*ಅಬಲರ ಮೇಲೆ ಸಬಲರ ದೌರ್ಜನ್ಯ

ಹಿಂದೆ ರಾಕ್ಷಸರೆಲ್ಲ ಶಕ್ತಿಸಂಪನ್ನರಾಗಲು ಬ್ರಹ್ಮದೇವನನ್ನು ಕುರಿತು ತಪಸ್ಸು ಮಾಡುತ್ತಿದ್ದರು. ಬ್ರಹ್ಮನು ಅವರಿಗೆ ವರಗಳನ್ನು ಕೊಡುತ್ತಿದ್ದ. ಶಸ್ತ್ರ, ಅಸ್ತ್ರಗಳನ್ನು ನೀಡುತ್ತಿದ್ದ. ಆ ಅಸ್ತ್ರಗಳಲ್ಲಿ ಬ್ರಹ್ಮಾಸ್ತ್ರ ಅತ್ಯಂತ ಶಕ್ತಿಶಾಲಿಯಾದುದು. ಅತ್ಯಂತ ಬಲಿಷ್ಠ ಎದುರಾಳಿಯನ್ನೂ ಅದು ನಾಶಮಾಡಿಬಿಡುತ್ತದೆ. ಅಂಥ ಮಹಾನ್‌ ಅಸ್ತ್ರವನ್ನು ಸಮರ್ಥರಾದ ಎದುರಾಳಿಗಳ ಮೇಲೆ ಪ್ರಯೋಗಿಸಬೇಕೆ ಹೊರತು ಕಲ್ಲು ತಾಗಿದರೂ ಸತ್ತುಹೋಗುವಂಥ ಗುಬ್ಬಚ್ಚಿಯ ಮೇಲೆ ಬಳಸಿದರೆ ಏನು ಬಂತು?
ಅಂದಿನ ಬ್ರಹ್ಮಾಸ್ತ್ರವನ್ನು ಇಂದಿನ ಪರಮಾಣು ಬಾಂಬ್‌ಗೆ ಹೋಲಿಸಬಹುದೇನೋ. ಪರಮಾಣು ಬಾಂಬ್‌ಗಳನ್ನು ಕೂಡ ತುಂಬ ಕಷ್ಟಪಟ್ಟು ಸಿದ್ಧಿಸಿಕೊಂಡಿರುತ್ತವೆ ರಾಷ್ಟ್ರಗಳು. ಈ ಬಾಂಬ್‌ಗಳನ್ನು ಹೊಂದಿರುವ ಕಾರಣಕ್ಕೇ ಅವು ಇತರ ಚಿಕ್ಕಪುಟ್ಟ ರಾಷ್ಟ್ರಗಳನ್ನು ಅಂಜಿಸುತ್ತವೆ.
ನಮ್ಮಲ್ಲಿ ಅಪಾರವಾದ ಶಕ್ತಿಯಿದೆ, ನಿಜ. ಆ ಶಕ್ತಿಯ ಪ್ರದರ್ಶನವನ್ನು ಮಾಡುವುದು ಹೇಗೆ? ಮುನ್ನೂರು ಕಿಲೋ ತೂಗುವ ಪೈಲವಾನ ಒಬ್ಬ ಸಣಕಲು ವ್ಯಕ್ತಿಯನ್ನು ಹೊಸಕಿ ಹಾಕಿ ತನ್ನ ಸಾಮರ್ಥ್ಯದ ಬಗ್ಗೆ ಹೆಮ್ಮೆಪಡುವುದು ಆತನ ವ್ಯಕ್ತಿತ್ವಕ್ಕೇ ಅಪಮಾನ. ಸಮರ್ಥ ಎದುರಾಳಿಯ ಮುಂದೆ ತನ್ನ ಬಲವನ್ನು ತೋರಿಸಿಕೊಳ್ಳಬೇಕು. ದಡ್ಡನ ಮುಂದೆ ಶಾಸ್ತ್ರವನ್ನು ಉಸುರಿದರೆ ಏನು ಬಂತು? ಕೋಣನ ಮುಂದೆ ಕಿನ್ನರಿ ನುಡಿಸಿದಂತೆ ಎಂಬ ಗಾದೆ ಮಾತೂ ಇಲ್ಲಿ ಸರಿಹೊಂದಬಹುದೇನೋ. ಒಂದು ದೇಶದ, ಒಂದು ರಾಜ್ಯದ ಅಧಿಕಾರವನ್ನು ಪಡೆಯುವುದು ಎಂದರೆ ಬ್ರಹ್ಮಾಸ್ತ್ರವನ್ನು ಪಡೆದಂತೆಯೇ. ಭ್ರಷ್ಟರನ್ನು ಮಟ್ಟಹಾಕಲು ಆ ಅಸ್ತ್ರವನ್ನು ಬಳಸಬೇಕು. ಏನೋ ಸಣ್ಣಪುಟ್ಟ ತಪ್ಪು ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸುವುದರಿಂದ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.