು ಹೋಗಿದ್ದ. ಬಹುಶಃ ಅವನೇ ಹೇಳಿಹೋಗಿರಬಹುದು. ಅವನು ಹೋದ ಅರ್ಧ ಗಂಟೆಯ ವರೆಗೂ ಅವ್ವ ಮಾತನಾಡಿರಲಿಲ್ಲ. ಈಗ ಒಮ್ಮೆಗಲೇ ಮಾತನಾಡಲಾರಂಭಿಸಿದ್ದಳು. ನನಗೆ ಅಂಜಿಕೆಯಾಯಿತು. ಅವ್ವನ ಹತ್ತಿರಕ್ಕೆ ಸರಿದು ಭುಜ ಅಲುಗಿಸಿ ಕೇಳಿದೆ,ಯಾರು ಅವ್ವ ಸತ್ತಿದ್ದು? ನೀ ಯಾಕೆ ಹೀಂಗೆ ರಾಂಗ್‌ ಆಗಿದ್ದಿ?’
ಯಾವುದೋ ಲೋಕದಿಂದ ಕಳಚಿಕೊಂಡು ಬಿದ್ದಂತೆ, ಎಂಥದ್ದೋ ಮಗಾ, ನಾನು ಹಲುಬಿದ್ನಾ? ಮತ್ತೇನು ಮಾಡ್ಲಿ ಹೇಳು? ಹೊತ್ತಿಕೊಂಡು ಉರಿತಿತ್ತು. ಈಗ ಹಿಮದ ಗಡ್ಡೆ ಅದರ ಮೇಲೆ ಉರುಳಿ ಬಿದ್ದ ಹಾಗೆ ಆಯ್ತು. ಇಷ್ಟು ದಿನ ಒಂದು ನಮೂನೆ ಆಲೋಚ್ನಿ. ಈಗ ಮತ್ತೊಂದು ನಮೂನಿ ಆಲೋಚ್ನಿ. ಮನ್ಸು ಎಷ್ಟು ವಿಚಿತ್ರ ಅಲ್ವಾ?' ಅಂದಳು. ನನಗೆ ತಲೆ ಬುಡ ಒಂದೂ ಹೊಳೆಯಲಿಲ್ಲ.ಅರ್ಥ ಆಗುವ ಹಾಗೆ ಹೇಳಬಾರದಾ?’ ಎಂದೆ ಆಕ್ಷೇಪಿಸುವ ಧ್ವನಿಯಲ್ಲಿ.
ಅದೇ ಅವ್ಳು, ನೀನೂ ನೋಡಿದ್ದಿಯಲ್ಲೋ, ನಮ್ಮ ಗಪ್ಪು ಮಾವನ ಸೊಸೆ ಶ್ರೀದೇವಿ ರಸ್ತೆಯಲ್ಲಿ ಲಾರಿಗೆ ಸಿಕ್ಕು ಸತ್ತಳಂತೆ. ಹೆಣ ಮೂರು ದಿನ ಆಸ್ಪತ್ರೆಯಲ್ಲೇ ಇತ್ತಂತೆ. ಯಾರೂ ಬರದೆ ಜಾಡಮಾಲಿಗಳು ಅದನ್ನು ಸುಟ್ಟುಹಾಕಿದ್ರಂತೆ. ಪ್ರಾಯದಲ್ಲೇ ಗಂಡ ಸತ್ತ ಕೂಡಲೆ ಮುದಿ ಮಾವನನ್ನೂ ಲೆಕ್ಕಕ್ಕೆ ತಗೊಳ್ಳದೇನೇ ಬೇಕಾಬಿಟ್ಟಿ ಮೆರ್ದಿದ್ದೇ ಮೆರದಿದ್ದು. ನಮ್ಮ ಗಪ್ಪು ಮಾವ ಎಷ್ಟು ದಿನ ನನ್ನ ಮುಂದೆ ಕಣ್ಣೀರು ಹಾಕಿರಲಿಲ್ಲ ಹೇಳು? ಮುಪ್ಪು ಬಂದ ಮಾವ ಸಾಯುವಾಗ ಮೂರು ದಿನ ಅನ್ನ ನೀರು ಇಲ್ದೇ ಜೀವ ಬಿಟ್ಟಿದ್ದ. ನಮಗೆ ಯಾರಿಗೂ ಅದು ಗೊತ್ತಿರಲಿಲ್ಲ. ಇಲ್ಲ ಅಂದ್ರೆ ನಾವಾದ್ರೂ ಕರ್ಕೊಂಡು ಬಂದು ಇಟ್ಕೊಂತಿದ್ವಿ.' ಮಾಡಿದ್ದು ಎಲ್ಲಿ ಹೋಗ್ತದೆ ಹೇಳು? ಗಂಡ ಸತ್ತ ಅಂತ ಊರ ಮೇಲೆ ಬೀಳೂದಾ? ಪ್ರಾಯದಲ್ಲಿ ಗಂಡ ಸಾಯಬಾರ್ದು ನಿಜ. ಎಲ್ಲ ಪಡ್ಕೊಂಡು ಬಂದದ್ದಲ್ಲವಾ? ಎಡವಿದ ದಾರೀಲೂ ನಿಯತ್ತು ಇರಬಾರ್ದ? ಒಬ್ಬನಾ, ಇಬ್ಬನಾ? ಅವ್ಳ ಹೆಸರು ಕಿವಿಗೆ ಬಿದ್ದ ಕೂಡಲೆ ಮೈಯೆಲ್ಲ ಉರಿದು ಹೋದ ಹಾಗೆ ಆಗ್ತಿತ್ತು. ಮಾವನನ್ನು ಮನೆಯಲ್ಲಿ ಒಬ್ಬೊಂಟಿಯಾಗಿ ಬಿಟ್ಟುಹೋಗಬೇಕಿದ್ದರೆ ಮನೆಯಲ್ಲಿ ಇದ್ದ ವಸ್ತು ಒಡವೆ ಎಲ್ಲಾನೂ ಎತ್ತಿಕೊಂಡು ಹೋಗೋದಾ?’
ಇವತ್ತು ರಾಮ ಬಂದು ಅವಳ ಸತ್ತ ಸುದ್ದಿ ಹೇಳಿದ ಕೂಡ್ಲೆ ಎಲ್ಲಾ ಮುಗಿದು ಹೋಯ್ತು. ಈ ಜನ್ಮದಲ್ಲಿ ಮಾಡಿದ್ದನ್ನು ಈ ಜನ್ಮದಲ್ಲೇ ಅನುಭವಿಸಿಕೊಂಡು ಹೋದ್ಲು ಅನ್ಸಿತ್ತು. ಈಗ ನೋಡು ಹೊಟ್ಟೆಯಲ್ಲಿ ಗಿಂವುಚಿದ ಹಾಗೆ ಆಗ್ತಿದೆ' ಎಂದ ಅವ್ವನ ಕಣ್ಣಿಂದ ಬಳಬಳ ನೀರು. ಅವ್ವ, ಅವ್ವ’ ಎಂದು ನಾನು ಅಲವತ್ತುಕೊಂಡೆ.
`ಅಲ್ಲ ಮಗಾ, ಅವಳು ಮಾಡಿದ್ದು ಸರಿ, ತಪ್ಪು ಎಂದು ಅಳೆಯುವುದಕ್ಕೆ ನಾನು ಯಾರು ಹೇಳು? ಇಡೀ ಜೀವಮಾನ ಪೂರ್ತಿ ಅವಳ ಕೂಡ ಒಂದು ಮಾತೂ ಆಡದೆ ಕಳೆದುಬಿಟ್ಟೆನಲ್ಲ? ಅವಳಿಗೂ ಅವಳದೇ ಒಂದು ಬದುಕು ಇತ್ತಲ್ಲವಾ? ತನಗೆ ಹೇಗೆ ಬೇಕೋ ಹಾಗೆ ಅವಳು ಬದುಕಿದ್ಲು. ಹಾಗೆ ಬದುಕೂದಕ್ಕೆ ಕಡಿಮೆ ಧೈರ್ಯ ಬೇಕಾ?’ ಎಂದು ಅವ್ವ ಹೇಳಿದಾಗ ಅವಳು ನನ್ನ ಪಾಲಿಗೆ ಬೆಡಗಿನ ವಚನ ಆಗಿಬಿಟ್ಟಳು.
