ವರ್ಷ ಜಾರಿಹೋಗುತ್ತಿದೆ. ಗೋಡೆಯಲ್ಲಿ ಕ್ಯಾಲೆಂಡರ್ ಸುಂದರಿ ಬದಲಾಗುತ್ತಾಳೆ. ಮನೆಯ ಗೇಟಲ್ಲಿ ಅದೇ ಪೇಪರ್, ಅದೇ ಹಾಲಿನ ಹುಡುಗ, ಅದೇ ತರಕಾರಿಯವನ ಸೈಕಲ್, ಅದೇ ಕಸದ ಗಾಡಿ, ಮರದ ನೆರಳಲ್ಲಿ ಇಸ್ತ್ರಿಯವನು. ಆದರೆ ಉದಯಿಸುವ ಸೂರ್ಯ ಹಲವು ಹೊಸ ಹಂಬಲಗಳನ್ನು ಹೊತ್ತು ತರುತ್ತಿದ್ದಾನೆ. ಎಲ್ಲರಲ್ಲೂ ಒಂದೊಂದು ಸಂಕಲ್ಪ ತೊಡುವ ತುಡಿತ. ಎಂಥ ಸಿನಿಕನಾದರೂ, ಛೇ ಈ ವರ್ಷವಾದರೂ ಅಂಥದ್ದೆಲ್ಲ ಆಗುವುದಕ್ಕೆ ಬಿಡುವುದಿಲ್ಲ ಎಂದೋ, ಈ ವರ್ಷದಲ್ಲಿ ಇದನ್ನು ಮಾಡಿ ಮುಗಿಸುತ್ತೇನೆ ಎಂದೋ ಅಂದುಕೊಳ್ಳದೆ ಇರಲಾರ. ಇದೇ ಭೂಮಿ, ಇದೇ ಆಕಾಶ, ಆದರೆ ಗಮನವಿಟ್ಟು ನೋಡಿದಾಗ ಏನೋ ಹೊಸತು ಬೋಧೆಯಾಗುತ್ತದೆ. ಮನಸ್ಸು ಹಿಂದಕ್ಕೆ ಓಡುತ್ತದೆ. ಮುಂದಕ್ಕೆ ಜೀಕುತ್ತದೆ. ಹಿಂದಣ ಕಾಲವನ್ನು ಮುಂದಣ ತಕ್ಕಡಿಯಲ್ಲಿಟ್ಟು ತೂಗುವ ಈ ಹೊತ್ತಿನಲ್ಲಿ ಕಭಿ ಖುಷಿ ಕಭಿ ಗಮ್. ಬೇವು ಬೆಲ್ಲ ಎರಡೂ ಕೂಡಿಯೇ ಇರುವುದು ಬದುಕು. ಅದಕ್ಕೇ ನಾವು ಆಶಾವಾದಿಗಳಾಗಿರಬೇಕು. ಕಳೆದುಹೋದ ಕಾಲಘಟ್ಟದಲ್ಲಿ ಹಲವು ಒಳಿತುಗಳೂ ಇವೆ. ಈ ಇರುವುದೊಂದೇ ಭೂಮಿಯನ್ನು ಉಳಿಸಿಕೊಳ್ಳಲು ಪ್ಯಾರಿಸ್ ನಲ್ಲಿ ಸೇರಿದ್ದ ಜಗತ್ತಿನ ಎಲ್ಲ ದೇಶಗಳ ಪ್ರತಿನಿಧಿಗಳು ಒಂದಾಗಿದ್ದು ಕಳೆದ ವರ್ಷದ ದೊಡ್ಡ ಸಾಧನೆ. ಭೂಮಿಯ ಸುತ್ತ ಆಕಾಶಕಾಯಗಳೆಲ್ಲ ಸುತ್ತುತ್ತವೆ ಎಂಬ ನಂಬಿಕೆಯಿದ್ದ ಒಂದು ಕಾಲವಿತ್ತು. 