*ಒಬ್ಬರನ್ನು ಮೀರಿಸುವ ಇನ್ನೊಬ್ಬ
ಒಬ್ಬ ಕೆಟ್ಟ ವ್ಯಕ್ತಿ ಇರುತ್ತಾನೆ. ಅವನ ಮಾತನ್ನೆಲ್ಲ ವೇದವಾಕ್ಯವೆಂದು ಪರಿಗಣಿಸಿ ಪಾಲಿಸುವ ಅನುಯಾಯಿ ಇನ್ನೊಬ್ಬ ಇರುತ್ತಾನೆ. ಇವರಿಬ್ಬರೂ ಸೇರಿಬಿಟ್ಟರೆ ಅತ್ಯಂತ ಕೆಟ್ಟ ಸನ್ನಿವೇಶವನ್ನೇ ಸೃಷ್ಟಿಸಿಬಿಡುತ್ತಾರೆ. ಪೋಕರಿಗಳ ಪಟಾಲಾಂ ಅಂತಾರಲ್ಲ ಹಾಗೆ ಇದು. ಒಬ್ಬರನ್ನು ಮೀರಿಸುವ ಕೆಟ್ಟ ಸಾಹಸಗಳನ್ನೆಲ್ಲ ಇವರು ಮಾಡುತ್ತಿರುತ್ತಾರೆ. ಬೆಂಕಿಗೆ ಗಾಳಿ ಸೇರಿದಂತೆ ಇದು. ಇದನ್ನು ಕಂಡು ಚೋರ ಗುರು ಚಾಂಡಾಳ ಶಿಷ್ಯ ಎಂಬ ಮಾತು ಪ್ರಚಾರಕ್ಕೆ ಬಂತು.
ಯಾರಾದರೊಬ್ಬರು ದಾರಿ ತಪ್ಪುತ್ತಿದ್ದರೆ ಅವರನ್ನು ಸರಿದಾರಿಗೆ ತರುವಂಥ ಸ್ನೇಹಿತರು ಇರಬೇಕು. ಕೆಟ್ಟ ಕೆಲಸ ಮಾಡುವವರಿಗೇ ಬಹುಪರಾಕ್ ಹೇಳುವವರು ಇದ್ದಾಗ ಒಳ್ಳೆಯ ಕಾರ್ಯಗಳು ಒಂದೂ ಆಗುವುದಿಲ್ಲ.
ಇಂಥ ಕೆಟ್ಟ ಗುರು ಶಿಷ್ಯ ಪರಂಪರೆ ನಮ್ಮಲ್ಲಿ ಬಹಳ ಇದೆ. ಅದರಲ್ಲಿ ಒಂದು ಶಕುನಿ ಮತ್ತು ಕೌರವ. ಕೆಟ್ಟವರ ಜೋಡಿಯನ್ನು ಹೇಳುವಾಗ ರಾಮಾಯಣದ ಉದಾಹರಣೆಯನ್ನೂ ನೀಡುತ್ತಾರೆ. ಮಾರೀಚ ಮತ್ತು ರಾವಣನ ಜೋಡಿ ಅದು. ಮಾವ ಮಾರೀಚ ಅಳಿಯ ಪೋದ್ರೀಚ ಎಂಬುದು ಆ ಮಾತು.
ನಮ್ಮ ಪುರಾತನರು ಹೇಳುವ 64 ವಿದ್ಯೆಗಳಲ್ಲಿ ಚೋರ ವಿದ್ಯೆಯೂ ಒಂದು. ಅದನ್ನೊಂದು ಕಲೆ ಎಂದು ಪರಿಗಣಿಸಲಾಗಿದೆ. ಚೋರ ವಿದ್ಯೆಯನ್ನೂ ಜನೋಪಕಾರಕ್ಕೆ ಬಳಸುವ ದೊಡ್ಡ ವ್ಯಕ್ತಿಗಳು ರೂಪುಗೊಂಡರೆ ಚಾಂಡಾಳ ಶಿಷ್ಯಪರಂಪರೆ ಅಸ್ತಿತ್ವಕ್ಕೆ ಬರಲಾರದು.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.