*ಅತ್ಯಲ್ಪ ತೂಕ
ಗುಲಗುಂಜಿಯಷ್ಟೂ ಸಿಗಲಿಲ್ಲ ಎಂದೋ, ಗುಲಗುಂಜಿಯಷ್ಟೂ ಅವನಿಗೆ ಮಾನ ಇಲ್ಲವೆಂದೋ, ಗುಲಗುಂಜಿಯಷ್ಟೂ ಅಭಿಮಾನ ಇಲ್ಲವೆಂದೋ ಹೇಳುವುದನ್ನು ಕೇಳಿದ್ದೇವೆ. ಏನಿದು ಗುಲಗುಂಜಿ?
ಗುಲಗುಂಜಿ ಒಂದು ವೃಕ್ಷದ ಬೀಜ. ಕೆಂಬೂತದ ಕಣ್ಣಿನ ಹಾಗೆ ಕೆಂಪಗಿನ ಕಾಳು ಇದು ಮತ್ತು ಇದಕ್ಕೆ ಕಪ್ಪಾದ ಟೊಪ್ಪಿ ಇದೆ. ಇದನ್ನು ಬಂಗಾರವನ್ನು ತೂಗಲು ಉಪಯೋಗಿಸುತ್ತಾರೆ. ಹಳ್ಳಿಗಳ ಅಕ್ಕಸಾಲಿಗರು ಇಂದೂ ಈ ಗುಂಜಿಯಲ್ಲೇ ಬಂಗಾರದ ತೂಕವನ್ನು ಮಾಡುವುದು. ಬಂಗಾರದ ತೂಕವನ್ನು ಗುಂಜಿ, ಆಣೆ, ತೊಲೆ ಲೆಕ್ಕದಲ್ಲಿಹೇಳುವರು. ಒಂದು ಗುಂಜಿ ಎಂದರೆ ಅಂದಾಜು 122 ಮಿಲಿ ಗ್ರಾಂ. ಒಂದು ಆಣೆಗೆ 6 ಗುಂಜಿ. ಒಂದು ತೊಲೆಗೆ ಹದಿನಾರಾಣೆ. ಒಂದು ತೊಲೆ ಎಂದರೆ 11.650 ಗ್ರಾಂ.
ಅಪ್ಪಟ ಎಂದು ಹೇಳುವಾಗ ಹದಿನಾರಾಣೆ ತೂಕ ಎಂದು ಹೇಳುವುದನ್ನು ಕೇಳಿದ್ದೇವೆ. ತೂಕವನ್ನು ಆಣೆಗಳಲ್ಲಿ ಹೇಳುವುದು ಬಂಗಾರದ್ದು ಮಾತ್ರ.
ಗುಲಗುಂಜಿ ಅತ್ಯಲ್ಪವಾದರೂ ಅದು ತೂಗುವುದು ಅಮೂಲ್ಯ ಲೋಹವನ್ನು ಎಂಬುದನ್ನು ಮರೆಯಬಾರದು.
ಗುಲಗುಂಜಿ ಭೌತಿಕ ತೂಕವಾಗಿದ್ದು, ಮಾನ, ಅಭಿಮಾನ ಮೊದಲಾದವುಗಳಿಗೆ ಅನ್ವಯಿಸಿದಾಗ ಅದು ಅಭೌತಿಕವೂ ಧ್ವನ್ಯಾತ್ಮಕವೂ ಆಗುತ್ತದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.