*ಪುಸ್ತಕದ ಹುಳುಗಳನ್ನು ಹೀಗೆ ಕರೆಯುತ್ತಾರೆ
ಸದಾ ಪುಸ್ತಕದಲ್ಲಿ ತಲೆ ಹುದುಗಿಸಿಕೊಂಡು ಕುಳಿತವರನ್ನು ಕಂಡಾಗ `ಒಳ್ಳೆ ಕೂಚಂಭಟ್ಟನ ಹಾಗೆ ಕುಂತಿದ್ದಾನೆ ನೋಡು' ಎಂದು ಅಪಹಾಸ್ಯ ಮಾಡುವುದನ್ನು ಕೇಳಿದ್ದೇವೆ. ಇದನ್ನೇ ಇನ್ನೂ ಸ್ವಾರಸ್ಯಕರವಾಗಿ,
ಓದಿ ಓದಿ ಕೆಟ್ಟು ಹೋದ ಕೂಚು ಭಟ್ಟ, ಓದಲಿಲ್ಲ ನಮ್ಮ ರೈತ ಅನ್ನ ಕೊಟ್ಟ’ ಎಂದು ಹೇಳುವವರೂ ಇದ್ದಾರೆ. ಅತಿಯಾದ ಓದಿನ ನಿರರ್ಥಕತೆ, ಓದಿಲ್ಲದಿದ್ದರೂ ಸಮಾಜಕ್ಕೆ ಉಪಯುಕ್ತವಾಗಿ ಬದುಕಬಹುದೆಂಬ ಆಶಾದಾಯಕ ಮಾತು ಇದರಲ್ಲಿದೆ.
ದೇಶ ನೋಡು ಕೋಶ ಓದು ಎಂಬ ಮಾತೇನೋ ಇದೆ. ಆದರೆ ಬರೀ ಓದಿನಿಂದಲೇ ಎಲ್ಲ ಅರಿವೂ ಸಾಧ್ಯ ಎಂಬ ಕಲ್ಪನೆ ತಪ್ಪು. ನಿಜ ಜೀವನದ ಅನುಭವದಿಂದ ನಾವು ಕಲಿಯುವುದು ಬಹಳ ಇದೆ. ಅದನ್ನು ಮರೆತರೆ ಜ್ಞಾನ ಅಪೂರ್ಣ. ದೊಡ್ಡ ದೊಡ್ಡ ಪದವಿ ಪಡೆದವರಿಗೂ ಗೊತ್ತಿರದ ಸಾಮಾನ್ಯ ಜ್ಞಾನ ನಿರಕ್ಷರಿಗಳಾದ ನಮ್ಮ ಹಳ್ಳಿಗರಲ್ಲಿ ಇದೆ. ತೇಜಸ್ವಿಯರ ಕರ್ವಾಲೋ ಕಾದಂಬರಿಯಲ್ಲಿಯ ಒಂದು ಪಾತ್ರ ಮಂದಣ್ಣ. ಹಳ್ಳಿಯ ಗಮಾರನಂತೆ ಕಾಣುವ ಅವನಲ್ಲಿ ಒಬ್ಬ ವಿಜ್ಞಾನಿಯೇ ಇದ್ದಾನೆ ಎಂಬುದನ್ನು ತೇಜಸ್ವಿ ತೋರಿಸಿಕೊಡುತ್ತಾರೆ. ಮನಸ್ಸಿನ ಸೂಕ್ಷ್ಮತೆಯನ್ನು ನಾವು ಕಳೆದುಕೊಳ್ಳದೆ ಇದ್ದರೆ ಅನುಕ್ಷಣವೂ ಹೊಸತನ್ನು ನಾವು ಗ್ರಹಿಸುತ್ತಲೇ ಹೋಗಬಹುದು.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.