*ಅಬಲರ ಮೇಲೆ ಸಬಲರ ದೌರ್ಜನ್ಯ
ಹಿಂದೆ ರಾಕ್ಷಸರೆಲ್ಲ ಶಕ್ತಿಸಂಪನ್ನರಾಗಲು ಬ್ರಹ್ಮದೇವನನ್ನು ಕುರಿತು ತಪಸ್ಸು ಮಾಡುತ್ತಿದ್ದರು. ಬ್ರಹ್ಮನು ಅವರಿಗೆ ವರಗಳನ್ನು ಕೊಡುತ್ತಿದ್ದ. ಶಸ್ತ್ರ, ಅಸ್ತ್ರಗಳನ್ನು ನೀಡುತ್ತಿದ್ದ. ಆ ಅಸ್ತ್ರಗಳಲ್ಲಿ ಬ್ರಹ್ಮಾಸ್ತ್ರ ಅತ್ಯಂತ ಶಕ್ತಿಶಾಲಿಯಾದುದು. ಅತ್ಯಂತ ಬಲಿಷ್ಠ ಎದುರಾಳಿಯನ್ನೂ ಅದು ನಾಶಮಾಡಿಬಿಡುತ್ತದೆ. ಅಂಥ ಮಹಾನ್ ಅಸ್ತ್ರವನ್ನು ಸಮರ್ಥರಾದ ಎದುರಾಳಿಗಳ ಮೇಲೆ ಪ್ರಯೋಗಿಸಬೇಕೆ ಹೊರತು ಕಲ್ಲು ತಾಗಿದರೂ ಸತ್ತುಹೋಗುವಂಥ ಗುಬ್ಬಚ್ಚಿಯ ಮೇಲೆ ಬಳಸಿದರೆ ಏನು ಬಂತು?
ಅಂದಿನ ಬ್ರಹ್ಮಾಸ್ತ್ರವನ್ನು ಇಂದಿನ ಪರಮಾಣು ಬಾಂಬ್ಗೆ ಹೋಲಿಸಬಹುದೇನೋ. ಪರಮಾಣು ಬಾಂಬ್ಗಳನ್ನು ಕೂಡ ತುಂಬ ಕಷ್ಟಪಟ್ಟು ಸಿದ್ಧಿಸಿಕೊಂಡಿರುತ್ತವೆ ರಾಷ್ಟ್ರಗಳು. ಈ ಬಾಂಬ್ಗಳನ್ನು ಹೊಂದಿರುವ ಕಾರಣಕ್ಕೇ ಅವು ಇತರ ಚಿಕ್ಕಪುಟ್ಟ ರಾಷ್ಟ್ರಗಳನ್ನು ಅಂಜಿಸುತ್ತವೆ.
ನಮ್ಮಲ್ಲಿ ಅಪಾರವಾದ ಶಕ್ತಿಯಿದೆ, ನಿಜ. ಆ ಶಕ್ತಿಯ ಪ್ರದರ್ಶನವನ್ನು ಮಾಡುವುದು ಹೇಗೆ? ಮುನ್ನೂರು ಕಿಲೋ ತೂಗುವ ಪೈಲವಾನ ಒಬ್ಬ ಸಣಕಲು ವ್ಯಕ್ತಿಯನ್ನು ಹೊಸಕಿ ಹಾಕಿ ತನ್ನ ಸಾಮರ್ಥ್ಯದ ಬಗ್ಗೆ ಹೆಮ್ಮೆಪಡುವುದು ಆತನ ವ್ಯಕ್ತಿತ್ವಕ್ಕೇ ಅಪಮಾನ. ಸಮರ್ಥ ಎದುರಾಳಿಯ ಮುಂದೆ ತನ್ನ ಬಲವನ್ನು ತೋರಿಸಿಕೊಳ್ಳಬೇಕು. ದಡ್ಡನ ಮುಂದೆ ಶಾಸ್ತ್ರವನ್ನು ಉಸುರಿದರೆ ಏನು ಬಂತು? ಕೋಣನ ಮುಂದೆ ಕಿನ್ನರಿ ನುಡಿಸಿದಂತೆ ಎಂಬ ಗಾದೆ ಮಾತೂ ಇಲ್ಲಿ ಸರಿಹೊಂದಬಹುದೇನೋ. ಒಂದು ದೇಶದ, ಒಂದು ರಾಜ್ಯದ ಅಧಿಕಾರವನ್ನು ಪಡೆಯುವುದು ಎಂದರೆ ಬ್ರಹ್ಮಾಸ್ತ್ರವನ್ನು ಪಡೆದಂತೆಯೇ. ಭ್ರಷ್ಟರನ್ನು ಮಟ್ಟಹಾಕಲು ಆ ಅಸ್ತ್ರವನ್ನು ಬಳಸಬೇಕು. ಏನೋ ಸಣ್ಣಪುಟ್ಟ ತಪ್ಪು ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸುವುದರಿಂದ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.