ಕ
ಹೊಸ ತಲೆಮಾರಿನ ಕತೆಗಾರರಲ್ಲಿ ಬಹಳ ಭರವಸೆ ಮೂಡಿಸಿರುವ ವಿಕ್ರಮ ಹತ್ವಾರ ಅವರ ‘ಝೀರೋ ಮತ್ತು ಒಂದು’ ಕಥಾಸಂಕಲನದ ಒಂದು ಕತೆಯಲ್ಲಿ ‘ನಾನು ಬರೆಯುತ್ತಿರುವ ಕಥೆ ನಿಜದಲ್ಲಿ ಕಾಣಿಸತೊಡಗಿದೆ. ಕಲ್ಪಿಸಿಕೊಂಡ ಪಾತ್ರಗಳೆಲ್ಲ ನಿಜದಲ್ಲಿ ಕಾಣಿಸುತ್ತಿವೆ. ನಿಜದಲ್ಲಿ ಕಾಣಿಸುತ್ತಿದ್ದವೆಲ್ಲ ಕಥೆಯೆನಿಸತೊಡಗಿದೆ. ಬದುಕು, ಸತ್ಯ, ಕಥೆ, ಮಿಥ್ಯೆ ಎಲ್ಲವೂ ಮಿಲತಗೊಂಡಿವೆ. ಕಥೆಯಲ್ಲಿ ಸತ್ಯವೂ ಇಲ್ಲ; ಮಿಥ್ಯೆಯೂ ಇಲ್ಲ’.
ಬಹುಶಃ ಎಲ್ಲ ಕಥೆಗಾರ ಅನುಭವಿಸುವ ಒಳತೋಟಿ ಇದಾಗಿರಬಹುದು ಮತ್ತು ಈ ಮೂಲಕ ಕಥೆಗಳಿಗೊಂದು ವ್ಯಾಖ್ಯೆಯನ್ನು ನೀಡಲು ಹತ್ವಾರ ಇಲ್ಲಿ ಪ್ರಯತ್ನಿಸಿರಬಹುದು.
ಬದುಕಿನ ಸಾರ್ಥಕತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹತ್ವಾರ ಇಲ್ಲಿಯ ಕಥೆಗಳಲ್ಲಿ ಎತ್ತುತ್ತಾರೆ. ಬದುಕೆಂದರೆ ನಾವು ಅನುಭವಿಸಿದ್ದೋ ಇಲ್ಲ ಅನುಭಾವವೋ? ಇಂಥದ್ದೊಂದು ಪ್ರಶ್ನೆ ‘ಪೇಣಿ’ ಕಥೆಯಲ್ಲಿ ಮೂಡುತ್ತದೆ. ಸಾವಿತ್ರಮ್ಮಗೆ ತಿನ್ನುವುದಕ್ಕೆಂದು ಪೇಣಿಯನ್ನು ಕೊಟ್ಟರೆ ಅವರು, ‘….ತಮ್ಮ ಅಂಗೈಯನ್ನು ಮುಖದ ಹತ್ತಿರ ಒಯ್ದು, ಪೇಣಿಯ ಪುಡಿಯನ್ನು ನಯವಾಗಿ ಪರೀಕ್ಷಿಸುವವರಂತೆ ಒಮ್ಮೆ ಮೂಸಿ ಕೆಳ ಚೆಲ್ಲಿದರು! ಇಲ್ಲಿಗೆ ಬದುಕಿನ ಮತ್ತೊಂದು ತವಕ ತೀರಿತು ಎಂಬಂತೆ ಕೈಗಂಟಿದ್ದ ಪೇಣಿಯ ಪುಡಿಯನ್ನು ಎರಡೂ ಕೈಗಳಿಂದ ಒರೆಸಿಕೊಂಡುಬಿಟ್ಟರು…’ ಹೇಗೆ ಪೇಣಿಯ ರುಚಿಯನ್ನು ಅರಿಯಲು ಅದನ್ನು ತಿನ್ನಲೇಬೇಕಿಲ್ಲವೋ ಹಾಗೆಯೇ ಬದುಕಿನ ಎಷ್ಟೋ ರಹಸ್ಯಗಳನ್ನು ಸ್ವತಃ ಅನುಭವಿಸಲೇಬೇಕಿಲ್ಲ. ಅನುಭವವಿಲ್ಲದೆಯೂ ಅರಿಯುವುದೇ ಅನುಭಾವ.
