*ಎಲ್ಲ ಕಣ್ಕಟ್ಟು, ಮೋಸ

ತ್ತರಕನ್ನಡದ ಕರಾವಳಿ ಭಾಗದಲ್ಲಿ ವ್ಯಾಪಾರ ವ್ಯವಹಾರದಲ್ಲಿ ಮೋಸ ಮಾಡುವವರನ್ನು ಕಂಡಾಗ `ಅವನೊಬ್ಬ ಗರುಡ ಬಂಗಾಲಿ' ಎಂದು ಹೇಳುತ್ತಾರೆ.ನಿನ್ನ ಗರುಡ ಬಂಗಾಲಿಯೆಲ್ಲ ನನ್ನ ಹತ್ತಿರ ನಡೆಯೋದಿಲ್ಲ’ ಎಂದೂ ಹೇಳುತ್ತಾರೆ.
`ಗರುಡ ಬಂಗಾಲಿ’ ಎಂಬುದು ಮೋಸ, ಅತಿ ಚಾಣಾಕ್ಷತೆ, ಕಣ್ಕಟ್ಟು ಇತ್ಯಾದಿ ಅರ್ಥಗಳನ್ನು ಇಲ್ಲಿ ನೀಡುತ್ತದೆ. ಇದು ಗಾರುಡ ಬಂಗಾಲಿ. ಮಾತಿನ ಸೌಲಭ್ಯ ಗುಣದಿಂದಾಗಿ ಇದು ಗರುಡ ಬಂಗಾಲಿ ಎಂದಾಗಿದೆ. ಗಾರುಡ ಎಂದರೆ ಇಂದ್ರಜಾಲ, ಕಣ್ಕಟ್ಟು ಎಂಬ ಅರ್ಥವಿದೆ.
ಗಾರುಡದ ಜೊತೆ ಬಂಗಾಲಿ ಏಕೆ ಸೇರಿತು? ಬಂಗಾಲ ಇಂದ್ರಜಾಲಿಕರಿಗೆ ಅಂದರೆ ಜಾದೂಗಾರರಿಗೆ ಪ್ರಸಿದ್ಧವಾದ ರಾಜ್ಯ. ಈ ಪ್ರಸಿದ್ಧಿಯಿಂದಾಗಿ ಬಂಗಾಲಿಗಳೆಲ್ಲ ಜಾದೂಗಾರರು ಎಂಬ ಭಾವ ವಿಸ್ತರಣೆಯಾಗಿದೆ.
ಇನ್ನು, ಗರುಡನೂ ಒಮ್ಮೆ ಕಣ್ಕಟ್ಟು ಮಾಡಿದವನೇ. ತನ್ನ ತಾಯಿ ವಿನುತೆಯನ್ನು ಸರ್ಪಗಳಿಂದ ಬಿಡಿಸಿಕೊಳ್ಳಲು ಅವರಿಗೆ ಅಮೃತವನ್ನು ನೀಡಬೇಕಿತ್ತು. ದೇವತೆಗಳಿಂದ ಅಮೃತದ ಕಲಶ ತಂದ ಗರುಡ ದರ್ಬೆಯನ್ನು ಹಾಸಿ ಅದರ ಮೇಲೆ ಅದನ್ನು ಇಡುತ್ತಾನೆ. ತಾಯಿ ತನ್ನ ವಶಕ್ಕೆ ಬಂದ ಕೂಡಲೇ ಕಲಶವನ್ನು ಎತ್ತಿ ಹಾರುತ್ತಾನೆ.
ಇದು ಮೋಸವಲ್ಲವೆ? ಅಮೃತದ ಆಸೆಗೆ ಹಾವುಗಳು ದರ್ಬೆಯನ್ನು ನೆಕ್ಕಿದಾಗ ಅವುಗಳ ನಾಲಿಗೆ ಸೀಳಿಹೋದವು ಎಂಬುದು ಪುರಾಣ.