ಇದೆಲ್ಲ ಆಗಿ ಮೂರು ಹತ್ತು ವರ್ಷಗಳೇ ಗತಿಸಿಹೋದವು. ಹೊಳೆಸಾಲಿನಲ್ಲಿ ಅಷ್ಟೇ ಮಳೆಗಾಲಗಳು. ನೆಗಸು. ಅವ್ವ ಹಣ್ಣು ಮುದುಕಿ.

ಭಾಗ 2.ಬೀಳು
ತಲೆದಿಂಬಿನ ಪಕ್ಕದಲ್ಲಿಯೇ ಇಟ್ಟುಕೊಂಡ ಫೋನ್‌ ರಿಂಗಾಗುತ್ತಿತ್ತು. ಕತ್ತಲೆಯಲ್ಲೇ ಕೈಚಾಚಿ ಕಿವಿಗೆ ಹಿಡಿದೆ. ಆಕಡೆಯಿಂದ ಕೇಳಿಸಿದ ಧ್ವನಿ ನನ್ನ ಅಣ್ಣನದೇ ಆಗಿತ್ತು. ಅವನ ಧ್ವನಿ ನಡುಗುತ್ತಿತ್ತು. ಏನಾಯ್ತು ಎಂದು ಕೇಳಿದೆ. ಅವ್ವ ಹೋಗಿಬಿಟ್ಳು ಅಂದ. ನನ್ನ ನಿದ್ದೆಯ ಮಂಪರು ಹಾರಿಹೋಯಿತು. ಒಂದು ವಾರದ ಹಿಂದೆ ಫೋನ್‌ ಮಾಡಿದವನು ಅವ್ವನಿಗೆ ಕೊರೋನಾ ಪಾಸಿಟಿವ್‌ ಬಂದಿದೆ. ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ಹೇಳಿದ್ದ. ಮನೆಯಲ್ಲಿ ಎಲ್ಲರಿಗೂ ಭಯ ಶುರುವಾಗಿದೆ. ನಮಗೆ ಮನೆಯಿಂದ ಆಚೆ ಬರದಂತೆ ಕಂಟೈನ್‌ಮೆಂಟ್‌ ಝೋನ್‌ ಮಾಡಿದ್ದಾರೆ. ಅವ್ವ ಒಬ್ಳೇ ಆಸ್ಪತ್ರೆಯಲ್ಲಿ ಇದ್ದಾಳೆ. ಯಾರೂ ನೋಡಲು ಹೋಗುವಹಾಗೆ ಇಲ್ಲ ಅಂದಿದ್ದ.
ನನಗೂ ಹೋಗುವ ಹಾಗೆ ಇರಲಿಲ್ಲ. ನಮ್ಮೂರಿಗೆ ಹೋಗಲು ಯಾವುದೇ ವಾಹನ ಸೌಲಭ್ಯ ಇರಲಿಲ್ಲ. ಸರ್ಕಾರ ಎಲ್ಲ ಬಸ್‌ಗಳನ್ನು ನಿಲ್ಲಿಸಿಬಿಟ್ಟಿತ್ತು. ಎಲ್ಲಿ ನೋಡಿದಲ್ಲಿ ಕೊರೋನಾ ಹಾಹಾಕಾರ. ಈ ಸಮಯದಲ್ಲಿ ನನ್ನ ನೆರವಿಗೆ ಬರಬಹುದಾದ ನನ್ನ ಸ್ನೇಹಿತರು ಯಾರಾದರೂ ಇದ್ದಾರೆಯೇ ಎಂದು ನೆನಪು ಮಾಡಿಕೊಂಡೆ. ಪೊಲೀಸ್‌ ಇಲಾಖೆಯಲ್ಲಿ, ಆರೋಗ್ಯ ಇಲಾಖೆಯಲ್ಲಿ, ಪತ್ರಿಕಾ ಕಚೇರಿಯಲ್ಲಿ… ಹೀಗೆ ನೆನಪು ಮಾಡಿಕೊಂಡಾಗ ಒಂದಿಬ್ಬರು ನೆನಪಿಗೆ ಬಂದರು. ಬೆಳಕು ಹರಿಯಲಿ, ನೋಡೋಣ ಎಂದು ಮಲಗಲು ಯತ್ನಿಸಿದೆ. ಆಗಲಿಲ್ಲ.