ಇನ್ನೊಂದು ಕಥೆ ‘ಕಥಾಸ್ತು’. ಈ ಕಥೆಯು ಒಟ್ಟಾರೆಯಾಗಿ ಇಡೀ ಸಾಹಿತ್ಯದ ವ್ಯಾಖ್ಯಾನದಂತೆ ಭಾಸವಾಗತ್ತದೆ. ಇದು ಒಂದು ರೀತಿಯಲ್ಲಿ ಅಬ್ಸರ್ಡ್ ಅಂತನ್ನಿಸಿದರೂ ಅದು ಎತ್ತಿರುವ ಪ್ರಶ್ನೆಗಳಲ್ಲಿ ಸ್ಪಷ್ಟತೆ ಇದೆ. ಕಥೆಯಲ್ಲಿ ಬರೆಯುತ್ತ ಹೋಗುವ ಘಟನೆಗಳೆಲ್ಲ ವಾಸ್ತವದಲ್ಲೂ ಸಂಭವಿಸುತ್ತ ಹೋಗುವ ಅಸಂಗತ ಘಟನೆಗಳು ಇಲ್ಲಿ ನಡೆಯುತ್ತವೆ. ಸಾಹಿತ್ಯ ಜೀವನದ ಪ್ರತಿಬಿಂಬ ಎಂಬ ಹಳೆಯ ಸಿದ್ಧಾಂತವೊಂದರ ಪುನರುಕ್ತಿಯಾಗಿ ಇದು ತೋರುತ್ತದೆ. ‘ಕಾದಂಬರಿಯಲ್ಲಿ ಬರುವ ಪಾತ್ರಗಳನ್ನು ಅದಲುಬದಲು ಮಾಡಿ ಇವನು ಅವಳನ್ನು ಮದುವೆಯಾಗಿದ್ದರೆ ಹೇಗಿರುತ್ತಿತ್ತು, ಅವಳು ಇವನ ಮಗಳಾಗಿದ್ದರೆ ಕಥೆ ಹೇಗೆ ಮುಂದುವರಿಯುತ್ತಿತ್ತು, ಈ ಕಥೆಯ ಕೊನೆ ಹೀಗಿರುವ ಬದಲು ಹೀಗಿರುತ್ತಿದ್ದರೆ ಇನ್ನೂ ರೋಚಕವಾಗಿರುತ್ತಿತ್ತು ಎಂದುಕೊಳ್ಳುತ್ತಿದ್ದೆ…’ ಒಳ್ಳೆಯ ಕಥೆಯೆಂದರೆ ಹೇಗಿರಬೇಕೆಂಬ ಮೀಮಾಂಸೆಯನ್ನು ಇಲ್ಲಿ ಬರೆದಂತೆ ಕಾಣುತ್ತದೆ. ‘ಇದನ್ನು ನೀವು ಕಥೆ ಎಂದು ವಾದಿಸಿದರೆ ನಾನು ನಿಜವೆಂದು ಸಾಧಿಸುತ್ತೇನೆ. ನೀವಿದನ್ನು ನಿಜವೆಂದು ನಂಬುವುದಾದರೆ ನಾನು ಕೇವಲ ಕಥೆಯೆಂದು ಹೇಳಿ ನಿಮ್ಮ ನಂಬಕೆಯನ್ನು ಕೆಡವುತ್ತೇನೆ. ಇದೊಂದು ಪ್ರಚ್ಛನ್ನ ವಾಸ್ತವ…’ ಎನ್ನುವ ಲೇಖಕರು ಕಥೆಯ ವ್ಯಾಖ್ಯೆ ನೀಡಿದ್ದಾರೇನೋ ಎನ್ನಿಸದಿರದು.
‘ಸೀಮೋಲ್ಲಂಘನ’ದಲ್ಲಿ ಈ ದೇಶದ ಪ್ರತಿಭಾ ಪಲಾಯನದ ದೀನ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಹೇಳಿದ್ದಾರೆ. ‘ಅಗೋ ಆ ಹಳದಿ ರೇಖೆಯ ಅಂತರದಲ್ಲಿ ಇಡೀ ದೇಶವೇ ಬೇಡುವ ಜಾತಿ ಅನ್ನಿಸಿಬಿಟ್ಟಿತು’ ಎಂಬ ಸಾಲು ತುಂಬಾ ತೀವ್ರತೆಯಿಂದ ಕೂಡಿದೆ.
ಆರಂಭದ ‘ವಿಮುಖ’ ಕಥೆಯಲ್ಲಿ ಕಥೆ ಏನು ಹೇಳಲು ಪ್ರಯತ್ನಿಸುತ್ತಿದೆ ಎನ್ನುವುದು ಅಸ್ಪಷ್ಟವಾಗಿದೆ. ಆದರೆ ಫೇಸ್ಬುಕ್, ಇಂಟರ್ನೆಟ್ ಇತ್ಯಾದಿ ಆಧುನಿಕ ಬದುಕಿನ ಸಂವಹನ ಸಾಧನಗಳು ಗುಡಿಪೂಜಾರಿಗಳ ನಡುವಿನ ಜಗಳಕ್ಕೂ ಮಾಧ್ಯಮವಾಗುವ ಪರಿ ಮಾತ್ರ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ.
ಸಂಕಲನದ ಶೀರ್ಷಿಕೆಯ ‘ಝೀರೋ ಮತ್ತು ಒಂದು’ ಕಥೆಯಲ್ಲಿ ಹಿಂದೂ ತತ್ವಜ್ಞಾನದ ಶೂನ್ಯ, ಬಯಲು ಎಂಬ ಪರಿಕಲ್ಪನೆಯನ್ನು ಅತ್ಯಂತ ಸರಳವಾಗಿ ವಿವರಿಸಲು ಯತ್ನಿಸುತ್ತಾರೆ ಕತೆಗಾರ. ಇಲ್ಲಿಯ ಪಾತ್ರವೊಂದರ ಹೆಸರು ಭಗವಾನ. ‘ಕೊನೆಗೆ ಎಲ್ಲಾ ಝೀರೋ ಮತ್ತು ಒಂದು’ ಎಂದು ಆಫೀಸಿನಲ್ಲಿ ಟೀ ಕೊಡುವ ಪಾಂಡು ಹೇಳಿದ ಮಾತಿನಲ್ಲಿ ಪೋಲಿ ಅರ್ಥ ಹೊರಟರೂ ಜಗತ್ತಿನ ಮೂಲ ಸತ್ಯವೊಂದರ ಅತ್ಯಂತ ಸರಳ ವ್ಯಾಖ್ಯಾನದಂತೆ ಭಾಸವಾದಾಗ ಭಗವಾನನ ಕೆಲಸದ ಭಾರ ಒಮ್ಮೆಲೇ ಕಡಿಮೆಯಾಗಿಬಿಡುತ್ತದೆ. ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಭಗವಾನ ಪ್ರೋಸೆಸ್ ಒಂದನ್ನು ಸರಳಗೊಳಿಸುವ ಹೊಣೆಹೊತ್ತವನು. ಕಂಪ್ಯೂಟರ್ ಭಾಷೆಯಾದ ಝೀರೋ ಮತ್ತು ಒಂದರ ಪುಂಖಾನುಪುಂಖ ವ್ಯವಸ್ಥಿತ ಜೋಡಣೆಯಲ್ಲಿ ಹೊಸ ಕೋಡ್ ಸೃಷ್ಟಿಸಿ ಸಮಸ್ಯೆಯನ್ನು ಬಿಡಿಸುತ್ತಾನೆ. ಕಥೆಯ ಇನ್ನೊಂದು ಪಾತ್ರ ಭಗವಾನನ ಗೆಳೆಯನ ಹೆಸರು ದಾಸ. ಸಮಸ್ಯೆಯನ್ನು ಬಿಡಿಸಿದ ಭಗವಾನ ದಾಸನಿಗೆ ಅದೃಶ್ಯನಾಗಿಬಿಡುತ್ತಾನೆ. ಭಗವಾನ ಬಿಡಿಸಿದ ಪ್ರೋಸೆಸ್ ಕಾರ್ಯನಿರ್ವಹಿಸುತ್ತಿತ್ತಾದರೂ ಅದು ಹೇಗೆ ಎಂಬ ರಹಸ್ಯ ಯಾರಿಗೂ ಗೊತ್ತಾಗಲೇ ಇಲ್ಲ. ಇದೇ ಸೃಷ್ಟಿಯ ರಹಸ್ಯ. ಈ ಭಗವಾನ ಕಂಪ್ಯೂಟರ್ ಪ್ರೋಗ್ರಾಂ ರಚಿಸಿದ ಹಾಗೆಯೇ ಆ ಭಗವಾನನು ವಿಶ್ವವನ್ನು ಸೃಷ್ಟಿಸಿದ್ದಾನೆ. ಜೊತೆಯಲ್ಲಿದ್ದೂ ದಾಸನಿಗೆ ಅದು ಅರ್ಥವಾಗುವುದೇ ಇಲ್ಲ. ಭಾರತೀಯ ಅಧ್ಯಾತ್ಮವನ್ನು ಸಿಲಿಕಾನ್ ಕಣಿವೆಯ ಸಮಸ್ಯೆಯೊಂದಿಗೆ ಸಮೀಕರಿಸುವ ವಿಕ್ರಮ ಹತ್ವಾರ ಕಥನ ಪ್ರಕಾರದ ತ್ರಿವಿಕ್ರಮ ರೂಪವನ್ನು ಪ್ರಕಟಿಸಿದ್ದಾರೆ.
ಋಗ್ವೇದದ ಪುರುಷಸೂಕ್ತದಲ್ಲಿ ಒಂದು ಮಾತಿದೆ, ಅತ್ಯತಿಷ್ಠಾತ್ ದಶಾಂಗುಲಮ್. ವೇದಗಳು, ಉಪನಿಷತ್ತುಗಳೆಲ್ಲ ಪರಮಾತ್ಮನ ಸ್ವರೂಪ ಹೀಗೇ ಎಂದು ವರ್ಣಿಸಲು ಹೋಗಿ ಅದು ಸಾಧ್ಯವಾಗದೆ ನೇತಿ ನೇತಿ ಎಂದವು. ಯಾವ ಮಾನದಿಂದ ಅಳೆದರೂ ಅದಕ್ಕೂ ಹತ್ತು ಅಂಗುಲ ಬೆಳೆಯುತ್ತ ಹೋಗುವ ಅದ್ಭುತ ಭಗವಂತ. ನಿಗಮಗೋಚರನೆಂದು ದಾಸರು ಹೇಳಿದರೂ ನಿಗಮಗಳೂ ಸೋಲುವ ಪರಿಯನ್ನು ಋಗ್ವೇದದಲ್ಲಿ ಹೇಳಲಾಗಿದೆ. ಈ ಸಂಕಲನದಲ್ಲಿ ಒಟ್ಟೂ ಹದಿನಾರು ಕಥೆಗಳಿವೆ. ಮಹತ್ತರವಾದುದಕ್ಕೆ ಕೈ ಚಾಚಿ ಅದು ನಿಲುಕದೆ ನಿರಾಸೆಗೊಳಗಾಗುವ ಸ್ಥಿತಿ ಇಲ್ಲಿಯ ಬಹುತೇಕ ಕತೆಗಳಲ್ಲಿ ಕಾಣುತ್ತೇವೆ.
ಕೃತಿ: ಝೀರೋ ಮತ್ತು ಒಂದು
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.