1968ರ ವರ್ಷದ ಕೊನೆಯಲ್ಲಿ ಅಪೋಲೋ 8ರಲ್ಲಿದ್ದ ಮೂವರು ಗಗನಯಾತ್ರಿಗಳು ಚಂದ್ರನ ಸುತ್ತ ಪ್ರದಕ್ಷಿಣೆ ಹಾಕಿದರು. ಕರ್ನಲ್ ಫ್ರಾಂಕ್ ಬೋರ್ಮನ್ ಅಲ್ಲಿಂದಲೇ ಕೂಗಿ ಹೇಳಿದರು ಗುಡ್ ನೈಟ್, ಗುಡ್ ಲಕ್, ಎ ಮೆರಿ ಕ್ರಿಸ್್ಮಸ್ ದೇವರು ನಿಮ್ಮನ್ನೆಲ್ಲ ಆಶೀರ್ವದಿಸಲಿ. ಆ ಸುಂದರ ಭೂಮಿಯ ಮೇಲಿರುವ ನಿಮ್ಮನ್ನೆಲ್ಲ ಆಶೀರ್ವದಿಸಲಿ. ಅದೊಂದು ವಿಜ್ಞಾನದ ಗೆಲವಾಗಿತ್ತು. ವಿಜಯದ ಉನ್ಮತ್ತತೆಯ ಆ ತುರೀಯಾವಸ್ಥೆಯಲ್ಲೂ ದೇವರ ಅನೂಹ್ಯ ಶಕ್ತಿಯನ್ನು ಮರೆಯದ ವಿನಮ್ರತೆ ಆ ಮಾತುಗಳಲ್ಲಿತ್ತು. ಬೂದಿ ಬಣ್ಣದ ತಿಂಗಳನ ಅಂಗಳದಿಂದ ಬಿಳಿ ಮತ್ತು ನೀಲಿ ಬಣ್ಣದ ಭೂಮಿಯ ಸೌಂದರ್ಯವನ್ನು ಆಸ್ವಾದಿಸಿದ ಮೊದಲ ಸೌಭಾಗ್ಯ ಅವರದಾಗಿತ್ತು. ಈ ವೈಜ್ಞಾನಿಕ ಸತ್ಯದ ಹೊರತಾಗಿಯೂ ಚಂದ್ರನ ಮೇಲೆ ಕವಿತೆಗಳು ಬರುವುದು ನಿಲ್ಲಲಿಲ್ಲ. ಬೆಳದಿಂಗಳನ್ನು ಬಣ್ಣಿಸುವವರು ಬದಲಾಗಲಿಲ್ಲ. ಪ್ರೇಮಿಗಳ ವಿರಹ ವೇದನೆಯ ಏರಿಳಿತಗಳು ಹಾಗೆಯೇ ಇವೆ. ಕಳೆದ ವರ್ಷ ಅನೇಕ ದುರಂತಗಳು ನಡೆದವು. ಉಗ್ರರ ಅಟ್ಟಹಾಸ ನಿಲ್ಲಲೇ ಇಲ್ಲ. ಹಿಂಸಾಚಾರಕ್ಕೆಅಂಜಿದ ಜನ ವಲಸೆ ಹೋದರು. ಅನ್ಯ ದೇಶಗಳು ಅವರಿಗೆ ಗಡಿ ಬಂದ್ ಮಾಡಿದವು. ಕೊನೆಗೂ ಮಾನವೀಯತೆ ಅವರನ್ನು ಒಳಗೆ ಬಿಟ್ಟುಕೊಂಡಿತು. ಆ ವೇಳೆಗಾಗಲೇ ಶವಗಳು ಸಮುದ್ರ ದಂಡೆಗೆ ತೇಲಿಬರಲಾರಂಭಿಸಿದ್ದವು. ಸಾವಿನ ಎದುರು, ದುರಂತದ ಎದುರು ಯಾವ ಜಾತಿ ಧರ್ಮಗಳ ಗಡಿಗಳೂ ಇರುವುದಿಲ್ಲ. ವರ್ಷದ ಕೊನೆಯ ಭಾಗದಲ್ಲಿ ಬಂದ ಚೆನ್ನೈನ ದುರಂತ ಇದನ್ನು ಮತ್ತೊಮ್ಮೆ ಸಾಬೀತು ಮಾಡಿತು. ನೈಸರ್ಗಿಕ ವಿಪತ್ತು ಅಮೆರಿಕವನ್ನೂ ಬಿಡಲಿಲ್ಲ, ಇಂಗ್ಲಂಡನ್ನೂ ಬಿಡಲಿಲ್ಲ. ದೇಶದ ಹೊಸ ಪ್ರಧಾನಿ ಪ್ರಪಂಚದಾದ್ಯಂತ ಸುತ್ತಿದರು. ವರ್ಷದ ಕೊನೆಯಲ್ಲಿ ಅವರೂ ಒಂದು ಶಾಕ್ ನೀಡಿದರು. ರಷ್ಯಾ, ಅಫ್ಘಾನಿಸ್ತಾನಕ್ಕೆ ಹೋದವರು ಬರುವಾಗ ದಿಢೀರ್ ಎಂದು ಪಾಕಿಸ್ತಾನದಲ್ಲಿ ಇಳಿದರು. ಅಲ್ಲಿಯ ಪ್ರಧಾನಿಯ ಮೊಮ್ಮಗಳ ಮದುವೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇದು ಉಭಯ ದೇಶಗಳ ನಡುವಿನ ಸಂಬಂಧವನ್ನು ಮಧುರಗೊಳಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆ. ಇದರ ಫಲವನ್ನು ನಾವು ಈ ಹೊಸ ವರ್ಷದಲ್ಲಿ ಅನುಭವಿಸಬಹುದು. ಪ್ರಧಾನಿಯ ಪಾಕಿಸ್ತಾನದ ಭೆಟ್ಟಿಯನ್ನು ನೆನಪಿಗೆ ತಂದುಕೊಂಡಾಗ ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡು ಬೆರಗಾದೆನು ಕಾಣಾ ಗುಹೇಶ್ವರಾ… ಎಂಬ ಅಲ್ಲಮಪ್ರಭುಗಳ ವಚನ ನೆನಪಾಗುತ್ತದೆ. ದುಷ್ಟತನ ಎಲ್ಲೆಡೆಯೂ ಇದೆ. ಕೋಪ ಮತ್ತು ದ್ವೇಷದ ಧ್ವನಿ ದೊಡ್ಡದಾಗಿ ಕೇಳುತ್ತಿದೆ. ಮೌನವನ್ನು ಅಬ್ಬರವು ಮುಳುಗಿಸುತ್ತಿದೆ. ಒಳಿತಿನ ವಿಚಾರಗಳನ್ನು ದುರಂತ ಮತ್ತು ಅವಗಡಗಳು ತಡೆಗಟ್ಟಬಹುದು. ಆದರೆ ಯಾವತ್ತೂ ಪ್ರಗತಿಯ ಲಕ್ಷಣಗಳು ಉತ್ತಮ ಭವಿಷ್ಯದ ಕಡೆಗೆ ಬೆರಳುಮಾಡುತ್ತವೆ. ಅವನ್ನು ಕಣ್ಣು ಬಿಟ್ಟು, ಕಿವಿ ತೆರೆದು ಹೃದಯದಿಂದ ಕೇಳಿಸಿಕೊಳ್ಳಿ. ಇಲ್ಲದಿದ್ದರೆ ಅವು ನಿಮಗೆ ಲಭ್ಯವಾಗದೆ ಹೋಗಬಹುದು. ಸಹನೆ ಮತ್ತು ಶಮನ ನಮ್ಮ ವ್ಯಕ್ತಿತ್ವದ ಭಾಗವಾಗಬೇಕು. ಹೊಸ ವರ್ಷ ಎಲ್ಲರಿಗೂ ಶುಭವನ್ನುಂಟುಮಾಡಲಿ. ನಿಮ್ಮ ವಿಶ್ವಾಸದ ವಾಸುದೇವ ಶೆಟ್ಟಿ
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.