‘ಅವಿನ್ಯೂ ರೋಡಿನಲ್ಲಿ ಮುಲ್ಲಾ’ ಆರ್.ವಿಜಯರಾಘವನ್ ಅವರು ಬರೆದಿರುವ ಲೇಖನಗಳ ಸಂಕಲನ ಅವಿನ್ಯೂ ರೋಡಿನಲ್ಲಿ ಮುಲ್ಲಾ ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರುತ್ತದೆ ಎಂಬುದನ್ನು ಹೇಳುವುದು ಕಷ್ಟ. ಅದಕ್ಕಾಗಿಯೇ ಅದನ್ನೊಂದು ಸಂಕೀರ್ಣ ಎಂದು ಕರೆಯಬಹುದು. ಏಕೆಂದರೆ ಇದರಲ್ಲಿ ಕೃತಿ ವಿಮರ್ಶೆ ಇದೆ, ಮೀಮಾಂಸೆ ಇದೆ, ವ್ಯಕ್ತಿ ಚಿತ್ರಗಳಿವೆ, ಚಿಂತನೆ ಇದೆ, ಮುನ್ನುಡಿಗಳಿವೆ. ಇದರಲ್ಲಿಯ ಮೊದಲ ಲೇಖನ ಕೆ.ಸತ್ಯನಾರಾಯಣ ಅವರ ‘ಈ ತನಕದ ಕಥೆಗಳು ಮತ್ತು ವಿಚ್ಛೇದನಾ ಪರಿಣಯ’ ಎಂಬ ಕಾದಂಬರಿಯ ಕುರಿತಿದೆ. ಸತ್ಯನಾರಾಯಣರಿಗೆ ಈ ಲೋಕದಲ್ಲಿ ಚೆಲ್ಲಾಪಿಲ್ಲಿ ಬಿದ್ದಿರುವ ಬಹುಜನರು ಎತ್ತಿಕೊಳ್ಳಲು ಬಯಸದ ಬದುಕಿನ ಪ್ರಶ್ನೆಗಳು ಎಲ್ಲೆಲ್ಲಿಯೂ ಕಾಣಿಸುತ್ತವೆ. ಅವುಗಳ ನಿರ್ವಹಣೆ ಕಷ್ಟ. ಆದರೂ ಆ ಪ್ರಶ್ನೆಗಳನ್ನು ಮಸೀದೆಯ ಮುಂದು, ಗೇಟ್‌ವೇಯ ಮುಂದು ಚೆಲ್ಲಿದ ಕಾಳುಗಳನ್ನು ಪಾರಿವಾಳು ಲಗುಬಗೆಯಿಂದ ಎತ್ತಿಕೊಳ್ಳುವಂತೆ ಬೇಗನೆ ಹೆಕ್ಕಿ ನಮ್ಮ ಮುಂದೆ ಚೆಲ್ಲಿಬಿಡುತ್ತಾರೆ. ಬೈತಿಟ್ಟ ಕಾಗೆಯದೇ ಕಣ್ಣು ತಪ್ಪಿಸಿ ನೆಲದಲ್ಲಿ ಉಳಿದ ನೆಲಗಡಲೆಯ ಕಾಯಿಗಳಂತಹ ಉತ್ತರಗಳನ್ನು ತಮ್ಮ ನಿರ್ವಹಣೆಯ ಪರಿಯಲ್ಲಿಟ್ಟು ಹೆಕ್ಕಲು ಓದುಗನಿಗೆ ಬಿಡುತ್ತಾರೆ ಎನ್ನುವ ವಿಜಯರಾಘವನ್ ಅವರ ವಿಮರ್ಶೆಯ ಪರಿಕಲ್ಪನೆಯ ಸೊಗಸು ಗಮನ ಸೆಳೆಯುತ್ತದೆ. ಹಾಗೆಯೇ, ‘ಕಥೆಯನ್ನು ಅನುಭವಿಸುವವ ಕಥೆಯ ಹಿಂದಿನ ವೇದನೆಯನ್ನು ಅನುಭವಿಸುವುದಿಲ್ಲ ಎನ್ನುವ ಅಭಿಪ್ರಾಯವೊಂದು ಇಲ್ಲಿ ಪುನರುಕ್ತಗೊಳ್ಳುತ್ತದೆ. ಆ ನೋವಿನ ಬಗಲಿಗೇ ಬದುಕು ಇಟ್ಟುಕೊಂಡಿರುವ ಮಾರ್ದವತೆಯ ರಂಗುಗಳು ಶಾರದಾ ತನ್ನ ಅತ್ತೆಗೂ, ಅತ್ತೆ ನಿರೂಪಕನಿಗೂ ಕೊಟ್ಟಿದ್ದು. ಬದುಕನ್ನು ಕುರಿತು ಕಥೆಗಾರ ಸತ್ಯನಾರಾಯಣ ರೂಪಿಸಿಕೊಂಡಿರುವ ಮನೋಧರ್ಮವೂ ಇಂಥದ್ದೇ’ ಎನ್ನುವ ಮಾತನ್ನು ಹೇಳಿದ್ದಾರೆ. ಜೊತೆಗೆ, ರೂಢಿಗತವಾದ ನಂಬಿಕೆ ಅಪನಂಬಿಕೆಗಳನ್ನು ಸದಾ ಶೋಧಿಸುವುದನ್ನು ಇಷ್ಟಪಡುತ್ತಾರೆ ಎಂದಿದ್ದಾರೆ. ಸತ್ಯನಾರಾಯಣ ಅವರ ಸೃಜನ ಕ್ರಿಯೆಯ ರಹಸ್ಯವನ್ನು ಬಯಲು ಮಾಡುತ್ತಿರುವ ತಣ್ಣಗಿನ ಶೈಲಿ ಇದು. ಅಂತಃಪಠ್ಯ, ಕಲ್ಚುರಲ್ ಡಿಸ್ಕೋರ್ಸ್, ಎಪಿಟೋಮೈಸ್, ಅನ್‌ಕಾಂಪ್ರಮೈಸಿಂಗ್ ಎಂಬಂಥ ಪಾರಿಭಾಷಿಕಗಳನ್ನು ವಿಜಯರಾಘವನ್ ಅವರು ವಿಮರ್ಶೆಗೆ ಸೇರಿಸುತ್ತಾರೆ. ಕನ್ನಡದ ಪ್ರಮುಖ ಕತೆಗಾರರಾಗಿರುವ ಸತ್ಯನಾರಾಯಣ ಅವರು ಉಳಿದವರಿಂದ ಎಲ್ಲಿ ಬೇರೆಯಾಗುತ್ತಾರೆ ಎಂಬುದನ್ನು ತುಲನಾತ್ಮಕವಾಗಿ ಗುರುತಿಸಲು ಲೇಖಕರು ಇಲ್ಲಿ ಪ್ರಯತ್ನಿಸುತ್ತಾರೆ. ಕಥೆಗಳ ಸ್ವಭಾವವೇ ಹೀಗೆ. ಇನ್ನೊಬ್ಬರ ಕಥೆ ನಮ್ಮದಾಗಿ ಬಿಡುತ್ತೆ. ಅದರ ಹಿಂದಿರುವ ವಿಷಾದ, ನೋವು ನಮ್ಮದಾಗಲ್ಲ ಎನ್ನುವ ಮಾತು ‘ಭಟ್ಟರು ಕಳಿಸಿದ ಕಥೆ’ಯಲ್ಲಿದೆ. ಇದು ಬಹುಶಃ ತುಂಬ ಮುಖ್ಯವಾಗಿ ಸತ್ಯನಾರಾಯಣರಲ್ಲಿ ಅಥವಾ ಆ ಸಂವೇದನೆಯನ್ನು ಉಳ್ಳ ಬರಹಗಾರರಲ್ಲಿ ಹುಟ್ಟಬಹುದಾದ ಹಪಹಪಿಕೆ. ಪ್ರಾಯಶಃ, ನಮ್ಮ ಮೇರು ಕಥೆಗಾರರಾದ ಅನಂತಮೂರ್ತಿಯವರ ಕಥೆಗಾರಿಕೆಗೂ, ಸತ್ಯನಾರಾಯಣ ಮತ್ತು ಅವರಂಥವರ ಕಥೆಗಾರಿಕೆಗೂ ಇರುವ ಭಿನ್ನತೆಯನ್ನು ಇಂಥಲ್ಲಿ ಕಾಣಬಹುದೇನೋ ಎಂದು ಹೇಳಿದ್ದಾರೆ. ಸತ್ಯನಾರಾಯಣರ ಶೈಲಿಯ ಬಗೆಗೆ ವಿಜಯರಾಘವನ್ ಹೇಳುವ ಮಾತು ಕುತೂಹಲಕಾರಿಯಾಗಿದೆ. ‘… ತಮ್ಮದೇ ದಾರಿಯನ್ನು ಕಂಡುಕೊಂಡವರು. ಅತಿಯಾಗಿ ಅತಿಕ್ರಮಣ ಮಾಡದವರು. ಕಥೆಯ ಶರೀರದಲ್ಲಿ ಇದು ತಮ್ಮದು ಎನ್ನುವ ಗುರುತುಗಳನ್ನು ಇಡಲು ಬಲ್ಲವರು. ಕಥೆಯನ್ನ ತಾವಷ್ಟೇ ಹೇಳದೆ ಹಲವರ ಕೈಲಿ ಹಲವು ಕಥೆಗಳನ್ನು ಹೇಳಿಸುವುದರ ಮೂಲಕ ತನಗೂ ಕಥೆಗೂ ಅಗತ್ಯವಾದ ದೂರವನ್ನು ಉಳಿಸಿಕೊಳ್ಳುವವರು. ಹಾಗೆಯೇ ಕಥೆಗಳಿಂದಲೇ ಲಭ್ಯವಾಗುವ ಅರಿವಿನ ಪರಿಕರಗಳನ್ನು ಓದುಗ ಬಳಸದೇ ಹೋಗಿಬಿಡುವನೆಂದು