ನನ್ನವಳಿಗೆ ಅವ್ವ ಸತ್ತ ಸುದ್ದಿ ಹೇಳಿದೆ. ವಯಸ್ಸಾಗಿತ್ತಲ್ವ, ತೊಂಬತ್ತೆರಡು ಕಡಿಮೆ ವಯಸ್ಸಾ ಅಂದಳು. ನೀವು ಮಾತ್ರ ಅಲ್ಲಿಗೆ ಹೋಗಲೇಕೂಡದು ಎಂದು ಕಟ್ಟಪ್ಪಣೆ ಮಾಡಿದ ರೀತಿಯಲ್ಲಿ ಹೇಳಿದಳು. ದಿನವೂ ಪೇಪರ್‌ ಓದೋದಿಲ್ಲವೆ, ಟೀವಿ ನೋಡೋದಿಲ್ವೆ? ಹೊರಗೆ ಅಡ್ಡಾಡುವುದು ಎಷ್ಟು ಡೇಂಜರ್‌ ಎಂದು ಹೇಳುತ್ತಿಲ್ಲವೆ? ಅಲ್ಲ, ನೀವು ಹೋಗಬೇಕು ಅಂದ್ರೂ ಹೇಗೆ ಹೋಗುತ್ತೀರಿ? ಮನೆಯಲ್ಲಿ ದುಡಿಯೋರು ನೀವು ಒಬ್ರೆ. ಮಕ್ಕಳು ಚಿಕ್ಕವರಿದ್ದಾರೆ. ಸ್ವಲ್ಪ ವಿಚಾರ ಮಾಡಿ. ಮತ್ತೆ ನೀವು ಹಠ ಮಾಡಿ ಅಲ್ಲಿಗೆ ಹೋಗಿ ನಿಮಗೆ ಹಿಡಿಸಿಕೊಂಡು ಬಂದ್ರೆ ನಾವೇನು ಮಾಡೋದು. ಆಸ್ಪತ್ರೆಯಲ್ಲಿ ಬೆಡ್‌ ಸಿಗೋದು ಎಷ್ಟು ಕಷ್ಟ ಅಂತ ನಿಮಗೆ ಗೊತ್ತು ಅಲ್ಲವಾ ಎಂದಳು.
ಕೋವಿಡ್‌ ರೋಗ ಜಗತ್ತನ್ನು ಅಮರಿಕೊಂಡ ಮೇಲೆ ಅವಳು ಹೀಗೆ ಗದರುವುದು, ಸಿಡುಕುವುದು ಹೆಚ್ಚಾಗಿತ್ತು. ಕೊರೋನಾದ ಎರಡನೆ ಅಲೆಯಲ್ಲಿ ಅವಳ ಅಪ್ಪ ಮತ್ತು ಅಣ್ಣ ಇಬ್ಬರೂ ಹೋಗಿಬಿಟ್ಟಿದ್ದರು. ಅಂತ್ಯಸಂಸ್ಕಾರಕ್ಕೆ ಹೋಗುವುದಕ್ಕೆ ಭಯ. ನಾವು ಯಾರೂ ಹೋಗಲಿಲ್ಲ. ಅವಳ ತವರು ಮನೆಯಲ್ಲೂ ಯಾರೂ ಹೋಗಲು ಆಗಲಿಲ್ಲ. ಶವದ ಹತ್ತಿರ ಹೋಗುವುದಕ್ಕೂ ಅವಕಾಶ ಸಿಗಲಿಲ್ಲ. ಸತ್ತವರ ಮುಖವನ್ನು ಕೊನೆಯ ಬಾರಿ ನೋಡುವುದಕ್ಕೂ ಅವರಿಗೆ ಆಗಲಿಲ್ಲ. ಹೆಣವನ್ನು ಸುಟ್ಟರೋ ಹುಗಿದರೋ ಅದೂ ಗೊತ್ತಾಗಲಿಲ್ಲ.
