*ಎಟುಕದ ಆಸೆಗಳು ನಿಜವಾಗುವುದು ಕನಸಿನಲ್ಲೇ
ಕಿತ್ತು ತಿನ್ನುವ ಬಡತನ. ಹೀಗಿದ್ದೂ ಅರಸನಾಗುವ ಆಸೆ ಹೊತ್ತರೆ ಹೇಗೆ? ತೀವ್ರ ಬಡತನವೇ ಏನೇನೋ ಆಸೆಗಳನ್ನು ಮನಸ್ಸಿನಲ್ಲಿ ಹುಟ್ಟಿಸುತ್ತದೆ. ಆದರೆ ಅವು ಒಂದೂ ಈಡೇರುವುದಿಲ್ಲ. ಭಿಕ್ಷುಕ ರಾಜನಾಗುವುದು ಸಾಧ್ಯವೆ? ಅದು ಕನಸಿನಲ್ಲಿ ಮಾತ್ರ ಸಾಧ್ಯ. ಇಂಥ ಅಘಟಿತ ಘಟನಾವಳಿಗಳು ತಮ್ಮ ಬದುಕಿನಲ್ಲಿ ಘಟಿಸಲಿ ಎಂದು ಎಲ್ಲರೂ ಆಸೆಪಡುತ್ತಾರೆ. ಲಾಟರಿ ಟಿಕೆಟ್ ಕೊಳ್ಳುವ ಪ್ರತಿಯೊಬ್ಬನೂ ಬಂಪರ್ ಬಹುಮಾನ ತನಗೇ ಸಿಕ್ಕುವುದೆಂದು ಅದಕ್ಕೆ ತಕ್ಕಂತೆ ಕನಸನ್ನು ಹೊಸೆಯುತ್ತಾನೆ. ತನ್ನ ಕನಸನ್ನು ಇತರರೊಂದಿಗೆ ಹಂಚಿಕೊಂಡಾಗ ಅವರು, ಅದೊಂದು ತಿರುಕನ ಕನಸು ಎಂದು ಅಪಹಾಸ್ಯ ಮಾಡದೆ ಬಿಡುವುದಿಲ್ಲ.
ತಿರುಕನ ಕನಸಿನ ಕುರಿತು ಮುಪ್ಪಿನ ಷಡಕ್ಷರಿಯವರು ಒಂದು ಒಳ್ಳೆಯ ಕವಿತೆಯನ್ನು ನಮಗೆ ಕೊಟ್ಟುಹೋಗಿದ್ದಾರೆ. ಅದು ಸದಾ ನಮ್ಮನ್ನು ಎಚ್ಚರಿಸುತ್ತ ಇರುತ್ತದೆ.
ತಿರುಕನೊಬ್ಬ ಊರ ಮುಂದಿನ ಮುರುಕು ಧರ್ಮಶಾಲೆಯಲ್ಲಿ ಮಲಗಿಕೊಂಡಿದ್ದಾಗ ಅವನಿಗೊಂದು ಕನಸು ಬೀಳುತ್ತದೆ. ಊರ ರಾಜ ಸತ್ತು ಹೋಗಿದ್ದಾನೆ. ಅವನಿಗೆ ಉತ್ತರಾಧಿಕಾರಿ ಇರುವುದಿಲ್ಲ. ಊರ ಜನರು ಪಟ್ಟದ ಆನೆಗೆ ಮಾಲೆಯನ್ನು ಕೊಟ್ಟು ಊರಲ್ಲಿ ಬಿಡುತ್ತಾರೆ. ಅದು ಯಾರಿಗೆ ಮಾಲೆಯನ್ನು ಹಾಕುತ್ತದೋ ಅವರೇ ರಾಜ ಎಂದು ಘೋಷಿಸುತ್ತಾರೆ. ಅದು ಈ ಭಿಕ್ಷುಕನ ಕೊರಳಿಗೆ ಮಾಲೆಯನ್ನು ಹಾಕುತ್ತದೆ. ಅವನೇ ರಾಜನಾಗುತ್ತಾನೆ. ಪಟ್ಟದರಸಿಯರು ಬರುತ್ತಾರೆ, ಮಕ್ಕಳಾಗುತ್ತಾರೆ. ಹೀಗಿರುವಾಗ ಒಮ್ಮೆ ಶತ್ರು ರಾಜರು ದಾಳಿ ಮಾಡುತ್ತಾರೆ.
ಘನಘೋರ ಯುದ್ಧವಾಗುತ್ತದೆ. ಯುದ್ಧದಲ್ಲಿ ಇವನಿಗೆ ಏಟುಗಳು ಬೀಳುತ್ತವೆ. ನೋವಿನಿಂದ ಇವನು ಕೂಗಿಕೊಂಡಾಗ ಎಚ್ಚರವಾಗುತ್ತದೆ. ಅದುವರೆಗಿನದೆಲ್ಲ ಕನಸು ಎಂದು ಸಮಾಧಾನ ತಳೆಯುತ್ತಾನೆ. ಮರುದಿನ ಬೆಳಿಗ್ಗೆ ಎಂದಿನಂತೆ ಭಿಕ್ಷೆ ಎತ್ತಲು ಅವನು ಹೋಗುತ್ತಾನೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.