*ಆಯ್ಕೆ ಮಾಡಿಕೊಳ್ಳುವಲ್ಲಿ ಗೊಂದಲ
ಕರಿಯ ಎತ್ತು ಕಾಳ, ಬಿಳಿಯ ಎತ್ತು ಬೆಳ್ಳ. `ಕಾಳನನ್ನು ದೂರುವುದು ಬೇಡ, ಬೆಳ್ಳನನ್ನು ಹೊಗಳುವುದು ಬೇಡ’ ಎಂದರೆ ಎರಡೂ ಸಮಾನ ತಪ್ಪು ಮಾಡಿದವೇ. ಕಾಳ ಸರಿಯಾಗಿ ಮಾತು ಕೇಳುತ್ತಾನೆ ಎನ್ನುವಂತಿಲ್ಲ, ಬೆಳ್ಳ ನಡೆಯನ್ನು ತಪ್ಪುವುದಿಲ್ಲ ಎನ್ನುವಂತಿಲ್ಲ. ಇಬ್ಬರೂ ಸಮಾನ ತಪ್ಪುಗಾರರೇ.
ನಮ್ಮ ನಿತ್ಯ ಜೀವನದಲ್ಲೂ ಕಾಳ, ಬೆಳ್ಳ ಎದುರಾಗುತ್ತಾರೆ. ನಾವು ಅತ್ಯುತ್ತಮವಾದುದನ್ನೇ ಆಯ್ಕೆಮಾಡಿಕೊಳ್ಳಬೇಕು ಎಂದು ಬಯಸುತ್ತೇವೆ. ಯಾರನ್ನು ಆಯ್ಕೆ ಮಾಡಬೇಕೆಂದರೂ ಅವರಲ್ಲಿ ಒಂದೊಂದು ಲೋಪ. ಅವನನ್ನು ಹೊಗಳುವಂತಿಲ್ಲ, ಇವನನ್ನು ತೆಗಳುವಂತಿಲ್ಲ. ಎಲ್ಲರೂ ಒಂದೇ ರೀತಿಯ ಸಾಮರ್ಥ್ಯದವರು. ಆದರೆ ನಮಗೆ ಬೇಕಾದಂಥ ಸಾಮರ್ಥ್ಯ, ಪರಿಣತಿ ಯಾರೊಬ್ಬರಲ್ಲೂ ಇಲ್ಲ.
ಕಾಳ ಮತ್ತು ಬೆಳ್ಳ ಇಲ್ಲಿ ಸಂಕೇತ ಮಾತ್ರ. ಕಾಳ ಎನ್ನುವುದು ಕಪ್ಪು, ಕೆಟ್ಟದ್ದು, ಅನಿಷ್ಟವಾದದ್ದು…. ಹೀಗೆ ಬೇಡದಿರುವುದೆಲ್ಲ ಅದರಲ್ಲಿ ಸೇರುತ್ತದೆ. ಬೆಳ್ಳ ಎಂದರೆ ಬಿಳಿಯದು, ಶುಭ್ರವಾದುದು, ಪರಿಶುದ್ಧವಾದುದು… ಹೀಗೆ ಬೇಕೆನಿಸುವುದೆಲ್ಲ ಅದರಲ್ಲಿ ಸೇರಿರುತ್ತದೆ. ಆದರೆ ವರ್ತಮಾನದ ದುರಂತವೆಂದರೆ ಕಾಳ-ಬೆಳ್ಳರಲ್ಲಿ ಅಂತರವೇ ಮಾಯವಾಗಿರುವುದು. ಇಬ್ಬರೂ ಒಂದೇ ಅನ್ನಿಸಿದಾಗ ಭವ ಎನ್ನುವುದು ಬಂಧನವೆನ್ನಿಸುತ್ತದೆ.
ಕಾಳ-ಬೆಳ್ಳ ಎನ್ನುವುದನ್ನು ಗುಣಗಳನ್ನಾಗಿ ಗ್ರಹಿಸಿದಾಗ ಪ್ರತಿಯೊಬ್ಬರಲ್ಲೂ ಈ ಗುಣಗಳು ಇರುತ್ತವೆ. ಕಾಳನನ್ನು ಮೆಟ್ಟಿ, ಬೆಳ್ಳನನ್ನು ಎತ್ತಿಕಟ್ಟಿದಾಗ ಮಾತ್ರ ಈ ಭವಬಂಧನದಿಂದ ಸುಲಭವಾಗಿ ಪಾರಾಗಬಹುದು ಎನ್ನುವುದು ಅನುಭವಿಗಳ ಮಾತು. ಎಲ್ಲರ ತುಡಿತವೂ ಈ ಕತ್ತಲಿನಿಂದ ಬೆಳಕಿನ ಕಡೆ ಸಾಗುವುದೇ ಆದಾಗ ಜಗತ್ತು ಸುಂದರ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.