ಅವಳ ಮಾತಿನಲ್ಲೂ ಅರ್ಥ ಇತ್ತು. ನಮ್ಮ ಬಡಾವಣೆಯಲ್ಲೇ ಎಂಟು ಸಾವು ಆಗಿತ್ತು. ಒಂದೇ ಮನೆಯಲ್ಲಿ ಮೂರು ಜನ ಸತ್ತಿದ್ದರು. ಈ ರೋಗಕ್ಕೆ ಕರುಣೆ ಇಲ್ಲ. ವಯಸ್ಕರು, ಚಿಕ್ಕವರು, ವೃದ್ಧರು, ದುಡ್ಡಿದ್ದವ, ಬಡವ, ಕೊಡುಗೈ ದೊರೆ, ರಿಕ್ತಹಸ್ತ ಎಂಬ ಭೇದ ಮಾಡೂದಿಲ್ಲ ಎಂಬುದು ಸಿದ್ಧವಾಗಿತ್ತು. ಹೆಂಡತಿಯ ಮಾತು ಕೇಳಿದ ಮೇಲೆ ಸ್ನೇಹಿತರಿಗೆ ಫೋನ್‌ ಮಾಡುವ ಆಲೋಚನೆ ಬಿಟ್ಟುಬಿಟ್ಟೆ.
ಬೆಳಗಿನ ಪೇಪರ್‌ ಬಿಚ್ಚಿದರೆ ಯಾವ ಪುಟ ತೆರೆದರೂ ಕೊರೋನಾ ಅವತಾರ. ಟೀವಿ ಹಚ್ಚಿದರೆ ಟ್ರಕ್ಕುಗಳಲ್ಲಿ ಹೆಣಗಳನ್ನು ರಾಶಿರಾಶಿ ತಂದು ಹೊಂಡದಲ್ಲಿ ಸುರಿಯುತ್ತಿರುವ ದೃಶ್ಯ. ಮನಸ್ಸು ಕುಸಿದು ಹೋಯಿತು. ಅಡುಗೆ ಮನೆಯಲ್ಲಿದ್ದ ಹೆಂಡತಿಯ ಹತ್ತಿರ ಹೋದೆ. ಸುಮ್ಮನೆ ನೋಡುತ್ತ ನಿಂತೆ. ಯಾವುದೇ ಮಾತು ಹೊರಡಲಿಲ್ಲ. ಅವಳೇ ಹೇಳಿದಳು, ಬಡಾವಣೆಯಲ್ಲಿ ಸತ್ತವರ ಸಂಸ್ಕಾರಕ್ಕೆ ಅವರ ಮನೆಯವರು ಯಾರೂ ಹೋಗಲಿಲ್ಲ. ಆಸ್ಪತ್ರೆಯವರೇ ಬಿಲ್ಲು ಕಟ್ಟಿಸಿಕೊಂಡು ಸಂಸ್ಕಾರದ ವ್ಯವಸ್ಥೆ ಮಾಡಿಸಿದರು ಎಂದು.
ನನಗೆ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅಣ್ಣನಿಗೆ ಫೋನ್‌ ಮಾಡಿ ಹೇಳಿದೆ. ಅಣ್ಣನೂ ಸಂಸ್ಕಾರಕ್ಕೆ ಹೋಗಲಿಲ್ಲ ಎಂಬುದು ಆಮೇಲೆ ತಿಳಿಯಿತು. ಅವ್ವನ ಚಿತೆಗೆ ಯಾರು ಬೆಂಕಿ ಹಚ್ಚಿದರೋ ಏನೋ.
`ಹೆಣ ಮೂರು ದಿನ ಆಸ್ಪತ್ರೆಯಲ್ಲೇ ಇತ್ತಂತೆ. ಯಾರೂ ಬರದೆ ಜಾಡಮಾಲಿಗಳು ಅದನ್ನು ಸುಟ್ಟುಹಾಕಿದ್ರಂತೆ….’ ಎಂದು ಅವ್ವ ಗಪ್ಪು ಮಾವನ ಸೊಸೆಯ ಕುರಿತು ಹೇಳಿದ ಆ ಮಾತುಗಳು ತಟ್ಟನೆ ನನಗೆ ನೆನಪಾಯಿತು.