*ಪುಸ್ತಕದ ಹುಳುಗಳನ್ನು ಹೀಗೆ ಕರೆಯುತ್ತಾರೆ

ದಾ ಪುಸ್ತಕದಲ್ಲಿ ತಲೆ ಹುದುಗಿಸಿಕೊಂಡು ಕುಳಿತವರನ್ನು ಕಂಡಾಗ `ಒಳ್ಳೆ ಕೂಚಂಭಟ್ಟನ ಹಾಗೆ ಕುಂತಿದ್ದಾನೆ ನೋಡು' ಎಂದು ಅಪಹಾಸ್ಯ ಮಾಡುವುದನ್ನು ಕೇಳಿದ್ದೇವೆ. ಇದನ್ನೇ ಇನ್ನೂ ಸ್ವಾರಸ್ಯಕರವಾಗಿ,ಓದಿ ಓದಿ ಕೆಟ್ಟು ಹೋದ ಕೂಚು ಭಟ್ಟ, ಓದಲಿಲ್ಲ ನಮ್ಮ ರೈತ ಅನ್ನ ಕೊಟ್ಟ’ ಎಂದು ಹೇಳುವವರೂ ಇದ್ದಾರೆ. ಅತಿಯಾದ ಓದಿನ ನಿರರ್ಥಕತೆ, ಓದಿಲ್ಲದಿದ್ದರೂ ಸಮಾಜಕ್ಕೆ ಉಪಯುಕ್ತವಾಗಿ ಬದುಕಬಹುದೆಂಬ ಆಶಾದಾಯಕ ಮಾತು ಇದರಲ್ಲಿದೆ.
ದೇಶ ನೋಡು ಕೋಶ ಓದು ಎಂಬ ಮಾತೇನೋ ಇದೆ. ಆದರೆ ಬರೀ ಓದಿನಿಂದಲೇ ಎಲ್ಲ ಅರಿವೂ ಸಾಧ್ಯ ಎಂಬ ಕಲ್ಪನೆ ತಪ್ಪು. ನಿಜ ಜೀವನದ ಅನುಭವದಿಂದ ನಾವು ಕಲಿಯುವುದು ಬಹಳ ಇದೆ. ಅದನ್ನು ಮರೆತರೆ ಜ್ಞಾನ ಅಪೂರ್ಣ. ದೊಡ್ಡ ದೊಡ್ಡ ಪದವಿ ಪಡೆದವರಿಗೂ ಗೊತ್ತಿರದ ಸಾಮಾನ್ಯ ಜ್ಞಾನ ನಿರಕ್ಷರಿಗಳಾದ ನಮ್ಮ ಹಳ್ಳಿಗರಲ್ಲಿ ಇದೆ. ತೇಜಸ್ವಿಯರ ಕರ್ವಾಲೋ ಕಾದಂಬರಿಯಲ್ಲಿಯ ಒಂದು ಪಾತ್ರ ಮಂದಣ್ಣ. ಹಳ್ಳಿಯ ಗಮಾರನಂತೆ ಕಾಣುವ ಅವನಲ್ಲಿ ಒಬ್ಬ ವಿಜ್ಞಾನಿಯೇ ಇದ್ದಾನೆ ಎಂಬುದನ್ನು ತೇಜಸ್ವಿ ತೋರಿಸಿಕೊಡುತ್ತಾರೆ. ಮನಸ್ಸಿನ ಸೂಕ್ಷ್ಮತೆಯನ್ನು ನಾವು ಕಳೆದುಕೊಳ್ಳದೆ ಇದ್ದರೆ ಅನುಕ್ಷಣವೂ ಹೊಸತನ್ನು ನಾವು ಗ್ರಹಿಸುತ್ತಲೇ ಹೋಗಬಹುದು.