ಗುಮಾನಿ ಪಡುವವರು. ಅಂಜುವವರು…’ ಆಳವಾದ ಅನುಸಂಧಾನ ಇದ್ದಾಗ ಮಾತ್ರ ಇಂಥ ಮಾತುಗಳನ್ನು ಬರೆಯುವುದು ಸಾಧ್ಯವಾಗುತ್ತದೆ. ಯಾರೂ ಬರೆಯದ ಕತೆಯನ್ನು ಕತೆಗಾರನೊಬ್ಬ ಬರೆಯುವ ಸಾಧ್ಯತೆ ಇದೆಯೇ ಎಂದು ಪ್ರಶ್ನಿಸಿಕೊಳ್ಳುತ್ತ, ನಮ್ಮ ಕಥೆಗಳೆಲ್ಲವೂ ಈಗಾಗಲೆ ಕಥಿಸಲ್ಪಟ್ಟ ಕಥೆಗಳ ಮೇಳಗಳು ಎಂದು ಹೇಳುತ್ತಾರೆ. ಕತೆಯ ಹುಟ್ಟಿನ ಬಗೆಗೆ ವಿಜಯರಾಘವನ್ ಕುತೂಹಲಕಾರಿಯಾಗಿ ಹೇಳುತ್ತಾರೆ. ಸ್ಥಳೀಯ ಸಮುದಾಯಗಳಲ್ಲಿ ಜಂಗಮತ್ವ ಪಡೆದು ಸಂಚರಿಸುತ್ತಿರುವ ಎಷ್ಟೋ ಬದುಕಿನ ತುಕಡಿಗಳನ್ನು ಒಂದುಗೂಡಿಸುವ- ಕಥೆಗಾರನೆನಿಸಿಕೊಳ್ಳುವ- ನಿರೂಪಕ ಸಮಷ್ಟಿಯ ಅನುಭವಗಳಿಗೆ ತೆರೆದುಕೊಂಡಿರುತ್ತಾನೆ. ಹಾಗಾಗಿ ಅವನು ಸಮಷ್ಟಿಯ ಅನುಭವದ ಭಾಗವೇ ಆಗಿರುತ್ತಾನೆ. ಅಂತು ಅನುಭವಗಳ ಭಾಗವಾದ ನಿರೂಪಕ ಆ ಅನುಭವಗಳನ್ನು ಎಷ್ಟರ ಮಟ್ಟಿಗೆ ತನ್ನ ಭಾಗವಾಗಿ ಮಾಡಿಕೊಂಡಿರುತ್ತಾನೆ? ಎಷ್ಟರ ಮಟ್ಟಿಗೆ ಅದಕ್ಕೆ ತಾನು ಪ್ರತಿಕ್ರಿಯೆ ತೋರುತ್ತಿರುತ್ತಾನೆ? ಎಷ್ಟರ ಮಟ್ಟಿಗೆ ಅದರೊಂದಿಗೆ ಸಂಘರ್ಷದಲ್ಲಿರುತ್ತಾನೆ? ಇವೆಲ್ಲವೂ ಕೂಡಿದ ಇನ್ನೊಂದು ಕಥೆಯಾಗಿ ಹೊರಬರುತ್ತದೆ. ಈ ಕೃತಿಯಲ್ಲಿ ವಿಜಯರಾಘವನ್ ಅವರು ಲಂಡೇಗಳು ಎಂಬ ಪಾಷ್ತೂನ್ ಮಹಿಳಾ ಜನಪದರು ಸೃಷ್ಟಿಸಿದ ದ್ವಿಪದಿಗಳನ್ನು ಪರಿಚಯಿಸುತ್ತಾರೆ. ರಜೂಲ ಮತ್ತು ವಲೂಶಾಹಿ ಎಂಬ ಹಾಡುಗಬ್ಬವನ್ನು ಕುರಿತು ಬರೆದಿದ್ದಾರೆ. ಸಂತಾಲರ ಹಾಡುಗಳನ್ನು ಪರಿಚಯಿಸಿದ್ದಾರೆ. ಸೂಫಿ ಕವಿ ಹಫೀಝ್‌ನನ್ನು ಕುರಿತು ಹೇಳಿದ್ದಾರೆ. ಕಿ.ರಂ, ಕುವೆಂಪು, ಸ.ರಘುನಾಥ, ಡಾಮ್ ಮೊರೇಸ್ ಅವರನ್ನು ಕುರಿತು ಬರೆದಿದ್ದಾರೆ. ಇವೆಲ್ಲವೂ ವಿಜಯರಾಘವನ್ ಅವರ ಓದಿನ ವ್ಯಾಪಕತೆಯನ್ನು ಸೂಚಿಸುತ್ತದೆ. ಸಾಹಿತ್ಯದ ಅಭ್ಯಾಸಿಗಳು ಇದನ್ನು ನಿರ್ಲಕ್ಷಿಸಲಾಗದು. ಪ್ರ: ಎಸ್.ಎಲ್.ಎನ್.ಪಬ್ಲಿಕೇಷನ್, ಬೆಂಗಳೂರು. ಪುಟಗಳು ೧೪೪, ಬೆಲೆ ₹ ೧೦೦.